ಮೈಸೂರು ಜಿಲ್ಲೆ, ಸರಗೂರು ತಾಲ್ಲೂಕು, ಯಶವಂತಪುರ ಹಾಗೂ ಎಂ ಸಿ ತಳಲು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಕಂದಾಯ ಗ್ರಾಮಗಳಾದ ‘ಲಕ್ಶ್ಮಣಪುರ ಹಾಗೂ ಅಳಲ ಹಳ್ಳಿ’ ಅರಣ್ಯ ಪಾಲಾಗಿದೆ. ಅರಣ್ಯ ಕಾಯ್ದೆಯ ದುರುಪಯೋಗ ಅಷ್ಟಿಷ್ಟಲ್ಲ ಕಾಡಂಚಿನ ಗ್ರಾಮಗಳು ಕಂಡರೆ ಸಾಕು ಕಲ್ಲು ನೆಟ್ಟು ಇದು ಅರಣ್ಯಕ್ಕೆ ಸೇರಿದ್ದು ಅನ್ನುವಂತಾಗಿದೆ.ಇತ್ತ ಪರಿಹಾರವೂ ಇಲ್ಲ, ಪುನರ್ವಸತಿಯು ಇಲ್ಲದಂತಾಗಿದೆ.
ಸುಖಾಸುಮ್ಮನೆ ಹಿಂದೆ ಮುಂದೆ ನೋಡದೆ ನೂರಾರು ಕುಟುಂಬಗಳನ್ನು ಹೊರ ದಬ್ಬಲಾಗಿದೆ. ಅವಿಧ್ಯಾವಂತರು ಓದಿಲ್ಲ, ಬರೆದಿಲ್ಲ ಭಯ ಪಡಿಸಿದಂತೆಲ್ಲ ಹೆದರಿ ತಮ್ಮ ಊರನ್ನ ಬಿಟ್ಟು ಹೊರಗೆ ಬಂದು ಅತಂತ್ರರಾಗಿದ್ದಾರೆ. ಅರಣ್ಯ ಇಲಾಖೆ ಇರೋ ಬರೋ ಭೂಮಿಯನ್ನ ಕಾಡಿಗೆ ಸೇರಿದ್ದು, ಕಾಡು ಪ್ರಾಣಿಗಳ ಸಂಚಾರವಿದೆ ಅಂತೆಲ್ಲ ಹೇಳಿತೆ ವಿನಃ. ಆ ಜನಗಳಿಗೆ ಪುನರ್ವಸತಿ, ಭೂಮಿ ಕೊಡಲಿಲ್ಲ.ಕಾಡಿಂದಾಚೆ ಹಾಕಿದ್ದೆ ಸಾಧನೆಯಾಗಿದೆ. ಅರಣ್ಯ ಇಲಾಖೆಗೆ ಸೇರಿದ್ದು ಅನ್ನಲು ಅವರ ಬಳಿ ಒಂದೇ ಒಂದು ದಾಖಲೆ ಇಲ್ಲ. ಈಗಲೂ ಪಾಣಿ,ಪಟ್ಟದಲ್ಲಿ ಕಂದಾಯ ಭೂಮಿ ಅಂತಲೇ ಇದೆ ಹೊರತು ಅರಣ್ಯ ಎಂದು ಎಲ್ಲಿಯೂ ಉಲ್ಲೇಖವಿಲ್ಲ.
ನುಗು ಅರಣ್ಯ ವಲಯ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಇರುವಂತದ್ದು. ಆದ್ರೆ ಅರಣ್ಯ ಇಲಾಖೆ ಯಾವಾಗ ಲಕ್ಷ್ಮಣಪುರ ಜನರನ್ನು ಒಕ್ಕಲೆಬ್ಬಿಸಿ ಹೊರಗೆ ಹಾಕಿತೋ ಅವಾಗ ಬಿರ್ವಾಳುವಿನಲ್ಲಿರುವ ವಲಯ ಅರಣ್ಯಧಿಕಾರಿ ಕಚೇರಿ ಮುಂದಿನ ಫಲಕದಲ್ಲಿ ‘ಲಕ್ಷ್ಮಣಪುರ ರಾಜ್ಯ ಅರಣ್ಯ’ ಎಂದು ಹೊಸದಾಗಿ ಸೃಷ್ಟಿ ಮಾಡಿದ್ದಾರೆ. ಕರ್ನಾಟಕ ರಾಜ್ಯ ನಮಗೆಲ್ಲ ಗೊತ್ತಿರೋದು,ಈಗ ಹೊಸದಾಗಿ ಅರಣ್ಯ ಇಲಾಖೆ ಲಕ್ಷ್ಮಣಪುರ ರಾಜ್ಯ ಅರಣ್ಯ ಕಂಡುಹಿಡಿದಿದೆ.

