ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ಪಟ್ಟಣದ ಡ್ರೈವರ್ ಕಾಲೋನಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಿರತೆ ಹಸುವಿನ ಮೇಲೆ ದಾಳಿ ನಡೆಸಿ ಕೊಂದಿದೆ. ಇತ್ತೀಚೆಗೆ ಹೆಚ್ ಡಿ ಕೋಟೆ ಪಟ್ಟಣಕ್ಕೆ ಹೊಂದಿಕೊಂಡಿರುವ ಡ್ರೈವರ್ ಕಾಲೋನಿ, ಸುತ್ತ ಮುತ್ತಲಿನ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನರಿಗೆ ಆತಂಕ ಮೂಡಿಸಿತ್ತು.
ವಿದ್ಯುತ್ ಸರಿಯಾಗಿ ಇಲ್ಲದೇ ಇರುವುದೂ ಕೂಡ ಗ್ರಾಮಸ್ಥರಲ್ಲಿ ಭಯ ಉಂಟುಮಾಡಿದೆ. ಆತಂಕಕ್ಕೊಳಗಾದ ಗ್ರಾಮಸ್ಥರು, “ಚಿರತೆ ಹಿಡಿಯುವುದಷ್ಟೇ ಅಲ್ಲ. ನಾಲ್ಕು ಗಂಟೆ ವಿದ್ಯುತ್ ಬದಲಿಗೆ ಹತ್ತುಗಂಟೆ ವಿದ್ಯುತ್ ನೀಡಬೇಕು” ಎಂದು ಆಗ್ರಹ ಮಾಡಿದ್ದಾರೆ.

ರೈತ ಗುಂಡುಮಲ್ಲು ಅವರ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಏಳು ವರ್ಷದ ಚಿರತೆ ಸೆರೆ ಸಿಕ್ಕಿದೆ. ಒಂದು ಹಸು, ಕುರಿ, ಮೇಕೆಗಳನ್ನು ಬಲಿಪಡೆದಿದ್ದ ಚಿರತೆಯನ್ನು ಬಂಧಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದು, ಪರಿಹಾರ ನೀಡುವ ಭರವಸೆ ನೀಡಿ, ಸದರಿ ಭಾಗದಲ್ಲಿ ಅರಣ್ಯ ಸಿಬ್ಬಂದಿಗಳ ಗಸ್ತು ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಡೆಗೋಡೆ ಕುಸಿದು ಕಾರ್ಮಿಕ ಸಾವು; ಮಗು ಸೇರಿ ಮೂವರಿಗೆ ಗಂಭೀರ ಗಾಯ
ಕಳೆದ ವಾರವಷ್ಟೇ ಇದೇ ಸ್ಥಳದಲ್ಲಿ ಐದು ವರ್ಷದ ಚಿರತೆ ಸೆರೆಯಾಗಿತ್ತು. ವಾರ ಮಾಸುವ ಮುನ್ನ ಇನ್ನೊಂದು ಚಿರತೆ ಬೋನಿಗೆ ಬಿದ್ದಿರುವುದು ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ಹಾಗಾಗಿ ಗ್ರಾಮಸ್ಥರು ಇನ್ನಷ್ಟು ಕಾಡು ಪ್ರಾಣಿಗಳ ಓಡಾಟವಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
