ಇಂದಿನ ದಿನಮಾನಗಳಲ್ಲಿ ಸರ್ಕಾರಿ ಶಾಲೆಗಳು (ಕನ್ನಡ ಮಾಧ್ಯಮ) ಒಂದೊಂದಾಗಿ ಮುಚ್ಚುತ್ತಿರುವ ಸಮಯದಲ್ಲಿ, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದೇ ಹರ ಸಾಹಸದ ಕೆಲಸವಾಗಿದೆ. ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ, ಆಂಗ್ಲ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಪೋಷಕರಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಇರದೇ ವರ್ಷದಿಂದ ವರ್ಷಕ್ಕೆ ಕ್ರಮೇಣ ಇಳಿಮುಖ ಕಂಡು
ಶಾಲೆಗಳು ಮುಚ್ಚುತ್ತಿವೆ.
ಇಂತಹ ಕಾಲಘಟ್ಟದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ, ಒಂದು ರೀತಿಯ ಶಿಕ್ಷಣ ಮಾಫಿಯಾ ಮಾದರಿಯಲ್ಲಿ ತೆರೆದುಕೊಂಡಿದೆ. ಇತ್ತೀಚಿಗಿನ ದಿನಗಳಲ್ಲಿ ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ. ಖಾಸಗಿ ಶಾಲೆ, ಖಾಸಗಿ ಆಸ್ಪತ್ರೆ ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ಸರ್ಕಾರಿ ಶಾಲೆಗಳು ದಿನೆ ದಿನೇ ಸದ್ದು ಗದ್ದಲವಿರದೆ ತೆರೆಮರೆಗೆ ಸರಿಯುತ್ತಿವೆ. ಖಾಸಗಿ ಶಾಲೆಯ ವ್ಯಾಪಾರೀಕರಣ ಸಮವಸ್ತ್ರದಿಂದ ಹಿಡಿದು, ಶಾಲಾ ವಾಹನ, ಪಠ್ಯ ಪುಸ್ತಕ ಕಡೆಗೆ ಪೆನ್ನು, ಪೆನ್ಸಿಲ್, ನೋಟ್ ಪುಸ್ತಕ ಸಹ ಅವರೇಳಿದಲ್ಲಿಯೇ ತೆಗೆದುಕೊಳ್ಳಬೇಕು. ಅದರಲ್ಲೂ, ತಾವೇ ಅಳತೆ ಪಡೆದು ಸಮವಸ್ತ್ರ ಹಂಚುವ ಹಂತಕ್ಕೆ ಬಂದು ನಿಂತಿದ್ದಾರೆ. ಎಲ್ಲದರಲ್ಲೂ ದುಡ್ಡು ಮಾಡುವುದಾಗಿದೆ. ಪೋಷಕರನ್ನು
ಬಗೆ ಬಗೆಯಲ್ಲಿ ಸುಲಿಗೆ ಮಾಡುವ ದಾರಿದ್ರ್ಯ ವ್ಯವಸ್ಥೆ.
ಸರ್ಕಾರಗಳು ಅಷ್ಟೇ, ಸರ್ಕಾರಿ ಶಾಲೆಗಳು ಮುಚ್ಚುತಿದ್ದರು ಗಮನ ಹರಿಸಿಲ್ಲ. ಶಿಕ್ಷಣ ಸಚಿವರ ಹಾರಿಕೆಯ ಉತ್ತರ,
