ದೇಶ ಹಾಗೂ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಹ ಬಂಡವಾಳಶಾಹಿ ವರ್ಗದ ಪರವಾದ ನೀತಿಗಳನ್ನು ಪೈಪೋಟಿಯ ಆಧಾರದಲ್ಲಿ ಜಾರಿಗೆ ತರುತ್ತಿವೆ. ಸರ್ಕಾರಗಳು ಬದಲಾಗುತ್ತಿವೆ ವಿನಃ ಶೋಷಣೆಯ ನೀತಿಗಳು ಬದಲಾಗುತ್ತಲೇ ಇಲ್ಲ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಮೈಸೂರು ಜಿಲ್ಲಾ ಸಂಚಾಲಕ ಚಂದ್ರಶೇಖರ ಮೇಟಿ ಅಸಮಾಧಾನ ವ್ಯಕ್ತಪಡಿಸಿದರು.
ದೇಶದಾದ್ಯಂತ ದುಡಿಯುವ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಫೆ.11 ರಿಂದ ಎಐಯುಟಿಯುಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿತ್ತು. ಇದರ ಅಂಗವಾಗಿ ಇಂದು ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, “ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿ, ಅದರ ಜಾಗದಲ್ಲಿ ಮಾಲಿಕರ ಪರವಾಗಿರುವ ಕಾರ್ಮಿಕ ಸಂಹಿತೆಯನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಜಾಗತಿಕ ಹೂಡಿಕೆದಾರರ ಸಮ್ಮೇಳನವನ್ನು ನಡೆಸಿ ಬಂಡವಾಳಶಾಹಿಗಳಿಗೆ ʼನಿಮಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಅಗ್ಗವಾಗಿ ನೀಡುತ್ತೇವೆ, ನೀವು ಇಲ್ಲಿ ಬಂಡವಾಳವನ್ನು ಹೂಡಿ ಸಂಪತ್ತು ಗಳಿಸಿʼ ಎನ್ನುತ್ತಿದೆ. ಆದರೆ ಕಾರ್ಖಾನೆಗಳಿಗೆ ಭೂಮಿ ನೀಡಿದ ರೈತರಿಗಾಗಲೀ, ಅಥವಾ ಸ್ಥಳೀಯರಿಗೆ ಖಾಯಂ ಉದ್ಯೋಗಗಳನ್ನು ನೀಡದೆ ಹೊರಗುತ್ತಿಗೆಯ ಹೆಸರಿನಲ್ಲಿ ಶೋಷಿಸಲಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಹೋರಾಟಗಾರರೆಲ್ಲರೂ ಅಭಿವೃದ್ಧಿಯ ವಿರೋಧಿಗಳು ಎಂದು ಪ್ರಚಾರ ಮಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ ಹತ್ತು ವರ್ಷಗಳಿಂದ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಟ ವೇತನವನ್ನು ಪರಿಷ್ಕರಿಸಿಲ್ಲ. 2016ರಲ್ಲಿ ಕನಿಷ್ಟ ವೇತನವನ್ನು ಕೇವಲ 1000ರೂ ಹೆಚ್ಚಳ ಮಾಡಿದಾಗ, ಕೈಗಾರಿಕಾ ಮಾಲೀಕರು ಈ ಪರಿಷ್ಕರಣೆ ನಮಗೆ ಹೊರೆಯಾಗುತ್ತದೆ ಎಂದು ಕೋರ್ಟಿನ ಮೂಲಕ ತಡೆಯಾಜ್ಞೆ ತಂದರು. ಆದರೆ ಇದೇ ಮಾಲೀಕರು ಈಗ ಕಾರ್ಮಿಕರಿಗೆ ದಿನಕ್ಕೆ 12 ಗಂಟೆ ದುಡಿಯಿರಿ, 15 ಗಂಟೆ ಕೆಲಸ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಸರ್ಕಾರಗಳು ಸಹ ಈ ಮಾತುಗಳಿಗೆ ಮೌನ ಸಮ್ಮತಿಯನ್ನು ನೀಡುತ್ತಿವೆ” ಎಂದು ದೂರಿದರು.