” ಲಕ್ಷ್ಮಣಪುರ ಸರ್ವೆ ನಂಬರ್ 30,32 ರಲ್ಲಿರುವ ಸರಿ ಸುಮಾರು 729 ಎಕರೆ ಭೂಮಿ ಹಾಗೂ ಅಳಲ ಹಳ್ಳಿ ಸರ್ವೆ ನಂಬರ್ 10 ರಲ್ಲಿ ನಾಲ್ಕು ಎಕರೆ ಭೂಮಿಯನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಕೃಷಿ ಮಾಡಿಕೊಂಡು ಜೀವನ ನಡೆಸುತಿದ್ದರು. ಆದರೆ, ಅರಣ್ಯ ಇಲಾಖೆ ಏಕಾಏಕಿ ಇದೆಲ್ಲ ಅರಣ್ಯಕ್ಕೆ ಸೇರಿದ್ದು, ಕಾಡು ಪ್ರದೇಶ ಎಂದೇಳಿ ಅಲ್ಲೇ ಹುಟ್ಟಿ ಬೆಳೆದ ಜನರನ್ನ ಹೊರಗೆ ಹಾಕಿದ್ರು. ಹಿರಿಯರ ಸಮಾಧಿ, ನೆಲ ಮೂಲದ ಆಚರಣೆ ಭಾಗವಾಗಿ ಹನುಮಂತ ದೇವರ ಕಲ್ಲು , ಕುಡಿಯುವ ನೀರಿನ ಸೆಲೆ. ಈ ಹಿಂದೆ ಮನೆಗಳಿದ್ದ ಕುರುಹುಗಳು” ಇಂದಿಗೂ ಇವೆ.

ಅರಣ್ಯ ಇಲಾಖೆ ಅತಿಕ್ರಮಣ ಮಾಡಿರುವುದಲ್ಲದೆ ಯಾವುದೇ ದಾಖಲೆ ಹೊಂದಿಲ್ಲ ಕಾಡು ಎನ್ನಲು. ಹೀಗಿರುವಾಗ, ಬುಡಕಟ್ಟು ಆದಿವಾಸಿ ಜನಾಂಗಕ್ಕೆ ಸೇರಿದ ಪರಿಶಿಷ್ಟ ಜಾತಿ, ಪಂಗಡದವರನ್ನು ಹೊರ ಹಾಕಿದರು. 1963 – 64 ರ ಸಾಲಿನಲ್ಲಿ ಸಾಗುವಳಿ ಕೊಟ್ಟಿರುವ ಭೂಮಿಗಳು ಲಕ್ಷ್ಮಣಪುರ ಹಾಗೂ ಅಳಲಹಾಡಿ ಗ್ರಾಮಗಳಾಗಿವೆ.

‘ ಲಕ್ಷ್ಮಣಪುರ ಅರಣ್ಯಕ್ಕೆ ಸೇರಿದ್ದು ಅನ್ನುವ ಅರಣ್ಯಧಿಕಾರಿಗಳು ಸರ್ವೆ ನಂಬರ್ 30,32 ರ ಭೂಮಿಗಳನ್ನು ಕಾಡು ಅಂತೇಳಿ ರೈಲ್ವೆ ಕಂಬಿ ಅಳವಡಿಕೆ ಮಾಡಿ ಜನರನ್ನ ಒಕ್ಕಲೆಬ್ಬಿಸಿದೆ. ಅದೇ ಸರ್ವೇ ನಂಬರ್ 34 ರಲ್ಲಿ ಈ ಹಿಂದೆ ಹೆಡಿಯಾಲ ವ್ಯಾಪ್ತಿಯಲ್ಲಿ ಎಸಿಎಫ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ರವಿಕುಮಾರ್ (ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಸಂಭಂದಿ) ಬಾಮೈದ ಮಹೇಶ್ ಚೆನ್ನಪ್ಪ ಹೆಸರಿನಲ್ಲಿ 10 ಎಕರೆ 19 ಗುಂಟೆ ಭೂಮಿ ಹೊಂದಿದ್ದಾರೆ. ಇದು ಅರಣ್ಯಕ್ಕೆ ಸೇರಿಸಲ್ಲ ಯಾಕಂದ್ರೆ ಇವರೆಲ್ಲ ಪ್ರಭಾವಿಗಳು. ಅರಣ್ಯ ಅಧಿಕಾರಿಯಾಗಿ ಕೆಲಸ ಮಾಡಿದಲ್ಲೇ ಭೂಮಿ ಮಾಡಿರುವ ಅಧಿಕಾರಿಗೆ ಯಾವುದೇ ಅರಣ್ಯ ಕಾಯ್ದೆ ಅನ್ವಯ ‘ ಆಗಿಲ್ಲ.

