ಭಗತ್ ಸಿಂಗ್ , ಸುಖದೇವ್ ಹಾಗೂ ರಾಜಗುರು ಅವರ ಹುತಾತ್ಮ ದಿನದಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ‘ ಸರ್ಕಾರಿ ಶಾಲೆಗಳನ್ನು ಉಳಿಸುವ ಸಂಕಲ್ಪ ‘ ಮಾಡಿ ಮೈಸೂರಿನ ಮಹಾರಾಜ ಪೆವಿಲಿಯನ್ ಮೈದಾನ, ಕುಕ್ಕರಹಳ್ಳಿ ಪಾರ್ಕ್ ಹಾಗೂ ಜೆಪಿ ನಗರದ ಪುಟ್ಟರಾಜು ಗವಾಯಿ ಕ್ರೀಡಾಂಗಣದಲ್ಲಿ ಅರಿವು ಮೂಡಿಸುವುದರ ಮೂಲಕ ಆಚರಣೆ ಮಾಡಿದರು.
ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ ಮಾತನಾಡಿ ” ಭಗತ್ ಸಿಂಗ್ ಕ್ರಾಂತಿ ಮತ್ತು ಸ್ವಾತಂತ್ರ್ಯದ ಬಗೆಗಿನ ತಮ್ಮ ವಿಚಾರವನ್ನು ಎಷ್ಟು ಪ್ರಖರವಾಗಿ ಹರಡಿದ್ದರೆಂದರೆ ಸಾವಿರಾರು ಜನ ಅವರ ವಿಚಾರಗಳನ್ನು ಈಡೇರಿಸಲು ಪ್ರಾಣ ತ್ಯಾಗಕ್ಕೆ ಸಿದ್ಧರಾಗಿ ಬೀದಿಗಿಳಿದರು. ಅವರ ಪ್ರಕಾರ ಸ್ವಾತಂತ್ರ್ಯದ ಪರಿಕಲ್ಪನೆ ಹೀಗಿತ್ತು ಕೇವಲ ಸ್ವಾತಂತ್ರ್ಯ ಪಡೆಯುವುದು ನಮ್ಮ ಉದ್ದೇಶವಲ್ಲ. ಬ್ರಿಟೀಷರಿಂದ ಪಡೆದ ಸ್ವಾತಂತ್ರ್ಯ ನಮ್ಮ ದೇಶದ ಕೆಲವೇ ಕೆಲವು ಶ್ರೀಮಂತ ವರ್ಗಕ್ಕೆ ವರ್ಗಾವಣೆಯಾದರೆ, ಅದು ನಿಜವಾದ ಸ್ವಾತಂತ್ರ್ಯವಾದೀತೆ? ಹೀಗೆ ಸಿಗುವ ಸ್ವಾತಂತ್ರ್ಯ ನಮ್ಮ ದೇಶದ ಸಾಮಾನ್ಯ ಜನರ ಬದುಕಿನಲ್ಲಿ ಏನಾದರೂ ಬದಲಾವಣೆಯನ್ನು ತರಲು ಸಾಧ್ಯವೇ? ದೇಶದ ರೈತರು, ಬಡ ಕೂಲಿ-ಕಾರ್ಮಿಕರ ಜೀವನ ಉತ್ತಮವಾಗುವುದೇ? ಸ್ವಾತಂತ್ರ್ಯ ಪಡೆಯುವುದು ಮಾತ್ರವೇ ನಮ್ಮ ಉದ್ದೇಶವಲ್ಲ, ಅದು ಮೊದಲ ಹೆಜ್ಜೆ ಮಾತ್ರ! ನಮ್ಮ ಗುರಿಯಿರುವುದು ಒಂದು ಉನ್ನತವಾದ ರಾಷ್ಟ್ರವನ್ನು ನಿರ್ಮಾಣ ಮಾಡುವುದು.

ಯಾವ ರಾಷ್ಟ್ರ ತನ್ನೆಲ್ಲ ಜನರಿಗೆ ಸಮಾನವಾಗಿ ಬದುಕುವ ಹಕ್ಕನ್ನು ನೀಡುತ್ತದೆಯೋ, ಯಾವ ರಾಷ್ಟ್ರ ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವುದಿಲ್ಲವೋ, ಯಾವ ರಾಷ್ಟ್ರ ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಕೊನೆಗಾಣಿಸುವುದೋ ಅಂತಹ ರಾಷ್ಟ್ರ. ಶಿಕ್ಷಣದ ವ್ಯಾಪಾರಿಕರಣ , ನಿರುದ್ಯೋಗ ,ಹಸಿವು, ಬಡತನ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮುಂತಾದ ಸಮಸ್ಯೆಗಳನ್ನು ತಡೆಯಲು ಹಾಗೂ ಶಿಕ್ಷಣ,ಮಾನವತೆ, ಸಂಸ್ಕೃತಿ ಉಳಿಸಲು ,ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಭಗತ್ ಸಿಂಗ್ ಅವರ ವಿಚಾರಗಳಿಂದ ಸ್ಫೂರ್ತಿ ಪಡೆದು ಮುಂದೆ ಬರಬೇಕೆಂದು ” ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ‘ ಲೈನ್ ಮನೆ ‘ ಜೀತ ಇಂದಿಗೂ ಜೀವಂತ

ಪದಾಧಿಕಾರಿಗಳಾದ ಚಂದನ, ಹೇಮಾ,ಚಂದ್ರಿಕಾ, ಅಂಜಲಿ, ಅಭಿಷೇಕ್, ದಿಶಾ, ಬೀರಪ್ಪ ,ನಂದೀಶ್, ಅಪೂರ್ವ ಇದ್ದರು.