ತಪ್ಪು ಗ್ರಹಿಕೆಯಿಂದ ಹೊರಬಂದು ಅರಿವಿನಿಂದ ನಡೆದರೆ ಆದೇ ಸನ್ಮಾರ್ಗ ಎಂದು ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರಿನ ಕಲಾ ಮಂದಿರದಲ್ಲಿ ನಡೆದ ಸಾರ್ವಜನಿಕ “ಸೀರತ್ ಸಮಾವೇಶ”ದಲ್ಲಿ ‘ಪ್ರವಾದಿ ಮುಹಮ್ಮದ್’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
“ಇಸ್ಲಾಂ ಧರ್ಮಕ್ಕೆ ಯಾರನ್ನೂ ಬಲವಂತವಾಗಿ ಸೆಳೆದಿಲ್ಲ. ಯಾರ ಮೇಲಿಯೂ ಹೇರಿಕೆ ಮಾಡಿಲ್ಲ. ಕುರಾನ್‌ನಲ್ಲಿ ಬಲವಂತವಾಗಿ ಧರ್ಮದ ಹೇರಿಕೆ ಎಲ್ಲಿಯೂ ಹೇಳಿಲ್ಲ. ತಪ್ಪು ಕಲ್ಪನೆಗಳು ಬೇರೆಯದೆ ನಡೆಗೆ ದಾರಿ ಮಾಡಿದೆಯೇ ಹೊರತು ಇಸ್ಲಾಂ ಎಂದಿಗೂ ಇದಕ್ಕೆಲ್ಲ ಆಸ್ಪದ ನೀಡಿಲ್ಲ” ಎಂದು ಹೇಳಿದರು.
“ಭಾರತದಲ್ಲಿ ಮುಸ್ಲಿಂಮರಾಗಿ ಯಾಕೆ ಪರಿವರ್ತನೆಯಾಗಿದ್ದಾರೆ ಎಂಬುದನ್ನು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಯಾರು ಸನಾತನಿಗಳಲ್ಲವೋ, ಮೇಲು ಕೀಳುಗಳ ಪರವಾಗಿ ನಿಲ್ಲುವರೋ, ಇನ್ನೊಬ್ಬರನ್ನು ಅವಮಾನಿಸಲು ಜಾತಿ ಬಳಸುವರೋ ಅಂತಹವರು ಸ್ವ-ಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿದರೇ ವಿನಃ ಯಾರದೋ ಬಲವಂತದಿಂದಲ್ಲ” ಎಂದರು.
“ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆಯ ಪಿಡುಗಿನಿಂದ ಯಾರು ನೊಂದರೋ ಅವರುಗಳು, ಸಮಾಜದಲ್ಲಿ ಉತ್ತಮವಾದ ಜೀವನ ನಡೆಸಲು ಸಾಧ್ಯವಾಗದೆ, ಬೆಂಬಲವಿಲ್ಲದೆ ಇಸ್ಲಾಂ ಧರ್ಮದ ಕೈಹಿಡಿದು ಹೆಜ್ಜೆ ಹಾಕಿದರು. ಅಸ್ಪೃಶ್ಯತೆಯನ್ನು ನಿವಾರಿಸಿಕೊಳ್ಳುವುದಕ್ಕಾಗಿ ಹಿಡಿದ ದಾರಿಯಾಗಿದೆ. ವರ್ಣಾಶ್ರಮದ ಸನಾತನಿಗಳು ಹೇಳುವ ರೀತಿಯಲ್ಲಲ್ಲ. ಅವರಿಂದ ಶೋಷಿತರಾಗಿ ಬಂದವರು” ಎಂದರು.
ಜಮಾ ಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಕುಂಞಿ ಮಾತನಾಡಿ, “ದುಶ್ಚಟಗಳಿಂದ ಮನುಷ್ಯ ಕೆಟ್ಟಿದ್ದಾನೆ. ಅಮಲಿನಿಂದ ಮೃಗದಿಂದ ವರ್ತಿಸುತ್ತ ತನ್ನನ್ನು ತಾನೇ ಮರೆತಿದ್ದಾನೆ. ಸಮಾಜಕ್ಕೆ ದುಶ್ಚಟಗಳು, ಮದ್ಯಪಾನ, ಗಾಂಜಾ ಸೇವನೆ ಅಪಾಯಕಾರಿ. ಯುವಜನತೆ ದಾರಿ ತಪ್ಪುತ್ತಿದ್ದಾರೆ. ಸರಿ ದಾರಿಗೆ ತರಲು ನಾವೆಲ್ಲರೂ ಒಗ್ಗೂಡಬೇಕಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ, ಉತ್ತಮವಾದ ಜೀವನ ಕಂಡುಕೊಳ್ಳಲು ದುಶ್ಚಟ ಬಿಡಬೇಕಿದೆ” ಎಂದು ಸಲಹೆ ನೀಡಿದರು.
