ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಕರ್ಣಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮಿಗೆ ಹಾಡಿ ‘ ಎ ‘ ವೊಂದರ ಸರಿ ಸುಮಾರು 32 ಮನೆಗಳಿಗೆ ವಿದ್ಯುತ್ ಸಂಪರ್ಕವು ಇಲ್ಲ, ಗ್ಯಾರೆಂಟಿ ಯೋಜನೆಯ ಗೃಹಜ್ಯೋತಿ ಉಚಿತವಾಗಿ ಸಿಗಲಿಲ್ಲ.
ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡಿದಾಗ ಅದನ್ನ ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವ ಹೊಣೆಗಾರಿಕೆ ಸ್ಥಳೀಯ ಆಡಳಿತ, ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆಯದ್ದು. ಆದರೆ, ಅದೇ ಅಧಿಕಾರಿಗಳು ಸಂಭಂದ ರಹಿತರಂತೆ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡದೆ ಇದ್ದಾಗ ಯಾವುದೇ ಯೋಜನೆ ಆಗಿದ್ದರು, ಎಂತಹ ಮಹತ್ತರ ಉದ್ದೇಶ ಹೊಂದಿದ್ದರು ಸಹ ಅಧಿಕಾರಿಗಳ ಬೇಜವಾಬ್ದಾರಿ ತನದಿಂದಲೇ ಹಳ್ಳ ಹಿಡಿದಂತಾಗುತ್ತದೆ.
” ಕರ್ನಾಟಕದ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆ ಜಾರಿಗೆ ತಂದು ಅದರಲ್ಲಿ 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುವ ಪ್ರಕ್ರಿಯೆ ಇದಾಗಲೇ 2 ವರ್ಷಗಳ ಹತತ್ರ ಸಂದಿದೆ. ಆದರೆ, ಸೆಸ್ಕ್ ಅಧಿಕಾರಿಗಳು, ಪಾಲನೆ ಮಾಡಬೇಕಾದ ಲೈನ್ ಮ್ಯಾನ್ ಗಳು, ನಿರ್ವಹಣೆ ಜವಾಬ್ದಾರಿ ಹೊಂದಿರುವ ಅಭಿಯಂತರು ಸಾಧಕ, ಭಾದಕ ನೋಡಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು. ಅದನ್ನು ಮಾಡದೆ ನಮಗೆ ಸಂಭಂದವೇ ಇರದಂತೆ ವರ್ತನೆ ತೋರುವುದರಿಂದ ಸರ್ಕಾರದ ಆಶಯ ಈಡೇರುವುದಿಲ್ಲ “.

” ಸರ್ಕಾರದ ಯೋಜನೆಗಳು ಘೋಷಣೆಯಾಗಿಯೇ ಉಳಿಯುತ್ತವೆ ವಿನಃ, ಪರಿ ಪೂರ್ಣ ಎನಿಸಲಾರವು. ಸರ್ಕಾರ ಎಲ್ಲರಿಗೂ ಯೋಜನೆಗಳನ್ನು ತಲುಪಿಸಿದ್ದೇವೆ, ತಲುಪಿದೆ ಎಂದು ಹೇಳುವಾಗ. ನೈಜವಾಗಿ ನೋಡುವುದಾದರೆ ಬಹುತೇಕ ಬಡ ವರ್ಗದ, ಅದರಲ್ಲೂ ಯಾರಿಗೆ ನಿಜವಾಗಿ ತಲುಪ ಬೇಕಿತ್ತೋ, ಯಾರು ನೈಜ ಅರ್ಹರೋ ಅವರಿಗೆ ಇಂತಹ ಯೋಜನೆಗಳು ದಕ್ಕದೆ ಇರುವುದು ಶೋಚನಿಯ. ಸರ್ಕಾರಗಳು ಸಹ ಯೋಜನೆ ತರುವಲ್ಲಿನ ಉತ್ಸಾಹ ಅದನ್ನ ತಲುಪಿಸುವಲ್ಲಿ ಇರುವುದಿಲ್ಲ. ಯೋಜನೆಗಳು ಪರಿಪೂರ್ಣ ಅನಿಸಲಾಗದೆ ಇರಲು ಕಾರಣ ಸಂಬಂಧಪಟ್ಟವರ ನಿರ್ಲಕ್ಷ್ಯ, ಅಧಿಕಾರಿಗಳಲ್ಲಿನ ಇಚ್ಛಾಶಕ್ತಿಯ ಕೊರತೆ. ಇನ್ನ ಸಿಬ್ಬಂದಿಗಳ ಅಸಡ್ಡೆ “.
