ಮೈಸೂರು | ತಂಬಾಕು ಬೆಲೆ ಕುಸಿತ; ಕಂಗಾಲಾದ ರೈತ

Date:

Advertisements

ರಾಜ್ಯದಲ್ಲಿಯೇ ಗುಣಮಟ್ಟದ ತಂಬಾಕು(ವರ್ಜೀನಿಯ) ಬೆಳೆಯುವ ಜಿಲ್ಲೆ ಮೈಸೂರು. ಜಿಲ್ಲೆಯಲ್ಲಿ ಹುಣಸೂರು, ಪಿರಿಯಾಪಟ್ಟಣ, ಕೆ ಆರ್ ನಗರ, ಹೆಗ್ಗಡದೇವನ ಕೋಟೆಯಲ್ಲಿ ತಂಬಾಕು ಬೆಳೆಯಲಾಗುತ್ತದೆ. ವಿಶ್ವದಲ್ಲಿ ತಂಬಾಕು ಬೆಳೆಯುವಲ್ಲಿ ಭಾರತ ಎರಡನೆಯ ಅತಿದೊಡ್ಡ ರಾಷ್ಟ್ರ ಕೂಡ ಹೌದು. ಮೈಸೂರು ಜಿಲ್ಲೆ ವಾಣಿಜ್ಯ ಬೆಳೆಗೆ ಹೆಚ್ಚು ಒತ್ತು ಕೊಟ್ಟಿದೆ. ಅದರಲ್ಲೂ ಪ್ರಮುಖ ಬೆಳೆ ತಂಬಾಕು(ಹೊಗೆ ಸೊಪ್ಪು).

ಸಿಕ್ಕ ಸಿಕ್ಕಲ್ಲಿ ಇಷ್ಟ ಬಂದಂತೆ ತಂಬಾಕು ಬೆಳೆಯಲು ಅವಕಾಶವಿಲ್ಲ. ಅದರದ್ದೇ ಆದ ಚೌಕಟ್ಟಿದ್ದು, ಮಾನದಂಡವಿದೆ. ಕೆಲವೇ ಕೆಲವು ಪ್ರದೇಶಗಳಲ್ಲಿ ತಂಬಾಕು ಬೆಳೆಯಲು ಅನುವು ಮಾಡಿಕೊಡಲಾಗಿದೆ. ತಂಬಾಕು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವುದರಿಂದ ಇದಕ್ಕೆ ಆದ ತಂಬಾಕು ಮಂಡಳಿಗಳಿವೆ. ಇದರ ಮೂಲಕವೇ ತಂಬಾಕು ವ್ಯವಹಾರ, ಖರೀದಿ ಎಲ್ಲವೂ ನಡೆಯುವಂತದ್ದು.

ತಂಬಾಕು ಬೆಳೆಯಲು ರೈತ ಪರವಾನಿಗೆದಾರ ಆಗಿರಬೇಕು. ಬ್ಯಾರನ್ ಅಂದರೆ ತಂಬಾಕು ಹದ ಮಾಡುವ ಕೋಣೆ ಹೊಂದಿರಬೇಕು.
ಪ್ರತಿ ಬ್ಯಾರನ್‌ಗೆ ಪರವಾನಿಗೆದಾರ 1,620 ಕೆಜಿ ಹೊಗೆಸೊಪ್ಪು ಮಾರಾಟ ಮಾಡಲು ಅವಕಾಶವಿದೆ. ಡಬ್ಬಲ್ ಬ್ಯಾರನ್ ಆದರೆ 3,240 ಕೆಜಿ ಮಾರಾಟ ಮಾಡಲು ಅವಕಾಶವಿರುತ್ತೆ.

Advertisements
ತಂಬಾಕು 1 1

ತಂಬಾಕು ಮಂಡಳಿಯ ನಿಯಮದ ಅನುಸಾರ ರೈತನಿಗೆ ಮತ್ತೆ ಅಡಿಷನಲ್(ಹೆಚ್ಚುವರಿ) ಅಂತೇಳಿ 500 ಕೆಜಿ ಆಸುಪಾಸಿನಲ್ಲಿ ಹೊಗೆಸೊಪ್ಪು ಮಾರಾಟ ಮಾಡಲು ಮತ್ತೊಮ್ಮೆ ಅವಕಾಶ ದೊರೆಯುತ್ತದೆ. ಇಲ್ಲಿ ರಾಜ್ಯ ಸರ್ಕಾರ, ಸ್ಥಳೀಯ ಆಡಳಿತ ಯಾವುದಕ್ಕೂ ಒಳಪಡದೆ ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯ ಅಧೀನದಲ್ಲಿ ತಂಬಾಕು ಮಂಡಳಿ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಣೆ ಮಾಡುತ್ತದೆ.

