ದೇಶದಾದ್ಯಂತ ರೈಲ್ವೆ ಯೂನಿಯನ್ ಮಾನ್ಯತೆಗಾಗಿ ಚುನಾವಣೆಗಳು ಘೋಷಣೆಯಾಗಿದ್ದು, 2024ರ ಡಿಸೆಂಬರ್ 4ರಿಂದ 6ರವರೆಗೆ ಮತದಾನ ನಡೆಯಲಿದೆ. ಮೈಸೂರಿನ ನೈರುತ್ಯ ರೈಲ್ವೆ ವಲಯದ ಚುನಾವಣೆಯಲ್ಲಿ ಎಐಯುಟಿಯುಸಿಗೆ
ಸಂಯೋಜನೆಗೊಂಡಿರುವ ನೈಋತ್ಯ ರೈಲ್ವೆ ನೌಕರರ ಸಂಘ(ಎಸ್‌ಡಬ್ಲ್ಯೂಆರ್‌ಇಯು) ಸ್ಪರ್ಧಿಸುತ್ತಿದೆ.
“ಈ ಚುನಾವಣೆಯಲ್ಲಿ ರೈಲ್ವೇ ನೌಕರರ ಹಕ್ಕು, ಹಿತಾಸಕ್ತಿಗಳನ್ನು ಎತ್ತಿಹಿಡಿದು ಕಾಪಾಡುವ ರೈಲ್ವೆ ಸಂಘವನ್ನು ಚುನಾಯಿಸಬೇಕಾಗಿದೆ. ಯೂನಿಯನ್ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಹೋರಾಟಗಳನ್ನು ಬೆಳೆಸುತ್ತಿದೆ. ರೈಲ್ವೆ ಖಾಸಗೀಕರಣ ವಿರುದ್ಧ, ಹಳೆಯ ಪಿಂಚಣಿ ಯೋಜನೆ(ಒಪಿಎಸ್) ಜಾರಿಗಾಗಿ, ವೇತನ ತಾರತಮ್ಯ ವಿರೋಧಿಸಿ, ನಾಲ್ಕು ಕಾರ್ಮಿಕ ಸಂಹಿತೆ ವಾಪಸ್ ಪಡೆಯಲು ಆಗ್ರಹಿಸಿ, ಮುಷ್ಕರದ ಹಕ್ಕಿಗಾಗಿ, ರೈಲ್ವೆ ನೌಕರರನ್ನು ಒಗ್ಗೂಡಿಸಿ, ಐಕ್ಯತೆಯಿಂದ ಬಲಿಷ್ಠ ಹೋರಾಟ ಕಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದರಿಂದ ಎಲ್ಲ ನೌಕರರು ರೈಲ್ವೇ ನೌಕರರು ಬೆಂಬಲಿಸಬೇಕು” ಎಂದರು.
“ಈ ಚುನಾವಣೆಯಲ್ಲಿ ಕ್ರಮ ಸಂಖ್ಯೆ 04 ಇರುವ ಯೂನಿಯನ್ ಚಿಹ್ನೆ ಧ್ವಜ(ಫ್ಲಾಗ್)ದ ಗುರುತಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
“ರೈಲ್ವೆ ನೌಕರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳು ಹಾಗೂ ರೈಲ್ವೆ ಆಡಳಿತ ಮಂಡಳಿಯ ನಿರ್ಧಾರಗಳು ಪ್ರಮುಖ ಕಾರಣವಾಗಿವೆ. 1991ರಿಂದ ಪ್ರಾರಂಭವಾದ ಆರ್ಥಿಕ ಸುಧಾರಣೆಗಳ ಹೆಸರಿನಲ್ಲಿ ಕೇಂದ್ರ ಸರ್ಕಾರವು ರೈಲ್ವೆ ವಲಯವನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಆರಂಭಿಸಿದೆ. ಇದರ ಪರಿಣಾಮವಾಗಿ ಸೇವಾ ವಲಯದಲ್ಲಿದ್ದ ರೈಲ್ವೆಯು ಕ್ರಮೇಣವಾಗಿ ವ್ಯಾಪಾರಿ ವಲಯವಾಗಿ ಬದಲಾಗುತ್ತಿದೆ” ಎಂದು ಹೇಳಿದರು.
“ರೈಲ್ವೆ ಸೇವೆಗಳು ದುಬಾರಿಯಾಗುತ್ತಿವೆ. ಈವರೆಗೆ ರೈಲ್ವೆ ಇಲಾಖೆ ನಿರ್ವಹಿಸುತ್ತಿದ್ದ ಸಾಮಾಜಿಕ ಜವಾಬ್ದಾರಿ, ವಿವಿಧ ರಿಯಾಯಿತಿಗಳು, ಸೌಲಭ್ಯಗಳನ್ನು ಹಿಂಪಡೆಯಲಾಗುತ್ತಿದೆ. ಈಗಾಗಲೇ ರೈಲ್ವೆ ನೌಕರರ ಸಂಖ್ಯೆಯನ್ನು ಭಾರೀ
ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ನಿವೃತ್ತಿ ಅಥವಾ ಇತರೆ ಕಾರಣಗಳಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿ ಪ್ರಕ್ರಿಯೆಯನ್ನೇ ನಿಲ್ಲಿಸಲಾಗುತ್ತಿದೆ” ಎಂದರು.
