ಜನಜೀವನದಲ್ಲಿ ಸಾಮರಸ್ಯ, ಪ್ರೀತಿ, ಅಭಿವೃದ್ಧಿ ಪರವಾದ ಆಡಳಿತ, ತ್ಯಾಗ ಮತ್ತು ಗುಣಾತ್ಮಕವಾದ ನಡವಳಿಕೆಯನ್ನು ತಮ್ಮ ಕಾವ್ಯದ ಮೂಲಕ ಇಡೀ ಪ್ರಪಂಚಕ್ಕೆ ಸಾರಿದ ಮಹರ್ಷಿ ವಾಲ್ಮೀಕಿ ಅವರು ಎಲ್ಲರಿಗೂ ಆದರಣೀಯ ಪುರುಷ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ತಿಳಿಸಿದರು.
ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ನಾಯಕ ಜನಾಂಗದ ಸಂಘಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಕಲಾಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
“ಮಹರ್ಷಿ ರಾಮಾಯಣವು ಪ್ರಪಂಚದಲ್ಲೇ ಒಂದು ಮಹಾಕಾವ್ಯ. ಈ ಕಾವ್ಯಕ್ಕೆ ಪರ್ಯಾಯವಾಗಿ ಮತ್ತೊಂದು ಕಾವ್ಯ ಬರಲಿಲ್ಲ. ಬೆಟ್ಟ, ಗುಡ್ಡ, ಕಾಡು, ಮೇಡುಗಳಲ್ಲಿ ಅಲೆದಾಡಿ ಅಂತಹ ಕಾವ್ಯ ರಚಿಸಿದ್ದು ನಾವೆಲ್ಲರೂ ಹೆಮ್ಮೆ ಪಡುವ ಸಂಗತಿ. ಮಹರ್ಷಿ ಅವರ ಸಂಸ್ಕಾರ, ಸಂಸ್ಕೃತಿ, ಮಾನವೀಯ ಮೌಲ್ಯಗಳು, ಮುಂದಾಲೋಚನೆಯು ಶೋಷಿತ ವರ್ಗಗಳು ಹಾಗೂ ತುಳಿತಕ್ಕೊಳಗಾದ ಸಮುದಾಯಗಳಿಗೆ ಮಾರ್ಗದರ್ಶನವಾಗಲಿ” ಎಂದು ಆಶಿಸಿದರು.
“ರಾಮನ ವ್ಯಕ್ತಿತ್ವವನ್ನು ಚಿತ್ರಿಸಿದವರು ಮಹರ್ಷಿ ವಾಲ್ಮೀಕಿ. ರಾಮಾಯಣದಲ್ಲಿನ ಸೀತೆ, ಲಕ್ಷ್ಮಣ, ರಾವಣ, ಆಂಜನೇಯ ಸೇರಿದಂತೆ ವಿಭಿನ್ನವಾದ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಈ ಎಲ್ಲ ಪಾತ್ರಗಳು ಮನುಷ್ಯನ ಜೀವನಕ್ಕೆ ಹತ್ತಿರ ಮತ್ತು ಪೂರಕವಾಗುವಂತಿವೆ. ಆಡಳಿತ, ಪ್ರೀತಿ, ತ್ಯಾಗ, ನಾಯಕತ್ವ, ದುಷ್ಟ ಸಂಹಾರ, ಶಿಷ್ಟ ರಕ್ಷಣೆ, ಪಿತೃ ಪರಿಪಾಲನೆ, ಕೊಟ್ಟ ಮಾತಿಗೆ ನಡೆಯುವ ಎಲ್ಲ ಗುಣಗಳು ಮನುಷ್ಯನ ಜೀವನಕ್ಕೆ ಅತ್ಯಂತ ಆದರ್ಶವಾಗಿದೆ” ಎಂದರು.
