ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಅವರ ಸ್ವಕ್ಷೇತ್ರದಲ್ಲೇ ಕೊರಚ ಕುಟುಂಬಗಳ ಬದುಕು ಅತಂತ್ರವಾಗಿದ್ದು, ಮೃತದೇಹಗಳ ಅಂತ್ಯಕ್ರಿಯೆಗೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಮೈಸೂರು ಜಿಲ್ಲೆಯ ಟಿ ನರಸೀಪುರ ಪಟ್ಟಣದಲ್ಲಿ ಕರುಣಾಜನಕ ಘಟನೆಯೊಂದು ವರದಿಯಾಗಿದ್ದು, ಅಲೆಮಾರಿ ಕೊರಚ ಜನಾಂಗದ ದಿ. ಹನುಮಂತಪ್ಪ ಅವರ ಪತ್ನಿ ರತ್ನಮ್ಮ(49) ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಸ್ಥಳೀಯರು ಅವಕಾಶ ಮಾಡಿಕೊಡದೆ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಕುಟುಂಬ ಅಂತ್ಯಕ್ರಿಯೆ ನೆರವೇರಿಸಲು ಪರದಾಡಿದ ಘಟನೆ ಸಂಭವಿಸಿದೆ.
ಮೈಸೂರು ಜಿಲ್ಲೆಯ ತಿ ನರಸೀಪುರದಲ್ಲಿ ಪಟ್ಟಣದ ಮಾರ್ಕೆಟ್ ರಸ್ತೆಯ ಹೊಸ ರೇಷ್ಮೆ ಗೂಡಿನ ಎದುರಿನ ಭೈರಾಪುರ ಪಟ್ಟಣದಲ್ಲಿ ವಾಸವಾಗಿರುವ ಅಲೆಮಾರಿ ಕೊರಚ ಜನಾಂಗ ಸುಮಾರು 35 ವರ್ಷಗಳ ಹಿಂದೆ ದಾವಣಗೆರೆ ಕಡೆಯಿಂದ ವಲಸೆ ಬಂದು ಟಿ ನರಸೀಪುರ ಪಟ್ಟಣದಲ್ಲಿ ನೆಲೆನಿಂತು ತಲೆಕೂದಲಿಗೆ, ಬಟ್ಟೆಪಿನ್ನು, ಹಣೆಬೊಟ್ಟು ಸೇರಿದಂತೆ ಇತರೆ ಸಣ್ಣಪುಟ್ಟ ವಸ್ತುಗಳ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಈ ಹಿಂದೆ ಈಗಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಅರ್ಧ ಗುಂಟೆ ಜಾಗ ಖರೀದಿ ಮಾಡಿ ವಾಸ ಮಾಡುತ್ತಿರುವಾಗ ಕಬಿನಿ ನದಿಗೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾದ ಹಿನ್ನೆಲೆಯಲ್ಲಿ ನಿವೇಶನ ಕಳೆದುಕೊಂಡು ಬದುಕು ಆತಂತ್ರವಾಗಿತ್ತು. ಇದೇ ಸಮಯದಲ್ಲಿ ಖಾಸಗಿಯವರಿಂದ ನಿವೇಶನವನ್ನು ಬಾಡಿಗೆ ಪಡೆದು ಪುಟ್ಟ ಗುಡಿಸಲು ಮಾಡಿ ತಮ್ಮ ಕೊಟ್ರೇಸಿ ಎಂಬುವವರೊಂದಿಗೆ ಜೀವನ ಮಾಡುತಿದ್ದರು.
ಅನಾರೋಗ್ಯದಿಂದ ನರಳುತ್ತಿದ್ದ ರತ್ನಮ್ಮ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾದ ಕಾರಣಕ್ಕೆ ದಾವಣಗೆರೆಗೆ ಮೃತದೇಹ ರವಾನಿಸಿದ ಕರುಣಾಜನಕ ಘಟನೆ ನಿಜಕ್ಕೂ ಕಣ್ಣೀರು ತರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ, ಇನ್ನೊಂದು ಕಡೆ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಅವರಿರುವ ಸ್ವಕ್ಷೇತ್ರದಲ್ಲಿ ಇಂತಹ ಘಟನೆ ನಡೆದಿರುವುದು ಶೋಚನೀಯ.