ಇನ್ನ ರಾಜ್ಯದ ಪ್ರಭಾವಿ ಸಚಿವರಾದ ಕೆ ಜೆ ಜಾರ್ಜ್ ಅವರ ಜಂಗಲ್ ರೆಸಾರ್ಟ್ ಇದೆ. ಇದಕ್ಕೆಲ್ಲ ಅರಣ್ಯ ಕಾಯ್ದೆ ಅಡ್ಡಿ ಬರಲ್ಲ .ಲಕ್ಶ್ಮಣಪುರ ಪಕ್ಕದಲ್ಲಿದ್ದರು ಇಲ್ಲಿ ಯಾವ ಪ್ರಾಣಿಗಳು ಓಡಾಡಲ್ಲ. ಇದೆಲ್ಲ ಖಾಸಗಿ ಸ್ವತ್ತು. ಅದೇ ಬಡ ಜನರು ಕೃಷಿ ಮಾಡಿಕೊಂಡು ಜೀವನ ನಡೆಸುವ ಜಾಗದಲ್ಲಿ ಪ್ರಾಣಿಗಳು ಓಡಾಡುತ್ತವೆ ಅದೆಲ್ಲ ಅರಣ್ಯಕ್ಕೆ ಸೇರಿದ್ದು.ಇದು ಅರಣ್ಯ ಇಲಾಖೆಯ ಕುತಂತ್ರ.ಅರಣ್ಯ ಇಲಾಖೆ ಹೊರ ಹಾಕಿದ ಬಳಿಕ 152 ಕುಟುಂಬಗಳು ಚೆಲ್ಲಾಪಿಲ್ಲಿಯಾದಂತೆ ಒಂದು ಕಿಮೀ ವ್ಯಾಪ್ತಿಯ ಯಶವಂತಪುರ ಹಾಡಿ,ಹೆತ್ತಿಗೆ ಹಾಡಿ, ಎಂ ಸಿ ತಳಲು ಹಾಡಿ, ಹಳಲ ಹಾಡಿಯಲ್ಲಿ ವಾಸ ಮಾಡುತ್ತಿದ್ದಾರೆ. ಅಧಿಕಾರಿಗಳು, ಅರಣ್ಯ ಇಲಾಖೆ ಇದುವರೆಗೆ ಯಾವುದೇ ಪರಿಹಾರ ಕೊಟ್ಟಿಲ್ಲ, ಪುನರ್ವಸತಿ ಕಲ್ಪಿಸಿಲ್ಲ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನ ಉಳುಮೆ ಮಾಡುತಿದ್ದ ಭೂಮಿ ಕಂದಾಯ ಗ್ರಾಮಕ್ಕೆ ಒಳಪಟ್ಟಿದ್ದು. ಇಂದಿಗೂ ಸಹ ದಿಶಾಂಕ್ ಮೂಲಕ ನೋಡಿದರೆ ಕಂದಾಯ ಗ್ರಾಮ ಎಂದೇ ತೋರುತ್ತೆ.

