ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿತು. ಮೈಸೂರಿನ ಟೌನ್ ಹಾಲ್ ಆವರಣದಲ್ಲಿ ನಿನ್ನೆ ನಡೆದ ಪ್ರೊ. ನಂಜುಂಡಸ್ವಾಮಿ ಅವರ 89ನೇ ಜನ್ಮ ಚಿರ ನೆನಪಿನ ಕಾರ್ಯಕ್ರಮ ಹಾಗೂ ಜಿಲ್ಲಾ ರೈತ ಸಮಾವೇಶದಲ್ಲಿ ಸಂಘದ ಮುಖಂಡರುಗಳು ಗುಡುಗಿದರು.
ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ರೈತ ಸಂಘದ ಕಾರ್ಯಕರ್ತರು ಗನ್ ಹೌಸ್ ಬಳಿಯಿಂದ ಮೆರವಣಿಗೆ ಮೂಲಕ ಸಾಗಿ ಟೌನ್ ಹಾಲ್ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ರಾಜ್ಯದಲ್ಲಿ ಯಾವುದೇ ಚಳವಳಿ ನಡೆದಿರಬಹುದು ಅಲ್ಲಿ ನಂಜುಂಡಸ್ವಾಮಿ ಅವರ ಪ್ರಭಾವವಿರುತಿತ್ತು ಅನ್ನುವುದರಲ್ಲಿ ಅತಿಶಯೋಕ್ತಿ ಅಲ್ಲ. ವಿಧಾನಸೌಧಕ್ಕೆ ಜೀವವಿಲ್ಲ, ಅದೊಂದು ಕಲ್ಲು ಕಟ್ಟಡ. ಜೀವ ಬರಿಸುವ ಕೆಲಸ ಅಂದ್ರೆ ಅದು ಹೋರಾಟ ಬೀದಿಯಲ್ಲಿ ನಿಂತು ಹೋರಾಟ ಮಾಡಬೇಕು” ಎಂದರು.
ಹಿರಿಯರಿಗೆ ನಿಜಕ್ಕೂ ಗೌರವ ಸಲ್ಲಿಸಬೇಕು ಅನ್ನೋದಾದರೆ ಹಸಿರು ಶಾಲನ್ನು ಉಳಿಸಿಕೊಳ್ಳಬೇಕು. ಶಾಲಿಗೆ ಕಳಂಕ ತರುವ ಕೆಲಸ ಮಾಡಬಾರದು. ಮುಂದಿನ ಚುನಾವಣೆಯಲ್ಲಿ ಕನಿಷ್ಟ ನೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದರು.

ಮಾಜಿ ಶಾಸಕ ಸುನೀಲಂ ಮಾತನಾಡಿ, “ನಾನು ದೆಹಲಿಗೆ ಹೋಗಿದ್ದೆ, ಅಲ್ಲಿ ಅಂಬೇಡ್ಕರ್, ಗಾಂಧೀಜಿ ಅವರ ಡೈರಿ ಖರೀದಿ ಮಾಡಿದೆ. ಅದರಂತೆ ಕರ್ನಾಟಕದಲ್ಲಿಯೂ ಸಹ ರೈತರ ಹೆಸರಿನಲ್ಲಿ ಡೈರಿ ಹೊರ ತಂದಿರುವುದು ನಿಜಕ್ಕೂ ಸಂತಸ ತಂದಿದೆ. ಕೇಂದ್ರದ ಮೂರು ರೈತ ವಿರೋಧಿ ಕಾಯ್ದೆಗಳನ್ನು ಹೋರಾಟದ ಮೂಲಕ ವಾಪಸ್ ತೆಗೆದುಕೊಳ್ಳುವಂತೆ ಮಾಡಿದ್ದು ನಿಜಕ್ಕೂ ಮರು ಹುಟ್ಟಿನಂತೆ ಕಂಡಿದೆ. ಪ್ರೊ. ನಂಜುಂಡಸ್ವಾಮಿ ಕರ್ನಾಟಕದಲ್ಲಿ ಉದಾರೀಕರಣ ನೀತಿಯನ್ನು ಪ್ರಬಲವಾಗಿ ವಿರೋಧಿಸಿದವರಲ್ಲಿ ಮೊದಲಿಗರು. ಪಂಜಾಬ್ ಹಾಗೂ ಕೇರಳ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ನೇರವಾಗಿ ದಿಕ್ಕರಿಸಿವೆ. ನಮ್ಮದೇ ಸರ್ಕಾರ ಎನ್ನುವ ಇಲ್ಲಿನ ಕಾಂಗ್ರೆಸ್ ಸರ್ಕಾರ ಗಟ್ಟಿತನ ತೋರಿ, ಬದ್ಧತೆ ತೋರಬೇಕಿದೆ” ಎಂದರು.