ಜನೋಪಯೋಗಿ ಯೋಜನೆಯಾದ ಗೃಹಜ್ಯೋತಿ ಹೆಮ್ಮಿಗೆ ಹಾಡಿವೊಂದರಲ್ಲಿರುವ ಮನೆಗಳಿಗೆ ತಲುಪಲಿಲ್ಲ. ಹೀಗಿರುವಾಗ, ಸರ್ಕಾರ, ಅಧಿಕಾರಿಗಳು ನಾವು ಗ್ಯಾರೆಂಟಿ ಯೋಜನೆ ತಲುಪಿಸಿದ್ದೇವೆ ಅಂತೇಳಲು ಅರ್ಹತೆಯೂ ಇರಲ್ಲ. ಆದಿವಾಸಿ ಬುಡಕಟ್ಟು ಜನಗಳೇ ವಾಸ ಮಾಡುವ ಜನರಿಗೆ ಈ ಹಿಂದೆ ವಿದ್ಯುತ್ ಸಂಪರ್ಕ ಪುನರ್ವಸತಿ ಸಮಯದಲ್ಲಿ ಸಿಕ್ಕಿದ್ದು. ಕ್ರಮೇಣ ವಸತಿ ಯೋಜನೆಗಳನ್ನು ಪಡೆದಂತೆ ಬೇರೆ ಮನೆ ನಿರ್ಮಿಸಿದಾಗ ವಿದ್ಯುತ್ ಕಡಿತ ಆಗಿದೆ. ಮೀಟರ್ ಅಳವಡಿಕೆ ಮಾಡದೆ. ವಿದ್ಯುತ್ ಸಂಪರ್ಕ ಸಿಗದಂತೆ ಮಾಡಿದ್ದಾರೆ.

ಅಲ್ಲಿಗೆ ಬರುವ ಲೈನ್ ಮ್ಯಾನ್ ಕೇಳಿದರೆ ಹಾರಿಕೆ ಉತ್ತರ, ಸಿಕ್ಕಸಿಕ್ಕವರಲ್ಲಿ ಒಂದಷ್ಟು ಸಂಪರ್ಕ ಕೊಡುವ ನೆಪವೊಡ್ಡಿ ಒಂದಷ್ಟು ಕಾಸು ಕಿತ್ತು ಹೊರಟರೆ ಇನ್ನ ಅತ್ತ ಸುಳಿಯುವುದು ಇಲ್ಲ. ಹನಗೂಡು ಉಪಕೇಂದ್ರ, ಇಲ್ಲ ಹುಣಸೂರಿನ ಸೆಸ್ಕ್ ಸಹ ಗಮನ ಹರಿಸಿಲ್ಲ. ವಿದ್ಯುತ್ ಸಂಪರ್ಕ ಬೇಕು, ಮೀಟರ್ ಅಳವಡಿಕೆ ಮಾಡಿ ಈ ಹಿಂದೆ ಹಾಕಿಸಿದ್ವಿ ಅದನ್ನೇ ಮುಂದುವರಿಸಿ ಅಂದರು ಕೇಳಲ್ಲ. ಕೇಳಿದರು ಆ ರೆಕಾರ್ಡ್ಸ್ ಇಲ್ಲ, ಈ ರೆಕಾರ್ಡ್ಸ್ ಇಲ್ಲ ಅದಕ್ಕೆ ಡಿಸ್ಕನೆಕ್ಟ್ ಆಗಿದೆ ಅನ್ನೋದು. ಬದ್ಧತೆ ಇರಬೇಕಾದದ್ದು ಅಧಿಕಾರಿಗಳಿಗೆ. ಏನು ಲೋಪ ಆಗಿದೆ, 32 ಕ್ಕು ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಏತಕ್ಕೆ ನಿಲುಗಡೆ ಆಗಿದೆ. ದಾಖಲೆ ಸಮಸ್ಯೆ ಇದ್ದರೆ. ಖುದ್ದು ಪರಿಶೀಲನೆ ಮಾಡಿ, ಅಗತ್ಯ ದಾಖಲೆ ಪಡೆದು ಮೀಟರ್ ಅಳವಡಿಕೆ ಮಾಡಿ, ವಿದ್ಯುತ್ ಸಂಪರ್ಕ ನೀಡಬೇಕು.