ಅರಣ್ಯ ಇಲಾಖೆಯ ವಂಚನೆ ಶೋಷಿತರ ಮೇಲೆ ಹೇಗಿದೆ ಅಂದರೆ. ಲಕ್ಶ್ಮಣಪುರ ಗ್ರಾಮದ ಸರ್ವೆ ನಂಬರ್ 32 ರಲ್ಲಿ ಇರುವ 5 ಕುಟುಂಬಗಳಾದ ದೇವಿ, ಶ್ರೀನಿವಾಸ್, ರಾಮಯ್ಯ, ಹೆಚ್ ಎನ್ ಕೃಷ್ಣಮೂರ್ತಿ, ವೆಂಕಟಶೆಟ್ಟಿ ಇವರುಗಳ ಹೆಸರಿನಲ್ಲಿ ಪಹಣಿ, ಪಟ್ಟ, ಸಾಗುವಳಿ ಪತ್ರ ಇದೆ. ಸರ್ಕಾರದಿಂದ ಬರುವ ಸವಲತ್ತು ಪಡೆಯುತ್ತಿದ್ದಾರೆ. ಇವಾಗಲೂ ಸಹ ಕಂದಾಯ ಪಾವತಿ ಮಾಡುತ್ತಾ, ಗೊಬ್ಬರ ಗೋಡು ಪಡೆಯುತ್ತಿದ್ದಾರೆ. ಭೂಮಿ ಮಾತ್ರ ಇಲ್ಲ. ಪಹಣಿಯಲ್ಲಿ ಸ್ಪಷ್ಟವಾಗಿ ನಮೂದಾಗಿದೆ ಖುಷ್ಕಿ, ಸ್ವಂತದ್ದು ಅಂತೇಳಿ. ಅರಣ್ಯ ಇಲಾಖೆ ಹೇಳುವ ಸುಳ್ಳು ಅನಾವರಣ ಆಗೋದೇ ಇಲ್ಲಿ.
ಅರಣ್ಯ ಇಲಾಖೆ ಕಾಡು ಅನ್ನುವುದಾದರೆ ದಿಶಾಂಕ್ ಆಗಲಿ ಪಹಣಿ ಆಗಲಿ ಕಂದಾಯ ಗ್ರಾಮ, ಖುಷ್ಕಿ ಅಂತೇಳಿ ತೋರುತ್ತಿರಲಿಲ್ಲ. ಕಾಡು, ಅರಣ್ಯ ವಲಯ, ಮೀಸಲು ಪ್ರದೇಶ ಯಾವುದೋ ಒಂದು ಹೆಸರಿನಲ್ಲಿ ತೋರಬೇಕಿತ್ತು. ಆದರೆ ಅರಣ್ಯ ಇಲಾಖೆಯ ಷಡ್ಯಂತ್ರದಿಂದ ಬಡ ಜನರಿಗೆ ಅನ್ಯಾಯ ಆಗಿದೆ.ಬುಡಕಟ್ಟು ಜನಗಳ ಬದುಕು ಅತಂತ್ರವಾಗಿದೆ. ಭೂಮಿ ಇದ್ದರು ಇಲ್ಲದಂತ ಪರಿಸ್ಥಿತಿ.
ಇವರಂತೆಯೇ ಹಳಲಹಳ್ಳಿ ಸರ್ವೆ ನಂಬರ್ 10 ರಲ್ಲಿ ಇರುವ ಕುಟುಂಬಗಳು ಸಹ ದಾಖಲೆ ಹೊಂದಿವೆ.ಅದರಲ್ಲಿ ಚೆಲುವಯ್ಯ ಬಿನ್ ಮಾದಯ್ಯಾ ತಮಗೆ ಸೇರಿದ ನಾಲ್ಕು ಎಕರೆ ಭೂಮಿ ಮೇಲೆ 2010 -11 ನೇ ಸಾಲಿನಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿಗೆ ಆಧಾರ ಮಾಡಿ 9 ಲಕ್ಷಕ್ಕೂ ಹೆಚ್ಚಿನ ಮೊತ್ತ ಸಾಲ ಪಡೆದಿದ್ದಾರೆ.
ಯಾವುದೇ ವ್ಯಕ್ತಿ ಭೂಮಿ ಮೇಲೆ ಸಾಲ ಪಡೆಯಬೇಕು ಅಂದರೆ, ತಮ್ಮ ಹೆಸರಿನಲ್ಲಿ, ತಮ್ಮದೇ ದಾಖಲೆ ಹೊಂದಿದ್ದರೆ ಮಾತ್ರ ಸಾಲ ಪಡೆಯಲು ಅರ್ಹ. ಹೀಗಿರುವಾಗ ಅರಣ್ಯ ಆಗಿದ್ದು, ಕಾಡಿಗೆ ಸೇರಿದ್ದರೆ ಇಷ್ಟು ಸಾಲ ಪಡೆಯಲು ಸಾಧ್ಯವಿರುತ್ತಿರಲಿಲ್ಲ.ಅರಣ್ಯ ಜಾಗಕ್ಕೆ ಯಾರು ಸಾಲ ನೀಡುತ್ತಿರಲಿಲ್ಲ, ಆಧಾರ ಮಾಡಿಕೊಳ್ಳುತ್ತಾ ಇರಲಿಲ್ಲ.ರೈತನದ್ದೇ ಭೂಮಿಯಾಗಿದ್ದು ದಾಖಲೆಗಳು
ಇದ್ದ ಕಾರಣ ಸಾಲ ದೊರೆತಿದೆ.

