ಅಜ್ಜಿಯ ತಿಥಿ ಕಾರ್ಯಕ್ಕೆಂದು ಬಂದಿದ್ದ ಕುಟುಂಬವೊಂದರ ಮೂವರು ನಾಲೆಗೆ ಬಿದ್ದು, ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸರಗೂರು ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಘಟನೆ ನಡೆದಿದೆ. ಮೃತ ಕುಟುಂಬದ ಯುವತಿ ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದಿದ್ದಾರ. ಅವರನ್ನು ರಕ್ಷಿಸಲು ಹೋದ ಆಕೆಯ ತಂದೆ-ತಾಯಿ ಕೂಡ ನೀರು ಪಾಲಾಗಿದ್ದಾರೆ. ಮೃತರನ್ನು ಚಂಗೌಡನಹಳ್ಳಿ ಗ್ರಾಮದ ಮಹಮ್ಮದ್ ಕಪಿಲ್ (42), ಶಾವರಭಾನು (35), ಶಾಹೀರಾಭಾನು (20) ಎಂದು ಗುರುತಿಸಲಾಗಿದೆ.
ಕಪಿಲ್ ಅವರ ಕುಟುಂಬ ಬೆಂಗಳೂರಿನಲ್ಲಿ ವಾಸಿಸುತ್ತಿತ್ತು. ಅಜ್ಜಿಯ ತಿಥಿ ಕಾರ್ಯವಿದ್ದ ಕಾರಣ ಗ್ರಾಮಕ್ಕೆ ಬಂದಿದ್ದರು. ಕಾರ್ಯ ಮುಗಿಸಿ ನಾಲೆಯಲ್ಲಿ ಕೈ-ಕಾಲು ತೊಳೆಯಲು ಹೋಗಿದ್ದಾರೆ. ಆಗ ಶಾಹೀರಾಭಾನು ಕಾಲು ಜಾರಿ ನಾಲೆಗೆ ಬಂದಿದ್ದಾರೆ. ಆಕೆಯನ್ನು ರಕ್ಷಿಸಲು ಕಪಿಲ್ ಮತ್ತು ಶಾವರಭಾನು ನಾಲೆಗೆ ಇಳಿದಿದ್ದಾರೆ. ನೀರಿನ ರಭಸಕ್ಕೆ ಮೇಲೆ ಬರಲಾರದೆ ಮೂವರು ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಪೊಲೀಸರು ಬಂದಿದ್ದು, ಮೃತದೇಹಗಳನ್ನು ಹೊರಕ್ಕೆ ತೆರೆದಿದ್ದಾರೆ. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.