ಇಲಾಖೆಗಳಿಗೆ ಗಮನ ಇಲ್ಲದಿರುವುದು, ಗುಣಮಟ್ಟವಿಲ್ಲ. ಶುಚಿತ್ವ, ಉತ್ತಮ ಕಟ್ಟಡ, ಅಗತ್ಯ ಸವಲತ್ತು ಇಲ್ಲವೇ ಇಲ್ಲ. ಶಿಕ್ಷಕರಂತೂ ಕೇಳುವ ಹಾಗೆ ಇಲ್ಲ. ಮಕ್ಕಳಿದ್ದರೆ ಶಿಕ್ಷಕರಿಲ್ಲ. ಶಿಕ್ಷಕರಿದ್ದರೆ ಮಕ್ಕಳಿಲ್ಲ. ಇವೆರೆಡು ಹೊಂದದೆ ಕಡೆಗೆ ಶಾಲೆಯೇ ಇಲ್ಲ. ಅದೇ, ಖಾಸಗಿ ಶಾಲೆ ತೆರೆಯಲು ಪ್ರತಿ ವರ್ಷ ಅನುಮತಿ ನೀಡುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಇಂಟರ್ ನ್ಯಾಷನಲ್ ಸ್ಕೂಲ್ ತೆರೆದು ಸಿಬಿಎಸ್ಇ ಮಾದರಿಯ ಶಿಕ್ಷಣ ಸಿಗುವಂತಾಗಿದೆ. ಕನ್ನಡ ಶಾಲೆಗಳ ಕಡೆಗೆ ಗಮನ ಕೊಡಲು ಆಗದ ರೀತಿಯಲ್ಲಿ ಖಾಸಗಿ ಶಾಲೆಗಳು ವ್ಯಾಪಿಸುತಿದ್ದು ಸರ್ಕಾರಿ ಶಾಲೆಗಳ ಅವನತಿಗೆ ಕಾರಣವಾಗುತ್ತಿವೆ. ಹಳ್ಳಿ ಹಳ್ಳಿಗಳಿಗೂ ವ್ಯಾಪಿಸಿ ಪೋಷಕರು ಆಂಗ್ಲ ಶಾಲೆಗಳ ಕಡೆಗೆ ವಾಲಿದಾಗ ಇನ್ನ ಕನ್ನಡ ಶಾಲೆಗಳ ಪರಿಸ್ಥಿತಿ ಏನು? ಇದಕ್ಕೆಲ್ಲ ನೇರ ಕಾರಣ ಸರ್ಕಾರವೇ.
ಕ್ರಮೇಣ ಸರ್ಕಾರಿ ಶಾಲೆಗಳು ಮುಚ್ಚಲು ಉತ್ತಮವಾದ ಭೋಧಕ ವರ್ಗ, ಮಕ್ಕಳಿಗೆ ಅಗತ್ಯವಿರುವ ಸೂಕ್ತ ವ್ಯವಸ್ಥೆಗಳ ಕೊರತೆ. ಶೌಚಾಲಯ ಸಹ ಸಮರ್ಪಕವಾಗಿ ಇಲ್ಲದಿರುವ ಪರಿಸ್ಥಿತಿ, ಆಟದ ಮೈದಾನ, ಕಂಪ್ಯೂಟರ್ ಶಿಕ್ಷಣ, ಕ್ರೀಡೆ ಹೀಗೆ ಅಗತ್ಯನುಸಾರ ಏನೆಲ್ಲ ಸಿಗಬೇಕಿತ್ತು ಅದೆಲ್ಲವೂ ದೊರೆಯದಿರುವುದು ಸಹ ಖಾಸಗಿ ಶಾಲೆಯ ಕಡೆಗೆ ಮುಖ ಮಾಡುವಂತೆ ಮಾಡಿದೆ.

ಸರ್ಕಾರಿ ಶಾಲೆಯಲ್ಲಿ ಮದ್ಯಾನ್ಹ ಬಿಸಿಯೂಟ. ಮೊಟ್ಟೆ, ಬಾಳೆಹಣ್ಣು. ಪಠ್ಯ ಪುಸ್ತಕ ಹೀಗೆ ಎಲ್ಲಾ ರೀತಿಯ ಉಚಿತವಾದ ಸವಲತ್ತು ಇದ್ದರು ಸರ್ಕಾರಿ ಶಾಲೆ ಅಂದರೆ ಮೂಗು ಮುರಿವವರೇ ಹೆಚ್ಚು. ಅದನ್ನು ಒಪ್ಪ ತಕ್ಕದ್ದೇ! ಸರ್ಕಾರಗಳ ಬೇಜವಾಬ್ದಾರಿ ತನ, ಇಲಾಖೆಗಳ ಅಸಡ್ಡೆ ಕೂಡ ಇದಕ್ಕೆಲ್ಲ ಕಾರಣ. ಸರ್ಕಾರಿ ಶಾಲೆಗಳನ್ನು ಮಾದರಿಯಾಗಿ ರೂಪಿಸಿ ಈಗಂತೂ ಆಂಗ್ಲ ಮಾಧ್ಯಮ, ಎಲ್ ಕೆ ಜಿ ಹಾಗೂ ಯುಕೆಜಿ ಪ್ರಥಮಿಕವಾಗಿಯೇ ಇರುವುದರಿಂದ ಶಿಕ್ಷಕರ ನೇಮಕಾತಿಯ ಜೊತೆಗೆ, ಉತ್ತಮವಾದ ಪರಿಸರದೊಡನೆ ಕಲಿಕೆಗೆ ಅವಕಾಶ ಕಲ್ಪಿಸಬಹುದಿತ್ತು. ಆದರೆ, ಕನ್ನಡ ಶಾಲೆಗಳ ಉಳಿವಿನ ಕಡೆಗೆ, ಬೆಳೆಸುವ ಕಡೆಗೆ ಸಮುದಾಯದ ಒಳಗೊಳ್ಳುವಿಕೆ ಭಾಗವಾಗಿ ಯಾವುದೇ ಪ್ರಯತ್ನ ನಡೆಯಲಿಲ್ಲ. ಶಾಲೆಗಳು ಮುಚ್ಚುತ್ತಿವೆ. ಆಸಕ್ತಿ ಯಾರಿಂದಲೂ ಕಾಣಲು ಸಾಧ್ಯವಾಗಲಿಲ್ಲ.