ಅರಣ್ಯ ಇಲಾಖೆಯ ಅತಿಕ್ರಮಣದಿಂದ ರೈತನ ಬಳಿ ಭೂಮಿ ಇಲ್ಲ ಇದು ಅರಣ್ಯ ಇಲಾಖೆಯ ವ್ಯವಸ್ಥಿತ ಸಂಚು. ಉದ್ದೇಶಪೂರ್ವಕವಾಗಿ ಅಲ್ಲಿದ್ದ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡಿ ಅರಣ್ಯದ ಹೆಸರಿನಲ್ಲಿ ಅನ್ಯಾಯ ಮಾಡಿದೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಅರಣ್ಯ ಇಲಾಖೆಯ ಲೋಪ, ದರ್ಪ,ರೈತರ ಮೇಲೆ ಯಾವ ರೀತಿಯಲ್ಲಿ ದುಂಡಾವರ್ತನೆ ತೋರಿ ಅಲ್ಲಿಂದ ಹೊರ ಹಾಕಿರಬಹುದು ಅನ್ನುವುದು ಸ್ಪಷ್ಟವಾಗಿ ಮನಗಾಣಬಹುದು. ಬಡ ಜನರನ್ನ ಹೆದರಿಸಿ, ಬೆದರಿಸಿ ಹೊರ ಹಾಕಿದ್ದಾರೆ, ಬಲವಂತವಾಗಿ ಕಾಡು ಎಂದು ಅತಿಕ್ರಮಣ ಮಾಡಿದ್ದಾರೆ ಹೊರತು ಇದೆಲ್ಲವೂ ಅರಣ್ಯಕ್ಕೆ ಸೇರಿದ ಭೂಮಿ ಅಲ್ಲ.
ಇನ್ನ ಕೆಲವರಿಗೆ ಪೋಡು ಸಹ ಆಗಿದೆ, ಮ್ಯೂಟೇಷನ್, ಲ್ಯಾನ್ಡ್ ಇಂಡೆಕ್ಸ್ ಎಲ್ಲವೂ ಇದ್ದು ಕೇಂದ್ರ ಸರ್ಕಾರದಿಂದ 6 ಸಾವಿರ, ರಾಜ್ಯ ಸರ್ಕಾರದಿಂದ 4 ಸಾವಿರ ಪಡೆಯುತ್ತಿದ್ದಾರೆ. ಆದ್ರೆ ಭೂಮಿ ಮಾತ್ರ ಜನರ ಬಳಿ ಇಲ್ಲ. ಎಲ್ಲಾ ಅರಣ್ಯ ಇಲಾಖೆ ಕಬ್ಜಾ ಮಾಡಿದೆ. ನೊಂದ ಜನರ ಬಳಿ ದಾಖಲೆಗಳು ಇದ್ದರು, ಅಲ್ಲೇ ಬಾಳಿ ಬದುಕಿದ್ದರು, ಸರ್ಕಾರದ ಸವಲತ್ತು ಪಡೆಯುತ್ತಾ ಇದ್ದರು. ಜಮೀನು ಮಾತ್ರ ನಮ್ಮದು ಎನ್ನಲು ಆಗದ ಸ್ಥಿತಿ, ಅಧಿಕಾರಿಗಳ ವಿರುದ್ಧ, ಅರಣ್ಯ ಇಲಾಖೆಯ ವಿರುದ್ಧ ನಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನ ಅಧಿಕಾರಿಗಳು ಜನರ ಪರವಾಗಿ ನಿಂತಿಲ್ಲ. ಶ್ರೀಮಂತರು, ಪ್ರಭಾವಿಗಳಾದರೆ ಅವರ ತಂಟೆಗೂ ಹೋಗಲ್ಲ. ಯಾಕಂದ್ರೆ ಅವರ ಮುಂದೆ ಇವರ ಆಟ ನಡೆಯಲ್ಲ. ಅದೇ ಬಡ ಜನ ಆದರೆ ಹೆದರುತ್ತಾರೆ, ಭಯ ಪಡುತ್ತಾರೆ,ಹೇಳಿದನ್ನೆಲ್ಲ ಕೇಳ್ತಾರೆ. ಇದನ್ನೇ ದಾಳ ಮಾಡಿಕೊಂಡು 152 ಕುಟುಂಬಗಳಿಗೆ ಅನ್ಯಾಯ ಮಾಡಿದ್ದಾರೆ. ಜಮೀನು ಜನರ ಬಳಿ ಇಲ್ಲ, ದಾಖಲೆ ಮಾತ್ರ ಇದೆ. ಈಗಲೂ ಫಲಾನುಭವಿಗಳು ಜನರೇ ಆಗಿದ್ದಾರೆ. ಆದ್ರೆ ಅರಣ್ಯ ಇಲಾಖೆ ತನ್ನ ಮೊಂಡುತನ ಪ್ರದರ್ಶನ ಮಾಡಿ. ಇದೆಲ್ಲ ಅರಣ್ಯಕ್ಕೆ ಸೇರಿದ್ದು ಎಂದು ರೈಲ್ವೆ ಕಂಬಿ ಅಳವಡಿಸಿದೆ.