ಆದರೆ, ಇದ್ಯಾವುದನ್ನು ಮಾಡಿಲ್ಲ. ವಿದ್ಯಾವಂತರಲ್ಲದ ಆದಿವಾಸಿ ಜನರ ಮಾತನ್ನ ಕೇಳಿಸಿಕೊಳ್ಳುವ ಸೌಜನ್ಯತೆ ಕೂಡ ಇಲ್ಲ. ಹೆಮ್ಮಿಗೆ ಹಾಡಿಯ 32 ಕ್ಕು ಹೆಚ್ಚಿನ ಮನೆಯವರು ನೇರವಾಗಿ ಕಂಬದ ಲೈನ್ ಗೆ ವೈರ್ ಹಾಕಿ ಮನೆಗೆ ವಿದ್ಯುತ್ ಎಳೆದುಕೊಂಡಿದ್ದಾರೆ. ಮನೆ ಮುಂದೆ ಹೋದರೆ ಸಾಕು ವಿದ್ಯುತ್ ಕಂಬದಿಂದ ನೇರವಾಗಿ ಮನೆ ಮನೆಗೆ ಅನಧಿಕೃತವಾಗಿ, ಅಪಾಯಕಾರಿಯಾಗಿ ವಿದ್ಯುತ್ ಎಳೆದುಕೊಂಡಿದ್ದಾರೆ. ಇದಕ್ಕೆಲ್ಲ ಕಾರಣ ಸೆಸ್ಕ್ ಅಧಿಕಾರಿಗಳು. ತಮ್ಮ ಕೆಲಸ ಜವಾಬ್ದಾರಿಯಿಂದ ಮಾಡಿದ್ದರೆ, ಜನ ಹೀಗೆಲ್ಲ ಮಾಡುವ ಅಗತ್ಯತೆ ಇರುತ್ತಿರಲಿಲ್ಲ.

” ಲೈನ್ ಮ್ಯಾನ್, ಅಧಿಕಾರಿಗಳ ಗಮನಕ್ಕೆ ಇದ್ದರು ಕೇಳಲ್ಲ. ಯಾಕಂದ್ರೆ ಈಗ ವಿದ್ಯುತ್ ಉಚಿತ ಇರೋದ್ರಿಂದ ಕೇಳಿದರೆ ಸಂಪರ್ಕ ಕೊಡಿ ಅಂತಾರೆ. ಇನ್ನ ಹಣ ಪಡೆಯುವ ವ್ಯವಸ್ಥೆ ಇಲ್ಲ. ಹೀಗಿರುವಾಗ ಯಾಕೆ ತಲೆ ಕೆಡಿಸಿಕೊಳ್ಳಬೇಕು. ಲೈನ್ ಎಳೆದುಕೊಂಡರೆ ಎಳೆದುಕೊಳ್ಳಲಿ ಅನ್ನುವ ತಾತ್ಸಾರ ಧೋರಣೆ. ಭಾಧ್ಯತೆ, ಬದ್ಧತೆ ಇರಬೇಕಿದ್ದ ಸೆಸ್ಕ್ ಈ ರೀತಿ ಕಂಡರೂ ಕಾಣದಂತೆ, ಏನು ಗೊತ್ತಿರದಂತೆ ಗೃಹಜ್ಯೋತಿ ಅನುಷ್ಠಾನ ಮಾಡದೆ. ವಿದ್ಯುತ್ ಸಂಪರ್ಕ ಒದಗಿಸದೆ, ಅಧಿಕೃತವಾಗಿ ಲೈನ್ ಎಳೆದುಕೊಂಡಿದ್ದರು ಸುಮ್ಮನಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಒಂದು ಕಡೆ ವಿದ್ಯುತ್ ಕಳ್ಳತನ ಮಾಡುವುದು ಅಪರಾಧ. ಆದ್ರೆ ಅದೇ ಅಧಿಕಾರಿಗಳು ಗೊತ್ತಿದ್ದರೂ ಸುಮ್ಮನಿರುವುದು ಅಪರಾಧವೇ. ಇದಕ್ಕೆಲ್ಲ ಕಾರಣ ಸರ್ಕಾರದ ಗ್ಯಾರೆಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ವಿಫಲರಾಗಿರುವುದು “.
