ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕು ವ್ಯಾಪ್ತಿಯ ನುಗು ಅರಣ್ಯ ವಲಯ, ಸರಗೂರು ತಾಲೂಕು ವ್ಯಾಪ್ತಿಯ ಹೆಡಿಯಾಲ ಅರಣ್ಯ ವಲಯ ಹಾಗೂ ಚಾಮರಾಜ ನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕು ಬಂಡೀಪುರ ಅರಣ್ಯ ವಲಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗಿದ್ದು, ಜನ, ಜಾನುವಾರುಗಳ ಮೇಲೆ ಸರಣಿ ದಾಳಿ ನಡೆಯುತ್ತಿದೆ.
ಇತ್ತೀಚೆಗೆ ಕಾಡು ಪ್ರಾಣಿಗಳಾದ ಹುಲಿ, ಚಿರತೆ, ಆನೆ, ಕಾಡು ಹಂದಿಗಳ ಉಪಟಳ ಹೆಚ್ಚಿದ್ದು ಎಲ್ಲೆಂದರಲ್ಲಿ ಗ್ರಾಮದ ಪರಿಮಿತಿಯಲ್ಲಿ, ಹೊಲ ಗದ್ದೆಗಳ ಬಯಲಿನಲ್ಲಿ ಕಂಡು ಬರುತ್ತಿದೆ. ಅಲ್ಲದೇ, ಜಾನುವಾರುಗಳು, ಜನಗಳ ಮೇಲೆ ದಾಳಿ ಮಾಡುತ್ತಿರುವ ಪ್ರಕರಣ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ.
ಇತ್ತೀಚೆಗೆ ಯಶವಂತಪುರದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ ಅದಲ್ಲದೆ, ಪಕ್ಕದೂರಿನಲ್ಲಿ ಮಹಿಳೆಯ ಮೇಲೆ ದಾಳಿ ಮಾಡಿದ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿದೆ.
ಆನೆಗಳ ಹಿಂಡು ಅವೈಜ್ಞಾನಿಕ ರೈಲು ಹಳಿಗಳ ಜೋಡಣೆಯನ್ನು ಕಣ್ತಪ್ಪಿಸಿ ಗ್ರಾಮಗಳತ್ತ, ಹೊಲಗದ್ದೆಗಳ ಬೆಳೆಯತ್ತ ನುಗ್ಗುತ್ತಿವೆ. ಆನೆಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಒಂದಷ್ಟು ಕ್ರಮ ಕೈಗೊಂಡಿದ್ದರು ಸಹ ಸಂಪೂರ್ಣವಾಗಿ ಹತೋಟಿಗೆ ತರುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಹಾದನೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಪ್ರಕಾಶ್, “ಹೆಡಿಯಾಲ ಅರಣ್ಯ ವಲಯ ವ್ಯಾಪ್ತಿಯ ನಂಜ ದೇವರ ಬೆಟ್ಟ(ಕಾಳ ನಾಗಪ್ಪ ಬೆಟ್ಟ)ದಲ್ಲಿ ಆಗಾಗ ಹುಲಿ, ಚಿರತೆಗಳು ಕಂಡು ಬರುತ್ತಿದ್ದು, ಗ್ರಾಮದ ಜಮೀನಿನ ಕಡೆಗೆ ಬರುತ್ತಿವೆ. ಇತ್ತೀಚೆಗೆ ನಮ್ಮೂರಿನ ಹಸುವಿನ ಮೇಲೆ ಹುಲಿ ದಾಳಿ ಮಾಡಿದೆ. ಇಂತಹ ಪ್ರಕರಣ ಕಳೆದ ಹತ್ತಿಪ್ಪತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ. ಇದುವರೆಗೆ ತಾರ್ಕಿಕ ಅಂತ್ಯ ಕಂಡಿಲ್ಲ” ಎಂದು ಬೇಸರಿಸಿದರು.