ಯಾವುದೇ ಖಾಸಗಿ ಶಾಲೆ ಪ್ರವೇಶ ಮಾಡಿದರೆ ಕಣ್ಣಿಗೆ ಮೊದಲು ರಾಚುವುದು ಶಾಲಾ ವೃಂದ. ಶಿಕ್ಷಕರ ದಂಡೇ ಇರುವುದು. ಉತ್ತಮವಾದ, ಸುಸರ್ಜಿತ ಶಾಲಾ ಕಟ್ಟಡ. ನೋಡಿದ ಕೂಡಲೇ ಪೋಷಕರ ಗಮನ ಸೆಳೆಯುವಂತೆ ಇರುವುದು. ಅದೇ ಸರ್ಕಾರಿ ಶಾಲೆಯಲ್ಲಿ ಮುರಿದ ಬೇಂಚು, ಸೋರುವ ಮಾಳಿಗೆ, ಇಡೀ ಶಾಲೆಗೆ ಇಬ್ಬರು ಇಲ್ಲಾಂದ್ರೆ ಮೂವರು ಶಿಕ್ಷಕರು. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳ ಉಳಿವಿನ ಪ್ರಶ್ನೆ ಸವಾಲಾಗಿ ಪರಿಣಮಿಸಿದೆ.
ಇದಕ್ಕೆ ಅನ್ವರ್ಥ ಎನ್ನುವಂತೆ ಯಾವುದೇ ಖಾಸಗಿ ಶಾಲೆಗೂ ಕಡಿಮೆಯಿರದ ಶಾಲೆಯೊಂದಿದೆ. ಅದುವೇ, ” ಬ್ರಿಟಿಷರು 1886 ರಲ್ಲಿ ನಿರ್ಮಿಸಿದ ಮೈಸೂರು ಜಿಲ್ಲೆಯ ಮೊದಲ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ. ಈ ಶಾಲೆಯಲ್ಲಿ ಸರಿ ಸುಮಾರು 500 ಕ್ಕೂ ಹೆಚ್ಚು ದಲಿತ ಮಕ್ಕಳು ವ್ಯಾಸಂಗ ಮಾಡುತ್ತಿರುವುದು. ಇದರ ಜೊತೆ ಜೊತೆಗೆ ಎಲ್ಲಾ ಸಮುದಾಯಗಳ 150 ವಿದ್ಯಾರ್ಥಿಗಳು ಕಲಿಯುತ್ತಿರುವುದು ವಿಶೇಷ.”

‘ ಹುಣಸೂರು ರಾಜಕೀಯವಾಗಿ ಹಿಂದುಳಿದ ವರ್ಗಗಳ ನಾಯಕ ಡಿ. ದೇವರಾಜ ಅರಸು ಅವರ ಕರ್ಮಭೂಮಿ. ಹಾಗೆಯೇ, ಇನ್ನೇನು ನೂರನೇ ವರ್ಷದ ಜನ್ಮ ದಿನದ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಇಂತಹ ಸಂದರ್ಭದಲ್ಲಿ 140 ವರ್ಷ ತುಂಬಿರುವ ಶಾಲೆ ಇನ್ನೇನು ಮುಗಿದೇ ಹೋಯ್ತು, ಇತಿಹಾಸದ ಪುಟಕ್ಕೆ ಸೇರಿತು ಅನ್ನುವ ಹೊತ್ತಿನಲ್ಲಿ ಮತ್ತೆ ಇಚ್ಛಾಶಕ್ತಿಗಳ ಪ್ರಯತ್ನದಿಂದ ಪುಟ್ಟಿದೆದ್ದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸ್ಪರ್ಧೆಯೊಡ್ದುತ್ತಿದೆ. ಖಾಸಗಿ ಶಾಲೆಗೆ ಯಾವುದರಲ್ಲೂ ಕಡಿಮೆಯಿರದೆ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿದೆ.’

