ನವೆಂಬರ್ ತಿಂಗಳಿನಲ್ಲಿ ‘ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ’ ನಡೆಸಲು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಅಹಿಂದ ಮತ್ತು ಶೋಷಿತ ವರ್ಗಗಳ ನಾಯಕರು, ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿ ಸಭೆ ತೀರ್ಮಾನಿವೆ.
ಮೈಸೂರು ನಗರದ ಯಾದವ ಸಮುದಾಯದ ಭವನದಲ್ಲಿ ಮೈಸೂರು, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ಸಂಘಟನೆಗಳು ಸಭೆಯಲ್ಲಿ ಚರ್ಚಿಸಿ, ನಾಲ್ಕು ದಶಕಗಳ ಕಾಲ ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆಗೆ ಇಳಿದಿರುವ ಬಿಜೆಪಿ-ಜೆಡಿಎಸ್ ಪಕ್ಷಗಳ ಕಾರ್ಯಚಟುವಟಿಕೆ ಖಂಡಿಸಿ ನವೆಂಬರ್ ತಿಂಗಳಿನಲ್ಲಿ ಮೈಸೂರು ನಗರದ ಮಹಾರಾಜ ಕಾಲೇಜು ಮೈದಾದದಲ್ಲಿ `ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ’ ನಡೆಸಲು ನಿರ್ಧಾರ ಕೈಗೊಂಡವು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ ಸುಬ್ರಹ್ಮಣ್ಯ ಮಾತನಾಡಿ, “ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರುವ ಸಿದ್ದರಾಮಯ್ಯನವರ ವಿರುದ್ಧ ವಿಪಕ್ಷಗಳು ಷಡ್ಯಂತ್ರ ನಡೆಸಿ ಮುಡಾ ಹಗರಣದ ನೆಪದಲ್ಲಿ ಮಸಿ ಬಳಿಯಲು ಯತ್ನಿಸುತ್ತಿವೆ. ಈ ನಾಡಿನ ಶೋಷಿತರು, ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಹಾಗೂ ಎಲ್ಲ ವರ್ಗಗಳ ಬಡವರ ಪರ ನಿಲುವು ತಳೆಯುತ್ತಿರುವುದನ್ನು ಸಹಿಸದ ವಿಪಕ್ಷಗಳ ಪಿತೂರಿಗೆ ನಾಡಿನ ಜನತೆ ಮನ್ನಣೆ ನೀಡಬಾರದು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ʼಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶ’ ನಡೆಸಲು ನಿರ್ಧರಿಸಿದ್ದೇವೆ. ನಾಡಿನ ಪ್ರಜ್ಞಾವಂತ ಜನತೆ ಬೆಂಬಲ ನೀಡಬೇಕು” ಎಂದರು.
ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮಾತನಾಡಿ, “ಕೇರಳದ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಯವರು ನಾಮಪತ್ರ ಸಲ್ಲಿಸುವ ವೇಳೆ ಸಿದ್ದರಾಮಯ್ಯಗೆ ಸಿಕ್ಕ ಬಹುಪಾರಕ್ ನಾಡಿನ ಆತ್ಮಸಾಕ್ಷಿಯಂತೆ ಕಂಡಿತು. ಇಂತಹ ನಾಯಕನನ್ನು ಅರಿಯುವಲ್ಲಿ ನಾಡಿನ ಜನತೆ ಎಡವಿದ್ದಾರೆ. ಆದರೂ ಶೋಷಿತರು, ಅಹಿಂದ ವರ್ಗ ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಳ್ಳಲು ಹಿಂದೆ ಬಿದ್ದಿರುವುದು ದುರಾದೃಷ್ಟಕರ” ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ ಬಿ ಜೆ ವಿಜಯಕುಮಾರ್ ಮಾತನಾಡಿ, “ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲದ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚಿಸಿ ಲಕ್ಷ ಲಕ್ಷ ಜನರು ಸಮಾವೇಶದಲ್ಲಿ ಭಾಗಿಯಾಗಿಸಲು ಕ್ರಮ ವಹಿಸುತ್ತೇವೆ. ಎರಡನೇ ಸಿದ್ದರಾಮೋತ್ಸವದಂತೆ ಈ ಸಮಾವೇಶ ನಡೆಸಬೇಕಿದೆ” ಎಂದು ಕರೆ ನೀಡಿದರು.
ಇದೇ ವೇಳೆ ಕರ್ನಾಟಕ ವಕೀಲರ ಜಾಗೃತ ವೇದಿಕೆ ಪ್ರಕಟಿಸಿರುವ `ಮುಡಾ ಪ್ರಕರಣ ಸತ್ಯಾಸತ್ಯತೆ’ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮರಕುಂಬಿ ಪ್ರಕರಣ | ಊರಿಗೆ ಊರೇ ನೀರವ ಮೌನ; ಮಾತನಾಡಲೂ ಹೆದರುತ್ತಿರುವ ಗ್ರಾಮಸ್ಥರು
ಎಸ್ ಮಾದೇಗೌಡ ಮಾತನಾಡಿ, “ನಾವು ಈ ಮೊದಲು ಸಿದ್ದರಾಮಯ್ಯನವರ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿದ್ದೆವು. ಈಗ ಅವರ ವ್ಯಕ್ತಿತ್ವ ನೋಡಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇವೆ. ಅವರ ವಿರುದ್ಧ ನಡೆಯುತ್ತಿರುವ ಪಿತೂರಿಯನ್ನು ಹಣಿಯಬೇಕಿದೆ. ಯಾವುದೇ ಒಂದು ಜಾತಿಯಿಂದ ರಾಜಕಾರಣ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸರ್ವಜನಾಂಗದ ನಾಯಕ” ಎಂದರು.
ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಬಸವಣ್ಣ, ಸುಧಾ ಮಹದೇವಯ್ಯ, ಮಾದೇಗೌಡ, ದ್ಯಾವಪ್ಪನಾಯಕ, ರಾಜೇಶ್ವರಿ, ಜಿ ವಿ ಸೀತಾರಾಮ್, ವಿ ರಾಮಸ್ವಾಮಿ, ಡಿ ನಾಗಭೂಷಣ್, ಸುರೇಶ್, ಶಿವಪ್ಪ, ಆನಂದ್, ಸುನಿಲ್, ಬಸವರಾಜ್, ರಾಜು, ರಾಜೇಶ್, ಮಾದೇವ್, ಪುನೀತ್, ಶಿವಕುಮಾರ್, ಲೋಕೇಶ್, ಸಿ ಆರ್ ರಾಮೇಗೌಡ, ಪುಟ್ಟನಾಯಕ, ಅಶೋಕ್, ಬಸಪ್ಪ, ವಕೀಲ ಪುಟ್ಟ ಸಿದ್ದೇಗೌಡ, ವಿಜಯಕುಮಾರ್, ಪುಟ್ಟಮಲ್ಲಯ್ಯ, ಉದಯ್ ಕುಮಾರ್, ಬಸವಣ್ಣ, ಮಧು, ಮಹದೇವ, ಕಮಲ, ಶಾಂತಾ, ರಾಜೀವ್, ಪುಟ್ನಂಜ, ರವಿ, ಹೇಮಲತಾ, ಭಾಗ್ಯಮ್ಮ, ಕುಮಾರ್, ಮಾದೇಗೌಡ, ಮಂಜು, ಪುಟ್ಟಯ್ಯ ಸೇರಿದಂತೆ ಹಲವು ಮುಖಂಡರು ಇದ್ದರು.