ವ್ಯವಸ್ಥೆ ಏನೇ ಇದ್ದರೂ ಅನ್ಯಾಯ ಆಗೋದು ರೈತರಿಗೆ ಮಾತ್ರ. ಭಾರತದಲ್ಲಿ ಅತಿಹೆಚ್ಚು ತಂಬಾಕು ಬೆಳೆಯುವ, ಮಾರಾಟ ಮಾಡುವ ರಾಜ್ಯ ಆಂಧ್ರಪ್ರದೇಶ. ಈಗಾಗಲೇ ಹರಾಜು ಪ್ರಕ್ರಿಯೆ ನಡೆದು ಕಂಪನಿಗಳು ಅಲ್ಲಿನ ತಂಬಾಕು ಖರೀದಿ ಮಾಡಿವೆ. ಕರ್ನಾಟಕ ಎರಡನೆ ರಾಜ್ಯವಾಗಿ ಇದೀಗ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಆಂಧ್ರಪ್ರದೇಶದಲ್ಲಿ ಗುಣಮಟ್ಟದ ತಂಬಾಕಿಗೆ ಕೆಜಿಗೆ 400 ರೂಪಾಯಿವರೆಗೆ ಹರಾಜಿನಲ್ಲಿ ಕಂಪನಿಗಳು ಖರೀದಿಸಿವೆ. ಕಳಪೆ ದರ್ಜೆ ತಂಬಾಕು ಕೂಡ ಕೆಜಿಗೆ 250ರ ಆಸುಪಾಸಿನಲ್ಲಿ ಬಿಕರಿಯಾಗಿದೆ ಎನ್ನುವುದೇ ರೈತ ಮುಖಂಡರ ಆರೋಪವಾಗಿದೆ.

ತಂಬಾಕು 2 1

ಆದರೆ ಕರ್ನಾಟಕದಲ್ಲಿ ಈವರೆಗಿನ ಹೈಬಿಡ್‌ ಗುಣಮಟ್ಟದ ತಂಬಾಕು(ವರ್ಜೀನಿಯ) ಕೆಜಿಗೆ ₹292. ಇನ್ನು ಲೋ ಗ್ರೇಡ್(ಎರಡನೇ ದರ್ಜೆ, ಮೂರನೇ ದರ್ಜೆ) ತಂಬಾಕು ₹225ರ ಗಡಿ ದಾಟುತ್ತಿಲ್ಲ ಎನ್ನುವುದೇ ರೈತನ ಅಳಲು. ತಂಬಾಕು ಹೇಳಿಕೇಳಿ ವರ್ಷದ ಬೆಳೆ. ಪಟದಲ್ಲಿ ಹೊಗೆ ಸಸಿ ಬಿತ್ತನೆ ಮಾಡಿದ್ದಾಗಿನಿಂದ ತಂಬಾಕು ಮಂಡಳಿಗೆ ತಂದು ಮಾರಾಟ ಮಾಡಿ ಹಣ ಪಡೆಯುವವರೆಗೆ ಸುದೀರ್ಘವಾಗಿ ನಡೆಯುವ ಪ್ರಕ್ರಿಯೆ. ಅದರಲ್ಲೂ ವ್ಯವಸಾಯಕ್ಕೆ ಹೆಚ್ಚಿನ ಖರ್ಚು ಸಹ ತಗಲುತ್ತೆ. ಆಂಧ್ರದಲ್ಲಿ ತಂಬಾಕು ಬೆಳೆಯುವ ರೈತರಿಗೆ ಒಂದು ಬೆಲೆ ಕೊಟ್ಟು ನಮ್ಮ ರಾಜ್ಯದಲ್ಲಿ ಬೆಳೆಯುವ ತಂಬಾಕು ಬೆಳೆಗೆ ಸರಿಯಾದ ಬೆಲೆ ನೀಡದೆ ಅನ್ಯಾಯ ಮಾಡುತ್ತಿರುವುದು ತಂಬಾಕು ರೈತ ಕಂಗಾಲಾಗುವಂತೆ ಮಾಡಿದೆ.