“ಪ್ರಸ್ತುತ ನೌಕರರ ಮೇಲೆ ಕೆಲಸದ ಒತ್ತಡ ತೀವ್ರವಾಗಿ ಹೆಚ್ಚಾಗುತ್ತಿದೆ. ರೈಲ್ವೆ ಅಪಘಾತಗಳು ಹಿಂದೆಂದಿಗಿಂತಲೂ ಹೆಚ್ಚಾಗಿವೆ. ಮತ್ತೊಂದೆಡೆ ಶಾಶ್ವತ ಹುದ್ದೆಗಳ ಸ್ಥಾನದಲ್ಲಿ ಗುತ್ತಿಗೆ ಪದ್ಧತಿಯು ಜಾರಿಯಾಗುತ್ತಿದೆ. ರೈಲ್ವೆ ನೌಕರರ ಕಠಿಣ ಪರಿಶ್ರಮ, ತ್ಯಾಗ ಬಲಿದಾನಗಳಿಂದ ಗಳಿಸಿದ ಹಕ್ಕುಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಒಟ್ಟಾರೆ ರೈಲ್ವೆ ನೌಕರರು ಸರ್ಕಾರದ ಕ್ರೂರ ಶೋಷಣೆಗೆ ಗುರಿಯಾಗಿದ್ದಾರೆ. ಈ ಎಲ್ಲ ನೀತಿಗಳ ಮುಂದುವರಿಕೆಯಾಗಿ ಇಡೀ ರೈಲ್ವೆ ವಲಯವನ್ನೇ ಲಾಭದಾಹಿ ಉದ್ಯಮಪತಿಗಳಿಗೆ ಹಸ್ತಾಂತರ ಮಾಡುವ ದಿನಗಳು ಇನ್ನು ದೂರವಿಲ್ಲ ಎನ್ನುವಂತಾಗಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ರೈಲ್ವೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಮೂರು ವಿಭಾಗಗಳಲ್ಲಿ ಯೂನಿಯನ್ ಪರವಾಗಿ ಪ್ರಚಾರ ನಡೆಸಲಾಗುತ್ತಿದೆ. ಎಲ್ಲ ರೈಲ್ವೆ ನೌಕರರು ಅಬ್ಬರದ ಪ್ರಚಾರಕ್ಕೆ, ಆಮಿಷ, ಒತ್ತಡಗಳಿಗೆ ಒಳಗಾಗದೆ ಬೆಂಬಲಿಸಬೇಕು” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಹಾಸನ | 10 ದಿನಗಳ ಕಾಲ ಉದ್ಯಮಶೀಲತಾಭಿವೃದ್ಧಿ ತರಬೇತಿ; ನೋಂದಣಿಗೆ ನ.23 ಕೊನೆಯ ದಿನ
“ರೈಲ್ವೆ ಚುನಾವಣೆ ಪ್ರಣಾಳಿಕೆಯ ಪ್ರಮುಖವಾದ ಹಳೆಯ ಪಿಂಚಣಿ ವ್ಯವಸ್ಥೆ ಒಪಿಎಸ್ ಪುನಃ ಜಾರಿಗೆ ತರಬೇಕು. ತುರ್ತಾಗಿ 8ನೇ ಸಿಪಿಸಿಯನ್ನು ರಚಿಸಬೇಕು. ಗ್ರೂಪ್ ಸಿ ಮತ್ತು ಈ ಹಿಂದೆ ಇದ್ದ ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಹಿರಿಯ ನಾಗರಿಕರ ರಿಯಾಯಿತಿ ಸೇರಿದಂತೆ ಅಸ್ತಿತ್ವದಲ್ಲಿದ್ದ ಎಲ್ಲ ರಿಯಾಯಿತಿಗಳನ್ನು ಮುಂದುವರಿಸಿ ಬಲಪಡಿಸಬೇಕು. ಕೋವಿಡ್ ಸಮಯದಲ್ಲಿ ತಡೆಹಿಡಿಯಲಾದ 18 ತಿಂಗಳ ಡಿಎ/ಡಿಆರ್ ಬಾಕಿ ವೇತನವನ್ನು ರೈಲ್ವೆ ನೌಕರರಿಗೆ ಪಿಂಚಣಿದಾರರಿಗೆ ಕೂಡಲೇ ಬಿಡುಗಡೆ ಮಾಡಬೇಕು. ಆರನೇ ಸಿಪಿಸಿಯ ಶಿಫಾರಸುಗಳು ಹಾಗೂ ನ್ಯಾಯಾಲಯದ ಆದೇಶ ಅನ್ವಯ ಪಿಂಚಣಿ ಪರಿವರ್ತನೆ ಅವಧಿಯನ್ನು 15 ವರ್ಷದಿಂದ 12 ವರ್ಷಕ್ಕೆ ಇಳಿಸಬೇಕು” ಎಂದು ಆಗ್ರಹಿಸಿದರು.
ಚಂದ್ರಶೇಖರ್ ಮೇಟಿ, ವೀರೇಶ್ ಎನ್ ಎಸ್, ಡಾ ಪ್ರಮೋದ್, ಸಂಧ್ಯಾ ಫಿಯಸ್, ಮುದ್ದುಕೃಷ್ಣ ಎನ್ ಸೇರಿದಂತೆ ಇತರರು ಇದ್ದರು.