ಮಹಿಳೆಯರ ಘನತೆ ಮತ್ತು ಮಾನವೀಯ ಮೌಲ್ಯ ಉಳಿಸಲು ವಲಯ ಮಟ್ಟದ ‘ಯುವಜನರ ಸಂಕಲ್ಪ’ ಸಮಾವೇಶವನ್ನು ಮೈಸೂರು ನಗರದ ಗೋವರ್ಧನ ಸಭಾಂಗಣದಲ್ಲಿ ಎಐಡಿವೈಓ ಸಂಘಟನೆಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಮೆಡಿಕಲ್ ಸರ್ವೀಸ್ ಸೆಂಟರ್‌ನ ರಾಜ್ಯಾಧ್ಯಕ್ಷೆ ಡಾ ಸುಧಾ ಕಾಮತ್ ಮಾತನಾಡಿ, ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯ ಮತ್ತು ಸಾಂಸ್ಕೃತಿಕ ಅಧಃಪತನವನ್ನು ನೋಡಿದರೆ ನಾವು ನಾಗರಿಕ ಸಮಾಜದದಲ್ಲಿ ಬದುಕುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಉಂಟು ಮಾಡುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಭದ್ರತೆ ಇಲ್ಲ, ಬದಲಾಗಿ ಹೆಣ್ಣು ಮಕ್ಕಳನ್ನು ನಿಯಂತ್ರಣದಲ್ಲಿ ಇಡುತ್ತಾರೆ ಎಂದು ಹೇಳಿದರು.
ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದೇ ಪೌರುಷ ಎಂಬುದಾಗಿ ಭಾವಿಸಿರುತ್ತಾರೆ. ಆದರೆ, ನಿಜವಾದ ಪೌರುಷ ಇರುವುದು ಅನ್ಯಾಯದ ವಿರುದ್ಧ ಧ್ವನಿ ಎತ್ತುವುದರಲ್ಲಿ. ನಮ್ಮ ನವೋದಯದ ಚಿಂತಕರು ಮತ್ತು ಸ್ವಾತಂತ್ರ ಹೋರಾಟಗಾರರು ಮಾಡಿದ್ದು ಇದನ್ನೇ. ಈಗಿನ ಸಮಾಜದಲ್ಲಿ ಅಶ್ಲೀಲ ಸಿನಿಮಾ, ಸಾಹಿತ್ಯಗಳು ತಾಂಡವಾಡುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕು.
ಯುವಜನರು ದಾರಿ ತಪ್ಪುವುದನ್ನು ತಡೆಗಟ್ಟಿ ,ಸಮಾಜದ ಪ್ರಗತಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಮನೋವೈದ್ಯ ಡಾ ಕಿಶೋರ್ ‘ಲೈಂಗಿಕ ಅಪರಾಧಗಳು – ಕಾರಣ ಮತ್ತು ಪರಿಹಾರ ‘ ಎಂಬ ವಿಷಯದ ಕುರಿತು ಸಂವಾದ ನಡೆಸಿ ಮಧ್ಯ , ಮಾದಕ ವ್ಯಸನಗಳು ಮಾನವನ ಚಿಂತನಾ ಶಕ್ತಿಯನ್ನು ಕುಂಠಿತಗೊಳಿಸುತ್ತವೆ. ಅವುಗಳ ಪ್ರಭಾವದಲ್ಲಿರುವ ಮನುಷ್ಯನಲ್ಲಿ ಪಶು ಪ್ರವೃತ್ತಿಗಳು ಮುನ್ನೆಲೆಗೆ ಬರುತ್ತವೆ. ಇದಲ್ಲದೆ ಸೇಡಿನ ಮನೋಭಾವ, ಪುರುಷ ಪ್ರಾಬಲ್ಯವನ್ನು ಪ್ರದರ್ಶಿಸುವ ಹಂಬಲ ಮೊದಲಾದ ಕಾರಣಗಳು ಲೈಂಗಿಕ ಅಪರಾಧಗಳಿಗೆ ಕಾರಣವಾಗುತ್ತಿವೆ ಎಂದು ತಿಳಿ ಹೇಳಿದರು.