“ದುಶ್ಚಟಗಳ ದಾಸರಾಗದ ಹಾಗೆ ನೋಡಿಕೊಳ್ಳುವುದು ಉತ್ತಮ ಸಮಾಜದ ನಾಗರಿಕನ ಕರ್ತವ್ಯ. ನಾವು ದಿನಂಪ್ರತಿ ಕಾಣುತ್ತಿದ್ದೇವೆ. ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ ಇದಕ್ಕೆಲ್ಲ ಕಾರಣ ಯಾವುದು? ಎಲ್ಲರೂ ನಮ್ಮವರೇ, ನಮ್ಮ ಹಾಗೆ ಇದ್ದವರೇ ಈಗ ಸಮಾಜಕ್ಕೆ ಅಪಾಯ ತಂದಿಟ್ಟಿದ್ದಾರೆ. ಅಂದರೆ ಅದಕ್ಕೆ ಯಾವ ಧರ್ಮಗಳೂ ಕಾರಣವಲ್ಲ.
ಎಲ್ಲವೂ ಮನುಷ್ಯನ ಹಿತ ಕಾಯುವುದೇ ಮಾಡಿವೆ. ಆದರೆ ಮನುಷ್ಯ ಸರಿಯಾಗಿ ಗ್ರಹಿಸದೆ, ನಡೆದುಕೊಳ್ಳದೇ ಇಂದಿನ ದುಃಸ್ಥಿತಿಗೆ ಕಾರಣವಾಗಿದೆ” ಎಂದು ವಿಷಾದಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಅಸಂಘಟಿತ ಕಾರ್ಮಿಕರ ಸೌಲಭ್ಯಕ್ಕಾಗಿ ಸಂಘಟಿತರಾಗಿ : ಸುರೇಶ್ ಕಲ್ಲಾಗರ
ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಮಾತನಾಡಿ, “ಸೀರತ್ ಸಮಾವೇಶ ರಾಜ್ಯದೆಲ್ಲೆಡೆ ಇನ್ನೂ ಹೆಚ್ಚೆಚ್ಚು ನಡೆಯಬೇಕು. ಸರ್ವಧರ್ಮೀಯರು ಭಾಗಿಯಾಗಿ ಇಸ್ಲಾಂ ಅರಿಯುವ ಕೆಲಸ ಮಾಡಬೇಕಿದೆ. ತಪ್ಪು ಕಲ್ಪನೆಗಳನ್ನು ತೊಡೆದುಹಾಕಿ, ಎಲ್ಲಿ ಏನೇ ನಡೆದರೂ ಅದಕ್ಕೆ ಹೊಣೆಗಾರಿಕೆ ಮಾಡುವುದನ್ನು ನಿಲ್ಲಿಸಬೇಕಿದೆ. ಪವಿತ್ರ ಕುರಾನ್ ಮಾನವನ ಬದುಕು ಸ್ವಚ್ಛಂದವಾಗಿ ನಡೆಸುವುದನ್ನು ಬಯಸುತ್ತದೆಯೇ ಹೊರತು ಕ್ರೋಧವನ್ನಲ್ಲ. ಎಲ್ಲರನ್ನೂ ತನ್ನವರೆಂದು ಪೋಷಿಸುವ, ಗೌರವಿಸುವ ಮನೋಧರ್ಮ ಹೊಂದಿದೆಯೇ ಹೊರತು ತಪ್ಪು ಕಲ್ಪನೆಯ ಯಾವುದೇ ಜಾಡು ಕಾಣಲು ಸಾಧ್ಯವಿಲ್ಲ. ಎಲ್ಲರೂ ಪವಿತ್ರ ಕುರಾನ್ ಓದಿ ತಿಳಿದುಕೊಳ್ಳಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಶಾಸಕ ಹರೀಶ್ ಗೌಡ, ಕ್ರಿಶ್ಚಿಯನ್ ಧರ್ಮ ಗುರು ಸ್ಟೇನಿ ಡಿ ಅಲ್ಮೇಡ, ಮೌಲಾನ ಮುಹಮ್ಮದ್ ಉಸ್ಮಾನ್ ಷರೀಫ್, ಅಯೂಬ್ ಖಾನ್, ಎ ಇ ಇಬ್ರಾಹಿಂ, ಅಬ್ದುಲ್ ಸಲಾಂ ಯು, ನೂರ್ ಮರ್ಚೆಂಟ್, ಸಿದ್ದೀಕ್ ಹಮ್ಜಾ ಸೇರಿದಂತೆ ಹಲವರು ಇದ್ದರು.