ಮೈಸೂರು ಜಿಲ್ಲೆಯಲ್ಲಿ ಅಪ್ರಾಪ್ತೆಯನ್ನು ಮದುವೆಯಾಗಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ನಂಜನಗೂಡು ಪಟ್ಟಣದ ಹುಲ್ಲಹಳ್ಳಿ ರಸ್ತೆಯಲ್ಲಿರುವ ಕಮಲಮ್ಮ ಗುರುಮಲ್ಲಪ್ಪ ಛತ್ರದಲ್ಲಿ ಹಾಡ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಕ್ಲಾಸ್ 1 ಸಿವಿಲ್ ಗುತ್ತಿಗೆದಾರ ಹರೀಶ್ ಕುಮಾರ್ 2023ರ ಫೆಬ್ರವರಿ 15ರಂದು 17 ವರ್ಷದ ಬಾಲಕಿಯನ್ನು ಮದುವೆಯಾಗಿದ್ದು, ಇಬ್ಬರೂ ಒಂದೇ ಜಾತಿ ಮತ್ತು ಗ್ರಾಮದವರು.
ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮಹೇಶ್ ನೇತೃತ್ವದಲ್ಲಿ ಹರಿಯೂರು ಗ್ರಾಮಸ್ಥರು ನಂಜನಗೂಡಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ (ಸಿಡಿಪಿಒ) ದೂರು ನೀಡಿದ್ದರು. ಆ ಬಳಿಕ ಘಟನೆ ಬೆಳಕಿಗೆ ಬಂದಿದೆ.
“ಹರೀಶ್ ಕುಮಾರ್ ಫೆಬ್ರವರಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದು, ಮದುವೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆಯಾಗದಂತೆ ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕವನ್ನು ಬದಲಾಯಿಸಿದ್ದಾರೆ. ಆದರೆ, ಶಾಲಾ ದಾಖಲೆಗಳ ಪ್ರಕಾರ, ಬಾಲಕಿಯ ಜನ್ಮ ದಿನಾಂಕ 19 ನವೆಂಬರ್ 2005 ಆಗಿದ್ದು, ಅವಳು ಹುರಾ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ. ಬಾಲಕಿ ಗರ್ಭಿಣಿಯಾಗಿದ್ದಾಳೆ. ರಾಜಕೀಯ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿರುವ ಹರೀಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಮಹೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 5 ಕೋಟಿ ವಂಚನೆ ಪ್ರಕರಣ: 14 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಚೈತ್ರಾ ಕುಂದಾಪುರ
ದೂರಿನ ಆಧಾರದ ಮೇಲೆ ಸಿಡಿಪಿಒ ಅಧಿಕಾರಿಗಳು ಶಾಲಾ ಪ್ರಮಾಣಪತ್ರಗಳು ಮತ್ತು ಗರ್ಭಧಾರಣೆಯನ್ನು ದೃಢೀಕರಿಸಲು ಆಸ್ಪತ್ರೆಯ ವರದಿಗಳನ್ನು ಪರಿಶೀಲಿಸಿದರು. ನಂತರ ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಸುಶೀಲಾ ಎಸ್ ಬಿ ಅವರು ಹರೀಶ್ ಕುಮಾರ್ ವಿರುದ್ಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 376 (2) ಎನ್ (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗುವುದು), ಪೋಕ್ಸೊ ಕಾಯ್ದೆ, 2012 ಮತ್ತು ಸೆಕ್ಷನ್ 9, 10 ಮತ್ತು 11 (ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.