ನಮ್ಮ ಸರ್ಕಾರವು ರೈತರ ಬೇಡಿಕೆಯ ಪರವಾಗಿಯೇ ಇದೆ. ಈಗಾಗಲೇ ರೈತರ ಸಮಸ್ಯೆ ಕುರಿತು ಮುಖ್ಯಮಂತ್ರಿಗಳೊಟ್ಟಿಗೆ ಮಾತನಾಡಿಗದ್ದೇನೆ. ರೈತರಿಗೆ ಅಗತ್ಯವಿರುವ ಸಮಯಕ್ಕೆ ವಿದ್ಯುತ್ ನೀಡಲು ತಿಳಿಸಿದ್ದಾರೆ. ಅದರಂತೆ ಚಸ್ಕಾಂ ಅಧಿಕಾರಿಗಳೊಂದಿಗೆ ವಿದ್ಯುತ್ ಸಮಸ್ಯೆ ಕುರಿತು ಚರ್ಚಿಸಿ ರೈತರಿಗೆ ಬೆಳೆ ಬೆಳೆಯಲು ಪಂಪ್ ಸೆಟ್‌ಗಳಿಗೆ ಅಗತ್ಯಗನುಸಾರ ಗುಣಾತ್ಮಕ ವಿದ್ಯುತ್ ನೀಡುವಂತೆ ಸೂಚಿಸುತ್ತೇನೆ ಎಂದು ಸಚಿವ ಡಾ. ಹೆಚ್.ಸಿ ಮಹದೇವಪ್ಪ ಭರವಸೆ ನೀಡಿದರು.
ಮೈಸೂರಿನ ವಿಜಯನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಚೇರಿಯ ಎದುರು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿ ರೈತರ ಹಕ್ಕೊತ್ತಾಯಗಳನ್ನು ಸಚಿವರು ಆಲಿಸಿದರು.
ಬಳಿಕ ಮಾತನಾಡಿದ ಸಚಿವರು, “ನೂರು ವರ್ಷಗಳಿಂದ ಇಲ್ಲದ ಬರ ರಾಜ್ಯದಲ್ಲಿ ಉಂಟಾಗಿದೆ. ಅನೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ನಮ್ಮ ರೈತರು ಸಂಕಷ್ಟಕ್ಕೆ ಸಿಲುಕಿರುವುದು ಸರ್ಕಾರದ ಗಮನದಲ್ಲಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ರೈತರ ಜೊತೆ ಇರುತ್ತದೆ. ಎಂದಿಗೂ ಕೈಬಿಡುವುದಿಲ್ಲ. ರೈತರಿಗೆ ಅನುಕೂಲವಾಗುವ ಎಲ್ಲಾ ಕ್ರಮಗಳನ್ನು ಸರ್ಕಾರ ಅನುಸರಿಸಲಿದೆ” ಎಂದು ಹೇಳಿದರು.
“ರೈತರು ನೀಡಿರುವ ಎಂಟು ಅಂಶಗಳ ಬೇಡಿಕೆಯನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಎಲ್ಲಾ ಅಂಶಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು. ಜಿಲ್ಲಾ ಮಟ್ಟದ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ಅಧಿಕಾರಿಗಳಗೆ ಸೂಚಿಸಿದ್ದೇನೆ” ಎಂದು ತಿಳಿಸಿದರು.
“ಜಿಲ್ಲೆಯಲ್ಲಿ ರೈತರ ವಿವಿಧ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ರೈತಮುಖಂಡರಿಗೆ ಆರೋಗ್ಯಕರ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು. ಸಭೆಯಲ್ಲಿ ರೈತರು ತಮ್ಮ ಸಲಹೆಗಳನ್ನು ನೀಡಬಹುದು. ರೈತರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಲ್ಲರೂ ಸೇರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣ” ಎಂದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಉಪಾಧ್ಯಕ್ಷ ಮಹೇಶ್ ಪ್ರಭು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸೇರಿದಂತೆ ವಿವಿಧ ತಾಲ್ಲೂಕಿನ ರೈತ ಮುಖಂಡರು ಭಾಗಿಯಾಗಿದ್ದರು.