ರೈತ ಮುಖಂಡರಾದ ಕಂದೇಗಾಲ ಶ್ರೀನಿವಾಸ್ ಈದಿನ. ಕಾಮ್ ಜೊತೆ ಮಾತನಾಡಿ ” ಲಕ್ಷ್ಮಣಪುರ ಹಾಗೂ ಹಳಲ ಹಳ್ಳಿ ಕಂದಾಯ ಗ್ರಾಮಗಳು, ಕೃಷಿ ಮಾಡಿ ಜೀವನ ಮಾಡುತಿದ್ದ ಆದಿವಾಸಿ, ಬುಡಕಟ್ಟು ಜನರೇ ಇದ್ದ ಊರುಗಳು. ಬಹುತೇಕರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಜೊತೆಗೆ ಮಡಿವಾಳ ಶೆಟ್ಟಿ, ಕುರುಬ ಸಮುದಾಯಕ್ಕೆ ಸೇರಿದ್ದ ಒಂದೆರೆಡು ಕುಟುಂಬಗಳು ಸಹ ಇವೆ.ಇವರಿಗೆ 1964 ರಲ್ಲಿ ಸಾಗುವಳಿ ಸಿಕ್ಕಿದೆ. ಕೃಷಿ ಮಾಡುತ್ತಾ ಇದ್ರೆ ಮಾತ್ರ ಸಾಗುವಳಿ ಪತ್ರ ಸಿಗುವಂತದ್ದು. ಕಾಡು ಪ್ರದೇಶಕ್ಕೆ, ಹುಲ್ಲುಬನೆ, ಗೋಮಾಳ ಇನ್ಯಾವುದೇ ಆಗಿದ್ದರು ಸಿಗ್ತಾ ಇರಲಿಲ್ಲ. ಅರಣ್ಯ ಇಲಾಖೆಯ ಸಂಚಿನಿಂದ ಅಮಾಯಕರು, ತಿಳುವಳಿಕೆ ಇಲ್ಲದವರು, ಅಕ್ಷರಜ್ಞಾನ ಇಲ್ಲದ ಬಡಪಾಯಿಗಳನ್ನು ಹೆದರಿಸಿ, ಬೆದರಿಸಿ ಕಾಡಿಗೆ ಸೇರಿದ್ದು ಎಂದು ಎಲ್ಲರನ್ನು ಹೊರಗೆ ” ಹಾಕಿದ್ದು.

” ಇತ್ತೀಚಿಗೆ ಜಂಟಿ ಸರ್ವೇ ಕಾರ್ಯ ಮಾಡಲು ಬಂದಾಗ ಸಂಭಂದ ಪಟ್ಟ ಇಲಾಖೆಯ ಒಬ್ಬ ಅಧಿಕಾರಿ ಬಂದಿಲ್ಲ. ಜಂಟಿ ಸಮೀಕ್ಷೆ ಅಂದರೆ ಸ್ಥಳದಲ್ಲಿ ಎಲ್ಲರೂ ಹಾಜರು ಇರಬೇಕು ಆದ್ರೆ ಅಂತಹ ಕೆಲಸ ಆಗ್ತಾ ಇಲ್ಲ.ಸರಗೂರು ತಹಶೀಲ್ದಾರ್ ಮೋಹನ್ ಕುಮಾರಿ ಅವರ ಗಮನಕ್ಕೆ ತಂದಿದ್ದು ಶೀಘ್ರವೇ ಕಂದಾಯ ಇಲಾಖೆ, ಸರ್ವೇ ಇಲಾಖೆ, ಅರಣ್ಯ ಇಲಾಖೆ, ಗ್ರಾಮಸ್ಥರು ಸೇರಿದಂತೆ ಎಲ್ಲರ
ಸಮಕ್ಷಮದಲ್ಲಿ ಜಂಟಿ ಸರ್ವೇ ನಡೆಸಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು “
ಎಂಬ ಭರವಸೆ ನೀಡಿದ್ದಾರೆ ಎಂದರು.
