ಕೊಡಗು ಜಿಲ್ಲೆಯ ದಕ್ಷಿಣ ಭಾಗದ ಮುನಿಕಾಡು(ಬ್ರಹ್ಮಗಿರಿ) ಮಂಚಳ್ಳಿಯಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ನದಿ ಪೊನ್ನಂಪೇಟೆ, ವಿರಾಜಪೇಟೆ ಮಾರ್ಗವಾಗಿ ನಾಗರಹೊಳೆ ಅಭಯಾರಣ್ಯ, ಇರುಪು ಜಲಪಾತ, ಶ್ರೀಮಂಗಲ, ಕಾನೂರು, ತಿತಿಮತಿವರೆಗೂ ಶುದ್ಧವಾಗಿ ಹರಿಯುವ ನದಿ ಕೊಡಗಿನಲ್ಲಿ ವಿಶಿಷ್ಟವಾದ ಸ್ಥಾನ ಹೊಂದಿದೆ.
ಸುಮಾರು 180 ಕಿಮೀ ಉದ್ದ ಹರಿಯುವ ಈ ನದಿ ಹನಗೂಡು ಮೂಲಕ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿಗೆ ಪ್ರವೇಶ ಪಡೆಯುವ ನದಿ. ಅಲ್ಲಿಂದ ಬಹುತೇಕ ಕೊಳಚೆಯ ರೂಪದಲ್ಲಿ ಹೊಲಸಾಗಿ ಹರಿಯುತ್ತದೆ.
ರಾಜ್ಯದಲ್ಲಿ ಒಂದುವೇಳೆ ಹೊಸ ಜಿಲ್ಲೆ ಏನಾದರೂ ರಚನೆಯಾದರೆ ಹುಣಸೂರು ಅಗ್ರ ಸ್ಥಾನದಲ್ಲಿದೆ. ಹೀಗಿರುವ ಪಟ್ಟಣ ನೂರಾರು ಸಮಸ್ಯೆಗಳಿಂದ ನಲುಗುತ್ತಿದೆ. ಅದರಲ್ಲೂ ಕರ್ನಾಟಕ ಏಕೀಕರಣದ ಕರ್ತೃ ಡಿ ದೇವರಾಜ ಅರಸು ಅವರ ಕರ್ಮಭೂಮಿ, ಸ್ವತಃ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ದುರಾದೃಷ್ಟವಶಾತ್ ಬದ್ಧತೆಯ ರಾಜಕಾರಣ, ರಾಜಕಾರಣಿಗಳು ಇಲ್ಲದೇ ಇರುವುದು ಹುಣಸೂರು ಪಟ್ಟಣಕ್ಕೆ ಶಾಪವಾಗಿ ಪರಿಣಮಿಸಿದೆ. ಯಾರೊಬ್ಬರಿಗೂ ಹುಣಸೂರಿನ ಅಭಿವೃದ್ಧಿ, ಮೂಲಸೌಕರ್ಯ ಕಲ್ಪಿಸುವ ಇರಾದೆಯೇ ಇಲ್ಲ.ಕೇವಲ ರಾಜಕಾರಣದ ಮೇಲಾಟ ಬಿಟ್ಟರೆ, ಹುಣಸೂರಿನ ಅಭಿವೃದ್ದಿ ನಗಣ್ಯ.

