ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸ್ನಾತಕೋತ್ತರ ವಿಭಾಗದಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿನಿಯರ ವಿದ್ಯಾರ್ಥಿ ವೇತನ ಸಮಸ್ಯೆ ಮತ್ತು ಶುಲ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಎಐಡಿಎಸ್‌ಒ ಮುಖಂಡರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ಪ್ರತಿಭಟನಾಕಾರರು ಕಾಲೇಜಿನ ಪ್ರಾಂಶುಪಾಲರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಎಸ್‌ಸಿ , ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಶುಲ್ಕದ ಬಗ್ಗೆ ಯಾವುದೇ ಸಂಪೂರ್ಣ ಮಾಹಿತಿ ಇಲ್ಲ. ವಿದ್ಯಾರ್ಥಿಗಳು ಕಾಲೇಜಿಗೆ ಸೇರಬೇಕಾದರೆ 600 ರೂ.ಗಳನ್ನು ತೆಗೆದುಕೊಂಡು ದಾಖಲಾತಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಸಂಪೂರ್ಣ ವಿದ್ಯಾರ್ಥಿ ವೇತನ ಬಂದಿಲ್ಲ. ಪ್ರಥಮ ಮತ್ತು ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕ್ರಮವಾಗಿ 2000, 4000 ರೂ. ಮಾತ್ರವೇ ನೀಡಲಾಗಿದೆ. ಅಲ್ಲದೆ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ 11,000 ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ 19,498 ದಿಢೀರನೆ ಕಾಲೇಜಿಗೆ ಶುಲ್ಕವನ್ನು ಕಟ್ಟಬೇಕೆಂದು ಒತ್ತಾಯಿಸಲಾಗಿದೆ. ಈ ಕ್ರಮ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ದ್ವಿತೀಯ ವರ್ಷದ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಒಂದನೇ ಸೆಮಿಸ್ಟರ್ ಮತ್ತು ಎರಡನೇ ಸೆಮಿಸ್ಟರ್ ಹಾಗೂ ಮೂರನೇ ಸೆಮಿಸ್ಟರ್ ಓದುವಾಗ ಯಾವುದೇ ರೀತಿ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಂಡಿಲ್ಲ. ಆದರೆ, ಈಗ ಏಕಾಏಕಿ ಮೂರು ಸೆಮಿಸ್ಟರ್‌ಗಳ ಪರೀಕ್ಷಾ ಶುಲ್ಕವನ್ನು ಕಟ್ಟಬೇಕೆಂದು ಒತ್ತಾಯಿಸಲಾಗಿದೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಪರೀಕ್ಷಾ ಶುಲ್ಕವನ್ನು ಕಟ್ಟುವಂತೆ ತೋರಿಸುತ್ತಿಲ್ಲ. ಇದು ವಿದ್ಯಾರ್ಥಿಗಳಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ” ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆಯಲ್ಲಿ ಚಂದ್ರಕಲಾ, ನಿತಿನ್, ಸ್ವಾತಿ ಹಾಗೂ ಮಹಾರಾಣಿ ಸ್ನಾತಕೋತ್ತರ ಕಲಾ ವಿಭಾಗದ ನೂರಾರು ವಿದ್ಯಾರ್ಥಿಗಳು ಇದ್ದರು.