ಸಂಸದ ಯದುವೀರ್

ಕರ್ನಾಟಕದ ತಂಬಾಕು ಬೆಳೆಗಾರರಿಗೆ ಸರಿಯಾದ ಬೆಲೆ ಕೊಡದೇ ಇರುವುದಕ್ಕೆ ತಂಬಾಕು ಮಂಡಳಿ ಹರಾಜು ಅಧಿಕಾರಿಗಳು, ತಂಬಾಕು ಮಂಡಳಿ ಅಧೀಕ್ಷಕರು, ತಂಬಾಕು ಮಂಡಳಿ ಅಧ್ಯಕ್ಷರ ಕಡೆಯಿಂದ ಬರುತ್ತಿರುವ ಉತ್ತರ “ಸಿಗರೇಟ್ ತಯಾರಿಕಾ ಕಂಪೆನಿಗಳಿಗೆ ರಾಜ್ಯದ ತಂಬಾಕಿನ ಅವಶ್ಯಕತೆಯಿದೆ. ಆದರೆ ತಂಬಾಕಿನಲ್ಲಿ ನಿಕೋಟಿನ್ ಅಂಶ ಕುಸಿದಿರುವ ಕಾರಣ ಹೆಚ್ಚಿನ ಬೆಲೆ ಕೊಟ್ಟು ಖರೀದಿ ಮಾಡಲು ಕಂಪನಿಗಳು ಹಿಂದೇಟು ಹಾಕುತ್ತಿವೆ” ಎಂಬ ಸಬೂಬು ಹೇಳಿ ರಾಜ್ಯದ ರೈತರ ಬದುಕಿನ ಮೇಲೆ ಬರೆ ಎಳೆದಿದೆ.

ರೈತ ತಂಬಾಕು ಮಂಡಳಿ ಹರಾಜಿನ ಸಮಯದಲ್ಲಿ ಹೊಗೆಸೊಪ್ಪಿನ ಬೇಲ್ ತೆಗೆದುಕೊಂಡು ಹೋಗಿ ತನ್ನ ಪ್ಲಾಟ್ ಫಾರಂನಲ್ಲಿ ಕಾದು ಕಂಪನಿಗಳು ತಮಗಿಷ್ಟ ಬಂದಂತೆ, ಮನ ಬಂದಂತೆ ಕೆಲವನ್ನು ಕೊಳ್ಳುವುದು, ತಮ್ಮಿಷ್ಟದ ಬೆಲೆಗೆ ಹರಾಜು ಹಾಕುವುದು, ಹೆಚ್ಚಿಗೆ ಬೆಲೆ ಕೂಗಿದ ಕಂಪನಿ ಹರಾಜಿನಲ್ಲಿ ಕೊಳ್ಳುವುದು. ಅರ್ಧಕ್ಕರ್ಧ ಹೊಗೆಸೊಪ್ಪಿನ ಬೇಲ್‌ಗಳು ನೋ ಬಿಡ್(ಬಿಕರಿಯಾಗದ)
ಹೆಸರಿನಲ್ಲಿ ಮನೆಗೆ ವಾಪಸ್ ತರುವಂತಹ ಸಮಸ್ಯೆ ಎದುರಾಗಿದೆ.

