ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಗ್ರಾಮ ವಾಸ್ತವ್ಯ ನಡೆಸಿದ್ದು, ಕ್ಷೇತ್ರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಲೂಕನ ಕಾಡಂಚಿನ ಗ್ರಾಮದಲ್ಲಿ ಇದೆ ಮೊದಲ ಬಾರಿಗೆ ಜನಪ್ರತಿನಿಧಿಯೊಬ್ಬರು ಗ್ರಾಮ ವಾಸ್ತವ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ತಾಲೂಕಿನ ದೇಪೇಗೌಡನಪುರ ಗ್ರಾಮದಲ್ಲಿ ಕಾಡಾನೆ, ಹುಲಿ, ಚಿರತೆಗಳ ಹಾವಳಿ ಹೆಚ್ಚಾಗಿದೆ. ರೈತರು ಬೆಳೆದ ಬೆಳಗಳನ್ನು ಕಾಡು ಪ್ರಾಣಿಗಳು ನಾಶ ಮಾಡುತ್ತವೆ ಎಂದು ಗ್ರಾಮದ ರೈತರೊಬ್ಬರು ಶಾಕರಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದರು. ಅವರ ಮನವಿಗೆ ಸ್ಪಂದಿಸಿದ ಶಾಸಕ ದರ್ಶನ್ ಧ್ರುವನಾರಾಯಣ್ ಅರಣ್ಯ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ತೆರಳಿ ಗ್ರಾಮ ವಾಸ್ತವ್ಯ ನಡೆಸಿದ್ದಾರೆ.
ಗ್ರಾಮ ಮತ್ತು ಗ್ರಾಮದ ಸುತ್ತಲಿನ ಹಲವು ಪ್ರದೇಶಗಳನ್ನು ಪರಿಶೀಲಿಸಿದ ಶಾಸಕ, ಅರಣ್ಯದ ಅಂಚಿನಲ್ಲಿ ಶೀಘ್ರದಲ್ಲೇ 19 ಕಿಲೋ ಮೀಟರ್ ರೈಲ್ವೆ ಕಂಬಿ ಅಳವಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಹುಲಿ ಮತ್ತು ಚಿರತೆ ಸೆರೆ ಹಿಡಿಯಲು ಬೋನು ಳವಡಿಸಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
“ದೇಪೇಗೌಡನಪುರ ಸೇರಿದಂತೆ ಹಲವು ಗ್ರಾಮಗಳ ರೈತರು ಆಗಾಗ್ಗೆ ತಮ್ಮ ಸಮಸ್ಯೆಗಳ ಬಗ್ಗೆ ಕರೆ ಮಾಡಿ ತಿಳಿಸುತ್ತಾರೆ. ರೈತರ ಸಮಸ್ಯೆಗಳ ಬಗ್ಗೆ ನಾವು ಅರಿತುಕೊಳ್ಳಬೇಕು. ನನ್ನ ಜನತೆಯ ರಕ್ಷಣೆಗೆ ನಾನು ನಿಲ್ಲಬೇಕು. ಹೀಗಾಗಿ, ಗ್ರಾಮಕ್ಕೆ ನಾನೇ ಖುದ್ದು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸುವ ಪ್ರಯತ್ನ ಮಾಡಿದ್ದೇನೆ. ಶೀಘ್ರದಲ್ಲೇ ಎಲ್ಲವನ್ನು ಪರಿಹರಿಸಲಾಗುತ್ತದೆ” ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದ್ದಾರೆ.