ಮೈಸೂರು ನಗರದ ಶಾರದಾ ವಿಲಾಸ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ, ಗುರು ವಂದನೆ ಹಾಗೂ ಕಾಲೇಜಿನ ವಾರ್ಷಿಕ ಸಂಚಿಕೆ ‘ಶಾರದೆ’ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್ ಮತ್ತು ಜೀನೋಮಿಕ್ಸ್ ವಿಭಾಗದ ಮುಖ್ಯಸ್ಥೆ ಪ್ರೊ. ಸುತ್ತೂರು ಎಸ್. ಮಾಲಿನಿ ಮಾತನಾಡಿ “ಯೋಗ್ಯ ಮಾರ್ಗದರ್ಶನ ಇಲ್ಲದೆ ಗೊಂದಲದ ಸ್ಥಿತಿಯಲ್ಲಿ ಇರುವ ಇಂದಿನ ಯುವಜನರಿಗೆ ಮೌಲಿಕ ದಾರಿ ತೋರಿಸುವ ಅಗತ್ಯವಿದೆ ” ಎಂದು ಹೇಳಿದರು.
“ಇಂದಿನ ಯುವಕ ಯುವತಿಯರು ಪುಸ್ತಕಗಳಿಂದ ವಿಮುಖರಾಗಿ ಮೊಬೈಲ್ ಗೀಳು ಹಚ್ಚಿಕೊಳ್ಳುತ್ತಿರುವುದು ಹಲವು ಮಾನಸಿಕ ಹಾಗೂ ದೈಹಿಕ ಬೇನೆಗಳಿಗೆ ಕಾರಣವಾಗುತ್ತಿದೆ. ಇದಲ್ಲದೆ, ಜಂಕ್ ಫುಡ್ ಸೇವನೆ ಯುವ ಜನತೆಯನ್ನು ಮತ್ತಷ್ಟು ಹೈರಾಣುಗೊಳಿಸುತ್ತಿದೆ. ವಿದ್ಯಾರ್ಥಿಗಳ ನೆನಪಿನ ಶಕ್ತಿ ಇನ್ನು ಕೆಲವು ವರ್ಷಗಳಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಸಿಯುವ ಸಾಧ್ಯತೆ ಇದೆ. ಇದು ನಿಜಕ್ಕೂ ದುಶ್ಚಟಗಳಿಗಿಂತ ಭೀಕರವಾದುದು. ಯುವ ಸಮುದಾಯದ ನೈತಿಕ ಮೌಲ್ಯಗಳನ್ನು ಖಂಡಿತ ಬಾಧಿಸುತ್ತಿದೆ”.
“ಆಹಾರ ನಮ್ಮ ಮನಸ್ಸಿನ ಆರೋಗ್ಯದ ಮೇಲೆ ಗಾಢವಾದ ಪರಿಣಾಮ ಬೀರುವ ಸಂಗತಿ ಎಂದು ಬಹಳ ಜನರಿಗೆ ಗೊತ್ತಿಲ್ಲ. ಈ ಕುರಿತು ಜಾಗೃತಿ ಅಗತ್ಯ. ನಮ್ಮ ಇಂದಿನ ಶತ್ರು ಮೊಬೈಲ್ ಪೋನ್ ಹಾಗೂ ಜಂಕ್ ಪುಡ್. ಹಾಗಾಗಿ, ಇವುಗಳ ಮೇಲೆ ಹತೋಟಿ ಸಾಧಿಸಲು ಯೋಗ್ಯ ಮಾರ್ಗದರ್ಶನ ಅಗತ್ಯ” ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ದಿವ್ಯದೀಪ ಚಾರಿಟಬಲ್ ಟ್ರಸ್ಟ್, ‘ಕಲಿಯುವ ಮನೆ’ ಮೈಸೂರು, ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ಧರ್ಮದರ್ಶಿ ಎಂ.ಆರ್. ಅನಂತ ಕುಮಾರ್ ಮಾತನಾಡಿ, “ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಹಾಗೂ ಗುರಿಯ ಮಹತ್ವ ಎರಡೂ ಬಹುಮುಖ್ಯ. ಬಡ ಮಕ್ಕಳ ಹಾಗೂ ಹಿಂದುಳಿದ ಪ್ರದೇಶಗಳ ಮಕ್ಕಳ ಶೈಕ್ಷಣಿಕ ಪುರೋಭಿವೃದ್ಧಿಯ ನಿಟ್ಟಿನಲ್ಲಿ ತಮ್ಮ ‘ಕಲಿಯುವ ಮನೆ’ ಸಂಸ್ಥೆ ಸಾರ್ಥಕ ಸೇವೆ ಸಲ್ಲಿಸುತ್ತಿದೆ” ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ದೇವಿಕಾ ಮಾತನಾಡಿ “ಕಿರಿಯರ ಮನಸ್ಸುಗಳನ್ನು ನೇರ್ಪುಗೊಳಿಸುವಲ್ಲಿ ಇಂತಹ ಸಾಧಕರ ಮಾತುಗಳನ್ನು ವಿದ್ಯಾರ್ಥಿಗಳ ಎದೆಗಳಿಗೆ ದಾಟಿಸುವ ಕೆಲಸವನ್ನು ಕಾಲೇಜು ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ. ಮಕ್ಕಳ ಶೀಲ, ಚಾರಿತ್ರ್ಯ, ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ದಾರಿದೀಪ” ಎಂದರು.
ಈ ಸುದ್ದಿ ಓದಿದ್ದೀರಾ?ಟಿ. ನರಸೀಪುರ | ಕ್ಷುಲ್ಲಕ ಕಾರಣಕ್ಕೆ ಗಲಾಟೆ; ದಲಿತ ಯುವಕನಿಗೆ ಮನಬಂದಂತೆ ಥಳಿಸಿದ ಪೊಲೀಸರು
ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್.ನರಸಿಂಹ, ವಾರ್ಷಿಕ ಸಂಚಿಕೆ ಸಂಪಾದಕ ಡಾ. ಜಿ. ಆನಂದ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕೆ. ಎನ್.ಗಿರೀಶ, ಡಾ. ಎಚ್. ಎಲ್. ರೇಖಾ ಸೇರಿದಂತೆ ಇನ್ನಿತರರು ಇದ್ದರು.