ರಾಜ್ಯದ ಕೃಷಿ ಸಚಿವರ ವಿರುದ್ಧ ಮಂಡ್ಯ ಜಿಲ್ಲೆಯ ಸಹಾಯಕ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ಕೆ.ಆರ್ ನಗರ ತಾಲೂಕಿನ ಇಬ್ಬರು ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಅವರನ್ನು ಬಂಧಿಸಿ, ಅಮಾನತು ಮಾಡಲಾಗಿತ್ತು. ಆ ಅಧಿಕಾರಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ, ಕೆ.ಆರ್ ನಗರ ಕೃಷಿ ಇಲಾಖೆಗೆ ಬೇರಾವುದೇ ಅಧಿಕಾರಿಗಳ ನೇಮಕವಾಗದೆ, ಇಲಾಖೆ ಖಾಲಿ ಉಳಿದಿದೆ.
ಕೆ.ಆರ್ ನಗರ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ಮತ್ತು ಸುದರ್ಶನ್ ಅವರು ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಕರಣ ನಡೆದು 3ರಿಂದ 4 ತಿಂಗಳುಗಳಾಗಿವೆ. ಆದರೆ, ಕೆ.ಆರ್ ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳ ಕೃಷಿ ಇಲಾಖೆಯಲ್ಲಿ ಯಾವುದೇ ಅಧಿಕಾರಿಗಳು ಇಲ್ಲದೆ ಕಚೇರಿ ಅನಾಥವಾಗಿದೆ.
ಈ ದೂರಿನ ಹಿಂದೆ ರಾಜಕೀಯ ದುರುದ್ದೇಶವಿದೆಯೇ? ಅಥವಾ ರಾಜಕೀಯ ದ್ವೇಷ ಸಾಧನೆಗಾಗಿ ಅಧಿಕಾರಿಗಳ ಮೂಲಕ ಪತ್ರ ಬರೆಸಿದ್ದಾರೆಯೇ ಅಥವಾ ಕೃಷಿ ಇಲಾಖೆಯಲ್ಲಿರುವ ಅಧಿಕಾರಿಗಳ ನಡುವಿನ ವೈಷಮ್ಯ ಇದಕ್ಕೆ ಪ್ರೇರಣೆಯಾಗಿರಬಹುದೇ? ಎಂಬ ವಿಚಾರಗಳು ಬಹಿರಂಗವಾಗಬೇಕಿದೆ. ಆದರೆ, ಅಧಿಕಾರಿಗಳ ಹೆಸರಿನಲ್ಲಿ ಪತ್ರ ಬರೆಸಿದವರು ಯಾರು ಎನ್ನುವುದು ಈವರೆಗೆ ರಹಸ್ಯವಾಗಿಯೇ ಉಳಿದಿದೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | 19 ವರ್ಷಗಳೇ ಕಳೆದರೂ ಬಡಾವಣೆಗಿಲ್ಲ ಮೂಲ ಸೌಕರ್ಯ
ಮೈಸೂರಿನಿಂದ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಕೃಷಿ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ತಾಲೂಕಿನಲ್ಲಿ ಇಬ್ಬರು ಅಧಿಕಾರಿಗಳು ಅಮಾನತುಗೊಂಡ ನಂತರ ರೈತರ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗಿದ್ದು, ಸರ್ಕಾರ ಕೂಡಲೇ ಖಾಯಂ ಅಧಿಕಾರಿಗಳ ನೇಮಕಕ್ಕೆ ಮುಂದಾಗಬೇಕು” ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.