ಸಂಜೆ ಕಾಲೇಜಿಗೆ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳು ತಮ್ಮ ದುಡಿಮೆಯ ತತ್ವದೊಂದಿಗೆ ವಿದ್ಯಾಭ್ಯಾಸ ಮಾಡುತ್ತಾರೆ. ತಮ್ಮ ಬದುಕಿನ ಜತೆಗೆ ವಿದ್ಯಾಭ್ಯಾಸ ಮಾಡಬೇಕೆಂಬ ಹಂಬಲದೊಂದಿಗೆ ತರಗತಿಗಳಿಗೆ ಬರುತ್ತಾರೆ ಎಂದು ಮೈಸೂರು ನಗರದ ಮಾನಸ ಗಂಗೋತ್ರಿಯ ಡಾ ಬಿ ಆರ್ ಅಂಬೇಡ್ಕರ್ ಪೀಠ ಸಂದರ್ಶಕ ಪ್ರಾಧ್ಯಾಪಕ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಡಾ. ಬಿ ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮಾನಸಗಂಗೋತ್ರಿ ಮತ್ತು ಮೈಸೂರು ವಿಶ್ವ ವಿದ್ಯಾನಿಲಯ, ಮಹಾರಾಜ ಸಂಜೆಕಾಲೇಜು ಸಹಯೋಗದೊಂದಿಗೆ ನಡೆದ ಡಾ. ಅಂಬೇಡ್ಕರ್ ಬರಹಗಳು : ಸಾಂಸ್ಕೃತಿಕ ವಿಶ್ಲೇಷಣೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
“ಸಂಜೆ ತರಗತಿಗೆ ಬರುತ್ತಿದ್ದ ಬಡ ವಿದ್ಯಾರ್ಥಿಯೊಬ್ಬ ಬಡಗಿಯಾಗಿದ್ದು, ಆತ ಕೆಲಸ ಮುಗಿಸಿ ತರಗತಿಗೆ ಬಂದಾಗ ಬೆಂಚಿನ ಮೇಲೆಲ್ಲ ಬಿದ್ದಿದ್ದಂತಹ ಮರದ ಹೊಟ್ಟು ಸುವಾಸನೆಭರಿತವಾಗಿರುತ್ತಿತ್ತು. ದಣಿದು ಬರುತ್ತಿದ್ದ ಆತನ ದುಡಿಮೆಯ ಧೂಳು ಕೊಠಡಿಯನ್ನು ಘಮಘಮಿಸುತ್ತಿತ್ತು” ಎಂದು ಹೇಳಿದರು.
“ಮೂರು ದೊರೆಗಳು ಒಬ್ಬ ವಿದ್ವಾಂಸನ ಬೆನ್ನೆಲುಬಾಗಿ ನಿಂತು ಅಂಬೇಡ್ಕರ್ ಅವರನ್ನು ದಮನಿತರ ನಾಯಕನನ್ನಾಗಿ ರೂಪಿಸಿದರು. ಅಂಬೇಡ್ಕರ್ ಅವರ ವ್ಯಕ್ತಿತ್ವ, ಚಳವಳಿ, ಅವರು ನೀಡಿದಂಥ ಸಂವಿಧಾನ ದಮನಿತರ ಬದುಕಿನಲ್ಲಿ ಸಾಮಾಜಿಕ ಬದಲಾವಣೆಗಳಿಗೆ ಸಾಧ್ಯವಾಯಿತು. ಬಳಿಕ ಬುದ್ಧನಿಂದ ಪ್ರೇರಣೆಗೊಂಡಿದ್ದ ಅಂಬೇಡ್ಕರ್ ಲಕ್ಷಾಂತರ ಅನುಯಾಯಿಗಳ ಜತೆಗೆ ಬೌದ್ಧ ಧಮ್ಮ ದೀಕ್ಷೆಯನ್ನು ಪಡೆದರು” ಎಂದು ಹೇಳಿದರು.

