ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಜನತಾದಳ (ಯು) ಮತ್ತು ತೆಲುಗುದೇಶಂ ಪಕ್ಷಗಳು ಸೇರಿದಂತೆ ದೇಶದ ಎಲ್ಲ ಜನತೆ ತಿರಸ್ಕರಿಸಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದರು.
ಮೈಸೂರು ನಗರದ ಎಫ್‌ಟಿಎಸ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ವಕ್ಫ್ ತಿದ್ದುಪಡಿ ಮಸೂದೆಯ ಪ್ರತಿಯನ್ನು ಹರಿದುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
‘ದೇಶಾದ್ಯಂತ ಇರುವ ಎಲ್ಲ ವಕ್ಫ್ ಆಸ್ತಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದ ಆಸ್ತಿಗಳಾಗಿವೆ. ಇವು ಯಾವುದೇ ರಾಜ್ಯಗಳ ಅಥವಾ ಕೇಂದ್ರ ಸರ್ಕಾರದ ಆಸ್ತಿಯಲ್ಲ, ಬಡ ಮುಸ್ಲಿಂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಳಿಗೆ ಇದೇ ಸಮುದಾಯದ ಮಹನೀಯರು ದಾನದ ರೂಪದಲ್ಲಿ ನೀಡಿದ ಆಸ್ತಿಯಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಕೇವಲ ತನ್ನ ಮುಸ್ಲಿಂ ದ್ವೇಷದಿಂದ ವಕ್ಫ್ ತಿದ್ದುಪಡಿಗೆ ಮುಂದಾಗಿದೆ. ಈ ತಿದ್ದುಪಡಿಯ ಪ್ರಕಾರ ಇಬ್ಬರು ಮುಸ್ಲೀಮೇತರರು ವಕ್ಫ್ ಮಂಡಳಿಯ ಸದಸ್ಯರಾಗುತ್ತಾರೆ. ಇದು ಹೇಗೆ ಸಾಧ್ಯ, ಹಾಗಾದರೆ ನೀವು ಮೈಸೂರಿನ ಚಾಮುಂಡಿಬೆಟ್ಟದ ಸಮಿತಿಯಲ್ಲಿ ಇಬ್ಬರು ಮುಸಲ್ಮಾನರಿಗೆ ಸದಸ್ಯರಾಗಲು ಅವಕಾಶ ನೀಡುವಿರಾ’ ಎಂದು ಅಬ್ದುಲ್ ಮಜೀದ್ ಪ್ರಶ್ನಿಸಿದರು.

ದೇಶದಲ್ಲಿ ಯಾವುದೇ ಕಾನೂನು ಜಾರಿ ಆಗಬೇಕಾದರೆ ಅದು ಜನರ ಬೇಡಿಕೆಯಾಗಿರಬೇಕು. ವಕ್ಫ್ ಕಾನೂನು ತಿದ್ದುಪಡಿ ಮಾಡುವಂತೆ ದೇಶದ ಯಾವೊಬ್ಬ ಮುಸಲ್ಮಾನರಾಗಲೀ, ಮುಸ್ಲಿಂ ಸಂಘ ಸಂಸ್ಥೆಗಳಾಗಲೀ ಅಥವಾ ಮುಸ್ಲಿಂ ಸಂಸದರು, ಶಾಸಕರು, ರಾಜ್ಯಸಭಾ ಸದಸ್ಯರಾಗಲಿ ಕೇಳಿಲ್ಲ. ಅಲ್ಲದೇ, ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಸುನ್ನಿ ವಕ್ಫ್ ಬೋರ್ಡ್, ಶಿಯಾ ವಕ್ಫ್ ಬೋರ್ಡ್ ಸಹ ಈ ತಿದ್ದುಪಡಿಗೆ ಬೇಡಿಕೆ ಸಲ್ಲಿಸಿಲ್ಲ, ಹಾಗಾದಾಗ ನೀವು ಯಾವ ಆಧಾರದಲ್ಲಿ ಈ ತಿದ್ದುಪಡಿ ಮಾಡಲು ಮುಂದಾಗಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.
‘ನಿಮ್ಮ ಏಕಪಕ್ಷಿಯ ನಿರ್ಧಾರ ಈ ಪ್ರಜಾಪ್ರಭುತ್ವದಲ್ಲಿ ಎಷ್ಟು ಸರಿ. ಬಿಜೆಪಿ ಸರ್ಕಾರದ ಪಾಲುದಾರರಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರು ಯಾವುದೇ ಕಾರಣಕ್ಕೂ ಈ ಮಸೂದೆ ಜಾರಿಯಾಗಲು ಬಿಡಬಾರದು, ಆಂಧ್ರ ಪ್ರದೇಶದಲ್ಲಿ ಮುಸ್ಲಿಂ ಮತ ಶೇ.10ರಷ್ಟಿದೆ. ಆದರೆ, ಬಿಜೆಪಿಯ ಓಟು ಅಲ್ಲಿ ಕೇವಲ 1 ಪರ್ಸೆಂಟ್ ಮಾತ್ರವಿದೆ. ಅದೇ ರೀತಿ ಬಿಹಾರದಲ್ಲಿ ಮುಸ್ಲಿಂ ಓಟು ಶೇ. 16% ಪರ್ಸೆಂಟ್ ಇದ್ದು, ಒಂದು ವೇಳೆ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಈ ಮಸೂದೆಯನ್ನು ಬೆಂಬಲಿಸಿದರೆ ಮುಂದಿನ ಚುನಾವಣೆಯಲ್ಲಿ ನೀವು ಮುಸಲ್ಮಾನರ ಒಂದೇ ಒಂದು ಓಟು ಪಡೆಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ಸಹ ಅಬ್ದುಲ್ ಮಜೀದ್ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ರಾಜ್ಯ ರೈತ ಸಂಘ ಗುಡುಗು
ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲಾಧ್ಯಕ್ಷ ರಫತ್ ಖಾನ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಿರ್ದೋಸ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ರಾಜ್ಯ ಸಮಿತಿ ಸದಸ್ಯರಾದ ಅಮ್ಜದ್ ಖಾನ್, ಜಿಲ್ಲಾ ಉಪಾಧ್ಯಕ್ಷರಾದ ಸಫಿ ಉಲ್ಲಾ,ಎಸ್ ಸ್ವಾಮಿ,ಜಿಲ್ಲಾ ಕಾರ್ಯದರ್ಶಿಗಳಾದ ಫರ್ದಿನ್, ಆಯೇಷಾ ಝಬಿ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.