ಹುಣಸೂರು ಪಟ್ಟಣ ಬೃಹತ್ತಾಗಿ ಬೆಳೆದಿದೆ. ಆದರೆ ಕಿರಿದಾದ ರಸ್ತೆಗಳು, ಅವೈಜ್ಞಾನಿಕ ಒಳಚರಂಡಿ, ಸಮರ್ಪಕವಲ್ಲದ ಯುಜಿಡಿ ವ್ಯವಸ್ಥೆಯಿಂದ ಪಟ್ಟಣದ ಕೊಳಚೆ ನೀರು ನೇರವಾಗಿ ಲಕ್ಷ್ಮಣ ನದಿಗೆ ಸೇರುತ್ತದೆ. ಹುಣಸೂರು ಪಟ್ಟಣದ ಬಜಾರ್ ರಸ್ತೆ ಮೂಲಕ ಯಾವುದೇ ಗಲ್ಲಿ, ಮೊಹಲ್ಲಾ, ಬಡಾವಣೆ ಪ್ರವೇಶ ಮಾಡಿ ಗುಂಡಿ ಬಿದ್ದ ರಸ್ತೆಗಳ ಮೇಲೆ ನೀರು ಸಂಗ್ರಹವಾಗುತ್ತದೆ. ಒಳಚರಂಡಿ ವ್ಯವಸ್ಥೆ ಇಲ್ಲ, ರಾಜ ಕಾಲುವೆ ಅಂತೂ ಇಲ್ಲವೇ ಇಲ್ಲ, ಯುಜಿಡಿ ವಾಲ್‌ಗಳು ಅಲ್ಲಲ್ಲಿ ರಸ್ತೆಯ ಮಧ್ಯೆ ಕಾಣಸಿಗುತ್ತವೆ.
ಹುಣಸೂರು ಪಟ್ಟಣದ ಯುಜಿಡಿ, ಒಳಚರಂಡಿ ನೀರನ್ನು ನೇರವಾಗಿ ಹೊಳೆಗೆ ಬಿಡಲಾಗಿದೆ. ಯಾವುದೇ ಸಂಸ್ಕರಣೆ ಮಾಡದೆ ಪಟ್ಟಣದ ಕಲುಷಿತ ಚರಂಡಿ ನೀರು, ಯುಜಿಡಿ ನೀರು ನದಿ ಸೇರುತ್ತಿದೆ. ಅದಲ್ಲದೆ ಹುಣಸೂರು ತಾಲೂಕಿನಲ್ಲಿ ಸುಮಾರು 55 ಕಿಮೀ ವ್ಯಾಪ್ತಿ ಹರಿಯುವ ಈ ನದಿ ಸುತ್ತಮುತ್ತಲಿನ ಹಳ್ಳಿಗಳ ಕೊಳಚೆ ನೀರು ಸಹ ನೇರವಾಗಿ ನದಿಗೆ ಹರಿಬಿಡಲಾಗಿದೆ. ಅದರಲ್ಲಿ ಪ್ರಮುಖವಾಗಿ ದೊಡ್ಡ ಗ್ರಾಮವಾದ ಕಟ್ಟೆ ಮಳಲವಾಡಿ ಸುಮಾರು 11 ಸಾವಿರ ಜನಸಂಖ್ಯೆ ಹೊಂದಿದೆ. ಆದರೆ ಸ್ಥಳೀಯ ಆಡಳಿತದ ವೈಫಲ್ಯದಿಂದ ಗ್ರಾಮದ ಕೊಳಚೆ ನೀರು ನದಿಗೆ ಸೇರುತ್ತಿದೆ. ಈ ಗ್ರಾಮದಲ್ಲಂತೂ ರಾಜಾರೋಷವಾಗಿ ಒಳಚರಂಡಿ ನೀರನ್ನು ನದಿಯ ಕಡೆಗೆ ಹರಿ ಬಿಡಲಾಗಿದೆ. ಊರಿನ ಬದಿಗಳಲ್ಲಿ ಚರಂಡಿ ನೀರಿನ ದುರ್ವಾಸನೆ ಹೇಳತೀರದು. ಅದೆಲ್ಲ ಸೇರುವುದು ಇದೇ ಲಕ್ಷ್ಮಣ ತೀರ್ಥ ನದಿಗೆ.

