ಕೊಡಗು ಜಿಲ್ಲೆಯ ವಿರಾಜಪೇಟೆ ಬಳಿಯಿರುವ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮೀತಲತಂಡ ಎಂ ಇಸ್ಮಾಯಿಲ್ ಅವರಿಗೆ ‘ಶ್ರೀಕೃಷ್ಣರಾಜ ಒಡೆಯರ್ ಸದ್ಭಾವನಾ ಪ್ರಶಸ್ತಿʼ ಪ್ರದಾನ ಮಾಡಲಾಯಿತು.
ಧಾರವಾಡದ ಚೇತನ ಫೌಂಡೇಶನ್ ಕರ್ನಾಟಕದ ವತಿಯಿಂದ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಶೈಕ್ಷಣಿಕ ಉತ್ತೇಜನಕ್ಕಾಗಿ ಶ್ರಮಿಸಿದವರಿಗೆ ನೀಡಲಾಗುವ ರಾಜ್ಯಮಟ್ಟದ ಸಮಾಜ ಸೇವಾ ಪ್ರಶಸ್ತಿಗೆ ಮೀತಲತಂಡ ಎಂ ಇಸ್ಮಾಯಿಲ್ ಭಾಜನರಾಗಿದ್ದಾರೆ.
ಚೇತನ ಫೌಂಡೇಶನ್ ಕರ್ನಾಟಕದ ಆಶ್ರಯದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇವರ ಸಹಯೋಗದಲ್ಲಿ ಮೈಸೂರಿನ ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಸಭಾಂಗಣದಲ್ಲಿ ನಡೆದ ‘ಮೈಸೂರು ನುಡಿ ಸಡಗರ’ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎನ್ ಸತ್ಯನಾರಾಯಣ ಅವರಿಂದ ಕನ್ನಡ ನಾಡಿನ ಪ್ರಸಿದ್ಧ ಸಾಹಿತಿಗಳ ಮತ್ತು ವಿದ್ವಾಂಸರ ಸಮ್ಮುಖದಲ್ಲಿ ಇಸ್ಮಾಯಿಲ್ ಅವರು ರಾಜ್ಯಮಟ್ಟದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪಂಪ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಸಾಹಿತಿ ಡಾ. ಸಿ ಪಿ ಕೃಷ್ಣಕುಮಾರ್(ಸಿಪಿಕೆ) ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಹಿರಿಯ ಕವಿ ಮಂಗಳೂರಿನ ಗೋವಿಂದ ಭಟ್, ಕಿರುತೆರೆ ನಟ ಎನ್ ಹರೀಶ್ ಸೇರಿದಂತೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮೈಸೂರಿನ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ ಸತೀಶ್ ಜವರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಚೇತನ ಫೌಂಡೇಶನ್‌ನ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ, ಕಾವ್ಯಶ್ರೀ ಚಾರಿಟೆಬಲ್ ಟ್ರಸ್ಟ್ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಡಾ ಜಿ ಶಿವಣ್ಣ ಹಾಗೂ ಇತರರು ಇದ್ದರು.
ಈ ಸುದ್ದಿ ಓದಿದ್ದೀರಾ? ಮಡಿಕೇರಿ | ಕ್ರೀಡೆಯಿಂದ ಸಮಾಜದಲ್ಲಿ ಸೌಹಾರ್ದ ವೃದ್ಧಿ: ಶಾಸಕ ಮಂತರ್ ಗೌಡ
ಇಸ್ಮಾಯಿಲ್ ಅವರು ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್(ಕೆಎಂಎ) ಕೋಶಾಧಿಕಾರಿ ಹರಿಶ್ಚಂದ್ರ ಎ ಹಂಸ, ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಪಟ್ಟಿಯಡ ಎ ಹನೀಫ್, ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀನಿವಾಸ್, ಚಾಮಿಯಾಲದ ಸಫ್ವಾನ್ ಸೇರಿದಂತೆ ಕುಟುಂಬದವರು ಮತ್ತು ಸ್ನೇಹಿತರ ಬಳಗದವರು ಇದ್ದರು. ಕೆದಮುಳ್ಳೂರು ಗ್ರಾ. ಪಂ.ಗೆ 3ನೇ ಬಾರಿಗೆ ಚುನಾಯಿತರಾಗಿರುವ ಇಸ್ಮಾಯಿಲ್ ಅವರು ಕೊಡವ ಮುಸ್ಲಿಂ ಅಸೋಸಿಯೇಷನ್(ಕೆಎಂಎ)ನ ಕಾರ್ಯಕಾರಿ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
