ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಹುಂಡಿಮಾಳ ಗ್ರಾಮದ ದಲಿತ ಮಹಿಳೆ ಪೂವಮ್ಮ ಬಂಗಾರು ಅವರಿಗೆ ಹುಣಸೂರು ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್ ಜಿಲ್ಲಾಧಿಕಾರಿ ಆದೇಶದನ್ವಯ ದಿನಾಂಕ-05-06-2025, ಗುರುವಾರ ಹೆಚ್.ಡಿ ಕೋಟೆ ತಾಲೂಕು ಪಡುಕೋಟೆ ಕಾವಲ್ ಸರ್ವೆ ನಂಬರ್ 1/363 ರ 4 ಎಕರೆ 38 ಗುಂಟೆ ಭೂಮಿಯನ್ನು ಹಸ್ತಾಂತರಿಸಿದರು.
ಹೆಚ್.ಡಿ ಕೋಟೆ ತಾಲ್ಲೂಕು ಪಡುಕೋಟೆ ಕಾವಲ್ ಸರ್ವೆ ನಂಬರ್ 1/363 ರ ಪೂವಮ್ಮ ಬಂಗಾರು ರವರಿಗೆ ಸೇರಿದ 4 ಎಕರೆ 38 ಗುಂಟೆ ಜಮೀನಿನ ವಿಚಾರದಲ್ಲಿ ಹಲವಾರು ವರ್ಷಗಳಿಂದ ವಿವಾದ ಉಂಟಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವ್ಯಾಜ್ಯ
ದಾಖಲಾಗಿತ್ತು.
ಮೈಸೂರು ಜಿಲ್ಲಾಧಿಕಾರಿಗಳ ಆದೇಶದನ್ವಯ ಹೆಚ್ಚಿನ ಪೊಲೀಸ್ ಬಂದೋಬಸ್ತಿನೊಂದಿಗೆ ಹುಣಸೂರು ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್ ಜಮೀನಿಗೆ ಸ್ಥಳೀಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮಾಹಿತಿ ಪಡೆದು, ದಾಖಲೆಗಳನ್ನು ಪರಿಶೀಲಿಸಿ ಸದರಿ ಜಮೀನು ಪೂವಮ್ಮ ಬಂಗಾರು ಅವರಿಗೆ ಸೇರಿದೆ ಎಂಬುದನ್ನು ಖಾತರಿಪಡಿಸಿಕೊಂಡು ಭೂಮಿ ಸ್ವಾಧೀನಕ್ಕೆ ನೀಡಿದರು.
ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ ಹೆಚ್.ಡಿ.ಕೋಟೆ ತಾಲ್ಲೂಕು ಪಡುಕೋಟೆ ಕಾವಲ್ ಗ್ರಾಮದ ಸರ್ವೆ ನಂಬರ್ 1/363 ರಲ್ಲಿ 4 ಎಕರೆ 38 ಗುಂಟೆ ಜಮೀನು ಪರಿಶಿಷ್ಟ ಭೋವಿ ಜಾತಿಯ ಪೂವಮ್ಮ ಬಂಗಾರು ತಾಯಿಯ ಹೆಸರಿಗೆ ಸರ್ಕಾರದ ವತಿಯಿಂದ ಮಂಜೂರಾಗಿತ್ತು. ಅದರಂತೆ ಸದರಿ ಜಮೀನನ್ನು ಕುಟುಂಬದವರು ವ್ಯವಸಾಯ ಮಾಡಿಕೊಂಡು ಬರುತ್ತಿದ್ದರು.

ನಂತರದ ದಿನಗಳಲ್ಲಿ ಸದರಿ ಕುಟುಂಬ ಅಪಘಾತವೊಂದರಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ಪಡೆಯುವಂತಾಯಿತು. ಇದೇ ಸಂದರ್ಭವನ್ನೇ ದುರ್ಲಾಭ ಮಾಡಿಕೊಂಡ ಎಂ. ಕೆ. ಪೋತರಾಜ್ ಕಡೆಯವರಾದ ಎಂ.ಕೆ.ಶಿವಕುಮಾರ್, ಮ್ಯಾನೇಜರ್ ಬಸವರಾಜು, ಕಾಳಸ್ವಾಮಿ ಮುಂತಾದವರು ಜಮೀನನ್ನು ಆಕ್ರಮಿಸಿಕೊಂಡು ಕುಟುಂಬಕ್ಕೆ ಬೆದರಿಕೆ ಒಡ್ಡಿ, ಕೆಲವು ಬಾಡಿಗೆ ಗೂಂಡಾಗಳಿಂದ ಜೀವ ಬೆದರಿಕೆ ಹಾಕಿ ಜಮೀನನ್ನು ಕಬಳಿಸಿಕೊಳ್ಳಲು ಪ್ರಯತ್ನಪಡುತಿದ್ದರು.