“ಹುಣಸೂರಿಗೆ ಬ್ರಿಟಿಷರ ನಂಟಿದೆ. ವ್ಯಾಪಾರ, ವ್ಯವಹಾರ ಸಂಭಂದ ಬ್ರಿಟಿಷರು ಇಲ್ಲೇ ನೆಲೆಸಿ ಇಲ್ಲಿಯೇ ಮಣ್ಣಾಗಿದ್ದಾರೆ. ವಿಶೇಷವಾಗಿ 1886 ರಲ್ಲಿ ಬ್ರಿಟಿಷ್ ಸರ್ಕಾರದ ಆಳ್ವಿಕೆಯಲ್ಲಿ ‘ ಕನ್ನಡ ಮಾಧ್ಯಮಿಕ ಶಾಲೆ ‘ ಸ್ಥಾಪನೆಯಾಯಿತು. ಅಂದು ಕಚೇರಿ ಶಾಲೆ ಎಂತಲೂ ಕರೆಯುವ ರೂಢಿ ಇತ್ತಂತೆ. ಮೈಸೂರು ಪ್ರಾಂತ್ಯದ ಹುಣಸೂರು ತಾಲ್ಲೂಕು ಕೇಂದ್ರದ ಮೊಟ್ಟ ಮೊದಲ ಬಾಲಕರ ಶಾಲೆ ಇದೇ ಆಗಿದೆ. ಇಲ್ಲಿಗೆ ಶತಮಾನೋತ್ಸವ ಕಂಡು 140 ವರ್ಷ ಸಂದಿದೆ.”
ಹಳೆಯ ಕಟ್ಟಡ, ವಿದ್ಯಾರ್ಥಿಗಳ ದಾಖಲಾತಿ ಇಲ್ಲ ಇನ್ನೇನು ಇದನ್ನು ಮುಚ್ಚಿ ಇದೇ ಜಾಗಕ್ಕೆ ಸರ್ಕಾರಿ ಕಚೇರಿ, ತಾಲ್ಲೂಕು ಕಚೇರಿ ಸ್ಥಳಾಂತರ ಮಾಡಬೇಕು. ಇಲ್ಲವೇ, ಹೆಣ್ಣು ಮಕ್ಕಳ ಶಾಲೆಯೊಂದಿಗೆ ವಿಲೀನಗೊಳಿಸಬೇಕು. ಎನ್ನುವ ಇರಾದೆಯಿಂದ ಶಿಫಾರಸು ಕಮಿಟಿ ನಿರ್ಧರಿಸಿ ಭೇಟಿ ನೀಡಿ ಇನ್ನೇನು ಮುಗಿದೇ ಹೋಯ್ತು ಕನ್ನಡ ಶಾಲೆಯೊಂದರ ಗತ ವೈಭವ ಅನ್ನುವ ಸಮಯದಲ್ಲಿ ಪ್ರಭಾರ
ಮುಖ್ಯ ಶಿಕ್ಷಕರಾದ ಡಾ. ಮಾಧುಪ್ರಸಾದ್ ಶಾಲೆ ಉಳಿಸಿಕೊಳ್ಳಲೇಬೇಕು ಅನ್ನುವ ಅಚಲವಾದ ನಿರ್ಧಾರದ ಜೊತೆಗೆ ಮೊದಲು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೆಗೌಡ ಬಣ) ಯವರನ್ನು ಸಂಪರ್ಕಿಸಿದಾಗಿನಿಂದ ಶುರು ಆಗಿದ್ದು ಹೊಸ ಅಧ್ಯಾಯ.