ತಂಬಾಕು 3 1

ರೈತನಿಗೆ ಇದೊಂದು ದೊಡ್ಡ ತಲೆನೋವಿನ ಕೆಲಸ. ಬೇಲ್ ಮಾಡಲು ಬೇಲ್ ಪೆಟ್ಟಿಗೆಯಲ್ಲಿ ಚೆನ್ನಾಗಿ ತುಳಿದು, ಅದನ್ನು ಹಸಿಬೆ ಚೀಲ, ಸುತ್ತಲಿ ದಾರ ಬಳಸಿ ಪಿಂಡಿಯಾಗಿ ಕಟ್ಟಿ ನೂರಾರು ಕೆಜಿ ಹಂತದಲ್ಲಿ ತಂದಿರುತ್ತಾರೆ. ಮತ್ತೆ ವಾಪಸ್ ಮನೆಗೆ ಕೊಂಡೊಯ್ದರೆ ಆದನ್ನು ರೈತ ಹಾಗೆ ಇಡುವಂತಿಲ್ಲ. ಶಾಖಕ್ಕೆ ಬೂಸ್ಟ್ ಹಿಡಿಯುತ್ತೆ, ಇಲ್ಲ ಗುಣಮಟ್ಟ ಕಳೆದುಕೊಳ್ಳುತ್ತದೆ. ಹೊಗೆಸೊಪ್ಪು ಹುಡಿಯಾಗುತ್ತೆ. ಆಗ ಮತ್ತೆ ಅದನ್ನೆಲ್ಲ ತೆಗೆದು ಹದಮಾಡಿ ಕಂಡೀಷನ್(ಸಹಜ ಸ್ಥಿತಿ)ಗೆ ಬರುವಂತೆ ನೋಡಿಕೊಳ್ಳಬೇಕು. ನೀರು ಚಿಮುಕಿಸುವಂತಿಲ್ಲ, ಸೆಲೆನ್ ಆಗುತ್ತೆನ್ನುವ ಭಯ. ವಾತಾವರಣದ ಗಾಳಿಯಲ್ಲಿ ಯಥಾಸ್ಥಿತಿಗೆ ತರಬೇಕು. ಮತ್ತೆ ತಂಬಾಕು ಮಾರುಕಟ್ಟೆ ಹರಾಜು ಆರಂಭವಾಗುವ ತನ್ನ ಸರದಿಯ ದಿನಾಂಕ ಬಂದಾಗ ಮತ್ತೆ ಹೊಗೆಸೊಪ್ಪಿನ ಬೇಲ್ ಮಾಡಿಕೊಂಡು, ಎತ್ತು ಗಾಡಿ, ಟ್ರ್ಯಾಕ್ಟರ್‌ಗೆ ತುಂಬಿಸಿ ಕೊಂಡೊಯ್ಯಬೇಕು. ಇದು ರೈತನ ಗೋಳು. ಇದೆಲ್ಲ ಅಧಿಕಾರಿಗಳಿಗೆ, ಕಂಪನಿಗಳಿಗೆ ಅರ್ಥವಾಗುವುದಿಲ್ಲ. ಅವರಿಗೆ ಗುಣಮಟ್ಟದ ತಂಬಾಕು ಬೇಕು, ಕಡಿಮೆ ಬೆಲೆಗೂ ಸಿಗಬೇಕು. ಹರಾಜು ಆಗಲಿಲ್ಲ,
ಕೊಳ್ಳಲಿಲ್ಲ ಅಂದರೆ ರೈತ ಬೆಳೆದ ತಂಬಾಕು ಸರಿಯಿಲ್ಲ, ಹಾಗೆ ಹೀಗೆ ಎನ್ನುವ ಸಬೂಬುಗಳನ್ನು ಹೇಳುತ್ತಾರೆ.

ತಂಬಾಕು 4 1

ಮೈಸೂರು ಜಿಲ್ಲೆಯಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ತಂಬಾಕು ಮಂಡಳಿಯ ಕಾರ್ಯವೈಖರಿ, ಹರಾಜಿಗೆ ಬಂದಿರುವ ಕಂಪನಿಗಳು ನಡೆದುಕೊಳ್ಳುತ್ತಿರುವ ವೈಖರಿ ಆತಂಕಕ್ಕೆ ದೂಡಿದೆ. ಸರಿಯಾಗಿ ಖರೀದಿ ಮಾಡುವುದಿಲ್ಲ, ಸಮರ್ಪಕ ಬೆಲೆ ಸಿಗುತ್ತಿಲ್ಲ. ಕೆಲವೇ ಕೆಲವು ಹೊಗೆಸೊಪ್ಪಿನ ಬೇಲ್‌ಗಳು ಆಗೊಮ್ಮೆ ಈಗೊಮ್ಮೆ ಒಳ್ಳೆಯ ಬೆಲೆಗೆ ಹರಾಜಾಗುತ್ತವೆ. ಇನ್ನು ಉಳಿದೆಲ್ಲವೂ ನೋ ಬಿಡ್, ಇಲ್ಲ ಕಡಿಮೆ ಬೆಲೆ ಬಿಡ್ ಆಗಿರುತ್ತೆ. ಇದರಿಂದ ರೈತ ರೋಸಿದ್ದಾನೆ. ಕಷ್ಟಪಟ್ಟು ಬೆಳೆದು, ಖರ್ಚು ಮಾಡಿ ತಂದ ತಂಬಾಕು ನಿಯಮಿತ ಅವಧಿಯಲ್ಲಿ, ಸರಿಯಾದ ಬೆಲೆಯಲ್ಲಿ ಮಾರಾಟವಾಗದೆ ಇರುವುದು ಜಿಲ್ಲೆಯ ರೈತರಿಗೆ ಆತಂಕ ತರಿಸಿದೆ.

