ಮೈಸೂರು ಜಿಲ್ಲೆ ಹೆಗ್ಗಡದೇವನ ಕೋಟೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ರೈತ ಸಂಘಟನೆಯ ಮುಖಂಡರು , 39 ಇಲಾಖೆ ಅಧಿಕಾರಿಗಳು ಸೇರಿದಂತೆ ರೈತ ಸಭೆ ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಮಹಾದೇವ ನಾಯಕ ಮಾತನಾಡಿ ” ಕೃಷಿ ಇಲಾಖೆಯಿಂದ ಪ್ರತಿವರ್ಷ ರೈತರಿಗೆ ಪೈಪ್, ಸ್ಪಿನ್ಕ್ಲರ್, ಜೆಟ್, ಕಾಲರ್ ಇನ್ನಿತರೆ ರೈತೋಪಯೋಗಿ ಸಲಕರಣೆ ವಿತರಣೆ ಮಾಡುತ್ತಾ ಇದ್ದರು.ಆದ್ರೆ ಈಗ ಏಳು ವರ್ಷಕ್ಕೊಮ್ಮೆ ನೀಡುವುದಾಗಿ ಹೇಳಿದ್ದಾರೆ. ಇದು ಸರಿಯಲ್ಲ ಎರಡು ವರ್ಷಕ್ಕಾದರು ಕೊಡಬೇಕು.
ಮೈಸೂರಿನಿಂದ ಹೆಚ್ ಡಿ ಕೋಟೆ ಮಾರ್ಗದಲ್ಲಿ ಹುರ, ಮಾದಪುರ ಸೇರಿದಂತೆ ಹಲವೆಡೆ ಕೆ ಎಸ್ ಆರ್ ಟಿ ಸಿ ಬಸ್ ನಿಲುಗಡೆ ಇಲ್ಲ. ಅದಲ್ಲದೆ,ಗದ್ದಿಗೆಯಿಂದ ಕೋಟೆ ಕಡೆಗೆ ಗ್ರಾಮೀಣ ಬಸ್ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಆಗುತ್ತಿದೆ, ಶಾಲಾ ಕಾಲೇಜಿಗೆ ಸಮಯಕ್ಕೆ ತೆರಳಲು,ಮನೆಗೆ ಮರಳಿ ಬರಲು ತೊಂದರೆ ಅನುಭವಿಸುತ್ತಿದ್ದಾರೆ, ಇದನ್ನೆಲ್ಲಾ ಸರಿಪಡಿಸಬೇಕು.

ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಕೋಟೆ ತಾಲ್ಲೂಕಿನಲ್ಲಿ ಸರಿ ಸುಮಾರು 215 ಕೆರೆ ಕಟ್ಟೆ ಇದ್ದು, ಸರ್ವೆ ನಡೆಸಿ ಒತ್ತುವರಿ ಭೂಮಿ ಬಿಡಿಸಬೇಕು, ಕೆರೆ ಕಟ್ಟೆ ಉಳಿಸಬೇಕು. ಹೂಳು ತೆಗೆಸಿ ನೀರು ಶೇಖರಣೆಗೆ ಅವಕಾಶ ಕಲ್ಪಿಸಬೇಕು ” ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಮೈಸೂರು ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್ ಮಾತನಾಡಿ ” ತಾಲ್ಲೂಕಿನಲ್ಲಿ ರೈತರಿಗೆ ಸಾಕಷ್ಟು ಸಮಸ್ಯೆಗಳಿವೆ ಆ ನಿಟ್ಟಿನಲ್ಲಿ ಪ್ರಮುಖವಾದದ್ದು ಜಮೀನಿಗೆ ಹೋಗುವ ರಸ್ತೆ. ಸರ್ಕಾರದ ಸುತ್ತೋಲೆ ಕೂಡ ಇದೇ ಜಮೀನಿಗೆ ಹೋಗಲು, ಬರಲು ಬಂಡಿ ದಾರಿ
ಬಿಡಬೇಕು ಎನ್ನುವುದು. ಕೆಲವರು ದುಂಡಾವರ್ತನೆ ತೋರಿ ಬೇಲಿ ಹಾಕಿಕೊಂಡು ರೈತರು ತಮ್ಮ, ಹೊಲ, ಗದ್ದೆ, ತೋಟಗಳಿಗೆ ಹೋಗಲು ಆಗದಂತ ಪರಿಸ್ಥಿತಿ ಇದೆ. ಇದನ್ನ ತಹಶೀಲ್ದಾರ್ ಅವರು ಗಮನ ಹರಿಸಿ ರೈತರ ಜಮೀನಿಗೆ ರಸ್ತೆ ಬಿಡಿಸಿಕೊಡಬೇಕು.
ವಿದ್ಯುತ್ ಅಭಾವ, ರೈತರ ಪಂಪ್ ಸೆಟ್ ಗಳಿಗೆ ನಿಯಮಿತ ವಿದ್ಯುತ್ ನೀಡಬೇಕು, ವಿದ್ಯುತ್ ತಂತಿ ಬದಲಾಯಿಸಲು ಹೊರಟಿದ್ದಾರೆ. ಮುಂಚೆ ಏನು ಬಳಸುತ್ತಾ ಇದ್ದರು ಅದನ್ನೇ ಬಳಸಬೇಕು. ಆರ್ಥಿಕ ಹೊರೆಯಿಂದ ರೈತರನ್ನು ಪಾರು ಮಾಡಬೇಕು 25 ಕೆವಿ ಟಿಸಿಗೆ ನಾಲ್ಕು ಲೈನ್ ಎಳೆಯುತ್ತಿದ್ದಾರೆ.ಐದು ಲೈನ್ ಮಾಡಬೇಕು. ರಾಬರ್ಟ್ ಅನ್ನುವ ತಂತಿ ಹಾಕುವುದು ಬೇಡ ಖರ್ಚು ವೆಚ್ಚ ಹೊಂದಿಸಲು ಆಗಲ್ಲ ಈಗೇನಿದೆ ಅದನ್ನೇ ಯಥಾವತ್ತು ಬಳಸಿ ” ಎಂದರು.

ರೈತ ಮುಖಂಡರ ಅಹವಾಲು ಆಲಿಸಿದ ತಹಶೀಲ್ದಾರ್ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಆದಷ್ಟು ಬೇಗ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು, ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬೆಳಗಾವಿ ಜಿಲ್ಲೆಯ ಮರಾಠಿ ಪುಂಡರನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹ
ಹಿರಿಯ ಮುಖಂಡ ಸೋಗಳ್ಳಿ ಪುಟ್ಟಣ್ಣಯ್ಯ, ಗೌರವಾಧ್ಯಕ್ಷ ರವಿಕುಮಾರ್, ತಾಲ್ಲೂಕು ಕಾರ್ಯದರ್ಶಿ ಬಸವರಾಜು, ಟೌನ್ ಅಧ್ಯಕ್ಷ ವಿ ಪ್ರಸಾದ್, ಯುವ ಘಟಕ ತಾಲ್ಲೂಕು ಅಧ್ಯಕ್ಷ ನಂದೀಶ್, ಸರಗೂರು ತಾಲ್ಲೂಕು ಅಧ್ಯಕ್ಷ ಚೆನ್ನನಾಯಕ, ಮಹಿಳಾ ಘಟಕ ಅಧ್ಯಕ್ಷೆ ದೇವಮ್ಮ ಸೇರಿದಂತೆ ರೈತ ಸಂಘಟನೆಯ ನೂರಾರು ಕಾರ್ಯಕರ್ತರು, ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.