2021 – 22 ರ ಸಾಲಿನಲ್ಲಿ ಇದ್ದಿದ್ದು ಕೇವಲ 34 ಮಕ್ಕಳು. ಅದೇ ವರ್ಷ ಆಂಗ್ಲ ಮಾಧ್ಯಮ ಶಾಲೆ ಅನುಮತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಾರೆ. ಎರಡು ವರ್ಷಗಳ ಬಳಿಕ ಅನುಮತಿ ಪಡೆದುಕೊಳ್ಳುತ್ತಾರೆ. ಅವತ್ತಿಗೆ, 72 ಮಕ್ಕಳ ದಾಖಲಾತಿ. ಅದೇ ವರ್ಷ ಬಹುಶಃ ಸರ್ಕಾರ ಜಾರಿಗೆ ತರುವ ಮುನ್ನವೇ ಎಲ್ ಕೆ ಜಿ ಹಾಗೂ ಯುಕೆಜಿ ಆರಂಭಗೊಂಡಿತ್ತು.
ಕರವೇ ಜೊತೆಗೂಡಿ ಕನ್ನಡ ಶಾಲೆ ಉಳಿಸಿಕೊಳ್ಳುವುದಷ್ಟೇ ಅಲ್ಲಾ, ಇವತ್ತಿನ ಖಾಸಗಿ ಶಾಲೆಗಳ ನೇರ ಸ್ಪರ್ಧೆ ಅವರೊಟ್ಟಿಗೆ ಸೆಣಸಾಡಿ ವ್ಯವಸ್ಥಿತವಾಗಿ ಶಾಲೆಯೊಂದರ ಕಟ್ಟುವ ಕನಸು ಕಿಚ್ಚಾಗಿ ನೆಲೆಯೂರಿತ್ತು. ಹೇಗಾದರೂ ಸರಿ 140 ವರ್ಷ ಇತಿಹಾಸ ಹೊಂದಿರುವ ಶಾಲೆಗೆ ಹೊಸ ಮಾದರಿಯ ಕಾಯಕಲ್ಪ ಕೊಡುವ ಮೂಲಕ ಚಟುವಟಿಕೆ ಆರಂಭಗೊಂಡಿತು. ಸರ್ಕಾರದಿಂದ, ಇಲಾಖೆಯಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳದೆ ಸಮುದಾಯದ ಒಳಗೊಳ್ಳುವಿಕೆಗೆ ಮೊದಲ ಹೆಜ್ಜೆ ಇಟ್ಟಿದ್ದು ಡಾ. ಮಾಧುಪ್ರಸಾದ್ ಹಾಗೂ ಕರವೇ.
ಅಂದಿನಿಂದ ಆರಂಭವಾದ ಪ್ರಯತ್ನ ಕೈಬಿಡಲಿಲ್ಲ. 72 ಮಕ್ಕಳಿದ್ದ ಶಾಲೆ 2024 ನೇ ಸಾಲಿಗೆ ಎಲ್ ಕೆ ಜಿ ಹಾಗೂ ಯು ಕೆ ಜಿ ಯಲ್ಲಿ 186 ಮಕ್ಕಳು, 1 ರಿಂದ 7 ನೇ ತರಗತಿಗೆ 320 ಮಕ್ಕಳು ಒಟ್ಟು 506 ಮಕ್ಕಳ ಶಾಲಾ ದಾಖಲಾತಿ ಆಯಿತು. ಪ್ರಸ್ತುತ ಸಾಲಿನಲ್ಲಿ ಈಗಲೂ ಶಾಲಾ ದಾಖಲಾತಿ ಪ್ರಕ್ರಿಯೆಯಲ್ಲಿ ಇರುವುದರಿಂದ 650 ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಹೊಂದಲಿದೆ ಎನ್ನುವ ವಿಶ್ವಾಸ
ಶಾಲಾ ಆಡಳಿತ ಮಂಡಳಿಯದ್ದು.

ಶಾಲೆ ಅಭಿವೃದ್ಧಿಯಲ್ಲಿ ಎಸ್.ಡಿ.ಎಂ.ಸಿ ಪಾತ್ರ ಮಹತ್ವದ್ದಾಗಿದೆ. ಇದರಲ್ಲಿ ಕರವೇ ಕಾರ್ಯಕರ್ತರ ಮಕ್ಕಳು, ಸರ್ಕಾರಿ ಉದ್ಯೋಗಿಗಳ ಮಕ್ಕಳು ಸಹ ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ ಎಲ್ಲಾ ಸಮುದಾಯಗಳ ಮಕ್ಕಳು ಇದ್ದು, ವಿಶೇಷವಾಗಿ 500 ಕ್ಕೂ ಹೆಚ್ಚು ದಲಿತ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದಿಷ್ಟು ದೊಡ್ಡ ಸಂಖ್ಯೆಯಲ್ಲಿ ದಲಿತ ಮಕ್ಕಳು ಒಂದು ಶಾಲೆಯಲ್ಲಿ ಕಲಿಯುತ್ತಿರುವುದು ಬಹಳ ವಿರಳ, ಅಪರೂಪ ಎನ್ನಲು ಬಹುದು.