ಒಂದು ವಾರದ ಹಿಂದೆ ತಂಬಾಕು ಮಂಡಳಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಒಳಗೊಂಡ ಸಭೆ ನಡೆದು ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ಬೆಲೆ ನಿರ್ಣಯವಾಗಲಿದೆ ಎನ್ನುವುದಾಗಿತ್ತು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಹುಣಸೂರಿನ ಕಟ್ಟೆ ಮಳಲವಾಡಿ ತಂಬಾಕು ಮಂಡಳಿ ಹಾಗೂ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಮಂಡಳಿಯಲ್ಲಿ ಸಭೆ ನಡೆದಿದೆ. ಆದರೆ ಸಭೆ ಗೊಂದಲದ ಗೂಡಾಗಿದ್ದು, ರೈತರು ಆಕ್ರೋಶ ಎದುರಿಸಬೇಕಾಗಿ ಬಂದಿತು. ಕಡೆಗೆ ಸಭೆ ಅರ್ಧಕ್ಕೆ ಮೊಟಕುಗೊಳಿಸಿ ಸಂಸದರು ಹೊರ ನಡೆದರು.

ತಂಬಾಕು ಬೆಳೆಗಾರರೊಂದಿಗೆ ಸಭೆ

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಸೇರಿದಂತೆ ಕಾರ್ಯಕರ್ತರು ಹರಾಜು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದಾರೆ. ರೈತರ ಅಹವಾಲು ಆಲಿಸಿದ್ದಾರೆ.

ಸಭೆಯಲ್ಲಿ ರೈತ ಗುಂಪುಗಳ ಭಿನ್ನಾಭಿಪ್ರಾಯ, ತಳ್ಳಾಟ, ನೂಕಾಟಕ್ಕೆ ಸಭೆ ಅರ್ಧಕ್ಕೆ ನಿಲ್ಲುವಂತಾಯಿತು. ಸಂಸದರು ರೈತರಿಗೆ ಉತ್ತಮ ಬೆಲೆ ಕೊಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ, ಸಂಬಂಧಪಟ್ಟವರ ಜತೆ ಸಭೆ ನಡೆಸುವ ಭರವಸೆ ಕೊಟ್ಟರು. ರೈತರಿಗೆ ಸಮಾಧಾನವಾಗಲಿಲ್ಲ. ಸ್ಥಳದಲ್ಲಿಯೇ ಬಗೆಹರಿಸಿ ಎನ್ನುವ ಕೂಗುಗಳು ಹೆಚ್ಚಾದವು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಎಲ್ಲೆಂದರಲ್ಲಿ ಕಸದ ರಾಶಿ; ಸ್ಥಳೀಯರು, ಪಾಲಿಕೆ ಅಧಿಕಾರಿಗಳ ಅಭಿಪ್ರಾಯಗಳೇನು?

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು, ಮುಖಂಡರು ಕೂಡ ಸಂಸದರಲ್ಲಿ ರೈತರ ಪರವಾಗಿ ಸೂಕ್ತ ಬೆಲೆ ಸಿಗುವಂತೆ ಮಾಡಿ
ಎನ್ನುವ ಮನವಿ ಇಟ್ಟರು. ಯಾರೂ ಕೇಳುವ, ಹೇಳುವ ಪರಿಸ್ಥಿತಿ ಇರದೆ ಸಭೆ ಸಂಪೂರ್ಣವಾಗಲೇ ಇಲ್ಲ. ಆದರೆ ಇಲ್ಲಿ ನೊಂದಿದ್ದು, ಆತಂಕಕ್ಕೆ ಒಳಗಾಗಿದ್ದು ಮಾತ್ರ ತಂಬಾಕು ಬೆಳೆಗಾರರು.

“ತಂಬಾಕು ಮಂಡಳಿ, ಸಂಬಂಧಪಟ್ಟ ಅಧಿಕಾರಿಗಳು ಹರಾಜಿನಲ್ಲಿ ಪಾಲ್ಗೊಂಡಿರುವ ಕಂಪನಿಗಳ ಜತೆ ಈಗಲಾದರೂ ರೈತನ ಪರವಾಗಿ ಮಾತನಾಡಿ, ಸೂಕ್ತ ಬೆಲೆ ಹಾಗೂ ಸರಿಯಾದ ಖರೀದಿ ಮಾಡಬೇಕು” ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮನವಿ ಮಾಡಿದರು.

WhatsApp Image 2023 09 02 at 8.42.26 PM
ಮೋಹನ್ ಜಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X