ಹುಣಸೂರು ದಸಂಸ ಕಳೆದ 4 ವರ್ಷಗಳಿಂದ ಸತತವಾಗಿ ಹೋರಾಟ ಮಾಡಿ ಅನೇಕ ಎಸ್ಸಿ, ಎಸ್ಟಿ ಸಭೆಗಳಲ್ಲಿ ಪ್ರಸ್ತಾಪ ಮಾಡಿ ದೂರು ನೀಡದ್ದರು. ನಿರಂತರವಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಿದರ ಪರಿಣಾಮವಾಗಿ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿಯವರು ಈ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸಿ ಅಧಿಕಾರಿಗಳಿಂದ ಜಂಟಿ ಸ್ಥಳ ತನಿಖೆ ಮಾಡಿಸಿ ವರದಿ ತರಿಸಿಕೊಂಡು 4 ಎಕರೆ 38 ಗುಂಟೆ ಜಮೀನು ಪೂವಮ್ಮ ಬಂಗಾರು ರವರಿಗೆ ಸೇರಿದ್ದೆಂದು ಖಾತರಿಪಡಿಸಿಕೊಂಡು ಸ್ವಾಧೀನ ನೀಡುವಂತೆ ಆದೇಶ ಮಾಡಿದ್ದರು.
ಅದರ ಅನ್ವಯ ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್, ಆರಕ್ಷಕ ಉಪ ಅಧೀಕ್ಷಕ ಗೋಪಾಲಕೃಷ್ಣ, ಹೆಚ್.ಡಿ. ಕೋಟೆ ತಹಸೀಲ್ದಾರ್ ಶ್ರೀನಿವಾಸ್, ಎ.ಡಿ.ಎಲ್.ಆರ್ ಬಸವರಾಜು, ಸಮಾಜ ಕಲ್ಯಾಣಾಧಿಕಾರಿ ರಾಮುಸ್ವಾಮಿ, ಹೆಚ್.ಡಿ ಕೋಟೆ ಪೊಲೀಸ್ ಇನ್ಸ್‌ಪೆಕ್ಟರ್ ಗಂಗಾಧರ್, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್, ಮುನಿಯಪ್ಪ, ಟೌನ್ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್, ರಾಜಸ್ವ ನಿರೀಕ್ಷಕ ವಿಶ್ವನಾಥ್, ಗ್ರಾಮ ಆಡಳಿತಾಧಿಕಾರಿ ರಾಜೇಶ್ ಹೆಚ್ಚಿನ ಪೊಲೀಸ್ ಬಂದೋಬಸ್ತಿನಲ್ಲಿ ಜಮೀನನ್ನು ಸ್ವಾದೀನಕ್ಕೆ ನೀಡಿದರು.
ಈ ವಿಶೇಷ ವರದಿ ಓದಿದ್ದೀರಾ?ಮೈಸೂರು | ಶವಾಗಾರದಲ್ಲಿ ಕೆಲಸ ಮಾಡುವ ಏಕಮೇವ ಮಹಿಳೆ ರಾಜಮ್ಮ
ಜಿಲ್ಲಾ ಮಟ್ಟದ ಎಸ್ಸಿ, ಎಸ್ಟಿ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯ ರವಿಕುಮಾರ್, ಅಹಿಂದ ಜವರಪ್ಪ,
ಹೆಚ್. ಬಿ. ದಿವಾಕರ್, ದೇವೇಂದ್ರ ಕುಳುವಾಡಿ, ಬಲ್ಲೇನಹಳ್ಳಿ ಕೆಂಪರಾಜು, ಚಿಲ್ಕುಂದ ವೇಣುಗೋಪಾಲ್, ಕಿರಿಜಾಜಿ ಗಜೇಂದ್ರ, ಮಲ್ಲಿಕ್ ಪಾಷ ಯಶೋಧರಪುರ, ಹುಂಡಿಮಾಳ ನಾಗರಾಜು, ಚನ್ನ ಕೋಟೆ, ಪಡುಕೋಟೆ ಗ್ರಾ.ಪಂ. ಸದಸ್ಯ ಈಶ್ವರ್, ಮಹೇಶ, ಕೃಷ್ಣ, ಕುಮಾರ, ಪ್ರವೀಣ, ಚೆಲುವ, ಮಾದೇವ, ಕಿರಣ್ ಸೇರಿದಂತೆ ಇನ್ನಿತರರು ಸ್ಥಳದಲ್ಲಿ ಇದ್ದರು.