ರಾಜ್ಯ ಬರಗಾಲಕ್ಕೆ ತುತ್ತಾಗಿದ್ದು, ಈಗಾಗಲೇ ಸರ್ಕಾರ 130 ತಾಲೂಕುಗಳನ್ನು ಬರ ಪ್ರದೇಶವೆಂದು ಘೋಷಿಸಲು ಆಲೋಚನೆ ಮಾಡಿದೆ. ಕೇಂದ್ರ ಸರ್ಕಾರ ರಾಜ್ಯದ ಬರಗಾಲವನ್ನು ಸಮರೋಪಾದಿಯಲ್ಲಿ ಎದುರಿಸಲು ತುರ್ತಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ರಾಜ್ಯದ ರೈತರನ್ನು ರಕ್ಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಆಗ್ರಹಿಸಿದರು.
ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದ್ದು, ಮೈಸೂರು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಎನ್‌ಡಿಆರ್‌ಎಫ್ ನೀತಿಯು ಓಬಿರಾಯನ ಕಾಲದ್ದಾಗಿದ್ದು, ಅದನ್ನು ಕೂಡಲೇ ಮಾರ್ಪಾಡು ಮಾಡಿ ವೈಜ್ಞಾನಿಕವಾಗಿ ರೂಪಿಸಬೇಕು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು. ಅಂತರ್ಜಲ ವೃದ್ಧಿಸಲು ನೆರವು ನೀಡಬೇಕು. ರೈತರ ಸಾಲವನ್ನು ಮನ್ನಾ ಮಾಡಲು ಸಹಕರಿಸಬೇಕು ಎಂದು ಒತ್ತಾಯಿಸಿದರು.
“ಕಾವೇರಿ ಜಲ ವಿವಾದದ ತೀರ್ಪಿನಲ್ಲಿ ನ್ಯಾಯ ಮಂಡಳಿಯಾಗಲಿ ಅಥವಾ ಸರ್ವೋಚ್ಚ ನ್ಯಾಯಾಲಯವಾಗಲಿ ಸಂಕಷ್ಟ ಸೂತ್ರಕ್ಕೆ ಸ್ಪಷ್ಟವಾದ ಮಾನದಂಡವನ್ನು ರೂಪಿಸಿರುವುದಿಲ್ಲ. ಈ ಕಾರಣದಿಂದಾಗಿ ಮಳೆ ಕೊರತೆ ಸಂದರ್ಭದಲ್ಲಿ ವಿವಾದವು ಬಿಗಡಾಯಿಸಿ ಅವಲಂಬಿತರು ಅತ್ಯಂತ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಸಂಬಂಧ ಸೂಕ್ತ ಸಂಕಷ್ಟ ಸೂತ್ರವನ್ನು ರೂಪಿಸಲು ಮುಂದಾಗಬೇಕು” ಎಂದು ಆಗ್ರಹಿಸಿದರು.
“ಕಬ್ಬು ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ಶೇ.10.25ರಷ್ಟು ಇಳುವರಿಯನ್ನು ಆಧಾರವಾಗಿ ಇಟ್ಟುಕೊಂಡಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇದನ್ನು ಮಾರ್ಪಾಡು ಮಾಡಿ ಶೇ.8.5ರಷ್ಟು ಇಳುವರಿ ಮಾನದಂಡವನ್ನು ಅನುಸರಿಸಬೇಕು. ಉತ್ಪನ್ನ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದ್ದು, ಬೆಲೆ ನಿಗದಿಯಲ್ಲಿ ರೈತರನ್ನು ರಕ್ಷಿಸುವ ನೀತಿಯನ್ನು ಅನುಸರಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸವಕಲ್ಯಾಣ, ಹುಲಸೂರ ಬರಪೀಡಿತ ತಾಲೂಕು ಘೋಷಣೆಗೆ ರೈತ ಸಂಘ ಆಗ್ರಹ
“ಸ್ಥಳೀಯವಾಗಿ ಕೋಚನಹಳ್ಳಿ ಸಮಸ್ಯೆ ಪರಿಹಾರಕ್ಕಾಗಿ 800ಕ್ಕೂ ಹೆಚ್ಚು ದಿನಗಳಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ವಸತಿ ಸೌಕರ್ಯ ಕಲ್ಪಿಸಿ ಕೊಡುವ ಭರವಸೆಯನ್ನು ತಾವು ನೀಡಿದ್ದೀರಿ. ಅವರ ವಸತಿಗಾಗಿ ಜಮೀನನ್ನು ಒದಗಿಸಿಕೊಡಬೇಕು. ಹಾಗೂ ಸೂಕ್ತ ಪರಿಹಾರಗಳು ಅವರಿಗೆ ಇನ್ನೂ ತಲುಪಿಲ್ಲ. ಈ ಸಮಸ್ಯೆಗಳಿಗೆ ಒಂದು ತಾರ್ಕಿಕ ಅಂತ್ಯವನ್ನು ಮುಖ್ಯಮಂತ್ರಿಯವರು ನೀಡಬೇಕು” ಎಂದು ಒತ್ತಾಯಿಸಿದರು.
“ಕಾವೇರಿ ಮತ್ತು ಕಬಿನಿ ನೀರನ್ನು ವ್ಯವಸಾಯಕ್ಕೆ 15 ದಿನ ನೀರು ಬಿಟ್ಟು 10 ದಿನ ನೀರು ನಿಲ್ಲಿಸುವ ವ್ಯವಸ್ಥೆಯ ಮಾದರಿಯಲ್ಲೇ ಸರ್ಕಾರ ಹಾಗೂ ನೀರಾವರಿ ಇಲಾಖೆ ರೈತರ ವ್ಯವಸಾಯಕ್ಕೆ ನೀರು ಹರಿಸಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಸೇರಿದಂತೆ ಬಹುತೇಕ ರೈತ ಮುಖಂಡುರು ಹಾಗೂ ರೈತರು ಇದ್ದರು.