ಜಾಗೃತ ಕರ್ನಾಟಕ ಸಂಚಾಲಕ ಹಾಗೂ ಈದಿನ.ಕಾಮ್ ಮಾಧ್ಯಮದ ಡಾ ಹೆಚ್ ವಿ ವಾಸು ಮಾತನಾಡಿ, “ರೈತರಿಗೆ ಸಾಲ ಮನ್ನಾ ಮಾಡುವ ಸರ್ಕಾರ ಬೇಕಾ ಇಲ್ಲ ರೈತರು ಸಾಲ ಮಾಡದೆ ಇರುವಂತೆ ನೋಡಿಕೊಳ್ಳುವ ಸರ್ಕಾರ ಬೇಕಾ ಅನ್ನುವುದನ್ನು ಮನಗಾಣ ಬೇಕಿದೆ. ಸರ್ಕಾರ ಎಣ್ಣೆ ಕಾಳುಗಳನ್ನು ಇನ್ನೆಲ್ಲೋ ಕೊಳ್ಳುವುದರ ಬದಲು ರೈತರಿಂದ ನೇರವಾಗಿ ಖರೀದಿ ಮಾಡಿದರೆ ನಾಲ್ಕು ಪ್ರಮುಖ ಬೆಳೆಗಳಿಗೆ ಬೆಂಬಲ ಬೆಲೆ ಖಂಡಿತವಾಗಿ ನೀಡಬಹುದು. ದುಡಿಯುವ ವರ್ಗ, ಸಂಘಟನೆಗಳು ರಾಜಕೀಯ ಶಕ್ತಿಯಾಗಿ ಬದಲಾಗದೆ ಇದ್ರೆ, ಬದಲಾವಣೆ ಸಾಧ್ಯವಿಲ್ಲ. ಬದಲಾವಣೆ ಬರಬೇಕು ಅಂದ್ರೆ ನೇರ ಚುನಾವಣೆಯಲ್ಲಿ ಭಾಗಿಯಾಗಬೇಕು” ಎಂದರು.

ವಿಶ್ವಕಪ್ ಖೋಖೋ ಚಾಂಪಿಯನ್ ತಂಡದ ಚೈತ್ರ ಮಾತನಾಡಿ, “ಪ್ರೊ ನಂಜುಂಡಸ್ವಾಮಿ ಅವರ ನೆನಪಿನ ಕಾರ್ಯಕ್ರಮ ಮಾಡುತ್ತಿರುವುದು ಖುಶಿ ಆಗ್ತಿದೆ. ನಾನು ಸಹ ಅದೇ ತಾಲ್ಲೂಕಿನವಳು. ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು, ಕ್ರೀಡೆಯನ್ನು ಬೆಂಬಲಿಸಬೇಕು” ಎಂದರು.