ಲಕ್ಷ್ಮಣ ತೀರ್ಥ ನದಿ ಸದಾಕಾಲ ಹಸಿರುಮಯವಾಗಿ ಕೂಡಿರುತ್ತದೆ. ಒಂದಷ್ಟು ಮಳೆ ಬಿದ್ದ ಸಮಯದಲ್ಲಿ ಮಾತ್ರ ಇಲ್ಲಿ ನದಿ ಹರಿಯುತ್ತದೆ ಎನ್ನುವಂತೆ ಗೋಚರಿಸುತ್ತದೆ. ಇನ್ನು ನದಿಯ ನೀರು ದುರ್ವಾಸನೆಯಿಂದ ಕೂಡಿದೆ. ನದಿಯ ನೀರಿನ ಬಣ್ಣ ಕೂಡ ಕಲುಷಿತವಾಗಿ ಕಾಣುತ್ತದೆ. ಮನೆ ಬಳಕೆಗೂ ಯೋಗ್ಯವಾಗಿಲ್ಲ. ಮಳೆ ಜೋರಾಗಿ ಬಂದು ನೀರಿನ ಹರಿವಿನ ಮಟ್ಟ ಹೆಚ್ಚಾದಾಗ ಕಲುಷಿತವಾಗಿರುವುದು ಕಾಣದಿದ್ದರೂ ನದಿಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿರುವುದು ದುರಂತ.
ಒಂದು ಪಟ್ಟಣದಲ್ಲಿ ಹರಿಯುವಂತಹ ನದಿಯನ್ನು ಆ ಪಟ್ಟಣದ ಜನರೇ ಬಳಸಲು ಆಗದಂತಹ ಪರಿಸ್ಥಿತಿ ಎದುರಾಗಿದೆ. ಒಂದು ಪಟ್ಟಣದ ಹೃದಯಭಾಗದಲ್ಲಿ ಹರಿಯುವ ನದಿ ಇದ್ದರೂ ನೀರು ಬಳಕೆಗೆ ಯೋಗ್ಯವಾಗಿಲ್ಲ. ಕುಡಿಯಲು ಯೋಗ್ಯವಲ್ಲ.
ಇದು ಲಕ್ಷಣತೀರ್ಥ ನದಿಯ ದುಃಸ್ಥಿತಿ.

ಕೋಳಿ ಅಂಗಡಿಗಳ ತ್ಯಾಜ್ಯ ನಿರ್ವಹಣೆ ಮಾಡದೆ, ವಿಲೇವಾರಿ ಮಾಡದೆ ನೇರವಾಗಿ ನದಿಗೆ ತಂದು ಬಿಸಾಡುವುದರಿಂದ ರೋಗ ರುಜಿನಗಳು ಹೆಚ್ಚುತ್ತಿವೆ. ಹುಣಸೂರು ನಗರಸಭೆ ಹೊಂದಿದ್ದರೂ ತ್ಯಾಜ್ಯ ನಿರ್ವಹಣೆಯಲ್ಲಿ ಹಿಂದುಳಿದಿದೆ. ಲಕ್ಷಣತೀರ್ಥ ನದಿ ಉಳಿಸಿಕೊಳ್ಳುವ ಕಡೆ ಗಮನ ಹರಿಸಿಲ್ಲ. ಇನ್ನು ಮೌಢ್ಯಗಳಿಂದ ಹೊರಬರದ ನಮ್ಮ ಜನಗಳು ಮನೆಯಲ್ಲಿ ಪೂಜಿಸುವ, ಆಚರಿಸುವ ಪೂಜಾ ಸಾಮಗ್ರಿಗಳು, ಒಣಗಿದ ಹೂವು ಹಾರ, ಅರಿಶಿಣ ಕುಂಕುಮ ಇತ್ಯಾದಿ ಎಲ್ಲವನ್ನೂ ತಂದು ಇದೇ ನದಿಗೆ ಎಸೆಯುತ್ತಾರೆ. ಇದರಿಂದ ಪುನೀತರಾಗಲು, ನದಿಗೆ ತ್ಯಾಜ್ಯ ಎಸೆಯಬಾರದೆನ್ನುವ ಸಾಮಾನ್ಯ ಜ್ಞಾನವೂ ಇಲ್ಲದಿರುವುದು ಶೋಚನೀಯ ಸಂಗತಿ.

