ಮೈಸೂರು ರಾಮಕೃಷ್ಣ ನಗರದ 58 ನೇ ವಾರ್ಡಿನ ಸಾಯಿಬಾಬಾ ವೃತ್ತದ ಹತ್ತಿರ ರಸ್ತೆ ದುರಸ್ತಿ, ಕಾಮಗಾರಿ ವಿಳಂಬವಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಸ್ಥಳೀಯರು ಹಾಗೂ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು ಮಹಾ ನಗರ ಪಾಲಿಕೆಯಿಂದ ಒಳಚರಂಡಿ ಕಾಮಗಾರಿ ಸಾಯಿಬಾಬಾ ವೃತ್ತದ ಮುಖ್ಯರಸ್ತೆಯಲ್ಲಿ 6 ತಿಂಗಳಿಂದ ನಡೆದಿದ್ದು ಕೆಲಸ ಪೂರ್ಣಗೊಂಡಿದೆ. ಒಳಚರಂಡಿ ಮಾಡಲು ಅಗೆದಿದ್ದ ರಸ್ತೆಯನ್ನು ಇದುವರೆಗೆ ಡಾಂಬರ್ ಹಾಕದೆ
ಹಾಗೆ ಬಿಟ್ಟಿದ್ದಾರೆ.ಒಳಚರಂಡಿ ಕಾಮಗಾರಿ ನಡೆಸಲು ವಿಳಂಬ ಮಾಡಿದ್ದು ಅಲ್ಲದೆ ರಸ್ತೆ ಸರಿ ಪಡಿಸದೆ ಸುತ್ತಲು ಗುಂಡಿ ಬಿದ್ದು
ಓಡಾಡಲು ಆಗದಂತೆ ಆಗಿದೆ.
ಸುತ್ತಲು ದೂಳು, ವಾಹನ ಸವಾರರಿಗೆ ಗುಂಡಿಯಿಂದಾಗಿ ಕಿರಿಕಿರಿ, ರಸ್ತೆ ತುಂಬೆಲ್ಲ ಬರಿ ಗುಂಡಿಗಳೇ ಇದ್ದಾವೆ. ಅಕ್ಕ ಪಕ್ಕದಲ್ಲಿ ನೃಪತುಂಗ ಕನ್ನಡ ಶಾಲೆ, ವಿಶ್ವ ಮಾನವ ಶಾಲೆ, ರಾಮಕೃಷ್ಣ ವಿದ್ಯಾ ಕೇಂದ್ರ, ಸುಯೋಗ್ ಆಸ್ಪತ್ರೆ, ಬಾಲಕಿಯರ ವಸತಿ, ದೇವಸ್ಥಾನವಿದೆ.ದಿನನಿತ್ಯ ವಿದ್ಯಾರ್ಥಿಗಳು, ಮಕ್ಕಳು, ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಓಡಾಡಲು.
ಜನರು ಓಡಾಡುವಾಗ ಧೂಳಿನಿಂದ ಉಸಿರುಗಟ್ಟಿ ಕಾಯಿಲೆಗಳು ಬರುವ ಪರಿಸ್ಥಿತಿ.ಹಿರಿಯ ನಾಗರೀಕರು ಪಾರ್ಕಿನಲ್ಲಿ ಓಡಾಡಲು ಕೂಡ ತೊಂದರೆ ಅನುಭವಿಸುತ್ತಿದ್ದಾರೆ.ಇದರಿಂದಾಗಿ ಸ್ಥಳೀಯರು, ಹಿರಿಯ ನಾಗರಿಕರು ಎಷ್ಟೇ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ.
ಈ ಸುದ್ದಿ ಓದಿದ್ದೀರಾ? ಕೊಡಗು | ಭಯದಲ್ಲೇ ದಿನ ದೂಡುವ ಆದಿವಾಸಿಗಳು; ಪರ್ಯಾಯ ವ್ಯವಸ್ಥೆಗೆ ಮನವಿ
ಆದುದರಿಂದ ಇಂದು ಸ್ಥಳೀಯರು, ಪೋಷಕರು, ಹಿರಿಯ ನಾಗರೀಕರು, ಶಾಲಾ ಮಕ್ಕಳು ಸೇರಿ ಪ್ರತಿಭಟನೆ ನಡೆಸಿದ್ದು ಸ್ಥಳಕ್ಕೆ ದೌಡಾಯಿಸಿದ ಪಾಲಿಕೆ ಅಧಿಕಾರಿಗಳು ಮನವಿ ಸ್ವೀಕರಿಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