“ಕಳೆದ ಬಾರಿ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಮನವಿ ಮಾಡಲಾಗಿತ್ತು. ಅವರು ಸಹ ಸ್ಥಳಕ್ಕೆ ಭೇಟಿ ಕೊಟ್ಟು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದ್ದರು. ಆದರೆ, ಆನೆಗಳು ದಾಟದ ಹಾಗೆ ರೈಲ್ವೆ ಕಂಬಿ ಜೋಡಿಸಲಾಗಿದ್ದು. ಸರಿಯಾದ ಮಾನದಂಡದಲ್ಲಿ ಮಾಡದೆ ಇರುವುದರಿಂದ ತಗ್ಗು ಪ್ರದೇಶದಲ್ಲಿ ಆನೆಗಳು ಅದನ್ನು ದಾಟಿ ಬರುತ್ತಿವೆ. ಕೆಲವು ರೈಲು ಕಂಬಿಯನ್ನು ಬಾಗಿಸಿ, ರೈತರ ಜಮೀನಿನ ಕಡೆಗೆ ಆನೆಗಳು ದಾಳಿ ಇಡುತ್ತಿವೆ. ರೈಲು ಕಂಬಿಗಳು ಅವೈಜ್ಞಾನಿಕವಾಗಿದ್ದು, ಸ್ವಲ್ಪವಾದರೂ ಆನೆಗಳ ಗಾತ್ರಕ್ಕೆ ಒಳ ನುಸುಳಲು ಸಾಧ್ಯವಾಗದ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಮತ್ತೊಮ್ಮೆ ಗಮನ ಹರಿಸಬೇಕು” ಎಂದು ಮನವಿ ಮಾಡಿದರು.

ಯಶವಂತಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜು ಮಾತನಾಡಿ, “ನುಗು ಅರಣ್ಯ ವಲಯ ಪ್ರದೇಶಕ್ಕೆ ಸೇರುವ ಗ್ರಾಮವಾಗಿದ್ದು, ಇಲ್ಲಿ ಕಾಡು ಹಂದಿ, ಆನೆ , ಚಿರತೆ ಕಾಟ ಹೆಚ್ಚಿದೆ. ಆನೆಗಳು ಬಾರದ ಹಾಗೆ ರೈಲ್ವೆ ಕಂಬಿ ಹಾಕಿದ್ದರೂ ಕೂಡ ಅದನ್ನು ತುಳಿದು ಹಾಳುಗೆಡವುತ್ತಿವೆ. ಕಂಬಿಯನ್ನು ಮುರಿದು ದಾಟಿ ಬರುತ್ತಿವೆ. ಕಾಡು ಹಂದಿಗಳು ಜಮೀನಿಗೆ ನುಗ್ಗಿದರೆ ಯಾವ ಬೆಳೆಯೂ ಉಳಿಯುವುದಿಲ್ಲ. ಎಲ್ಲವನ್ನು ತಿಂದು ತೇಗುತ್ತವೆ” ಎಂದು ತಿಳಿಸಿದರು.
“ಜಮೀನಿನಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡಲು ಗ್ರಾಮದ ಜನರಿಗೆ ಭಯ ಉಂಟಾಗಿದೆ. ಚಿರತೆಗಳು ಯಾವ ಕಡೆಯಿಂದ ದಾಳಿ ಮಾಡುತ್ತವೆ ಹೇಳಲು ಅಸಾಧ್ಯವಾದ ಪರಿಸ್ಥಿತಿ ಇದೆ. ಅರಣ್ಯ ಇಲಾಖೆ ವಾಚರ್, ಗಾರ್ಡ್‌ಗಳು ಆಗಾಗ್ಗೆ ಪರಿಶೀಲನೆ ಮಾಡುತ್ತಾರೆ. ಆದರೆ, ಅದರಿಂದ ಪರಿಹಾರ ಮಾತ್ರ ಕಂಡಿಲ್ಲ. ವನ್ಯ ಜೀವಿಗಳು ಗ್ರಾಮಗಳ ಕಡೆಗೆ ಬರುವುದು ಕಡಿಮೆ ಆಗಿಲ್ಲ” ಎನ್ನುತ್ತಾರೆ ನಾಗರಾಜು.