ಸಾಮಾಜಿಕ ಮಾಧ್ಯಮಗಳು ಸಮಸ್ಯೆಯನ್ನು ಉಲ್ಬಣಗೊಳಿಸಿ ದೌರ್ಜನ್ಯಕ್ಕೊಳಗಾದವರು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿದ್ದು, ಶೈಕ್ಷಣಿಕ, ಕೌಟುಂಬಿಕ, ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗಳಿಗೆ ಒಳಗಾಗುತ್ತಾರೆ. ಹಾಗಾಗಿ, ಲೈಂಗಿಕ ದೌರ್ಜನ್ಯಗಳ ಕುರಿತು ಮಾತನಾಡುವ, ಅವುಗಳನ್ನು ತಡೆಗಟ್ಟಲು ಬೇಕಾದ ಕಾನೂನು ಹಾಗೂ ಸಾಮಾಜಿಕ ಬದಲಾವಣೆಗೆ ಹೋರಾಡುವ ಪ್ರಯತ್ನ ಎಲ್ಲರಿಂದ ನಡೆಯುವುದು ಅಗತ್ಯ ಎಂದರು.
‘ಯುವಜನರ ಮನಸ್ಸಿನ ತಲ್ಲಣಗಳು’ ವಿಚಾರ ಗೋಷ್ಠಿಯ ಭಾಗವಾಗಿ ಎಐಡಿವೈಓ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಡಾ ಜಿ ಶಶಿಕುಮಾರ್ ಮಾತನಾಡಿ, “ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ, ಭಗತ್ ಸಿಂಗ್‌ರಂತಹ ಹಲವಾರು ಯುವಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ, ಅವರಿಂದ ಸ್ಪೂರ್ತಿ ಪಡೆದು ಈಗಿನ ಯುವಕರು ಸಾಮಾಜಿಕ ಪರಿಸ್ಥಿತಿಗಳ ಬಗ್ಗೆ ಯೋಚಿಸಬೇಕು. ಸಮಾಜದ ಬಗ್ಗೆ ಚಿಂತನೆ ಮಾಡದಿದ್ದರೆ ನೈತಿಕವಾಗಿ, ಸಾಂಸ್ಕೃತಿಕವಾಗಿ ಬಲಗೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ವಿಕೃತತೆ ಹೆಚ್ಚಾಗಿ ಸೂಕ್ಷ್ಮ ಸಂವೇದನೆ ಎಂಬುದೇ ಕಡಿಮೆಯಾಗುತ್ತಿದೆ. ಹಾಗಾಗಿ ಧನಾತ್ಮಕ ವಿಚಾರಗಳು ಹೆಚ್ಚಾಗಿ ಪ್ರಚಾರವಾಗಬೇಕು”ಎಂದರು.
ಸಾಹಿತಿ ಶರತ್ ಚಂದ್ರ ಚಟರ್ಜಿ ಅವರ “ಮಾನವನ ಸಾವು ದುಃಖಕರ, ಆದರೆ ಮಾನವೀಯ ಮೌಲ್ಯಗಳ ಸಾವು ಅತ್ಯಂತ ದುಃಖಕರ” ಹಾಗಾಗಿ ಹೊಸ ಆದರ್ಶ ಮತ್ತು ಉದಾತ್ತ ಮೌಲ್ಯಕ್ಕಾಗಿ ತುಡಿತ ಇರುವ ಯುವಜನರು ಸಾಮಾಜಿಕ ಕೆಲಸಗಳಲ್ಲಿ ಭಾಗಿಯಾಗುವ ಮೂಲಕ ಹೊಸ ಸಾಂಸ್ಕೃತಿಕ ಆಂದೋಲನಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಫೆ.14ರಂದು ಉಚಿತ ಸಾಮೂಹಿಕ ಅಕ್ಷರಭ್ಯಾಸ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ
ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ, ಜಿಲ್ಲಾಧ್ಯಕ್ಷ ಸುನಿಲ್ ಟಿ ಆರ್, ಜಿಲ್ಲಾ ಕಾರ್ಯದರ್ಶಿ ಸುಮಾ, ಜಿಲ್ಲಾ ಜಂಟಿ ಕಾರ್ಯದರ್ಶಿ ನೀತು, ಪದಾಧಿಕಾರಿ ಸಿಂಚನ ಹಾಗೂ ಮೈಸೂರು, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳಿಂದಲೂ ನೂರಾರು ಯುವಜನರು ಭಾಗವಹಿಸಿದ್ದರು.