ಕಾರ್ಪೊರೇಟ್ ಸೆಕ್ಟರ್, ವಾಣಿಜ್ಯ, ವ್ಯಾಪಾರ, ವಹಿವಾಟು, ಉದ್ದಿಮೆ ಹೀಗೆ ಬಹು ಆದಾಯದ ಮೂಲವಾಗಿ ನೆಲ ಬಾಡಿಗೆ ಅತ್ಯಂತ ಲಾಭದಾಯಕವಾಗಿದೆ. ಹಾಗೆಯೇ ಸರ್ಕಾರ ಹಾಗೂ ನ್ಯಾಯಾಲಯ ಕೂಡಾ ಹಲವು ನಿಯಮಗಳನ್ನು ರೂಪಿಸಿದೆ.
ನೆಲ ಬಾಡಿಗೆ ಎನ್ನುವುದು ಭೂಮಾಲೀಕ ಬಾಡಿಗೆ ರೂಪದಲ್ಲಿ ಕರಾರು ಮೂಲಕ ನೀಡುವ ಪ್ರಕ್ರಿಯೆ. ಇಂತಿಷ್ಟು ವರ್ಷಗಳ
ಕಾಲ ಭೂಮಿ ವಿಸ್ತೀರ್ಣ ಹಾಗೆ ಪಟ್ಟಣ, ಗ್ರಾಮಾಂತರ, ನಗರದ ಹೊರವಲಯ, ವರ್ತುಲ ರಸ್ತೆಗಳು ಹೀಗೆ ಬೇರೆ ಬೇರೆ ಭಾಗಗಳಲ್ಲಿ ಅಗತ್ಯಕ್ಕೆ ಅನುಸಾರವಾಗಿ ಕೈಗೊಳ್ಳುವ ಒಡಂಬಡಿಕೆ. ಇದು ಬಹುತೇಕ ಖಾಸಗಿ ರೂಪವಾಗಿದೆ.
ಸರ್ಕಾರಿ ಉದ್ದೇಶಿತ ಅಂದರೆ ಸದ್ಯಕ್ಕೆ ಮೊಬೈಲ್ ಟವರ್, ನಿರ್ವಹಣಾ ಘಟಕ ಸೇರಿದಂತೆ ಇತ್ಯಾದಿ ವಿಷಯಗಳಿಗೆ ಭೂಮಿಯನ್ನು ಬಾಡಿಗೆ ರೀತಿಯಲ್ಲಿ ಖಾಸಗಿ ಇಲ್ಲವೇ, ಕೃಷಿ ಭೂಮಿ ಮಾಲೀಕರಿಂದ ʼನೆಲ ಬಾಡಿಗೆʼ ಕೊಟ್ಟು ನಿರ್ವಹಣೆ ಮಾಡುವ ವ್ಯವಸ್ಥೆಯಿದೆ.

ಬಹುತೇಕ ಕಾರ್ಪೊರೇಟ್ ಕುಳಗಳು, ಮಾಲ್, ವಾಹನಗಳ ಶೋ ರೂಂ, ಪೆಟ್ರೋಲ್ ಬಂಕ್, ದೊಡ್ಡ ದೊಡ್ಡ ಹೋಟೆಲ್, ಡಾಬಾ, ಇಟ್ಟಿಗೆ ಫ್ಯಾಕ್ಟರಿ, ಗಾರ್ಮೆಂಟ್ಸ್ ಹೀಗೆ ಬೇರೆ ಬೇರೆ ಆದಾಯ ಮೂಲದ ಆರ್ಥಿಕ ವಹಿವಾಟು ನಡೆಸುವ ನಿಟ್ಟಿನಲ್ಲಿ ಖಾಸಗಿ ವ್ಯಕ್ತಿಗಳು ನೆಲ ಬಾಡಿಗೆ ಮೂಲಕ ವ್ಯವಹಾರ, ವ್ಯಾಪಾರ ವಹಿವಾಟುಗಳನ್ನು ನಡೆಸುವುದು ಸರ್ವೇ ಸಾಮಾನ್ಯ. ಅದರಲ್ಲೂ ಭೂಮಾಲೀಕರಿಗೆ
ಸಲೀಸಾಗಿ ಬಹುಬೇಗ ಅತ್ಯಂತ ಹೆಚ್ಚು ಹಣ ಸಿಗುವ ಹಾಗೆ ತಮ್ಮ ಭೂಮಿ ತಮ್ಮಲ್ಲಿಯೇ ಇದ್ದು, ಆದಾಯ ಮಾಡಿಕೊಳ್ಳುವ ಸುಲಭ ದಾರಿಯೂ ಆಗಿದೆ. ಆಸ್ತಿ ಇದ್ದರೆ ಸಾಕು ನೆಲ ಬಾಡಿಗೆ ಮೂಲಕ ದುಡ್ಡು ಮಾಡಿಕೊಳ್ಳುವುದೂ ಇದೆ. ಇದು ಬಹುತೇಕ ಲಾಭಿ,
ಮಾಫಿಯಾ, ಕೆಲವೊಮ್ಮೆ ದುರುಪಯೋಗ ಮಾಡಿಕೊಂಡು ಭೂಮಿ ಕಬಳಿಕೆ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ.
