ಮೈಸೂರು ಜಿಲ್ಲೆ ಬೆಟ್ಟದಪುರದ ಬಾರಸೆ ಗ್ರಾಮದ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣ ಇದೀಗ ನಾಟಕೀಯ ತಿರುವು ಪಡೆದುಕೊಂಡಿದೆ. ಈಕೆ ಮಡಿಕೇರಿ ಅಬ್ಬಿ ಫಾಲ್ಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ಹುಸಿಯಾಗಿದ್ದು, ಆ ಮಹಿಳೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.
ಸರಸ್ವತಿ (33) ಎಂಬ ಮಹಿಳೆ ಸೆಪ್ಟೆಂಬರ್ 7ರಂದು ನಾಪತ್ತೆಯಾಗಿರುವುದಾಗಿ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಈಕೆಯ ಪತ್ತೆ ಕಾರ್ಯಕ್ಕೆ ಮುಂದಾದ ಸಂದರ್ಭದಲ್ಲಿ ಅಬ್ಬಿ ಫಾಲ್ಸ್ ಬಳಿ ಮಹಿಳೆಯ ಚಪ್ಪಲಿ, ಬಟ್ಟೆ, ಪರ್ಸ್ ಪತ್ತೆಯಾಗಿದ್ದವು. ಆಕೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿ ಎನ್ಡಿಆರ್ಎಫ್, ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಪ್ರಯೋಜನವಾಗಿರಲಿಲ್ಲ. ಈ ನಡುವೆ ಬೆಟ್ಟದಪುರದಲ್ಲಿರುವ ತನ್ನ ಸಹೋದರನಿಗೆ ಕರೆ ಮಾಡಿರುವ ಸರಸ್ವತಿ ತಾನು ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ನಾಪತ್ತೆಯಾಗುವ ಮುನ್ನ ಬರೆದಿಟ್ಟಿದ್ದ ಪತ್ರದಲ್ಲಿ ಏನಿದೆ?
ಈಕೆ ನಾಪತ್ತೆಯಾಗುವ ಮುನ್ನ ಮನೆಯಲ್ಲಿ ಬರೆದಿಟ್ಟು ಬಂದಿರುವ ಪತ್ರದಲ್ಲಿ ಈಕೆ ತಾನು ಅನುಭವಿಸಿದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.
“ನನ್ನ ಈ ನಿರ್ಧಾರಕ್ಕೆ ಯಾರೂ ಕಾರಣರಲ್ಲ. ಮದುವೆಯಾಗಿ 12ರಿಂದ 13 ವರ್ಷದವರೆಗೆ ಎಷ್ಟೇ ಕಷ್ಟ ಆದರೂ ಸಹಿಸಿಕೊಂಡು ಬಂದೆ. ಆದರೆ ನಮ್ಮ ಮನೆಯಲ್ಲಿ ನನ್ನ ಇಷ್ಟ ಕಷ್ಟ ಏನೂ ನಡೆಯಲಿಲ್ಲ. ಹೊರಗಡೆ ಹೋಗಬೇಕೆಂದರೆ ದುಡ್ಡು ಕೊಡುತ್ತಿರಲಿಲ್ಲ. ನನಗೆ ಅದು ಬೇಕು ಇದು ಬೇಕು ಎಂದು ಯಾವತ್ತೂ ಕೇಳುತ್ತಿರಲಿಲ್ಲ. ಗಂಡ ಒಂದು ದಿನವೂ ಎಲ್ಲೂ ಕರೆದುಕೊಂಡು ಹೋಗಲಿಲ್ಲ. ಬರೀ ದನ ಕರು ಇದರಲ್ಲೇ ಕಾಲ ಕಳೆಯುವುದಾಯಿತು. ನಾನು ಕೆಲಸಕ್ಕೆ ಹೋಗುತ್ತೇನೆಂದರೂ ಕಳುಹಿಸಲಿಲ್ಲ. ಯಾರನ್ನು ಮಾತನಾಡಿಸಿದರೂ ಗಂಡನಿಗೆ ಅನುಮಾನ. ಇತ್ತೀಚೆಗೆ ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ನಾನು ಎಲ್ಲೇ ಹೋದರು, ಏನೇ ಮಾಡಿಕೊಂಡರು, ಸತ್ತರೂ ಕೂಡ ಯಾರೂ ಜವಾಬ್ದಾರರಲ್ಲ. ನನ್ನನ್ನು ಹುಡುಕಬೇಡಿ, ನನ್ನ ಮಕ್ಕಳನ್ನು ಚೆನ್ನಾಗಿ ನೋಡ್ಕೊಳಿ” ಎಂದು ಆ ಪತ್ರದಲ್ಲಿ ಬರೆದಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಾಲಬಾಧೆಯಿಂದ ಮನನೊಂದ ರೈತ ಆತ್ಮಹತ್ಯೆ
ಜೀವ ಕಳೆದುಕೊಳ್ಳುವುದಾಗಿ ಪರೋಕ್ಷವಾಗಿ ಕುರುಹು ನೀಡಿ ನಾಪತ್ತೆಯಾಗಿದ್ದ ಈಕೆ ಪೊಲೀಸ್ ಇಲಾಖೆ ಮತ್ತು ಮನೆಯವರನ್ನು ಪೀಕಲಾಟಕ್ಕೆ ತಳ್ಳಿದ್ದು, ಇದೀಗ ಬೆಂಗಳೂರಿನಲ್ಲಿ ಇರುವುದಾಗಿ ಅವರೇ ತಿಳಿಸಿದ್ದಾರೆ.