ದಲಿತರಿಗೆ ಅನ್ಯಾಯವಾಗಿದ್ದು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ 876 ದಿನಗಳಿಂದ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ತಾಲೂಕು ಕಚೇರಿ ಮುಂದೆ ದಸಂಸ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದರೂ ಕೂಡ ಮೈಸೂರು ಜಿಲ್ಲಾಡಳಿತ, ತಾಲೂಕು ಆಡಳಿತ, ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ.
ದೊಡ್ಡಹೊಸೂರು ಗ್ರಾಮದ ದಲಿತ ಮಹಿಳೆ ಚನ್ನಮ್ಮರ ಭೂ ಸಮಸ್ಯೆ, ಮುಮ್ಮಡಿ ಕಾವಲು ಗ್ರಾಮದ ಸರ್ವೆ ನಂ 1 ರ ಪಕ್ಕಾ ಪೋಡು ದುರಸ್ತಿ, ಕದರೇಗೌಡನ ಕೊಪ್ಪಲು ಗ್ರಾಮ ಠಾಣಾ ಒತ್ತುವರಿ, ಚನ್ನಕಲ್ ಕಾವಲು ಭೂ ಸಮಸ್ಯೆ, ಕೊಪ್ಪ ಗರಸಿಯಾ ಕಾಲೊನಿ ಸಮಸ್ಯೆ, ಕೊಣಸೂರು ಸರ್ವೆ ನಂ138ರ 3.20 ಎಕರೆ ಜಮೀನನ್ನು ಅತಿಕ್ರಮವಾಗಿ ಮಾಡಿರುವ ಒತ್ತುವರಿ ತೆರವು, ಸರ್ವೆ ನಂ 61 ರ ಇನಾಂ ಜಮೀನಿಗೆ ಸಾಗುವಳಿ ನೀಡುವಂತೆ, ಸರ್ವೆ ನಂ 93 ರಲ್ಲಿ ಅನುಭವದಲ್ಲಿರುವ ರೈತರಿಗೆ ಖಾತೆ ಮಾಡಿ ಕೊಡುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದು,ಆದರೆ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ.
ಬೆಣಗಾಲು ಗ್ರಾಮದ ಸರ್ವೆ ನಂ 42 ರ ಬಿಡಿಎ ಜಾಗವನ್ನು ಇ ಕಂ ಕಾಫಿಕ್ಯೂರಿಂಗ್ ಮಾಲೀಕರು ಮಾಡಿರುವ ಒತ್ತುವರಿ, ಕೆಲವು ಗ್ರಾಮಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ನಡೆಸಿರುವ ಅವ್ಯವಹಾರಗಳ ಬಗ್ಗೆ, ಸೂಳೆಕೋಟೆ ಗ್ರಾಮದ ಸರ್ವೆ ನಂ 10 ರ ಮೂಲ ವಾರಸುದಾರರ ಭೂ ದಾಖಲೆಗಳ ತಿರುಚಿರುವ ಬಗ್ಗೆ, ದಲಿತ ದಸಂಸ ಪ್ರತಿಭಟನೆ ನಡೆಸಲು ಸೂಕ್ತ ಸ್ಥಳ ಗುರುತಿಸಿಕೊಡುವಂತೆ ಒತ್ತಾಯಿಸಿ ದಸಂಸ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ.
ಆದರೆ ತಹಶೀಲ್ದಾರ್ ನಿಸರ್ಗ ಪ್ರಿಯ, “ಮನವಿಯನ್ನು ಪರಿಶೀಲಿಸಲಾಗಿದೆ. ಧರಣಿ ಕುಳಿತುಕೊಳ್ಳಲು ತಾಲೂಕು ಕಚೇರಿಯಿಂದ ಯಾವುದೇ ಅನುಮತಿ ನೀಡಲು ಅವಕಾಶ ಇರುವುದಿಲ್ಲ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ನಿರೀಕ್ಷಕರಲ್ಲಿ ಮನವಿ ಸಲ್ಲಿಸಬಹುದು” ಎಂದು ದಸಂಸ ಮನವಿಗೆ ಹಿಂಬರಹ ನೀಡಿರುತ್ತಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಹಿರಿಯ ಮುಖಂಡ ಜಗದೀಶ್, “ಬಾಬಾ ಸಾಹೇಬರ ಸಂವಿಧಾನದಡಿ ತಾಲೂಕು ಕಛೇರಿ ಮುಂದೆ ಪ್ರತಿಭಟನೆ ಮಾಡಲು ಅವಕಾಶವಿಲ್ಲ ಎಂದು ಅವಮಾನಿಸಿದ್ದಾರೆ. ಹೋರಾಟದ ಹಕ್ಕನ್ನು ಕಸಿದುಕೊಳ್ಳುವ ಕುತಂತ್ರ ಅಧಿಕಾರಿಗಳದ್ದು. ಇದಕ್ಕೆಲ್ಲ ಬಗ್ಗಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ರಾಮನಗರ | ರೈಲ್ವೆ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಆದ್ಯತೆ: ಪ್ರಗತಿಪರ ಸಂಘಟನೆಗಳಿಂದ ಸ್ವಾಗತ
ಮುಮ್ಮಡಿ ಕಾವಲ್ ದೊಡ್ಡಯ್ಯ ಮಾತನಾಡಿ, “ಹೋರಾಟಗಾರರ ಚಾಪೆ, ಬಾಬಾ ಸಾಹೇಬರ ಫೋಟೋ, ಬ್ಯಾನರ್ ಕಸಿದುಕೊಂಡು ಹೋರಾಟ ಹತ್ತಿಕ್ಕಲು ಹೊರಟವರು, ಈಗ ಸ್ಥಳವಿಲ್ಲ ಅಹೋರಾತ್ರಿ ಧರಣಿಗೆ ಪೊಲೀಸ್ ಇಲಾಖೆಯನ್ನು ನಿವೇದಿಸಿಕೊಳ್ಳಿ ಎಂದಿದ್ದಾರೆ. ಅದರ ಅನುಸಾರ ಪೊಲೀಸ್ ನಿರೀಕ್ಷಕರಿಗೂ ಮನವಿ ಮಾಡಿದ್ದು, ಭದ್ರತೆ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ, ಯಾರ ಒತ್ತಡಕ್ಕೂ, ಅಧಿಕಾರಿಗಳ ಕುತಂತ್ರಕ್ಕೆ ಮಣಿಯದೆ ನಮ್ಮ ಹೋರಾಟ ಮುಂದುವರಿಯುತ್ತದೆ. ತಹಶೀಲ್ದಾರ್ ಅವರ ನಿಲುವನ್ನು ಪ್ರಶ್ನಿಸಿ ಮುಂದಿನ ಹೋರಾಟ ನಡೆಸಲಾಗುವುದು” ಎಂದು ತಿಳಿಸಿದರು.
