ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಕಾರಣವಿಲ್ಲದೆ ವಿಳಂಬ ಮಾಡುವುದಾಗಲಿ, ಕಚೇರಿಯಿಂದ ಕಚೇರಿಗೆ ಅಲೆಸುವುದಾಗಲಿ ಮಾಡದೆ ಪ್ರಾಮಾಣಿಕವಾಗಿ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಲೋಕಾಯುಕ್ತ ಎಸ್ ಪಿ ಸುರೇಶ್ ಬಾಬು ಎಚ್ಚರಿಸಿದರು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆ ಹಾಗೂ ದೂರು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸಾರ್ವಜನಿಕರು ಏನಾದರೂ ನಮಗೆ ದೂರು ನೀಡಿದರೆ ನಿಮಗೆ ಖಂಡಿತ ತೊಂದರೆಯಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ “ಎಂದು ಸಾರ್ವಜನಿಕರ ಪರವಾಗಿ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಸಾರ್ವಜನಿಕರು ನೀಡಿದ ದೂರುಗಳನ್ನು ಸ್ವೀಕರಿಸಿ ಅವರ ಅಹವಾಲುಗಳನ್ನು ಕೇಳಿ ತಿಳಿದುಕೊಂಡು ಸ್ಥಳದಲ್ಲೇ ಇದ್ದ ಅಧಿಕಾರಿಗಳ ಮುಖಾಂತರ ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಿದರು.
“ಜಮೀನುಗಳಿಗೆ ತೆರಳುವ ಸರ್ಕಾರಿ ಓಣಿ ಒತ್ತುವರಿ, ನಿವೇಶನಗಳ ಒತ್ತುವರಿ, ಆಶ್ರಯ ಮನೆಗಳಿಗೆ ಬಿಲ್ ಆಗದೇ ಇರುವುದು, ನಗರ ಸಭೆಯಲ್ಲಿ ಕಡತನಾಪತ್ತೆ ಹಾಗೂ ಖಾತೆ ಮಾಡಿಕೊಡುವುದರಲ್ಲಿ ಅಕ್ರಮ ಎಸಗಿರುವ ಬಗ್ಗೆ ಸೇರಿದಂತೆ ಹಲವು ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ವಿಚಾರಣೆ ನಡೆಸಿ ಅವುಗಳನ್ನು ಕೂಡಲೇ ಸರಿಪಡಿಸಬೇಕು” ಎಂದು ತಾಕೀತು ಮಾಡಿದರು.
ಇದೇ ಸಂದರ್ಭ ಇಲಾಖಾವಾರು ಸರ್ಕಾರದ ಜನಪ್ರಿಯ ಯೋಜನೆಗಳಲ್ಲೊಂದಾದ ಸಕಾಲದಲ್ಲಿ ವಿಲೇವಾರಿ ಆಗದಿರುವ ಅರ್ಜಿಗಳ ಬಗ್ಗೆ ಪ್ರಶ್ನಿಸಿ ಅವುಗಳನ್ನು ಕೂಡಲೇ ಇತ್ಯರ್ಥ ಪಡಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಒಂದೇ ವರ್ಷದಲ್ಲಿ 800 ಅಸ್ವಾಭಾವಿಕ ಮರಣ ಪ್ರಕರಣಗಳು ದಾಖಲು; ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ
“ಸರ್ಕಾರಿ ಕಚೇರಿ ಹಾಗೂ ಅಧಿಕಾರಿಗಳಿಂದ ಯಾವುದೇ ತೊಂದರೆ ಹಾಗೂ ವಿಳಂಬವಾಗಲಿ ನಮಗೆ ದೂರು ನೀಡಿ” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಿವಕುಮಾರ್ ಕಾಸನೂರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಜೆರಾಲ್ಡ್, ಲೋಕಾಯುಕ್ತ ಪೊಲೀಸ್ ನಿರೀಕ್ಷಕರುಗಳಾದ ಉಮೇಶ್, ಲೋಕೇಶ್, ರೂಪಶ್ರೀ, ರವಿಕುಮಾರ್ ಸಿಬ್ಬಂದಿಗಳಾದ ಗುರುಪ್ರಸಾದ್, ಮೋಹನ್ ಕುಮಾರ್, ಕಾಂತರಾಜು, ನೇತ್ರಾವತಿ ,ಶೇಖರ್, ಪರಶುರಾಮ್, ದಿನೇಶ್ ಸೇರಿದಂತೆ ಇತರರು ಇದ್ದರು.