ಮೈಸೂರು ಜಿಲ್ಲಾ ವ್ಯಾಪ್ತಿಯ ಜಯಪುರದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ, ಕೊಲೆ ಪ್ರಯತ್ನ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಸದರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಗ್ರಾಮಾಂತರ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗುಚ್ಚೇಗೌಡನಪುರ ಗ್ರಾಮದ ಬಳಿ ದಿನಾಂಕ -20-01-2025 ರಂದು ನಡೆದ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಕಾರ್ಯಚರಣೆಗೆ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ರವರು ತಂಡಗಳನ್ನು ರಚಿಸಿದ್ದರು.
ಅದರಂತೆ, ಆರೋಪಿಗಳಾದ ಕೇರಳ ಮೂಲದ ಆದರ್ಶ ಎಂ, ಮುರುಗನ್ ಬಿನ್ ಲೇಟ್ ಮುತ್ತು, ವಿಜೇಶ್ ಬಿನ್ ವಿಜಯನ್, ಶ್ರೀಜಿತ್ ಬಿನ್ ಪೊನ್ನಪ್ಪನ್ ಇವರುಗಳನ್ನು ದಿನಾಂಕ-21-03-2025 ರಂದು ವಶಕ್ಕೆ ಪಡೆದು, ಮೈಸೂರು ಗ್ರಾಮಾಂತರ ವೃತ್ತ ನಿರೀಕ್ಷಕ ಶಿವನಂಜ ಶೆಟ್ಟಿ ತನಿಖೆ ಕೈಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಕೊಡಗು | ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ
ಪೊಲೀಸ್ ವಶದಲ್ಲಿದ್ದ ಆದರ್ಶ ಮುರುಗನ್ ಎಂಬಾತನೊಂದಿಗೆ ಕೃತ್ಯ ನಡೆದ ಸ್ಥಳದ ಪರಿಶೀಲನೆಗಾಗಿ ವೃತ್ತ ನಿರಿಕ್ಷಕ ಶಿವನಂಜ ಶೆಟ್ಟಿ ಮತ್ತು ಬೈಲಕುಪ್ಪೆ ವೃತ್ತ ನಿರೀಕ್ಷಕ ದೀಪಕ್ ತೆರಳಿದ್ದರು. ರಾತ್ರಿ ಜಯಪುರ ಠಾಣಾ ಸರಹದ್ದಿನ ಗೋಪಾಲಪುರ ಗ್ರಾಮದ ರಸ್ತೆಯ ಬಳಿ ಹೋಗಿದ್ದಾಗ ಆದರ್ಶ ತುರ್ತಾಗಿ ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಸ್ಥಳದಲ್ಲಿ ಬಿದ್ದಿದ್ದ ಗಾಜಿನ ಬಿಯರ್ ಬಾಟಲಿನಿಂದ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿಯವರ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ, ತಪ್ಪಿಸಿಕೊಂಡು ಓಡಲೆತ್ನಿಸಿದಾಗ ವೃತ್ತ ನಿರೀಕ್ಷಕ ಶಿವನಂಜ ಶೆಟ್ಟಿ ತಮ್ಮ ಪಿಸ್ತೂಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ, ತಪ್ಪಿಸಿಕೊಳ್ಳಲು ಆರೋಪಿ ಯತ್ನಿಸಿದಾಗ ಬೈಲುಕುಪ್ಪೆ ವೃತ್ತ ನಿರೀಕ್ಷಕ ದೀಪಕ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದರಿ ಆರೋಪಿಯ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿರುತ್ತದೆ ಎಂದು ತಿಳಿದು ಬಂದಿದೆ.