ಚುನಾವಣೆ ಸಂದರ್ಭದಲ್ಲಿ ಮತದಾರರು ಯಾವುದೇ ಸವಲತ್ತುಗಳಿಗೆ ಬಲಿಯಾಗದೆ ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಮೈಸೂರು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ ಹಿರೇಮಠ್ ಮನವಿ ಮಾಡಿದರು.
ಮೈಸೂರು ಜಿಲ್ಲಾಡಳಿತ, ವ್ಯವಸ್ಥಿತ ಮತದಾರರ ಶಿಕ್ಷಣ, ಚುನಾವಣಾ ಭಾಗವಹಿಸುವಿಕೆ ಸಮಿತಿ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಮತದಾನವು ರಾಜ್ಯ ಶಾಸಕಾಂಗಗಳು, ಸಂಸತ್ತು ಮತ್ತು ಇತರ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಲು ಅನುಕೂಲವಾಗುತ್ತದೆ. 18 ವರ್ಷ ತುಂಬಿದ ಮೊದಲ ಬಾರಿಗೆ ಮತ ಚಲಾಯಿಸುವವರು ಕಡ್ಡಾಯವಾಗಿ ಮತ ಚಲಾಯಿಸಬೇಕು” ಎಂದು ಹೇಳಿದರು.
“18 ವರ್ಷ ಮೇಲ್ಪಟ್ಟ 80,000 ಮಂದಿ ಹೊಸ ಮತದಾರರನ್ನು ಸೇರಿಸುವ ಗುರಿಯನ್ನು ಮೈಸೂರು ಜಿಲ್ಲಾಡಳಿತ ನಿಗದಿಪಡಿಸಿದ್ದರೂ, ಈವರೆಗೆ ಕೇವಲ 50,000 ಮಂದಿ ಮತದಾರರು ಮಾತ್ರ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಉಳಿದ 30,000 ಮಂದಿ ಹೊಸ ಮತದಾರರು ಶೀಘ್ರದಲ್ಲೇ ನೋಂದಾಯಿಸಿಕೊಳ್ಳಬೇಕು” ಎಂದು ತಿಳಿಸಿದರು.
“ಸುಗಮ ಮತದಾನ ಪ್ರಕ್ರಿಯೆಗಾಗಿ ನೂಕುನುಗ್ಗಲು ಮತ್ತು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಹೆಚ್ಚಿನ ಮತಗಟ್ಟೆಗಳನ್ನು ತೆರೆಯಬೇಕು” ಎಂದು ಸ್ವೀಪ್ ರಾಯಭಾರಿ ಮತ್ತು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಶೋಷಿತರ ಜಾಗೃತಿ ಸಮಾವೇಶ; ನಗರದಲ್ಲಿ ವಾಹನಗಳ ಮಾರ್ಗ ಬದಲಾವಣೆ
“ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಕಡಿಮೆ ಇರುವುದರಿಂದ ನಗರ ಕೇಂದ್ರಿತ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು” ಎಂದು ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಬಿ .ಜಿ.ದಿನೇಶ್ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆ ಎಂ ಗಾಯತ್ರಿ, ಅಪರ ಜಿಲ್ಲಾಧಿಕಾರಿ ಆರ್ ಲೋಕನಾಥ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಂ.ಕೃಷ್ಣರಾಜು ಇದ್ದರು.