ಓಸಾಟ್ ಸಂಸ್ಥೆಯ ನೆರವಿನಿಂದ ಹೊಸದಾಗಿ ಒಂದು ಕೋಟಿ ರೂಪಾಯಿ ಅನುದಾನದಡಿ ಸುಸರ್ಜಿತವಾದ ಕಟ್ಟಡ ನಿರ್ಮಿಸಿದ್ದು. ಸ್ಮಾರ್ಟ್ ಕ್ಲಾಸ್, ಅತ್ಯಾಧುನಿಕವಾದ ಸವಲತ್ತು ಹೊಂದಿದೆ. ಇನ್ನ ಹಳೆಯ ವಿದ್ಯಾರ್ಥಿಗಳು, ದಾನಿಗಳ ನೆರವಿನಿಂದ ಶಾಲೆ ನಡೆಸಲು ಅಗತ್ಯ ಇರುವಷ್ಟು ಕೊಠಡಿಗಳು ಸುಸರ್ಜಿತವಾಗಿ ನಿರ್ಮಾಣವಾಗಿವೆ.

ಮೈಸೂರು ಮಿತ್ರರ ಕೂಟ (ಎನ್ ಜಿ ಓ ) ಪಿಠೋಪಕರಣದ ಕೊರತೆ ನಿಗಿಸಿದೆ. ಉತ್ತರ ಭಾರತದ ಬೀಯಿಂಗ್ ಸೋಷಿಯಲ್ ( ಎನ್ ಜಿ ಓ ) ಶಾಲೆಗೆ ಬಣ್ಣದ ವ್ಯವಸ್ಥೆ ಮಾಡಿದೆ. ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರ ಕಡೆಯಿಂದ ಪಿಠೋಪಕರಣದ ವ್ಯವಸ್ಥೆ ಆಗಿದೆ. ಮೈಸೂರಿನ ವಿ. ಕೇರ್ 15 ಜೊತೆ ಬೆಂಚ್ ಕೊಡಿಸಿದ್ದಾರೆ. ಗಂಧದ ಗುಡಿ ಬಳಗ ಹಾಗೂ ಎಸ್.ಡಿ.ಎಂ.ಸಿ ಸೇರಿ ಒಟ್ಟು 8 ಶೌಚಾಲಯ ನಿರ್ಮಿಸಿದ್ದಾರೆ.
ಸರ್ಕಾರದ ಕಡೆಯಿಂದ, ಶಿಕ್ಷಣ ಇಲಾಖೆಯಿಂದ ಇರುವುದು ಕೇವಲ 4 ಶಿಕ್ಷಕರು ಮಾತ್ರ. ಇನ್ನುಳಿದಂತೆ, ಗುಣ ಮಟ್ಟದ ಶಿಕ್ಷಣ ನೀಡಲೇಬೇಕು ಅನ್ನುವ ಹಠದಿಂದ ಅತಿಥಿ ಶಿಕ್ಷಕರ ನೇಮಿಸಿಕೊಳ್ಳಲಾಗಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಫಿಠೋಪಕರಣದ ವ್ಯವಸ್ಥೆಯಾಗಿದ್ದು, ಈಗ 500 ಮಕ್ಕಳು ಕುಳಿತು ಪಾಠ ಕೇಳಲು ಯಾವುದೇ ತೊಂದರೆ ಇಲ್ಲ.

