ಮೈಸೂರು ಜಿಲ್ಲಾ ಪಂಚಾಯತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಶೀಲನಾ ಸಭೆಯಲ್ಲಿ ‘ ಬೇಸಿಗೆಯ ಮುನ್ನೆಚ್ಚರಿಕೆ ಕ್ರಮವಾಗಿ ಕುಡಿಯುವ ನೀರಿನ ಅಭಾವ ಎದುರಾಗದಂತೆ ಮುಂಜಾಗ್ರತೆ ವಹಿಸುವಂತೆ ‘ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಉಸ್ತುವಾರಿ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
” ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವ ಗ್ರಾಮಗಳನ್ನು ಗುರುತಿಸಿ ಪಟ್ಟಿ ಮಾಡಿಕೊಳ್ಳಿ, ಜಾನುವಾರು ಮೇವುಗಳ ಕೊರತೆ ಉಂಟಾಗದಂತೆ ಈಗಲೇ ಅಗತ್ಯ ಕ್ರಮಗಳನ್ನು ಅನುಸರಿಸಿ . ಕಳೆದ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಿಲ್ಲೆಯ ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರು ಲಭ್ಯವಿದೆ ಸಮರ್ಪಕವಾದ ನೀರು ಪೂರೈಕೆ ನಿರ್ವಹಣೆಯಾಗಬೇಕು.
ಬೇಸಿಗೆಯಲ್ಲಿ ಶುದ್ಧವಾದ ಕುಡಿಯುವ ನೀರು ದೊರೆಯುವಂತೆ ನೋಡಿಕೊಳ್ಳಬೇಕು. ನೀರಿನ ಕೊರತೆ ಕುರಿತು ಯಾವುದೇ ದೂರುಗಳು ಬರದಂತೆ ಎಚ್ಚರಿಕೆಯಿಂದ ಕೆಲಸ ಮಾಡಿ.ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ಖಾಯಿಲೆಗಳ ಬಗ್ಗೆಯೂ ಮುಂಜಾಗ್ರತ ಕ್ರಮ ಅನುಸರಿಸಬೇಕಿದೆ, ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಬೇಕು ” ಎಂದರು.

ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ ” ಜಿಲ್ಲೆಯಲ್ಲಿ 837 ಮಿಲಿ ಮೀಟರ್ ಮಳೆಯಾಗಬೇಕಿತ್ತು, ಆದರೆ, ಸರಾಸರಿಗಿಂತ ಅಂದರೆ 965 ಮಿಲಿ ಮೀಟರ್ ಮಳೆ ಆಗಿದೆ. ಜಿಲ್ಲೆಯ ಜಲಾಶಯಗಳಲ್ಲಿ ಅಗತ್ಯ ಪ್ರಮಾಣದ ನೀರು ಇದ್ದು, ಮೇ ಅಂತ್ಯದವರೆಗೆ ಕುಡಿಯುವ ನೀರಿಗೆ ತೊಂದರೆ ಇಲ್ಲ. 94 ಗ್ರಾಮಗಳಲ್ಲಿ ನೀರಿನ ಕೊರತೆ ಆಗುಬಹುದು ಎಂದು ಗ್ರಾಮೀಣ ಕುಡಿಯುವ ನೀರಿನ ಇಲಾಖೆಯಿಂದ ಪಟ್ಟಿ ಮಾಡಿಕೊಳ್ಳಲಾಗಿದೆ. ನಗರ ಪ್ರದೇಶದಲ್ಲಿ ಯಾವುದೇ ನೀರಿನ ಕೊರತೆ ಇಲ್ಲ.ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸ್ಥಳೀಯ ಶಾಸಕರ ಅಧ್ಯಕ್ಷತೆಯ ಸಭೆಯಲ್ಲಿ ಅನುಮೋದನೆ ಆಗಿರಬೇಕು. ನೀರು ಸರಬರಾಜು ಟ್ಯಾಂಕರ್ ಗೆ ಜಿಪಿಎಸ್ ಅಳವಡಿಸಬೇಕು ” ಎಂದರು.
ಮೈಸೂರು | ಬೆಳಗಾವಿ ಕನ್ನಡಿಗರ ಮೇಲಿನ ಹಲ್ಲೆ ಪ್ರಕರಣ; ಕನ್ನಡಾಂಬೆ ರಕ್ಷಣಾ ವೇದಿಕೆ ಪ್ರತಿಭಟನೆ
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಯುಕೇಶ್ ಕುಮಾರ್ , ಮೈಸೂರು ನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ ಪಿ ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

