ವರುಣಾ ಪಟ್ಟಣದ ಅಂಬೇಡ್ಕರ್ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಗಾಗಿ ಪೌರಕಾರ್ಮಿಕರು ಗುಂಡಿ ಅಗೆಯುತ್ತಿದ್ದ ವೇಳೆ ಜೈನ ಧರ್ಮಕ್ಕೆ ಸೇರಿದ ಮೂರು ಶಿಲ್ಪಗಳು ಪತ್ತೆಯಾಗಿವೆ.
ಹತ್ತಿರದಲ್ಲಿ ಯಾವುದೇ ಶಾಸನಗಳಿಲ್ಲ. ಆದ್ದರಿಂದ ಇದನ್ನು ಗುರುತಿಸುವ ಕಾರ್ಯವು ತಜ್ಞರಿಗೆ ಹೆಚ್ಚು ಸವಾಲಾಗಿದ್ದು, ಮೂರು ಪುರಾತತ್ವ ಕಲಾಕೃತಿಗಳ ಹೆಚ್ಚಿನ ತನಿಖೆಗಾಗಿ ನಗರದ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿರುವುದಾಗಿ ವರದಿಯಾಗಿದೆ.
“ಜೆಸಿಬಿ ಬಳಸಿ ಭೂಮಿಯನ್ನು ಅಗೆಯುವಾಗ, ಮೂರು ವಸ್ತುಗಳು ಸುಮಾರು ಮೂರು ಅಡಿ ಆಳದಲ್ಲಿ ಕಂಡುಬಂದಿವೆ. ಕೂಡಲೇ ಎಲ್ಲ ಉತ್ಖನನ ಕಾರ್ಯವನ್ನು ನಿಲ್ಲಿಸಲಾಯಿತು. ಬಳಿಕ ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಈ ಶಿಲ್ಪಗಳು ಕ್ರಿ.ಶ 11ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಗಂಗ ಮತ್ತು ಹೊಯ್ಸಳ ರಾಜವಂಶಗಳ ಕಾಲದಲ್ಲಿ, ವರುಣ, ವರಕೋಡು ಮತ್ತು ವಾಜಮಂಗಲ ಮೈಸೂರಿನ ಪ್ರಮುಖ ಜೈನ ಕೇಂದ್ರಗಳಾಗಿದ್ದವು. ಈ ಮೂರು ವಿಗ್ರಹಗಳು ಆ ಅವಧಿಗೆ ಸೇರಿದವುಗಳಾಗಿವೆ” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ನವಲಿ ಜಲಾಶಯ ನಿರ್ಮಾಣಕ್ಕೆ ಆಂಧ್ರ, ತೆಲಂಗಾಣದೊಂದಿಗೆ ಚರ್ಚೆ: ಡಿಸಿಎಂ ಡಿ ಕೆ ಶಿವುಕುಮಾರ್
ಕರ್ನಾಟಕ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕಿ ಮಂಜುಳಾ ಸಿ ಎನ್ ಅವರು ಸ್ಥಳಕ್ಕೆ ಭೇಟಿ ನೀಡಿ, ಶಿಲ್ಪಗಳ ಸಂರಕ್ಷಣೆಗಾಗಿ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೂರು ವಿಗ್ರಹಗಳಲ್ಲಿ ಒಂದು ಕೂಷ್ಮಾಂಡಿನಿ ದೇವಿಯದ್ದಾಗಿದ್ದರೆ, ಇತರ ಎರಡು ಜೈನ ತೀರ್ಥಂಕರರದ್ದಾಗಿವೆ. ಒಂದು ವಿಗ್ರಹದ ಕಾಲುಗಳು ಮತ್ತು ತೋಳುಗಳು ಮುರಿದಿರುವುದು ಕಂಡುಬಂದರೆ, ಒಂದು ವಿಗ್ರಹವು ಕೇವಲ ತಲೆಯನ್ನು ಒಳಗೊಂಡಿದೆ.