ಇಚ್ಛಾಶಕ್ತಿ ಇದ್ದಿದ್ದರಿಂದ ಮುಚ್ಚಬೇಕಿದ್ದ ಶಾಲೆಯೊಂದನ್ನು ಉಚ್ರಾಯ ಸ್ಥಿತಿಗೆ ತಂದು ನಿಲ್ಲಿಸಿದೆ. ಇಲ್ಲಿ ಸರ್ಕಾರ, ಶಿಕ್ಷಣ ಇಲಾಖೆಯ ಪಾತ್ರವಿಲ್ಲ. ಇಲ್ಲಿರುವುದು ಸಮುದಾಯದ ಒಳಗೊಳ್ಳುವಿಕೆ. ಸಂಘಟನೆಗಳು, ದಾನಿಗಳು, ಹಿತೈಷಿಗಳು ಸೇರಿ 140 ವರ್ಷ ಇತಿಹಾಸವುಳ್ಳ, ಬ್ರಿಟಿಷರು ನಿರ್ಮಿಸಿದ ಶಾಲೆಗೆ ಮರು ಜೀವ ನೀಡಿ ನೂರಾರು ಮಕ್ಕಳ ಕಲಿಕೆಗೆ ಕಾರಣರಾಗಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮಾದರಿಯಾಗಿದೆ.
ಈಗ ಬಾಲಕರಷ್ಟೇ ಅಲ್ಲದೆ ಹೆಣ್ಣು ಮಕ್ಕಳು ಸಹ ಒಟ್ಟಿಗೆ ಕಲಿಯುತ್ತಿದ್ದಾರೆ. ಸ್ವಚ್ಛತೆ, ಶೌಚಾಲಯ ವ್ಯವಸ್ಥಿತವಾಗಿದೆ. ಪ್ರತಿಯೊಂದು ವಿಭಾಗಕ್ಕೂ ಪೋಷಕರೇ ಮುಖ್ಯಸ್ಥರಾಗಿ ನಿರ್ವಹಣೆ ಮಾಡುವ ಜವಾಬ್ದಾರಿ ಹೊಂದಿದ್ದಾರೆ. ಶಾಲೆಗೆ ಅಗತ್ಯ ನೆರವನ್ನು ಸಹ ತಾವೇ ನೀಡಿ ಶಾಲಾ ಅಭಿವೃದ್ಧಿಗೆ ನೆರವಾಗಿದ್ದಾರೆ. ಶಾಲೆಯ ಉಳಿವಿನಲ್ಲಿ ಪೋಷಕರ ಪಾತ್ರ ಬಹು ಮುಖ್ಯವಾಗಿದೆ.

ಈ ಶಾಲೆಯಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಪೋಷಕರ ದೈನಂದಿನ ಕೆಲಸ, ಕಾರ್ಯ ಗಮನಿಸಿ ಪೋಷಕರಿಗೆ ಅನುಕೂಲ ಆಗುವ ಸಮಯಕ್ಕೆ ಶಾಲೆ ಆರಂಭ ಮಾಡುತ್ತಾರೆ. ಪೋಷಕರು ಕೆಲಸ ಮುಗಿಸಿ ಬಂದು ಮಕ್ಕಳನ್ನು ಕರೆದುಕೊಂಡು ಹೋಗುವ ಮಟ್ಟಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಈ ವಿಶೇಷ ವರದಿ ಓದಿದ್ದೀರಾ? ಮೈಸೂರು | ಶವಾಗಾರದಲ್ಲಿ ಕೆಲಸ ಮಾಡುವ ಏಕಮೇವ ಮಹಿಳೆ ರಾಜಮ್ಮ
ನಮ್ಮ ಸರ್ಕಾರಿ ಶಾಲೆಗಳ ದುರ್ದೈವ ಎಂದರೆ 650 ಮಕ್ಕಳ ಕಲಿಕೆಗೆ ಸರ್ಕಾರ ನೇಮಿಸಿರುವ ಶಿಕ್ಷಕರ ಸಂಖ್ಯೆ 4. ಇನ್ನುಳಿದಂತೆ ಅಗತ್ಯಾನುಸಾರ ಅತಿಥಿ ಶಿಕ್ಷಕರ ನೇಮಿಸಿಕೊಂಡು ಶಾಲೆ ನಡೆಸಬೇಕಾದ ಪರಿಸ್ಥಿತಿಯ ನಡುವೆಯೂ ಯಾವುದಕ್ಕೂ ಜಗ್ಗದೆ ಪೋಷಕರ, ಸಂಘಟನೆಗಳ ಸಹಭಾಗಿತ್ವದಲ್ಲಿ ಉತ್ತಮ ಶಾಲೆಯಾಗಿ ರೂಪುಗೊಂಡಿದ್ದು ಶ್ಲಾಘನೀಯ.