ಸಂಸತ್ ಭವನದಲ್ಲಿ ಹೊಗೆ ಬಾಂಬ್ ಪ್ರಕರಣಕ್ಕೆ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ, ಸುಮಾರು 143 ಮಂದಿ ಅಂದರೆ ಶೇ.70ರಷ್ಟು ಸಂಸತ್‌ನ ವಿಪಕ್ಷ ಸದಸ್ಯರನ್ನು ವಿರೋಧ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನು ಅಮಾನತು ಮಾಡಿರುವ ಕ್ರಮ ನಿರಂಕುಶ ಪ್ರಭುತ್ವದ ಪರಮಾವಧಿ ಮತ್ತು ಪ್ರಜಾಪ್ರಭುತ್ವದ ಹತ್ಯೆ ಎಂದು ಎಸ್‌ಡಿಪಿಐ ಮೈಸೂರು ಜಿಲ್ಲಾಧ್ಯಕ್ಷ ರಫತ್ ಖಾನ್ ಹೇಳಿದರು.
ಮೈಸೂರು ನಗರದಲ್ಲಿ ಎಸ್‌ಡಿಪಿಐ ಕಾರ್ಯಕರ್ತರಿಂದ ’ಸಂಸದರ ಅಮಾನತು ಪ್ರಜಾಪ್ರಭುತ್ವದ ಹತ್ಯೆ’ ಎಂಬ ಘೋಷದೊಂದಿಗೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಭಾರತದ ಸಂಸತ್ತು ಪ್ರಜಾಪ್ರಭುತ್ವದ ಆತ್ಮ. ಅಲ್ಲಿ ಆಡಳಿತ ಪಕ್ಷದ ಪ್ರಾಮುಖ್ಯತೆ ಎಷ್ಟಿದೆಯೋ ವಿರೋಧ ಪಕ್ಷದ ಅವಶ್ಯಕತೆಯೂ ಅಷ್ಟೇ ಮುಖ್ಯವಾಗಿರುತ್ತದೆ. ವಿಪಕ್ಷವಿಲ್ಲದ ಪ್ರಜಾಪ್ರಭುತ್ವ ಆತ್ಮವಿಲ್ಲದ ದೇಹವಿದ್ದಂತೆ. ಆದರೆ, ಸಂಸತ್ತಿನಲ್ಲೆ ನಡೆದ ಪ್ರಕರಣ ಪ್ರಶ್ನಿಸಿದ್ದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಬಹುತೇಕ ಸಂಸದರನ್ನು ಅಮಾನತು ಮಾಡಿದೆ” ಎಂದು ಆರೋಪಿಸಿದರು.
“ದೇಶದ ಅತಿದೊಡ್ಡ ಪಂಚಾಯತ್ ಎಂದೇ ಕರೆಯಲ್ಪಡುವ ಸಂಸತ್ತಿನ ಒಳಗೆ ನಿರಾಯಾಸವಾಗಿ ಅಪರಿಚಿತರು ಪ್ರವೇಶ ಮಾಡಿ ಹೊಗೆ ಬಾಂಬೆ ಸ್ಪೋಟಿಸಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವೈಫಲ್ಯ. ಆ ಕುರಿತು ಸಂಸತ್ತಿನಲ್ಲಿ ದೇಶದ ಗೃಹಮಂತ್ರಿ ಹೇಳಿಕೆ ನೀಡಬೇಕಾದದ್ದು ಅವರ ಪ್ರಾಥಮಿಕ ಕರ್ತವ್ಯ. ಆದರೆ ಸರ್ವಾಧಿಕಾರಿ ಧೋರಣೆಯ ಈ ಸರ್ಕಾರ ಹೇಳಿಕೆ ನೀಡುವ ಬದಲು ಈ ವಿಚಾರದಲ್ಲಿ ಸಂಸತ್‌ನಲ್ಲಿ ಚರ್ಚೆಗೆ ಒತ್ತಾಯಿಸಿದ ವಿಪಕ್ಷದ ಸಂಸದರನ್ನು ಅಮಾನತು ಮಾಡುವ ಮೂಲಕ ವಿಪಕ್ಷದ ಬಾಯಿಯನ್ನು ಮಾತ್ರವಲ್ಲ, ಇಡೀ ದೇಶದ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದೆ” ಎಂದು ದೂರಿದರು.
“ಇಂತಹ ಬೆಳವಣಿಗೆ ದೇಶದಲ್ಲಿ ಅಘೋಷಿತ ತುರ್ತುಸ್ಥಿತಿಯ ವಾತಾರಣ ಇರುವುದಾಗಿ ತೋರಿಸುತ್ತದೆ. ಮೋದಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ ತೀವ್ರ ಖಂಡನೀಯ. ಸದನದಲ್ಲಿ ಬಹುತೇಕ ಎಲ್ಲ ವಿಪಕ್ಷ ಸದಸ್ಯರು ಅಮಾನತಾಗಿ ಹೊರಗುಳಿದಿರುವ ಸಂದರ್ಭದಲ್ಲಿ ಭಾರತದ ನ್ಯಾಯ ಸಂಹಿತೆಗಳನ್ನು ಮರು ವ್ಯಾಖ್ಯಾನ ಮಾಡುವಂತಹ ಬಹುಮುಖ್ಯ ಕಾಯಿದೆಯನ್ನು ಮಂಡಿಸಿ, ಅದನ್ನು ಅಂಗೀಕರಿಸುವ ಸಂಚು ಮಾಡಲಾಗಿದೆಯೆಂದು ಗಂಭೀರ ಆರೋಪ ಮಾಡಿರುವ ಅವರು ಈ ಅಮಾನತುಗಳ ಹಿಂದೆ ಈ ಮಸೂದೆಗೆ ಎದುರಾಗಬಹುದಾದ ಆಕ್ಷೇಪಣೆ ಮತ್ತು ವಿರೋಧವನ್ನು ಇಲ್ಲವಾಗಿಸುವುದೇ ಆಗಿದೆ” ಎಂದು ಹೇಳಿದರು.
“ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ತಮ್ಮ ಈ ನಿರಂಕುಶ ಆಡಳಿತ, ಸಂವಿಧಾನ ವಿರೋಧಿ ನಡವಳಿಕೆಯನ್ನು ತಿದ್ದಿಕೊಂಡು ವಿಪಕ್ಷದ ಎಲ್ಲ ಸದಸ್ಯರ ಅಮಾನತು ವಾಪಸ್ ಪಡೆದು ಪ್ರಜಾಪ್ರಭುತ್ವದ ಗೌರವವನ್ನು ಉಳಿಸಬೇಕು” ಎಂದು ಎಸ್‌ಡಿಪಿಐ ಪರವಾಗಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಸೇರಿದಂತೆ ಬಹುತೇಕ ಮಂದಿ ಭಾಗವಹಿಸಿದ್ದರು.