ನದಿ ಹರಿವಿನ ಅಂಚಿನಲ್ಲಿ ವಾಸ ಮಾಡುವ ಜನರು ತಮ್ಮ ಊರಿನಲ್ಲಿ ಹರಿಯುವ ನದಿಯನ್ನು ಉಪಯೋಗಿಸಲಾರದೆ ಕಾವೇರಿ ನದಿಯ ಮೇಲೆ ಆಸರೆಯಾಗಿದ್ದಾರೆ. ನೀರಿಗಾಗಿ ತತ್ತರಿಸುತ್ತಿದ್ದಾರೆ. ಲಕ್ಷ್ಮಣತೀರ್ಥ ನದಿ ಹುಣಸೂರು ಪಟ್ಟಣದಿಂದ ಹೊಸರಾಮೇನಹಳ್ಳಿ, ಶಿರಿಯೂರು ಮೂಲಕ ನೇರವಾಗಿ ಕಾವೇರಿ ಒಡಲಿಗೆ ಕೆಆರ್‌ಎಸ್ ಅಣೆಕಟ್ಟೆಗೆ ಸೇರುತ್ತದೆ. ಅದುವೇ ಸಂಪೂರ್ಣವಾಗಿ ಕಲುಷಿತಗಂಡು ಹೊಲಸಾಗಿ ಗಬ್ಬುನಾರುವ ನೀರು ಕೆಆರ್‌ಎಸ್ ಅಣೆಕಟ್ಟಗೆ ಸೇರುತ್ತಿದೆ.
ಹುಣಸೂರು, ಕೆ ಆರ್ ನಗರ ತಾಲೂಕಿನಲ್ಲಿ ಸುಮಾರು 75 ರಿಂದ 80 ಕಿಮೀ ಹರಿಯುವ ಈ ನದಿ ಬಹುತೇಕ ಇದ್ದರೂ ಸತ್ತಂತಿದೆ. ಈವರಗೆ ಯಾರೊಬ್ಬರೂ ಕೂಡಾ ಕಾವೇರಿ ನದಿಗೆ ಮಲಿನವಾದ ಲಕ್ಷ್ಮಣ ತೀರ್ಥ ನದಿ ಸೇರುತ್ತಿದೆ. ಇದೇ ನೀರನ್ನು ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ಹಲವು ನಗರಗಳು ಕುಡಿಯಲು ಬಳಸುತ್ತಿವೆ. ಇದರಿಂದಾಗುವ ಅನಾಹುತದ ಬಗ್ಗೆ ಯಾರೂ ಕೂಡ ಯೋಚಿಸುವುದಕ್ಕೂ ಹೋಗಿಲ್ಲ. ಒಬ್ಬರೂ ಈ ಬಗ್ಗೆ ಮಾತನಾಡಿಲ್ಲ. ಸಾಕ್ಷಿ ಪ್ರಜ್ಞೆಗಳು ಸತ್ತಂತೆ ಕಾಣುತ್ತಿವೆ.

ಕಾವೇರಿ ನದಿ ಮಲಿನವಾಗಿದೆಯೆಂದು ಈ ಹಿಂದೆ ತಮಿಳುನಾಡು ಸರ್ಕಾರ ನ್ಯಾಯಾಲಯದಲ್ಲಿ ಕೇಸ್ ದಾಖಲು ಮಾಡಿತ್ತು. ಇದಕ್ಕೆ ಕಾರಣ ಲಕ್ಷ್ಮಣತೀರ್ಥ ನದಿ. ನಮ್ಮ ಜನರು ತಮ್ಮಿಂದ ತಾವೇ ತಮ್ಮ ಕೈಯ್ಯಾರೆ ಹಾಳು ಮಾಡಿರುವ ನದಿ ಅಂತ ಕರ್ನಾಟಕ ರಾಜ್ಯದಲ್ಲಿ ಇದ್ದರೆ ಅದು ಲಕ್ಷಣ ತೀರ್ಥ. ಜನಪ್ರತಿನಿಧಿಗಳಿಗಾಗಲಿ, ಸ್ಥಳೀಯ ಆಡಳಿತ ವರ್ಗಕ್ಕಾಗಲಿ, ಯಾವುದೇ ಅಧಿಕಾರಿಗಳಿಗಾಗಲಿ ಇಚ್ಛಾಶಕ್ತಿಯೇ ಇಲ್ಲ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕೊಲ್ಹಾರದ ಕಲ್ಲು ಗಣಿಗಾರಿಕೆ ಬಂದ್ ಮಾಡುವಂತೆ ರೈತರ ಆಗ್ರಹ