ಬರೋಡಾದ ಸಯ್ಯಾಜಿರಾವ್ ಗಾಯಕವಾಡ, ಕೊಲ್ಲಾಪುರದ ಸಾಹು ಮಹಾರಾಜ ಮತ್ತು ಮೈಸೂರಿನ ಒಡೆಯರ್ ಮನೆತನಗಳ ನಡುವೆ ಅಗಾಧವಾದ ಸ್ನೇಹವಿತ್ತು. ಅಲ್ಲದೆ ಒಬ್ಬೊಬ್ಬರ ಆಡಳಿತವನ್ನು ಅನುಸರಿಸುವ ಮೂಲಕ ಸಾಮಾಜಿಕ ನ್ಯಾಯ ದೊಕಿಸುವ ನಿಟ್ಟಿನಲ್ಲಿ ರಾಜಪ್ರಭುತ್ವದಲ್ಲಿಯೂ ಕೂಡ ಸಾಮಾಜಿಕ ಪ್ರಜಾಪ್ರಭುತ್ವದಂತಹ ಆಡಳಿತ ನಡೆಸಿದ್ದರು. ಈ ಮೂಲಕ ದಲಿತ ದಮನಿತರು ಹಾಗೂ ಮಹಿಳೆಯರಿಗಾಗಿ ಹಲವಾರು ಸುಧಾರಣೆಗಳನ್ನು ತಂದರು” ಎಂದು ತಿಳಿಸಿದರು.
ಸಮಾಜ ಸುಧಾರಕ ಜ್ಯೋತಿರಾವ್ ಫುಲೆಯವರಿಂದ ಪ್ರಭಾವಿತರಾಗಿದ್ದ ಸಯ್ಯಾಜಿರಾವ್ ಗಾಯಕವಾಡ ಅವರು ದಲಿತರು ಮತ್ತು ಮಹಿಳೆಯರಿಗಾಗಿ ಆರು ಕಾನೂನುಗಳನ್ನು ಜಾರಿಗೆ ತಂದಿದ್ದರು. ಅವುಗಳೆಂದರೆ ಅಸ್ಪೃಶ್ಯತೆ ನಿಷೇಧ, ವಿಧವಾ ವಿವಾಹ, ಬಾಲ್ಯ ವಿವಾಹ ನಿಷೇಧ, ವಿಶೇಷ ಶಿಕ್ಷಣ(ವಿದೇಶಕ್ಕೆ ಹೋಗುವವರಿಗೆ ಉಚಿತ ಶಿಕ್ಷಣ), ದಲಿತರಿಗೆ ಉಚಿತ ಶಿಕ್ಷಣ ಹಾಗೂ ಸ್ತ್ರೀಯರಿಗೆ ಶಿಕ್ಷಣದಂತಹ ಕಾನೂನುಗಳನ್ನು ಜಾರಿಗೆ ತಂದಿದ್ದರು. ಇದರಂತೆ ಅಂಬೇಡ್ಕರ್ ಅವರಿಗೆ ಪ್ರತಿ ತಿಂಗಳು ₹25 ವಿದ್ಯಾರ್ಥಿ ವೇತನ ನೀಡುವ ಮೂಲಕ ಅವರು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವಂತೆ ನೆರವಾದರು” ಎಂದು ಹೇಳಿದರು.

ಸಾಹು ಮಹಾರಾಜರು ತಮ್ಮ ಸಮಾಜ ಸುಧಾರಣೆಯ ಆಳ್ವಿಕೆಯಲ್ಲಿ ಸಂಪ್ರದಾಯವಾದಿಗಳಿಂದ ಕಿರುಕುಳ ಅನುಭವಿಸುವ ಮೂಲಕ ಬಹುತೇಕ ನೊಂದಿದ್ದರು. ದಲಿತರು ಮತ್ತು ಮಹಿಳೆಯರಿಗಾಗಿ ನೆರವಾಗುತ್ತಿದ್ದುದ್ದನ್ನು ಖಂಡಿಸಿ ಬಾಲಗಂಗಾಧರ ತಿಲಕ್ ಅವರು ತಮ್ಮ ʼಕೇಸರಿʼ ಪತ್ರಿಕೆಯ ಮೂಲಕ ಸಾಹು ಮಹಾರಾಜರನ್ನು ನಿಂದಿಸುತ್ತಿದ್ದರು. ಇದರಿಂದ ತೀರಾ ಅಸಹಾಯಕತೆಗೆ ಒಳಗಾಗಿದ್ದ ಸಾಹು ಮಹಾರಾಜ, ಅಂಬೇಡ್ಕರ್ ಅವರು ಪತ್ರಿಕೆ ಆರಂಭಿಸುವುದಾಗಿ ಸಲಹೆ ನೀಡಿದರು. ಅದರಿಂದಾಗಿ ಅಂಬೇಡ್ಕರ್ ಅವರು ಮೊಟ್ಟ ಮೊದಲ ಬಾರಿಗೆ 1920ರಲ್ಲಿ ಮೂಕನಾಯಕ ಪತ್ರಿಕೆಯನ್ನು ಆರಂಭಿಸಿದರು. ಇದರ ಮೂಲಕ ತಳಸಮುದಾಯಗಳ ನೋವು ಮತ್ತು ಬಂಡಾಯವನ್ನು ಬಹಿರಂಗಪಡಿಸುವಲ್ಲಿ ಯಶಸ್ವಿಯಾದರು” ಎಂದು ತಿಳಿಸಿದರು.