ಇದು ವ್ಯಾಪಾರೀಕರಣದ ಮುಖ.

ವ್ಯವಹಾರವಲ್ಲದ ಬಡಜನರ ಬದುಕಿನ ಆಸರೆಗೆ, ನೆಲ ಬಾಡಿಗೆ ಕೊಟ್ಟು ವಾಸಿಸುವ ಪರಿಸ್ಥಿತಿ ನಿಜಕ್ಕೂ ಹೆಚ್ಚು ಆತಂಕಕಾರಿಯಾಗಿದೆ. ಅಡಿಗಳಷ್ಟು ಜಾಗಕ್ಕೆ ಸಾವಿರಾರು ರೂಪಾಯಿ ಪಡೆಯುವ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದಲ್ಲಿ ಬಹುತೇಕ ವರ್ಷಗಳಿಂದ ಅಲೆಮಾರಿ ಕೊರಚ ಸಮುದಾಯದ ಹಲವು ಕುಟುಂಬಗಳು ನೆಲೆಸಿವೆ. ಅದರಲ್ಲಿ ಬಹುತೇಕರು ʼನೆಲ ಬಾಡಿಗೆʼ ಕೊಟ್ಟು ವಾಸಕ್ಕೆ ಗುಡಾರ ಹಾಕಿಕೊಂಡು ಬದುಕುತ್ತಿದ್ದಾರೆ. ಅಂದರೆ ಒಂದು ಕುಟುಂಬ ಪ್ಲಾಸ್ಟಿಕ್ ಗುಡಿಸಲು ಹಾಕಿಕೊಂಡು ವಾಸ ಮಾಡಲು ಭೂಮಾಲಿಕನಿಗೆ ತಿಂಗಳಿಗೆ ಇಂತಿಷ್ಟೆಂದು ನೆಲ ಬಾಡಿಗೆ ಕೊಡುವ ಪದ್ಧತಿ.

ಬಡವರು ಟಾರ್ಪಲ್ ಗುಡಿಸಲು ಹಾಕಿಕೊಂಡು ಬುದುಕುವುದಕ್ಕೆ ನೆಲ ಬಾಡಿಗೆ ನೀಡುತ್ತಿರುವುದು ಜಿಲ್ಲಾಡಳಿತ, ತಾಲೂಕು ಆಡಳಿತ, ಸರ್ಕಾರಗಳಿಗೆ ನಾಚಿಕೆ ತರುವಂತಹ ವಿಷಯ. ಒಂದು ಬಡ ಕುಟುಂಬ ನಿತ್ಯವೂ ಕೂಲಿ ಮಾಡಿ ಜೀವನ ಸಾಗಿಸುವುದೇ ಕಷ್ಟ. ಅಂಥದರಲ್ಲಿ ನೆಲಕ್ಕೆ ತಿಂಗಳಿಗೆ ₹1,500, ₹2,000, ₹2500ರಷ್ಟು ನೆಲ ಬಾಡಿಗೆ ಕೊಟ್ಟು ಗುಡಿಸಿಲು ಹಾಕಿಕೊಂಡು ಜೀವನ ಸಾಗಿಸಬೇಕು. ಅಂಥದಕ್ಕೆ ಪ್ರಸ್ತುತ ನಿದರ್ಶನ ಟಿ ನರಸೀಪುರ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಗುಡಿಸಲುಗಳು.
ಗುಡಿಸಲುಗಳಲ್ಲಿ ಯಾವುದೇ ಮೂಲಭೂತ ಸೌಲಭ್ಯ ಇರುವುದಿಲ್ಲ. ಶೌಚಾಲಯಕ್ಕೆ ಹೋಗಬೇಕೆಂದರೆ ದುಡ್ಡು ಕೊಟ್ಟು ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋಗಬೇಕು. ಇಲ್ಲವೆಂದರೆ ಬಯಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ನಿತ್ಯವೂ ತಲೆ ಕೂದಲಿಗೆ ಪಿನ್ನ, ಹಣೆಬೊಟ್ಟು, ಕರಿಮಣಿ, ಸಣ್ಣ ಪುಟ್ಟ ಪಾತ್ರೆ, ಜಾಲರಿ, ಜರಡಿ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡುತ್ತ ₹200, ₹300ಕ್ಕೆ ನಿತ್ಯವೂ ಹಳ್ಳಿ ಹಳ್ಳಿ ತಿರುಗಿ ಸಂಪಾದಿಸಬೇಕು. ಇದು ಬಿಟ್ಟರೆ ಬೇರಾವುದೇ ಆದಾಯವಿಲ್ಲ. ಹೀಗಿರುವಾಗ ಸರ್ಕಾರ,
ತಾಲೂಕು ಆಡಳಿತ ಗಮನ ಹರಿಸಿಲ್ಲ.

ದಾಖಲೆಗಳನ್ನು ಹೊಂದಿದ್ದರೂ ಕೂಡ ಯೋಜನೆಗಳ ಫಲಾನುಭವಿಗಳಾಗಿಲ್ಲ. ಒಬ್ಬರಿಗೂ ಈವರೆಗೆ ಸೂರು ಕಲ್ಪಿಸಿಲ್ಲ, ಸಮಾಜ ಕಲ್ಯಾಣ ಇಲಾಖೆ ಕೆಲಸವೇನು? ಪುರಸಭೆ ಏನು ಮಾಡುತ್ತಿದೆ? ಎಂಬುದೂ ಒಂದೂ ತಿಳಿಯುತ್ತಿಲ್ಲ. ತಾಲೂಕಿನ ಬಾಧ್ಯತೆ ತಹಶೀಲ್ದಾರ್ ಅವರಿಗಿದ್ದು, ತಾಲೂಕಿನಲ್ಲಿ ನಿವೇಶನ ರಹಿತರನ್ನು ಗುರುತಿಸಲು ಸಾಧ್ಯವಾಗಿಲ್ಲ.
ಸರ್ಕಾರಗಳ ಮಟ್ಟಿಗೆ ಸಾಕಷ್ಟು ಯೋಜನೆಗಳಿವೆ ಬಸವ ಯೋಜನೆ, ಇಂದಿರಾ ಆವಾಸ್ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ರಾಜೀವ್ ಗಾಂಧಿ ವಸತಿ ಯೋಜನೆ, ಪ್ರಧಾನ್ ಮಂತ್ರಿ ಆವಾಸ್ ಯೋಜನೆ, ಸ್ಲಮ್ ಬೋರ್ಡ್ ಯೀಜನೆಗಳು ಸೇರಿದಂತೆ ಹಲವಾರು ವಸತಿ ಯೋಜನೆಗಳಿದ್ದು, ನಿವೇಶನ ರಹಿತರನ್ನು ಗುರುತಿಸಿ ಸೂರು ಕಲ್ಪಿಸುವ ಯೋಜನೆಗಳಾಗಿವೆ. ಈ ಯೋಜನೆಗಳನ್ನು ಅರ್ಹರಿಗೆ ತಲುಪಿಸುವುದು ಸ್ಥಳೀಯ ಅಧಿಕಾರಿಗಳ ಬಾಧ್ಯತೆಯಾಗಿರುತ್ತದೆ.