ಹುಣಸೂರು ಪಟ್ಟಣದಲ್ಲಿ ಎರಡು ಕಡೆ ವೆಟ್ ವಾಲ್ ಆಗ್ತಾ ಇದೆ,ಆಗಿದೆ. ಎರೆಡು ಕಡೆ ದೊಡ್ಡ ಸಾಮರ್ಥ್ಯದ ಘಟಕಗಳು ಹುಣಸೂರು ಪಟ್ಟಣದ ಕೊಳಚೆ ನೀರು,ಯುಜಿಡಿ ನೀರನ್ನು ಸಂಸ್ಕರಣೆ ಮಾಡಿ ಬಿಡುವ ಯೋಜನೆ.ಆದರೆ ಇದುವರೆಗೆ ಅಂತಹ ಕೆಲಸ ಆಗಿಲ್ಲ,ಅನುಷ್ಠಾನ ಗೊಂಡಿಲ್ಲ ಕೊಳಚೆ ನೀರು,ತ್ಯಾಜ್ಯ, ಯುಜಿಡಿ ನೀರು ನದಿ ಸೇರುವುದನ್ನು ತಪ್ಪಿಸಿಲ್ಲ.

ಹುಣಸೂರು ಪಟ್ಟಣದಲ್ಲಿ ಈಗಲೂ ಕೂಡಾ ಒಳಚರಂಡಿಗಳು ಕಾಣುವುದಿಲ್ಲ, ಯುಜಿಡಿ ಇದಿಯೋ ಇಲ್ಲವೋ ಎನ್ನುವಂತಿದೆ. ಇದೆಲ್ಲವೂ ಬಹಳ ಹಿಂದೆ ಆಗಿರುವಂತದ್ದು. ಪಟ್ಟಣ ಬೆಳೆದಂತೆಲ್ಲ ಅದರ ಸಾಮರ್ಥ್ಯ ಕುಂದಿದೆ. ಪಟ್ಟಣದ ಜನರೂ ಕೂಡ ಜಾಗ ಒತ್ತುವರಿ ಮಾಡಿಕೊಂಡು ಚರಂಡಿ ಕಾಣದ ಹಾಗಾಗಿದೆ. ಹೀಗಿರುವಾಗ ಹುಣಸೂರಿನ ನಗರಸಭೆಗೆ ಸಂಬಂಧಪಟ್ಟ ಅಧಿಕಾರಿಗಳು,
ಜನಪ್ರತಿನಿಧಿಗಳು ಶಾಶ್ವತ ಪರಿಹಾರಕ್ಕೆ ಸೂಕ್ತಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ.
ಈವರೆಗೂ ಯುಜಿಡಿ ಬದಲಿ ವ್ಯವಸ್ಥೆ, ಒಳಚರಂಡಿ ನಿರ್ವಹಣೆ ಮಾಡದೆ, ಏನೂ ಗೊತ್ತಿಲ್ಲದಂತೆ ತಾಲೂಕು ಆಡಳಿತ ಮುಗುಮ್ಮಾಗಿ ವರ್ತನೆ ತೋರುತ್ತಿದೆ. ಹೆಸರಿಗೆ ಲಕ್ಷಣತೀರ್ಥ ಆದರೆ ಕುಡಿಯಲು ಯೋಗ್ಯವಾಗದೆ ತೀರ್ಥವಾಗಿ ಉಳಿಯದೆ, ವಿಷಕಾರಿಯಾಗಿದೆ. ಕೃಷಿಗೂ ಸಹ ಯೋಗ್ಯವಾಗಿಲ್ಲ. ಹೊಲಸಿನಿಂದಾಗಿ ಗಬ್ಬುನಾರುತ್ತಿದೆ.
