ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಜರುಗಿದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಾಗೂ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಮಾತನಾಡಿ ‘ ಭಾರತ ವೈವಿಧ್ಯಮಯ ದೇಶ. ಬಹುತ್ವದಿಂದ ಕೂಡಿ ನಾವೆಲ್ಲಾ ಒಂದಾಗಿದ್ದೇವೆ ‘ ಎಂದು ಹೇಳಿದರು.
‘ ಸಂವಿಧಾನದ ಪೀಠಿಕೆಯಲ್ಲಿ ವ್ಯಕ್ತಿ ಗೌರವ, ಏಕತೆಯನ್ನು ಬಾಬಾ ಸಾಹೇಬರು ಉಲ್ಲೇಖಿಸಿದ್ದಾರೆ. ದೇಶಕ್ಕೆ ಗಂಡಾಂತರ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ಹೇಳಿದ್ದಾರೆ. ಶೋಷಣೆ, ತಾರತಮ್ಯ, ಅಸ್ಪೃಸ್ಯತೆಯಿಂದ ತಾನು ನೊಂದು ತನ್ನ ಅಪಾರವಾದ ಜ್ಞಾನದಿಂದ ಈ ಎಲ್ಲಾ ಸಾಮಾಜಿಕ ಪಿಡುಗುಗಳಿಗೆ ಪರಿಹಾರವನ್ನು ಕಲ್ಪಿಸಿದ್ದಾರೆ.’
ನಾವು ಭಗವಾನ್ ಬುದ್ಧ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿದ್ದೇವೆ. ಬುದ್ಧ ಎಂದರೆ ಕರುಣೆ, ಪ್ರೀತಿ, ಸಹನೆ. ಈ ಎಲ್ಲವನ್ನು ಒಳಗೊಂಡು ಬೌದ್ಧ ಧರ್ಮವು ಉದಯವಾಯಿತು. ಈ ಧರ್ಮದಲ್ಲಿ ಸಂಪೂರ್ಣ ಲೌಖಿಕವಾದ ವಿಚಾರಗಳಿವೆ. ಮೌಢ್ಯ, ಕಂದಾಚಾರ, ಅಲೌಖಿಕ ವಿಚಾರಗಳು ಬೌದ್ದ ಧರ್ಮದಲ್ಲಿಲ್ಲ. ವೈಚಾರಿಕತೆ, ವೈಜ್ಞಾನಿಕ ಸಂಗತಿಗಳನ್ನು ಮಾತ್ರ ಬುದ್ಧರು ತಿಳಿಸಿದ್ದಾರೆ.
ಭಗವಾನ್ ಬುದ್ಧರು ನನ್ನನ್ನೂ ಸಕಾರಾತ್ಮಕವಾಗಿ ಟೀಕಿಸಿ ಎನ್ನುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪರಿಕಲ್ಪನೆಯನ್ನು ಅಂದಿನ ಕಾಲದಲ್ಲೇ ತಿಳಿಸಿದ್ದರು. ನೋಬಲ್ ಪ್ರಶಸ್ತಿ ಪುರಸ್ಕೃತರಾದ ಆಲ್ಬರ್ಟ್ ಐನ್ ಸ್ಟೈನ್ ಅವರು ನಾನು ಭೌದ್ಧ ಧರ್ಮವನ್ನು ಬಿಟ್ಟು ಯಾವ ಧರ್ಮವನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ. ಇದು ಮನುಷ್ಯ ಧರ್ಮವಾಗಿದೆ ಎಂದಿದ್ದಾರೆ.

ಡಾ.ಬಿ.ಆರ್. ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತೊರೆದು ಬೌದ್ದಧರ್ಮ ಸ್ವೀಕರಿಸಲು ಅನೇಕ ಸಾಮಾಜಿಕ ಕಾರಣಗಳಿವೆ. ವರ್ಣಾಶ್ರಮ, ಜಾತಿ ಪದ್ಧತಿಯಿಂದ ಕೂಡಿರುವ ಧರ್ಮ ಅಸ್ತಿಪಂಜರಕ್ಕೆ ಸಮವಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಅತ್ಯಂತ ಶ್ರೇಷ್ಠವಾದ ವಿಚಾರಗಳಿರುವ ಕಾರಣಕ್ಕೆ ಬೌದ್ಧ ಧರ್ಮವನ್ನು ಅಪ್ಪಿಕೊಂಡರು.