ಸ್ಥಳೀಯ ವೆಂಕಟೇಶ್ ಮಾತನಾಡಿ, “ಸರಿ ಸುಮಾರು ಐವತ್ತು ವರ್ಷಗಳಿಂದ ಇಲ್ಲಿ ವಾಸವಾಗಿದ್ದೀವಿ. ಈಗಿರುವ ಹೊಸ ಬಸ್ ನಿಲ್ದಾಣದ ಜಾಗದಲ್ಲಿ ಅಂದು ಗೂಡಂಗಡಿಗಳು ಇದ್ದವು. ನಾವು ದಾವಣಗೆರೆ ಕಡೆಯಿಂದ ಬಂದು ಅಲ್ಲಿ ಸುಮಾರು 25 ಕುಟುಂಬಗಳು ಸೇರಿ ಒಂದೂವರೆ ಎಕರೆ ಖರೀದಿ ಮಾಡಿ ಶಕ್ತಿ ಅನುಸಾರ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದೆವು. ಆದರೆ ಕಬಿನಿ ನದಿಗೆ ಹೊಸದಾಗಿ ಸೇತುವೆ ನಿರ್ಮಾಣ ಮಾಡುವ ಯೋಜನೆ ಬಂದಾಗ ನಮ್ಮ ಇಡೀ ಜಾಗ ರಸ್ತೆಗೆ ಸೇರಿತು. ಹಾಗಾಗಿ ಸರಿಸುಮಾರು 35 ಕುಟುಂಬಗಳು ಅಲ್ಲಿಂದ ದಿಕ್ಕೆಟ್ಟು ಅತಂತ್ರ ಪರಿಸ್ಥಿತಿಗೆ ದೂಡಲ್ಪಟ್ಟೆವು. ಇದಾದ ಬಳಿಕ ಈಗಿರುವ ಜಾಗಕ್ಕೆ ಬಾಡಿಗೆ ಕೊಡುತ್ತ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದೇವೆ” ಎಂದು ಅವಲತ್ತುಕೊಂಡರು.

“ನಮಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಈವರೆಗೆ ಎಲ್ಲ ಕಚೇರಿಗಳಿಗೆ, ಪುರಸಭೆಗೆ ಅರ್ಜಿ ಕೊಡುವುದೇ ಆಗಿದೆಯೇ ಹೊರತು ಯಾರೂ ಕೂಡಾ ನಮ್ಮ ನೆರವಿಗೆ ಬರಲಿಲ್ಲ. ಯಾವ ಅಧಿಕಾರಿಗಳೂ ನಮಗೆ ಸೂರು ಕೊಡಲಿಲ್ಲ,ಇದ್ದ ಮನೆಯನ್ನು ಕಳೆದುಕೊಂಡ ನಮಗೆ ಬದಲಿ ವ್ಯವಸ್ಥೆ ಮಾಡಲಿಲ್ಲ. ಸಮಾಜ ಕಲ್ಯಾಣ ಇಲಾಖೆ ಸಚಿವರು ಇದ್ದಾರೆ, ಅವರಾದರೂ ಈಗ ನಮ್ಮ ಕಡೆ ಗಮನಹರಿಸಬೇಕು” ಎಂದು ಮನವಿ ಮಾಡಿದರು.

ಈ ದಿನ.ಕಾಮ್ ಸ್ಥಳೀಯ ವಾರ್ಡ್ ಪುರಸಭೆ ಸದಸ್ಯ ಮಂಜುನಾಥ ಅವರಿಗೆ ಕರೆ ಮಾಡಿದಾಗ, “ಕೊರಚ ಸಮುದಾಯದ ಮಹಿಳೆ ರತ್ನಮ್ಮ ಅವರ ಸಾವು, ಅಂತ್ಯಕ್ರಿಯೆಗೆ ಅವಕಾಶ ಸಿಗದೇ ಇರುವುದರ ಬಗ್ಗೆ ಯಾವುದೇ ಮಾಹಿತಿ ಗೊತ್ತಿಲ್ಲ, ಯಾರೂ ಬಂದು ಕೇಳಿಲ್ಲ, ಯಾವ ಮಾಹಿತಿಯೂ ನಮಗಿಲ್ಲ” ಎನ್ನುವ ಹಾರಿಕೆ ಉತ್ತರ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಂದಿಜೋಗಿ ಕುಟುಂಬ ಬೀದಿಪಾಲು; ʼಈ ದಿನ ವರದಿʼಗೆ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ
ದಸಂಸ ಮುಖಂಡ ಅಲಗೂಡು ಶಿವಕುಮಾರ್ ಈ ಬಗ್ಗೆ ಗಮನ ಸೆಳೆದಿದ್ದು, “ಟಿ ನರಸೀಪುರ ವ್ಯಾಪ್ತಿಯಲ್ಲಿ ಹಲವಾರು ಕುಟುಂಬಗಳು ನಿವೇಶನ ರಹಿತರಾಗಿ, ವಾಸಿಸಲು ಮನೆಯೂ ಇರದೆ ಕಷ್ಟ ಪಡುತ್ತಿದ್ದಾರೆ. ಇರಲು ಮನೆಯಿಲ್ಲ, ಸತ್ತರೆ ಹೂಳಲು ಸ್ಮಶಾನವಿಲ್ಲ. ಇಂತಹ ಪರಿಸ್ಥಿತಿ ಒದಗಿ ಬಂದಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರು ಗಮನ ಹರಿಸಿ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಬೇಕು, ಮನೆ ನಿರ್ಮಿಸಿಕೊಡಬೇಕು ಜತೆಗೆ ಸ್ಮಶಾನ ಜಾಗ ಕಲ್ಪಿಸಬೇಕು” ಎಂದು ವಿನಂತಿಸಿದರು.