ಅನಧಿಕೃತವಾಗಿ ಮನೆ ಮನೆಗಳಿಗೆ ನೇರವಾಗಿ ಕಂಬದಿಂದ ಲೈನ್ ಎಳೆದುಕೊಂಡಿರುವುದರಿಂದ ಅಪಾಯ ಯಾವಾಗ ಬೇಕಾದರೂ ಸಂಭವಿಸಬಹುದು. ಮಳೆಗಾಲ ಆರಂಭಿಕ ಸಮಯವಾದ್ದರಿಂದ ಗುಡುಗು, ಮಿಂಚು, ಸಿಡಿಲಿನ ಸಂದರ್ಭದಲ್ಲಿ ಹೆಚ್ಚು ಕಡಿಮೆ ಆದರೂ ಇಡೀ ಕುಟುಂಬಗಳೇ ಆಹುತಿಯಾಗುವ ಅಪಾಯವಿದೆ. ಚಿಕ್ಕ ಪುಟ್ಟ ಮನೆಗಳು, ಮಕ್ಕಳು ಇರ್ತಾರೆ ವಿದ್ಯುತ್ ಲೈನ್ ನೇರವಾಗಿ ಎಳೆದಿರುವುದರಿಂದ, ಡೈರೆಕ್ಟ್ ಕನೆಕ್ಷನ್ ಆಗಿರುವುದರಿಂದ ಹೆಚ್ಚಿನ ವೋಲ್ಟೇಜ್ ಬಂದಾಗ ಶಾರ್ಟ್ ಸರ್ಕ್ಯೂಟ್ ಆದರೆ, ಏನು ಬೇಕಾದರೂ ಆಗಬಹುದು ಇದನ್ನೆಲ್ಲಾ ಸೆಸ್ಕ್ ಹುಣಸೂರು ವಿಭಾಗ, ಹನಗೂಡು ಉಪಕೇಂದ್ರ ಗಮನಿಸಬೇಕಿತ್ತು.ಆದರೆ, ಅಂತಹ ಕೆಲಸ ಮಾಡದೆ ಮೌನವಹಿಸಿದೆ.

ಡೀಡ್ ಸಂಸ್ಥೆ ನಿರ್ದೇಶಕ ಶ್ರೀಕಾಂತ್ ಈ ದಿನ.ಕಾಮ್ ಜೊತೆ ಮಾತನಾಡಿ ” ಹೆಮ್ಮಿಗೆ ಹಾಡಿ ಮನೆಗಳಿಗೆ ವಿದ್ಯುತ್ ಲೈನ್ ಇದೆ. ಮುಂಚೆ ಮನೆ ಮನೆಗೂ ಕರೆಂಟ್ ಇತ್ತು. ಕ್ರಮೇಣ ಮನೆ ಕಟ್ಟುವಾಗ ಮೀಟರ್ ತೆಗೆದಿದ್ದಾರೆ. ಮತ್ತೆ ಹಾಕಿಕೊಡಿ ಅಂದರೆ ಯಾರು ಸಹ ಸ್ಪಂದಿಸುತಿಲ್ಲ. ಇನ್ನ ಕಂಬದಿಂದ ನೇರವಾಗಿ ಕರೆಂಟ್ ಎಳೆದುಕೊಂಡಿದ್ದಾರೆ. ಮನೆ ಮನೆಗಳಿಗೆ ಇದರಿಂದ ಏನಾದರೂ ಅಪಾಯ ಆದರೆ ಇದಕ್ಕೆಲ್ಲ ಹೊಣೆ ಯಾರು? ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಹೊರಬೇಕು.
ಅಲ್ಲದೆ, ಸರ್ಕಾರ ಉಚಿತವಾಗಿ ಗೃಹಜ್ಯೋತಿ ಯೋಜನೆ ಜಾರಿ ಮಾಡಿ. ಬಡ ಜನರಿಗೆ ದಕ್ಕಲಿಲ್ಲ ಅಂದರೆ ಸರ್ಕಾರದ ಉದ್ದೇಶ ಈಡೇರಲಿಲ್ಲ. ಇದಕ್ಕೆಲ್ಲ ಕಾರಣ ಯಾರು? ಸ್ಥಳೀಯವಾಗಿ ಜವಾಬ್ದಾರಿ ಇರುವವರು ಮಾಡಬೇಕಿದ್ದ ಕೆಲಸ. ಅವರಿಗೆ ಇಂತಹದ್ದೆಲ್ಲ ಬೇಡವಾಗಿರುತ್ತೆ, ಗಮನ ಕೊಡಲ್ಲ. ಉಚಿತ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ದುಡ್ಡು ಕಟ್ಟುತ್ತೇವೆ ಅಂದ್ರು ವಿದ್ಯುತ್ ಮೀಟರ್ ಹಾಕಲ್ಲ ಅಂದ್ರೆ ಇನ್ನೇನು ಮಾಡಬೇಕು.ಎಲ್ಲರೂ ಅಕ್ರಮವಾಗಿ ಲೈನ್ ಎಳೆದುಕೊಂಡಿದ್ದಾರೆ. ಇದು ಸರಿಯಲ್ಲ. ಇದರಿಂದ ತೊಂದರೆಯೇ ಹೆಚ್ಚು. ಕೂಡಲೇ ಸೆಸ್ಕ್ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ” ಎಂದರು.