“ಸಾಹು ಮಹಾರಾಜರ ಸಹಾಯದೊಂದಿಗೆ ಅಂಬೇಡ್ಕರ್ ಅವರು ನಿಮ್ನ ವರ್ಗಗಳ ಸಂಘ(ಡಿಪ್ರೆಸ್ಡ್ ಕ್ಲಾಸ್ ಅಸೋಸಿಯೇಷನ್)ವನ್ನು ಸ್ಥಾಪನೆ ಮಾಡಿದರು. ಮಹಾರಾಜರು ಅಂಬೇಡ್ಕರ್ ಅವರನ್ನು ನಿರಂತರವಾಗಿ ಪೋಷಿಸಿದರು. ಅದರಂತೆಯೇ ಸಂಘದ 3ನೇ ಸಭೆ ದೆಹಲಿಯಲ್ಲಿ ನಡೆದಾಗ ಅಂಬೇಡ್ಕರ್ ಅವರ ಅನುಪಸ್ಥಿತಿಯಲ್ಲಿ ಮಹಾರಾಜರೇ ಈ ಸಭೆಯನ್ನು ಪೂರ್ಣಗೊಳಿಸಿದ್ದರು. ದಲಿತ ದಮನಿತರ ಮಹಾನ್ ನಾಯಕ ಅಂಬೇಡ್ಕರ್. ನಾನು ನಿಮ್ಮ ಸೇವಕ, ನನ್ನ ಸೇವೆಯನ್ನು ನೀವು ಪಡೆದುಕೊಳ್ಳಿರೆಂದು ಸಾರಿದ್ದರು. ಅಲ್ಲದೆ ಭಾರತದಲ್ಲಿ ರಾಜಪ್ರಭುತ್ವದ ಜತೆಗೆ ಸಾಮಾಜಿಕ ಜನಸಮೂಹ ಪ್ರಭುತ್ವವನ್ನು ಆರಂಭಿದ ಮೊದಲ ದೊರೆ ಸಾಹು ಮಹಾರಾಜ” ಎಂದು ತಿಳಿಸಿದರು.

“ಅಂಬೇಡ್ಕರ್ ಅವರು 1954ರಲ್ಲಿ ಮೈಸೂರಿಗೆ ಭೇಟಿನೀಡಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ಮಾತನಾಡಿ, ದಲಿತರ ವಿದ್ಯಾಭ್ಯಾಸಕ್ಕಾಗಿ ಶಾಲೆ ನಿರ್ಮಾಣ ಮಾಡಲು ಭೂಮಿಯನ್ನು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಒಡೆಯರ್ ಬೆಂಗಳೂರಿನ ಸದಾಶಿವ ನಗರದಲ್ಲಿ ಶಿಕ್ಷಣ ಸಂಸ್ಥಗಳನ್ನು ಸ್ಥಾಪಿಸಲು ಅಂಬೇಡ್ಕರ್ ಅವರಿಗೆ ಭೂಮಿ ನೀಡಿದರು. ಇದರಿಂದ ಅಂಬೇಡ್ಕರ್ ಅಸ್ಪೃಶ್ಯರಿಗೆ ಶಾಲೆ, ಮಹಿಳೆಯರಿಗೆ ಶಾಲೆ ತೆರೆಯುವ ಮೂಲಕ ಮಹಿಳೆಯರು ಮತ್ತು ದಲಿತರಿಗೆ ಆಧುನಿಕ ಶಿಕ್ಷಣ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅಲ್ಲದೆ ಟಿ ನರಸೀಪುರದಲ್ಲಿ ದೇವಾಲಯ ಪ್ರವೇಶ ಮಾಡುವಲ್ಲಿಯೂ ಭಾಗಿಯಾಗಿದ್ದರು. ಹೀಗೆ ಬಾಬಾ ಸಾಹೇಬರು ವಿದ್ವಾಂಸರಾಗಿ ಬೆಳೆಯಲು ಈ ಮೂವರೂ ಮಹರಾಜರು ನಿರಂತರವಾಗಿ ಪೋಷಿಸಿದರು” ಎಂದರು.
“ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಭೂಮಿ ನೀಡಿದ್ದಲ್ಲದೆ, ಮೈಸೂರಿನ ಆಶೋಕಪುರಂ ಭಾಗದಲ್ಲಿ ವೀಳ್ಯದೆಲೆ ಬೆಳೆಯಲು ದಲಿತರಿಗೆ ಭೂಮಿ ನೀಡಿದ ಒಡೆಯರ್ ಕೃಷಿಗೂ ಉತ್ತೇಜನ ನೀಡಿದ್ದರು. ಸಯ್ಯಾಜಿರಾವ್ ಮತ್ತು ಸಾಹು ಮಾಹಾರಾಜರು ದಲಿತರಿಗೆ ಮತ್ತು ಮಹಿಳೆಯರಿಗೆ ವಿದ್ಯಾರ್ಥಿ ವೇತನ ನೀಡಿ ಉನ್ನತ ಶಿಕ್ಷಣವನ್ನು ಉತ್ತೇಜಿಸಿದ್ದರು. ರಾಜಪ್ರಭುತ್ವದಲ್ಲಿಯೂ ಸಾಮಾಜಿಕ ಪ್ರಜಾಪ್ರಭುತ್ವದ ಆಡಳಿತ ನಡೆಸಿದ ಈ ಮಹಾರಾಜರನ್ನು ನಾವೆಂದಿಗೂ ಮರೆಯುವಂತಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಹಿಳೆಯ ಬದುಕಿಗೆ ಘನತೆ ತಂದವರು ಅಂಬೇಡ್ಕರ್ : ಇಂದುಮತಿ ಪಾಟೀಲ್
ಕೊನೆಯಲ್ಲಿ, ಬಾಬಾ ಸಾಹೇಬರ ಶ್ರೇಷ್ಠ ಪುಸ್ತಕ, ಸಂಸ್ಕೃತಿ ಮತ್ತು ಚಾರಿತ್ರಿಕ ಪ್ರಜ್ಞೆಯನ್ನು ನೀಡುವಂತಹ ಜಾತಿ ವಿನಾಶ ಮತ್ತು ಕ್ರಾಂತಿ ಪ್ರತಿಕ್ರಾಂತಿ ಪುಸ್ತಕಗಳನ್ನು ಓದುವಂತೆ ಸಲಹೆ ನೀಡಿದರು.
ಪ್ರೊ. ಜೆ ಸೋಮಶೇಖರ್ ಅತಿಥಿ ಭಾಷಣ, ಪ್ರಾಂಶುಪಾಲ ವಿ ಷಣ್ಮುಗಂ ಅಧ್ಯಕ್ಷೀಯ ಭಾಷಣ ನೆರವೇರಿಸಿದರು. ಈ ವೇಳೆ ನರೇಂದ್ರ ಕುಮಾರ್, ರಾಜಪ್ಪಾಜಿ, ಮಹಾರಾಜ ಸಂಜೆ ಕಾಲೇಜು ಪ್ರೊ.ಸೌಭಾಗ್ಯವತಿ, ಅಂಬೇಡ್ಕರ್ ಅಧ್ಯಯನ ವಿಭಾಗದ ಎಚ್‌ಒಡಿ ಪ್ರೊ. ಶಿವಶಂಕರ್ ಮತ್ತು ಪ್ರಾಧ್ಯಾಪಕ ಜಯವರ್ಧನ್ ಸಿ ಹಾಗೂ ಎಲ್ಲ ವಿಭಾಗಗಳ ಪ್ರಾಧ್ಯಾಪಕ ಸಿಬ್ಬಂದಿ ಸೇರಿದಂತೆ ಅಂಬೇಡ್ಕರ್ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು ಮತ್ತು ಹಲವು ವಿಭಾಗಗಳ ವಿದ್ಯಾರ್ಥಿಗಳು ಇದ್ದರು.
