ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ಗ್ರಾಮಾಡಳಿತಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗುವುದರ ಮೂಲಕ ಬೆಂಬಲ ನೀಡಿದ್ದಾರೆ.
ಕಂದಾಯ ಇಲಾಖೆಯ ಕರ್ನಾಟಕ ರಾಜ್ಯದ ಗ್ರಾಮಾಡಳಿತಾಧಿಕಾರಿಗಳ ಸಮಸ್ಯೆಗಳನ್ನು ಇಟ್ಟುಕೊಂಡು ದಿನಾಂಕ 10/02/2025 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.ಅದರ ಭಾಗವಾಗಿ ಹುಣಸೂರಿನ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸ್ಥಳೀಯ ನೌಕರರು ಧರಣಿ ನಡೆಸುತ್ತಿದ್ದಾರೆ.ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್ ನೇತೃತ್ವದಲ್ಲಿ ಧರಣಿಯಲ್ಲಿ ಭಾಗಿಯಾಗುವುದರ ಮೂಲಕ ಬೆಂಬಲ ಸೂಚಿಸಿದೆ.
ಗ್ರಾಮ ಆಡಳಿತಾಧಿಕಾರಿಗಳಿಗೆ ಸ್ಥಳೀಯವಾಗಿ ಕಛೇರಿಯ ಗುಣಮಟ್ಟದ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಮೊಬೈಲ್ ಫೋನ್ (12 ಜಿಬಿ, 256 ಜಿಬಿ) ಸಿಮ್ ಮತ್ತು ಡೇಟಾ. ಗೂಗಲ್ ಕ್ರೋಮ್ ಬುಕ್, ಲ್ಯಾಪ್ಟಾಪ್, ಪ್ರಿಂಟರ್ ಮತ್ತು ಸ್ಕ್ಯಾನರ್‌ಗಳ ಸಲಕರಣೆಗಳನ್ನು ಸರ್ಕಾರವು ಮಂಜೂರು ಮಾಡಬೇಕು.ಇದರಿಂದ ಗ್ರಾಮ ಆಡಳಿತಾಧಿಕಾರಿಗಳು ತಾಂತ್ರಿಕತೆಗೆ ಸಂಬಂಧಿಸಿದಂತೆ ಸರ್ಕಾರದ ಮೊಬೈಲ್ ತಂತ್ರಾಂಶಗಳಾದ 21 ಆಪ್‌ಗಳಿಂದ ರೈತರಿಗೆ ಮಾಹಿತಿ ಸಿಗುವ ಎಲ್ಲಾ ಆಪ್‌ಗಳು ಸಿಗುವಂತೆ ಅನುಕೂಲವಾಗುತ್ತದೆ. ಈಗಿರುವ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಹಾಗೂ ರೈತರಿಗೆ ಬೇಕಾದ ದಾಖಲೆ ಪತ್ರಗಳು ದೊರಕುತ್ತಿಲ್ಲ. ಈ ಸಮಸ್ಯೆಗಳಿಂದಾಗಿ ರೈತರಿಗೆ ಸಾರ್ವಜನಿಕರಿಗೆ ದೊರಕಬೇಕಾದ ಸೌಲಭ್ಯಗಳು ದೊರೆಯದೆ ಸಮಸ್ಯೆ ಅನುಭವಿಸುತ್ತಿದ್ದಾರೆ.
ಸಮಸ್ಯೆಗಳನ್ನು ಪರಿಹರಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು,ಈ ಸಮಸ್ಯೆಗಳಿಗೆ ಅಧಿಕಾರಿಗಳು ಧರಣಿ ಮಾಡುತ್ತಿರುವುದು ರೈತರ ಮತ್ತು ಸಾರ್ವಜನಿಕರ ಹಿತಕ್ಕಾಗಿ ಹಾಗಾಗಿ ರೈತ ಸಂಘವು ಗ್ರಾಮ ಆಡಳಿತಾಧಿಕಾರಿಗಳು ಮಾಡುತ್ತಿರುವ ಮುಷ್ಕರಕ್ಕೆ ಬೆಂಬಲಿಸಿದೆ.
ಸರ್ಕಾರವು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳ ಮುಷ್ಕರದ ಮೂಲಭೂತ ಸೌಲಭ್ಯಗಳನ್ನು ಈಡೇರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.ದಿನಾಂಕ ದಿನಾಂಕ 17/02/2025 ರ ಸೋಮವಾರದೊಳಗೆ ಸರ್ಕಾರವು ಅಧಿಕಾರಿಗಳ ಮುಷ್ಕರವನ್ನು ಕೈ ಬಿಡುವಂತೆ ಮನವೊಲಿಸಿ ಬೇಡಿಕೆ ಈಡೇರಿಸಬೇಕು.
ಒಂದು ವೇಳೆ ಸಮಸ್ಯೆಯನ್ನು ಪರಿಹರಿಸದೆ ರಾಜ್ಯವ್ಯಾಪಿ ಅಧಿಕಾರಿಗಳು ಹೀಗೆ ಮುಷ್ಕರ ಮುಂದುವರಿಸಿದರೆ ಅಧಿಕಾರಿಗಳ ಪರವಾಗಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಮೈಸೂರು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಹೊಸೂರು ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಭಯದಲ್ಲೇ ದಿನ ದೂಡುವ ಆದಿವಾಸಿಗಳು; ಪರ್ಯಾಯ ವ್ಯವಸ್ಥೆಗೆ ಮನವಿ
ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆಗಳನ್ನು ಈಡೇರಿಸುವಂತೆ ಹುಣಸೂರು ಉಪವಿಭಾಗಾಧಿಕಾರಿ ವಿಜಯ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು,ಉಪ ವಿಭಾಗಧಿಕಾರಿ ವಿಜಯ್ ಕುಮಾರ್ ಮಾತನಾಡಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರಿಗೆ ಕಳಿಸಿಕೊಡಲಾಗುವುದು ಎಂದಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಕಿರಿಜಾಜಿ ಧನಂಜಯ, ಮೂಕನಹಳ್ಳಿ ವಿಜಿ ಸೇರಿದಂತೆ ಹಲವರು ಇದ್ದರು.