ಆದಿವಾಸಿ ಮುಖಂಡ ನಾಗರಾಜು ಮಾತನಾಡಿ ” ನಾವೆಲ್ಲಾ ಮೂಲತಃ ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಲಕ್ಷ್ಮಣಪುರ ನಮ್ಮ ಊರು ಈಗಲೂ ಕಂದಾಯ ಗ್ರಾಮ. ಆದರೆ ಅರಣ್ಯ ಇಲಾಖೆ ಕಾಡಿಗೆ ಸೇರಿದ್ದು ಅಂತೇಳಿ ನಮ್ಮನ್ನೆಲ್ಲ ಹೊರ ಹಾಕಿದರು. ನಮ್ಮ ತಂದೆ, ತಾತ, ಮುತ್ತಾತರ ಕಾಲದಿಂದ ಕೃಷಿ ಮಾಡಿಕೊಂಡು ಜೀವನ ಮಾಡುತಿದ್ದ ನಮಗೆ ಅರಣ್ಯ ಇಲಾಖೆ ಅನ್ಯಾಯ ಮಾಡಿದೆ.ನಾವು ಸಹ ನ್ಯಾಯಕ್ಕಾಗಿ ಎಲ್ಲಾ ಇಲಾಖೆ ಅಧಿಕಾರಿಗಳ ಬಳಿ ಹೋಗಿ ಮನವಿ ಮಾಡಿದ್ದೀವಿ, ನಿನ್ನೆ ಕೂಡ ಸರಗೂರಿನಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಕೊಟ್ಟಿದ್ದೀವಿ. ನಮ್ಮದು ಕಾಡಿಗೆ ಸೇರಿದ ಭೂಮಿ ಅಲ್ಲ,ಅದು ಕಂದಾಯ” ಗ್ರಾಮ ಎಂದರು.
” ಹಲವಾರು ಕುಟುಂಬಗಳಿಗೆ ಪಹಣಿ, ಸಾಗುವಳಿ, ಪಟ್ಟ ಇದೆ. ಈಗಲೂ ಅವರ ಕುಟುಂಬದ ಹಿರಿಯರ ಹೆಸರಿನಲ್ಲಿ ಇದ್ದಾವೆ. ಈಗ ಪೌತಿ ಖಾತೆಯಾಗಲಿ, ಪೋಡಾಗಲಿ ಮಾಡ್ತಾ ಇಲ್ಲ. ಕಾರಣ ಅರಣ್ಯ ಇಲಾಖೆ ಕಾಡಿಗೆ ಸೇರಿದ್ದು ಎಂದು ಆಕ್ರಮಿಸಿಕೊಂಡಿದೆ.ಅರಣ್ಯ ಇಲಾಖೆ ಅನ್ಯಾಯ ಮಾಡಿದ್ದರು ಸಹ ಪರಿಹಾರ, ಭೂಮಿ, ಪುನರ್ವಸತಿ ಕಲ್ಪಿಸದೆ ಮೊಂಡಾಟ ಪ್ರದರ್ಶನ ಮಾಡುತ್ತಿದೆ. ನಮ್ಮ ಭೂಮಿಯನ್ನ ಕಸಿದುಕೊಂಡಿದೆ. ನಮಗೆ ನಮ್ಮ ಭೂಮಿ ಬೇಕು” ಎಂದು ಮನವಿ ಮಾಡಿದರು.

