ದಲಿತ ಸಾಹಿತ್ಯ ಪರಿಷತ್ ವತಿಯಿಂದ ಬೆಳ್ಳಿಹಬ್ಬ ಸಂಭ್ರಮದ ಅಂಗವಾಗಿ ಜುಲೈ 29 ಮತ್ತು 30ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಸಂಯೋಜಕ ಡಾ. ಚಂದ್ರಗುಪ್ತ ತಿಳಿಸಿದರು.
ಮೈಸೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸದ್ಯದ ಸಂದಿಗ್ಧ ಪರಿಸ್ಥಿತಿಯಲ್ಲಿ ದಲಿತ ಪ್ರಜ್ಞೆ, ಸಂವೇದನೆ ಹೊಂದಿದ ಲೇಖಕರಿಗೆ ಅವಕಾಶ ಇಲ್ಲದಂತಾಗಿದೆ. ಹಾಗಾಗಿ ದಮನಿತ ಹಾಗೂ ಶೋಷಿತರಿಗೆ ತುಡಿಯುವ, ದಲಿತ ಸಂವೇದನೆಯ ಲೇಖಕರಿಗೆ ಅವಕಾಶ ಕಲ್ಪಿಸಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ” ಎಂದರು.
“ಎರಡು ದಿನ ಸಮ್ಮೇಳನ ನಡೆಯಲಿದ್ದು, ಪ್ರಬುದ್ಧ ಭಾರತ, ಸಂವಿಧಾನ ರಕ್ಷಣೆ, ಮೀಸಲಾತಿ ವಿಷಯದ ಕುರಿತು ಸಂವಾದ ಹಾಗೂ ಚರ್ಚೆಗಳು ನಡೆಯಲಿವೆ. ಸಮತಾಗೀತೆ, ಸಂವಿಧಾನ ಪ್ರಸ್ತಾವನೆ ಓದು, ಬುದ್ಧ ಚಿಂತನೆಗಳ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಗುವುದು. ಸಮ್ಮೇಳನದಲ್ಲಿ ಎರಡು ಕವಿಗೋಷ್ಠಿ, ಬೆಳ್ಳಿ ಸಂಭ್ರಮ ಪ್ರಶಸ್ತಿ ಸಮಾರಂಭ, ಗೌರವ ಸಮಾರಂಭ, ಪುಸ್ತಕಗಳ ಬಿಡುಗಡೆ ನಡೆಯಲಿದೆ” ಎಂದರು.

“ಕಾಂಗ್ರೆಸ್ನ ಕೆಪಿಸಿಸಿ ಕಾರ್ಯದರ್ಶಿ ಹಾಗೂ ನಾಗವಾಲ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸಿ ನರೇಂದ್ರ ನಾಗವಾಲ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿದ್ದು, ರಾಜ್ಯ ಸಮಿತಿಯು ಇವರನ್ನು ಗೌರವ ಪ್ರಶಸ್ತಿಗೆ ಅಯ್ಕೆ ಮಾಡಿದೆ. ಹಾಗೆಯೇ ಯುವ ಬರಹಗಾರ, ದಲಿತ ಚಿಂತಕ ರವೀಂದ್ರ ಹಾರೋಹಳ್ಳಿ ಅವರನ್ನೂ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ರಾಗಿ ಲಕ್ಷ್ಮಣಯ್ಯ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ: ಸಚಿವ ಚಲುವರಾಯಸ್ವಾಮಿ
“ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ಅವರ ನೇತೃತ್ವದಲ್ಲಿ ಈ ಸಮ್ಮೇಳನ ನಡೆಯುತ್ತಿದ್ದು, ದಲಿತ ಸಾಹಿತ್ಯ ಸಂಪದ ಕೃತಿಯನ್ನು ಬಿಡುಗಡೆ ಮಾಡಲು ಚಿಂತಿಸಲಾಗಿದೆ. ಅದುದರಿಂದ ದಲಿತ ಲೇಖಕರು, ಚಳವಳಿಗಾರರು, ಚಿಂತಕರು, ವಿಚಾರವಾದಿಗಳು, ವಿಮರ್ಶಕರು, ಪ್ರಗತಿಪರರು, ಸಂಶೋಧಕರು, ವಿದ್ಯಾರ್ಥಿಗಳು ಸೇರಿದಂತೆ ಇತರರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ಕವಿಗೋಷ್ಠಿಯಲ್ಲಿ ಭಾಗವಹಿಸುವ ಜಿಲ್ಲಾ ಕವಿಗಳು ತಾವು ರಚಿಸಿರುವ ಕವನದ ಪ್ರತಿಯನ್ನು ಸಮಿತಿಯ ಸಂಯೋಜಕ ಡಾ. ಚಂದ್ರಗುಪ್ತ (9591799053), ಅಧ್ಯಕ್ಷ ಡಾ.ರಂಗಸ್ವಾಮಿ ಕಾಳಿಹುಂಡಿ(8217656459), ಕಾರ್ಯದರ್ಶಿ ಡಾ.ಮಂಜು ಟಿ, ಸತ್ತಿಗೆಹುಂಡಿ (7353344365) ಅವರ ವಾಟ್ಸಪ್ ನಂಬರ್ ಹಾಗೂ ಅಥವಾ ಇಮೇಲ್ cgupta877@gmail.com, rangaswamykalihundi@gmail.com, manjusghundi@gmail.com ಈ ವಿಳಾಸಕ್ಕೆ 3ಡಿ ಕವನಗಳನ್ನು ಕಳುಹಿಸಲು ಕೋರಿದೆ” ಎಂದರು.
ಸುದ್ದಿಗೋಷ್ಠಿಯ್ಲಿ ಜಿಲ್ಲಾ ಉಪಾಧ್ಯಕ್ಷೆ ಜಯಶೀಲ, ಜಿಲ್ಲಾ ಕಾರ್ಯದರ್ಶಿ ಮಂಜು ಸತ್ತಿಗೆ ಉಂಡಿ, ರಂಗಸ್ವಾಮಿ ಕಾಳಿಹುಂಡಿ, ಖಜಾಂಚಿ ಡಾ. ಶಿವಶಂಕರ್ ಬಿ ಇದ್ದರು.