“ಕಾಡು ಪ್ರಾಣಿಗಳು ಊರಿನ ಕಡೆಗೆ ಬಾರದ ಹಾಗೆ ಕಾಡಂಚಿನ ಗ್ರಾಮಗಳಲ್ಲಿ ಸೋಲಾರ್ ಪೆಂಚಿನ್ ಅಳವಡಿಕೆ ಮಾಡಲಾಗಿದೆ. ಆದರೆ, ದುರ್ದೈವ ಅಂದ್ರೆ ಹಗಲು ಸಮಯ ಕೂಡ ಅದನ್ನ ಆಫ್ ಮಾಡದೆ ಇರೋದ್ರಿಂದ ಧನ ಮೇಯಿಸಲು, ಜಮೀನಿಗೆ ಹೋದವರು ಎಷ್ಟೋ ಬಾರಿ ಕರೆಂಟ್ ಹೊಡಿಸಿಕೊಂಡಿದ್ದಾರೆ. ಇದನ್ನೆಲ್ಲ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಪ್ರಶ್ನಿಸಿದರೆ, ಉಡಾಫೆಯ ಉತ್ತರ ದೊರೆಯುತ್ತದೆ. ಯಾವ ಅಧಿಕಾರಿಗಳಿಂದಲೂ ಸೂಕ್ತ ಸ್ಪಂದನೆ ಸಿಗುವುದಿಲ್ಲ” ಎಂದು ಯಶವಂತಪುರ ಗ್ರಾಮದ ಇಂದ್ರ ಕುಮಾರ್ ಆರೋಪಿಸಿದ್ದಾರೆ.
ಕೊಡಗಿ ಗ್ರಾಮದ ಗೋವಿಂದರಾಜು ಮಾತನಾಡಿ, “ಈಗ ಮಳೆಯಾಗುತ್ತಿದೆ. ಕಾಡಿನಲ್ಲಿ ಮೇವಿನ ಕೊರತೆ ಇಲ್ಲದೇ ಇರುವುದರಿಂದ ಪ್ರಾಣಿಗಳು ಜಮೀನು ಕಡೆಗೆ ಬರೋದು ಸ್ವಲ್ಪ ಕಡಿಮೆ ಆಗಿದೆ. ಆದರೆ, ಆನೆಗಳ ಹಿಂಡು ಯಾವ ಕಡೆಯಿಂದ ಬರುತ್ತೆ ಎಂದು ಹೇಳಲು ಆಗೋದಿಲ್ಲ. ಆನೆಗಳು ದಾಟದ ಹಾಗೆ ರಿಂಚ್ ತೋಡಿದ್ದರೂ ಅದು ಲೆಕ್ಕಕ್ಕಿಲ್ಲ. ರೈತನ ವ್ಯವಸಾಯ ಅಷ್ಟೇ ಅಲ್ಲ, ಅಕ್ಕಪಕ್ಕದ ತಾಲೂಕಿನಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಜಾನುವಾರುಗಳು ಬಲಿಯಾಗಿವೆ. ಹೀಗೆ ಮುಂದುವರಿದರೆ, ಜನರಿಗೆ ಕಷ್ಟ ತಪ್ಪಿದ್ದಲ್ಲ” ಎಂದು ತಿಳಿಸಿದರು.
ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಲ್ಲಿ ಅರಣ್ಯ ಇಲಾಖೆ, ಸಂಬಂಧಪಟ್ಟ ಸಚಿವರು ಇತ್ತ ಗಮನ ಕೊಡಬೇಕು. ಇದಕ್ಕೆ ಸರ್ಕಾರ ತಾರ್ಕಿಕ ಅಂತ್ಯ ನೀಡಬೇಕು ಎಂಬುದು ಕಾಡಂಚಿನ ಗ್ರಾಮದ ಜನರ ಆಗ್ರಹವಾಗಿದೆ.