“ಇಂತಹ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ನಡೆಸಿದ ಹೋರಾಟದ ಮಾದರಿಯಲ್ಲಿ ಬಲಿಷ್ಠವಾದ ಸಂಘಟಿತ ಹೋರಾಟವನ್ನು ನಡೆಸಿದರೆ, ಎಂತಹ ಸರ್ಕಾರವನ್ನೂ ಬಗ್ಗಿಸಬಹುದು. ಈ ನಿಟ್ಟಿನಲ್ಲಿ ಹೋರಾಟವನ್ನು ಕಟ್ಟಬೇಕು” ಎಂದು ಕರೆ ನೀಡಿದರು.
ಜಿಲ್ಲಾ ಸಮಿತಿಯ ಅಧ್ಯಕ್ಷ ಕಾಮ್ರೇಡ್ ವಿ ಯಶೋಧರ್ ಮಾತನಾಡಿ, “ಇಂದು ಎಲ್ಲಾ ಕ್ಷೇತ್ರಗಳಲ್ಲೂ ಬೆಲೆ ಏರಿಕೆಯಾಗುತ್ತಿದೆ. ಆದರೆ ಎಷ್ಟೇ ದುಡಿದರೂ ಸಹ ಸಂಬಳಗಳಾಗಲಿ, ಆದಾಯವಾಗಲಿ ಹೆಚ್ಚಳವಾಗುತ್ತಿಲ್ಲ. ಇದರಿಂದಾಗಿ ಜನ ಸಾಮಾನ್ಯರು, ಕಾರ್ಮಿಕರು, ರೈತರು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಇನ್ನೊಂದು ಕಡೆ ಶ್ರಮವನ್ನು ಶೋಷಿಸುವ ಬಂಡವಾಳಿಗರ ಆಸ್ತಿ ಕೇವಲ ಐದು ವರ್ಷಗಳಲ್ಲಿ ದುಪ್ಪಟ್ಟಾಗುತ್ತಿದೆ. ಕಾರ್ಮಿಕರು ದನಿ ಎತ್ತದಂತೆ ಹಕ್ಕುಗಳನ್ನು ದಮನಗೊಳಿಸಲಾಗುತ್ತಿದೆ. ದುಡಿಯುವ ಜನತೆಯ ಒಗ್ಗಟ್ಟನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ಮುರಿಯಲು ಪ್ರಯತ್ನಿಸಲಾಗುತ್ತಿದೆ. ಇಂತಹ ತಂತ್ರಗಳನ್ನು ವಿಫಲಗೊಳಿಸಿ ಕಾರ್ಮಿಕರು ಐಕ್ಯ ಹೋರಾಟ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ; ಕಸಾಪ ಜಿಲ್ಲಾಧ್ಯಕ್ಷರಿಂದ ಆಹ್ವಾನ ಪತ್ರಿಕೆ ಬಿಡುಗಡೆ
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಮಿತಿಯ ಜಂಟಿ ಕಾರ್ಯದರ್ಶಿಗಳಾದ ಮುದ್ದುಕೃಷ್ಣ, ಪುಟ್ಟರಾಜು, ಜಿಲ್ಲಾ ಸಮಿತಿಯ ಸದಸ್ಯರಾದ ಸಂಧ್ಯಾ ಪಿ ಎಸ್, ಹರೀಶ್ ಎಸ್ ಎಚ್, ಕಾರ್ಮಿಕರಾದ ರವಿಕುಮಾರ್, ರಮೇಶ್, ಮಹದೇವಸ್ವಾಮಿ, ನಾಗೇಂದ್ರ, ಆರವಿಂದ್, ಅಕ್ಕಮ್ಮ, ಮಹೇಶ್ ಸೇರಿದಂತೆ ಹಲವು ಕಾರ್ಖಾನೆಗಳ ಕಾರ್ಮಿಕರು, ಮೈಸೂರು ಮೆಡಿಕಲ್ ಕಾಲೇಜು ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಮತ್ತು ಬಿಸಿಯೂಟ ಕಾರ್ಯಕರ್ತೆಯರು ಭಾಗಿಯಾಗಿದ್ದರು.