“ಮಹರ್ಷಿ ವಾಲ್ಮೀಕಿ ಅವರ ಇತಿಹಾಸ ತಿಳಿಯದೆ ಇನ್ನೊಂದು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ರಾಮಾಯಣ ಎಂಬ ಶ್ರೇಷ್ಠ ಕಾವ್ಯದಲ್ಲಿ ವಿಭಿನ್ನವಾದ ಪಾತ್ರಗಳ ಮೂಲಕ ಮನುಷ್ಯನ ಬದುಕನ್ನು ವಿಶ್ಲೇಷಣೆ ಮಾಡಿದ್ದಾರೆ. ಜೀವನಕ್ಕೆ ಹಾಗೂ ನೈಜತೆಗೆ ಹತ್ತಿರವಾದ ವಿಷಯಗಳನ್ನು ತಿಳಿಸಿದ್ದಾರೆ. ಈ ಆಧಾರದಲ್ಲಿ ಬದುಕು, ಪ್ರೀತಿ, ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಟ್ಟಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ” ಎಂದು ಕರೆ ನೀಡಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ಮಹರ್ಷಿ ವಾಲ್ಮೀಕಿ ಅವರ ಜಯಂತಿ ಆಚರಣೆ ಘೋಷಣೆ ಮಾಡಿತು. ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಅನುಕೂಲವಾಗುವ ಕಾನೂನುಗಳನ್ನು ಜಾರಿ ಮಾಡಲಾಯಿತು. ಈ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದೇವೆ. 1994ರಲ್ಲಿ ನಾಯಕ ಸಮುದಾಯವನ್ನು ಎಸ್‌ಟಿಗೆ ಸೇರಿಸುವಂತೆ ನಮ್ಮ ಸಚಿವ ಸಂಪುಟವು ಬೆಂಬಲ ನೀಡಿತ್ತು” ಎಂದು ಸ್ಮರಿಸಿದರು.
“ವಾಲ್ಮೀಕಿ, ನಾಯಕ, ಪರಿವಾರ ಎಲ್ಲವೂ ಪರ್ಯಾಯ ಪದಗಳು. ಈ ಗೊಂದಲ ಕುರಿತು ಹೋರಾಟಗಾರರ ಮನವಿ ಮೇರೆಗೆ ನಮ್ಮ ಸಚಿವ ಸಂಪುಟದಲ್ಲಿ ಚರ್ಚಿಸಿ ಎಲ್ಲ ನ್ಯೂನತೆಗಳನ್ನು ಸರಿಪಡಿಸಲಾಗುವುದು. ವಾಲ್ಮೀಕಿ ಮಹರ್ಷಿ ಪ್ರತಿಮೆಯನ್ನು ಉದ್ಯಾನದಲ್ಲಿ ಕಾನೂನಾತ್ಮವಾಗಿ ನಿರ್ಮಿಸಿ ಅವರಿಗೆ ಗೌರವ ಸಲ್ಲಿಸುವ ಪ್ರಯತ್ನ ಮಾಡಲಾಗುವುದು” ಎಂದು ಭರವಸೆ ನೀಡಿದರು.
“ನಮ್ಮ ಸರ್ಕಾರವು ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಭಾಗದ ಎಲ್ಲ ವರ್ಗದವರಿಗೆ ಅನುಕೂಲವಾಗಿವೆ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯ ಆಶಯಗಳನ್ನು ಯೋಜನಾತ್ಮಕವಾಗಿ ಸಮುದಾಯದ ಜನರಿಗೆ ಉಪಯೋಗಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆಕರ್ಷಕ ಸ್ತಬ್ಧಚಿತ್ರಗಳು ಹಾಗೂ ಕಲಾತಂಡಗಳ ಮೆರವಣಿಗೆಯು ಕಲಾಮಂದಿರದವರೆಗೆ ಸಾಗಿತು.
ಈ ಸುದ್ದಿ ಓದಿದ್ದೀರಾ? ಗದಗ | ಮಹರ್ಷಿ ವಾಲ್ಮೀಕಿ ಜಯಂತಿ
ಕಾರ್ಯಕ್ರಮದಲ್ಲಿ ಶಾಸಕ ಜಿ ಟಿ ದೇವೇಗೌಡ, ಹರೀಶ್ ಗೌಡ, ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಡಾ ಡಿ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ಮೇಯರ್ ಶಿವಕುಮಾರ್, ಉಪಮೇಯರ್ ಡಾ ಜಿ ರೂಪ, ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ, ಪ್ರಾಧ್ಯಾಪಕ ಡಾ. ಪ್ರಶಾಂತ್ ನಾಯಕ್, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ರಂಗೇಗೌಡ, ಯೋಜನಾ ಸಮನ್ವಯಾಧಿಕಾರಿ ಎನ್ ಮುನಿರಾಜು ಸೇರಿದಂತೆ ಇತರರು ಇದ್ದರು.