ಫಲಾನುಭವಿ ಕುಟುಂಬದವರಲ್ಲಿ ಒಬ್ಬರಾದ ಮಹದೇವಸ್ವಾಮಿ ಮಾತನಾಡಿ ” ನನ್ನ ತಾತ ರಾಮಯ್ಯ ಅವರ ಹೆಸರಿನಲ್ಲಿ ನಾಲ್ಕು ಎಕರೆ ಭೂಮಿಯಿದೆ ಲಕ್ಷ್ಮಣಪುರ ಸರ್ವೇ ನಂಬರ್ 32 ರಲ್ಲಿ. ಈ ಹಿಂದೆ ಪೋಡು ಮಾಡಿದ್ದಾರೆ. ಈಗಲೂ ಕೃಷಿ ಭೂಮಿ ಖುಷ್ಕಿ, ಸ್ವಂತ ಅಂತಲೇ ಇದ್ದು ಪ್ರಸ್ತುತ ಸಹ ಕಂದಾಯ ಕಟ್ಟುತ್ತಾ ಬಂದಿದ್ದೇವೆ. ಆದ್ರೆ ಅರಣ್ಯ ಇಲಾಖೆ ಕಾಡಿಗೆ ಸೇರಿಸಿಕೊಂಡು ನಮ್ಮ ಭೂಮಿಯನ್ನು ಕಾಡು ಎನ್ನುತ್ತಿದೆ. ನಮಗೆ ಇರುವ ನಾಲ್ಕು ಎಕರೆ ಭೂಮಿ ಬಿಟ್ಟರೆ ಬೇರೆ ಆಸ್ತಿ ಇಲ್ಲ. ಅದನ್ನು ಉಳುಮೆ ಮಾಡಲು ಬಿಡ್ತಾ ಇಲ್ಲ. ದಾಖಲೆ ನಮ್ಮಲ್ಲಿ ಇದೆ ಆದ್ರೆ ಅರಣ್ಯ ಇಲಾಖೆ ಮಾತ್ರ ಕಾಡಿಗೆ ಸೇರಿದ್ದು ಅಂತೇಳಿ ತೊಂದರೆ ಕೊಡುತ್ತಿದೆ. ಸರಗೂರು ತಾಲ್ಲೂಕು ಕಚೇರಿಯಿಂದ ನಕ್ಷೆ, ಕಟ್ಟಿರುವ ಕಂದಾಯ, ಪಹಣಿ, ಸಾಗುವಳಿ ಚೀಟಿ ಎಲ್ಲಾ ಇದ್ರೂ ನಮ್ಮ ಭೂಮಿ ನಮಗೆ ಸಿಗ್ತಾ ಇಲ್ಲ. ಅರಣ್ಯ ಇಲಾಖೆಯವರ ದರ್ಪದಿಂದ ಇವತ್ತು ನಮ್ಮ ಕುಟುಂಬ ಕಷ್ಟ ಪಡುತ್ತಾ ಇದ್ದೀವಿ ಎಂದು ಅಳಲು ತೋಡಿಕೊಂಡರು “.

ಈ ಸುದ್ದಿ ಓದಿದ್ದೀರಾ? ಮೈಸೂರು | ಜಿಲ್ಲಾಧ್ಯಂತ ಭತ್ತ,ರಾಗಿ ಖರೀದಿ ಕೇಂದ್ರ ಸ್ಥಾಪನೆ, ರೈತ ಸಂಘದ ಹೋರಾಟದ ಫಲ : ಹೊಸೂರು ಕುಮಾರ್
ಅರಣ್ಯ ಇಲಾಖೆ ಸಂಚಿನಿಂದ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿ ಒಂದೆರೆಡು ಕುಟುಂಬಗಳು ಸೇರಿದಂತೆ 152 ಕುಟುಂಬಗಳಿಗೆ ಅನ್ಯಾಯ ಆಗಿದ್ದು. ಇತ್ತ ಭೂಮಿಯೂ ಇಲ್ಲ, ಪರಿಹಾರವೂ ಇಲ್ಲ, ಪುನರ್ವಸತಿ ಕೂಡ ಮಾಡಿಕೊಟ್ಟಿಲ್ಲ ಈಗಲಾದರೂ ಕಂದಾಯ ಇಲಾಖೆ ಸಚಿವರು, ಮೈಸೂರು ಜಿಲ್ಲಾಧಿಕಾರಿಗಳು ಗಮನ ಹರಿಸಿ ನ್ಯಾಯ ಒದಗಿಸಿಕೊಡಬೇಕೆಂದು ಈದಿನ. ಕಾಮ್ ಮೂಲಕ ಮನವಿ ಮಾಡಿದರು.