ನಮ್ಮ ಸರ್ಕಾರವು ಬಂದ ದಿನಗಳಿಂದ ರಾಜ್ಯಾದ್ಯಂತ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುತ್ತಿದ್ದೇವೆ. ಡಾ.ಬಿ.ಆರ್. ಅಂಬೇಡ್ಕರ್ ವಿಚಾರಗಳನ್ನು ಮನೆ-ಮನೆಗೆ ತಲುಪಿಸುತ್ತಿದ್ದೇವೆ. ಅಲ್ಲದೆ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಮ್ಮ ಸರ್ಕಾರವು ದೇಶದ ಮೂಲೆ ಮೂಲೆಗೂ ಸಂವಿಧಾನದ ಆಶಯಗಳನ್ನು ರವಾನಿಸಲಾಗುತ್ತಿದೆ.
ಸಾಮಾಜಿಕ ನ್ಯಾಯದ ಅನುಷ್ಠಾನಕ್ಕಾಗಿ ಜಾತಿ ಸಮೀಕ್ಷೆ ವರದಿಯನ್ನು ಜಾರಿ ಮಾಡಲಾಗುತ್ತದೆ. ಇದು ಯಾವುದೇ ಒಂದು ಜಾತಿಯನ್ನು ಮೇಲೆತ್ತಲು ಅಥವಾ ಕಡೆಗಣಿಸಲು ಮಾಡುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವಿಷಯಗಳನ್ನು ಒಳಗೊಂಡಂತಹ ಸಮೀಕರಣ. ಇದೊಂದು ವೈಜ್ಞಾನಿಕ ಸಮೀಕ್ಷೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಇದು ಸಂಪನ್ಮೂಲ ಸಮಾನ ಹಂಚಿಕೆಗೆ ಸಹಕಾರಿಯಾಗಲಿದೆ.

ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಕಲ್ಯಾಣದ ಪರವಾಗಿದೆ. ಆರ್ಥಿಕವಾಗಿ ಶಕ್ತಿ ತುಂಬಿ ಜನ ಜೀವನವನ್ನು ಮೇಲೆತ್ತುವ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಜನರು ಸ್ವಾಭಿಮಾನದಿಂದ ಬದುಕಲು ನೆರವಾಗಿವೆ. ಈ ಎಲ್ಲವೂ ರಾಜಕೀಯಕ್ಕಾಗಿ ಕೈಗೊಂಡ ನಿರ್ಧಾರಗಳಲ್ಲ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಜಾರಿಮಾಡಿದ ಮಹತ್ವದ ಯೋಜನೆಗಳಾಗಿವೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳೊಂದಿಗೆ ಸಾಗುತ್ತಿದೆ. ಜನರು ಆರ್ಶೀವದಿಸಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ್ದಾರೆ. ಅದರಂತೆ ಸರ್ಕಾರವು ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುತ್ತಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಖಾಸಗಿ ಶಾಲೆಗಳಿಗೆ ಅನುಮತಿ; ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ : ಸುಭಾಷ್ ಬೆಟ್ಟದಕೊಪ್ಪ
ಕಾರ್ಯಕ್ರಮದಲ್ಲಿ ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಪಶು ಸಂಗೋಪನೆ ಇಲಾಖೆ ಸಚಿವ ಕೆ.ವೆಂಕಟೇಶ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಶಾಸಕರಾದ ಅನಿಲ್ ಚಿಕ್ಕಮಾದು, ಹೆಚ್.ಎಂ.ಗಣೇಶ್ ಪ್ರಸಾದ್, ಡಿ.ರವಿಶಂಕರ್ ಸೇರಿದಂತ ಇನ್ನಿತರ ಮುಖಂಡರು ಇದ್ದರು.