ನೂರ್ ಶ್ರೀಧರ್ ಮಾತನಾಡಿ, “80ರ ದಶಕದಲ್ಲಿ ನಮ್ಮೆಲ್ಲರ ಭೂಮಿಗಳು ಹರಾಜಿಗೆ ಬಂದಿದ್ದವು. ಆಗ ಆಮಿಷವೊಡ್ಡಿ ಸಾಲ ಕೊಟ್ಟು ಹಣ ಹೂಡಿಕೆ ಮಾಡಿ ನಷ್ಟ ಅನುಭವಿಸಿ ಸಾಲಗಾರರಾಗಿದ್ದರು. ಪ್ರೊ. ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಅಂದು ನಡೆದ ʼಬಾರುಕೋಲು ಚಳವಳಿ’ ಹಸಿರು ಶಾಲು ಶಕ್ತಿಯ ಸಂಕೇತವಾಗಿ ದಿಟ್ಟ ಹೋರಾಟಕ್ಕೆ ಮುನ್ನುಡಿ ಆಯ್ತು. ಅದರಿಂದಾಗಿ ಮನೆ ಮಠ ಉಳಿದುಕೊಳ್ತು. ಆದರೆ ಈಗೊಂದು ಕೆಟ್ಟ ಪರಿಸ್ಥಿತಿ ನಿರ್ಮಾಣ ಆಗಿದೆ. ಅದುವೇ ಮೈಕ್ರೋ ಫೈನಾನ್ಸ್ ಹಾವಳಿ. ಗಂಡಸರಿಗೆ ಸಾಲ ಕೊಟ್ಟರೆ ಮರು ಪಾವತಿ ಕಷ್ಟ. ಅದಕ್ಕೆ ಇರೋ ಬರೋ ಹೆಣ್ಣು ಮಕ್ಕಳಿಗೆ ಸಾಲ ಕೊಡೋದು. ಎಷ್ಟೇ ಕಷ್ಟ ಆಗಲಿ ಕಡೆಗೆ ತಾಳಿ ಅಡವಿಟ್ಟಾದರೂ ಸಾಲ ಕಟ್ಟುತ್ತಾರೆ ಅಂತೇಳಿ ಇಡೀ ಮಹಿಳಾ ಸಂಕುಲವನ್ನು ಸಾಲಗಾರರಾಗಿ ಮಾಡಿದ್ದಾರೆ ಇದೊಂದು ವ್ಯವಸ್ಥಿತ ಸಂಚು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಳಂದ ಶಾಸಕ ಬಿ ಆರ್ ಪಾಟೀಲ್ ಮಾತನಾಡಿ, “ನನಗೆ ರಾಜಕೀಯದಲ್ಲಿ ಪ್ರೊ. ನಂಜುಂಡಸ್ವಾಮಿ ಸ್ಪೂರ್ತಿ. ಮಾತು ಬಹಳ ಆಗಿದೆ. ಇನ್ನ ಸಾಕಷ್ಟು ಕೆಲಸ ಮಾಡಬೇಕು. ಮುಂದಿನ ಬಜೆಟ್ ಸಭೆಯಲ್ಲಿ ರೈತ ಮುಖಂಡರೆಲ್ಲ ಸೇರಿ ಸೂಕ್ತವಾಗಿ ಚರ್ಚಿಸಿ, ರೈತ ಕಾಳಜಿಯ ಬಜೆಟ್ ರೂಪಿಸುವಂತೆ ಆಗಬೇಕು. ಈ ನಿಟ್ಟಿನಲ್ಲಿ ಸದನದಲ್ಲಿ ನಾನು ಹಾಗೂ ದರ್ಶನ್ ಪುಟ್ಟಣ್ಣಯ್ಯ ಕೆಲಸ ಮಾಡಲಿದ್ದೇವೆ” ಎಂದರು.
ಜಿಲ್ಲಾಡಳಿತದ ಪರವಾಗಿ ತಹಸೀಲ್ದಾರ್ ವಿಶ್ವನಾಥ್ ಹಾಕ್ಕೋತ್ತಾಯ ಪತ್ರ ಸ್ವೀಕರಿಸಿ ಸರ್ಕಾರಕ್ಕೆ ಕಳಿಸಿಕೊಡುವುದಾಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಉದಯಗಿರಿ ಕಲ್ಲು ತೂರಾಟ ಪ್ರಕರಣ; 8 ಮಂದಿ ಬಂಧನ
ವೇದಿಕೆಯಲ್ಲಿ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್, ರಾಜ್ಯ ಕಾರ್ಯದರ್ಶಿ ವೀರ ಸಂಗಯ್ಯ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ ಕೆರಗೋಡು, ಮಾಜಿ ಮೇಯರ್ ಪುರುಷೋತ್ತಮ್, ಎ ಎಲ್ ಕೆಂಪೇಗೌಡ, ಪ್ರಕಾಶ್ ಕಮರೆಡಿ, ಯದುಶೈಲ ಸಂಪತ್, ಬೆಟ್ಟಯ್ಯ ಕೋಟೆ, ಹೊಸೂರು ಕುಮಾರ್, ಎ ಎಂ ಮಹೇಶ್ ಪ್ರಭು, ಎನ್ ಡಿ ವಸಂತ್ ಕುಮಾರ್, ಹೊಸಕೋಟೆ ಬಸವರಾಜು, ಪಿ ಮರಂಕಯ್ಯ, ಸವಿತಾ ಪಾ ಮಲ್ಲೇಶ್, ಅಹಿಂದ ಜವರಪ್ಪ, ಉಗ್ರ ನರಸಿಂಹೇಗೌಡ, ಟಿ ಯಶವಂತ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.
