ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆಯ ಸುತ್ತಮುತ್ತಲಿನ ರಸ್ತೆಗಳನ್ನು ನಿಶ್ಯಬ್ದ ವಲಯಗಳೆಂದು ಘೋಷಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.
ನಗರದ ಚಾಮರಾಜೇಂದ್ರ ಮೃಗಾಲಯವು ವನ್ಯ ಪ್ರಾಣಿಗಳ, ಪಕ್ಷಿ ಸಂಕುಲಗಳ ಹಾಗೂ ದೇಶ, ವಿದೇಶಗಳ ಅಪರೂಪದ ಜೀವ ಸಂಕುಲಗಳ ಆವಾಸ ಸ್ಥಾನವಾಗಿರುತ್ತದೆ. ಋತುಮಾನಕ್ಕೆ ತಕ್ಕಂತೆ ವಲಸೆ ಪಕ್ಷಿಗಳು ಕಾರಂಜಿ ಕೆರೆಯಲ್ಲಿ ಬಂದು ನೆಲೆಸುವ ನೆಚ್ಚಿನ ತಾಣವಾಗಿರುತ್ತದೆ. ಈ ಪ್ರದೇಶಗಳು ಯಾವಾಗಲೂ ಸೂಕ್ಷ್ಮತೆಯಿಂದ ಕೂಡಿದ್ದು, ವನ್ಯಜೀವ ಸಂಕುಲಗಳು ವಾಸಿಸಲು ನಿಶ್ಯಬ್ಧತೆಯಿಂದ ಕೂಡಿದ ಪ್ರಶಾಂತತೆಯ ವಾತಾವರಣ ಸೃಷ್ಟಿಸುವ ಅವಶ್ಯಕತೆ ಇದೆಯೆಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಈ ಆದೇಶ ಹೊರಡಿಸಿದ್ದಾರೆ.
ಎಂ ಎಲ್ ಸೋಮಸುಂದರ ವೃತ್ತದಿಂದ ಲಿಂಗಣ್ಣ ವೃತ್ತದವರೆಗೆ (ಶಾಲಿವಾಹನ ರಸ್ತೆ), ಎಸ್ ಲಿಂಗಣ್ಣ ವೃತ್ತದಿಂದ ಸರ್ಕಸ್ ಗ್ರೌಂಡ್ ಜಂಕ್ಷನ್ (ಲೋಕರಂಜನ್ ರಸ್ತೆ), ಸರ್ಕಸ್ ಗ್ರೌಂಡ್ ಜಂಕ್ಷನ್‌ನಿಂದ ಮಹಾರಾಣಾ ಪ್ರತಾಪ್ ಸಿಂಹಜಿ ಜಂಕ್ಷನ್ (ಟ್ಯಾಂಕ್ ಬಂಡ್ ರಸ್ತೆ), ಮಹಾರಾಣಾ ಪ್ರತಾಪ್ ಸಿಂಹಜಿ ವೃತ್ತದಿಂದ ಎಂ ಎಲ್ ಸೋಮಸುಂದರಂ ವೃತ್ತದ(ಎಂಜಿ ರಸ್ತೆ)ವರೆಗಿನ ಜಂಕ್ಷನ್‌ಗಳು ಮತ್ತು ರಸ್ತೆಗಳಲ್ಲಿ ಪಟಾಕಿ ಸಿಡಿಸುವುದು, ಧ್ವನಿವರ್ಧಕಗಳ ಬಳಕೆ ಮತ್ತು ವಾಹನಗಳ ಹಾರ್ನ್ ಶಬ್ಧ ಮಾಡುವುದನ್ನು ನಿಷೇಧಿಸಿದ್ದು, ಗುರುವಾರದಿಂದ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | 3,469 ವಿದ್ಯಾರ್ಥಿಗಳಿಗೆ ಎರಡೇ ಶೌಚಾಲಯ; ಪ್ರತೀ ನಿತ್ಯ ಪರದಾಟ
“ನಿಯಮಗಳನ್ನು ಉಲ್ಲಂಘಿಸುವ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ನಗರ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.