ಸ್ಥಳೀಯ ಅಡಳಿತ ಫಲಾನುಭವಿ ಪಟ್ಟಿ ತಯಾರಿಸಿ ವರದಿ ಮಾಡಬೇಕು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ, ಸ್ಥಳೀಯ ಆಡಳಿತದ ಅಸಡ್ಡೆತನ, ಜನಪ್ರತಿನಿಧಿಗಳ ಉಡಾಫೆ ಬಡಜನರ ರಕ್ತ ಹೀರುತ್ತಿದೆ. ಅಂದು ದುಡಿದು ಅಂದೇ ತಿನ್ನುವ ಬಡ ಕುಟುಂಬಗಳನ್ನು ನೆಲ ಬಾಡಿಗೆ ಹೆಸರಿನಲ್ಲಿ ಶೋಷಣೆಗೆ ದೂಡಲ್ಪಟ್ಟಿವೆ. ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಅವರ ಸ್ವಕ್ಷೇತ್ರದಲ್ಲಿ ಇಂತಹ ಪರಿಸ್ತಿತಿಯಿದೆ ಎಂದಮೇಲೆ ಇಡೀ ರಾಜ್ಯದಲ್ಲಿ ಇಂತಹ ಕೆಟ್ಟ ಸ್ಥಿತಿ ಇನ್ನೆಷ್ಟು ಇರಬಹುದು, ಬಡಜನ ಇನ್ಯಾವ ರೀತಿ ನಲುಗುತ್ತಿರಬಹುದು.

ಸ್ವಾತಂತ್ರ್ಯ ಬಂದರು ಬಡವರಿಗೆ ಬರಲಿಲ್ಲ. ಸಂವಿಧಾನ ಮೂಲಭೂತ ಹಕ್ಕನ್ನು ಕೊಟ್ಟರೂ ಅಧಿಕಾರಿಗಳು ಕೊಡಲಿಲ್ಲ. ಸಮಾಜ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಅದರಲ್ಲೂ ಒಂದಲ್ಲ ಒಂದು ರೀತಿಯ ಶೋಷಣೆಗೆ ಬಡ ವರ್ಗ ಸಿಲುಕುತ್ತಿರುವುದು ನಿಜಕ್ಕೂ ದೌರ್ಭಾಗ್ಯ. ಜನಪರ ಎಂದೇಳುವ ಸರ್ಕಾರಗಳು ಬಡವರ ಬಗ್ಗೆ ಕಿಂಚಿತ್ತೂ ಆಲೋಚನೆ ಮಾಡಿಲ್ಲ. ಕೇವಲ ಘೋಷಣೆಯಲ್ಲಿ ಕಾಲ ಕಳೆಯುತ್ತಿರುವುದು ವಿಪರ್ಯಾಸ. ಸಮಾಜವಾದಿ ಹಿನ್ನಲೆಯ ಮಾನ್ಯ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಕೊರಚ, ಹಂದಿ ಜೋಗಿ, ಎಸ್‌ಸಿ
ಜನಾಂಗಕ್ಕೆ ಸೇರಿದ ಸಾವಿರಾರು ಕುಟುಂಬಗಳಿಗೆ ನಿವೇಶನವೂ ಇಲ್ಲ, ಮನೆಯಂತು ಇಲ್ಲವೇ ಇಲ್ಲ. ಶೌಚಾಲಯ, ಶಿಕ್ಷಣ, ಆರೋಗ್ಯ ಇನ್ನೆಲ್ಲಿಂದ ಸಿಗಬೇಕು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ; ಅಮಾನವೀಯತೆ ಮೆರೆದ ಮಾಲೀಕ
ಮುಖ್ಯಮಂತ್ರಿಗಳು ಈಗಲಾದರು ತವರು ಕ್ಷೇತ್ರದ ಕಡೆಗೆ ಗಮನಹರಿಸಿ ಬಡಜನರಿಗೆ ಸೂರು ಕಲ್ಪಿಸಿಕೊಡುವರೇ, ಸಮಾಜ ಕಲ್ಯಾಣ ಇಲಾಖೆ ಸಚಿವರು ಗಮನ ಕೊಟ್ಟು ಅಧಿಕಾರಿಗಳಿಗೆ ಚಾಟಿ ಬೀಸುವರೇ ಎಂಬುದನ್ನು ಕಾದು ನೋಡಬೇಕಿದೆ.