ಗ್ರಾಮ ಪಂಚಾಯ್ತಿ ಸದಸ್ಯ ಬೀರಪ್ಪ ಮಾತನಾಡಿ ” ಗ್ರಾಮ ಪಂಚಾಯ್ತಿ ಕಡೆಯಿಂದಲೂ ಸಾಕಷ್ಟು ಬಾರಿ ಮನವಿ ಮಾಡಿದ್ದೀವಿ. ಹನಗೂಡು ಉಪಕೇಂದ್ರ ಹಾಗೂ ಹುಣಸೂರು ವಿಭಾಗದಲ್ಲು ಕೇಳಿದ್ದೀವಿ. ಮಾಹಿತಿ ಕೊಡುವುದಕ್ಕೆ ಸಿದ್ದರಿಲ್ಲ. ಅಧಿಕಾರಿಗಳು ಮಾಹಿತಿ ಕೊಟ್ಟರೆ ದಾಖಲೆ ಏನು ಬೇಕು ಅದೆಲ್ಲ ಕೊಟ್ಟು ಮೀಟರ್ ಅಳವಡಿಕೆ, ವಿದ್ಯುತ್ ಸಂಪರ್ಕ ಪಡೆಯಬಹುದು. ಏನನ್ನು ಹೇಳಲ್ಲ, ಏನನ್ನು ಕೇಳಿಸಿಕೊಳ್ಳಲ್ಲ ಅಂದರೆ ನಾವೇನು ಮಾಡಬೇಕು?.
ಹೊಸದಾಗಿ ಕಂಬ ಹಾಕಿ ಲೈನ್ ಎಳೆದು ಮಾಡಬೇಕಾದ ಕೆಲಸ ಏನು ಇಲ್ಲ. ಈಗಾಗಲೇ ಲೈನ್ ಇದೆ. ಮನೆ ಮನೆಗೆ ಅಗತ್ಯವಾಗಿ ಮೀಟರ್ ಹಾಕಿ, ಸಂಪರ್ಕ ಕೊಟ್ಟರೆ ಸರ್ಕಾರದ ಗ್ಯಾರೆಂಟಿ ಯೋಜನೆ ಗೃಹಜ್ಯೋತಿ ಎಲ್ಲರಿಗೂ ಸಿಗುತ್ತೆ. ಇಲ್ಲಾಂದ್ರೆ ಗ್ಯಾರೆಂಟಿ ಯೋಜನೆ ಇದ್ದರು ಏನು ಪ್ರಯೋಜನ. ಬಡವರಿಗೆ ಇಲ್ಲ ಅಂದಮೇಲೆ ಅಂತಹ ಯೋಜನೆ ತಂದು ಯಾವ ಉಪಯೋಗವು ಇಲ್ಲ. ಸರ್ಕಾರ ಮಾಡುತ್ತೆ, ಇಲ್ಲಿರುವ ಅಧಿಕಾರಿಗಳು ಕ್ಯಾರೇ ಅನ್ನಲ್ಲ. ಅವರಿಗೆಲ್ಲ ಕಾಳಜಿ ಇಲ್ಲ. ಕೆಲಸ ಮಾಡೋ ಉತ್ಸಾಹ ಇಲ್ಲವೇ ಇಲ್ಲ ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಂಬೇಡ್ಕರ್ ರವರ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು, ಆರಾಧನೆಯನ್ನಲ್ಲ : ಗುರುಪ್ರಸಾದ್ ಕೆರಗೋಡು

ಈಗಲಾದರೂ ಸರ್ಕಾರ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರಿನ ಅಧಿಕಾರಿಗಳು, ನಿಗಮದ ಅಧ್ಯಕ್ಷರಾದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಗಮನ ಹರಿಸಿ ಸಂಬಂಧಪಟ್ಟವರಿಗೆ ಸೂಚನೆ ನೀಡಿ ಗ್ಯಾರೆಂಟಿ ಯೋಜನೆ ತಲುಪುವಂತೆ ಮಾಡುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
.