ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿದ್ದ ಮೂರು ಆನೆಗಳಿಗೆ ಮದವೇರಿದ ಪರಿಣಾಮ ದಸರಾ ಆನೆಗಳ ಆಯ್ಕೆ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಳೆದ ದಸರಾ ಮೆರವಣಿಗೆಯಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಭೀಮ ತಿಂಗಳ ಅಂತರದಲ್ಲಿ ಎರಡು ಬಾರಿ ಮದವೇರಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಅಕ್ಟೋಬರ್ 11ರಿಂದ 21ರವರೆಗೆ ನಾಡಹಬ್ಬ ದಸರಾ ನಡೆಯಲಿದ್ದು, ಆರಂಭಕ್ಕೂ ಎರಡು ತಿಂಗಳ ಮುನ್ನವೇ ಆನೆಗಳನ್ನು ಮೈಸೂರಿನ ಶಿಬಿರಕ್ಕೆ ಕರೆತಂದು ತಾಲೀಮು ನಡೆಸಲಾಗುತ್ತದೆ.
ದಸರೆಯಲ್ಲಿ ಪಾಲ್ಗೊಳ್ಳಲಿರುವ ಆನೆಗಳನ್ನು ಆಗಸ್ಟ್ 26ರಂದು ಮೈಸೂರಿಗೆ ಕರೆತರುವ ಸಿದ್ಧತೆಯಲ್ಲಿರುವ ಅರಣ್ಯ ಇಲಾಖೆ, ಭೀಮ, ಶ್ರೀಕಂಠ ಮತ್ತು ಹರ್ಷ ಆನೆಗಳಿಗೆ ಪರ್ಯಾಯ ಆಯ್ಕೆ ಹುಡುಕಬೇಕಿದೆ. ಸದ್ಯ ಆಯ್ಕೆ ಪ್ರಕ್ರಿಯೆ ಮುಂದುವರೆದಿದ್ದು, ಆನೆ ಶಿಬಿರಗಳತ್ತ ಅರಣ್ಯ ಇಲಾಖೆ ಕಣ್ಣಿರಿಸಿದೆ.
ಕೆಲವು ಆನೆಗಳಿಗೆ ಇಸಿಜಿ ಸೇರಿದಂತೆ ಇತರ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಆದರೆ ಮದವೇರಿದ ಈ ಮೂರು ಆನೆಗಳನ್ನು ವೈದ್ಯಕೀಯ ತಂಡ ಇನ್ನೂ ತಪಾಸಣೆಗೆ ಒಳಪಡಿಸಿಲ್ಲ. ಆನೆಗಳ ದೇಹ ತಂಪಿರಿಸಲು ಅವಶ್ಯವಿರುವ ವಿಶೇಷ ಆಹಾರವನ್ನು ನೀಡಲಾಗುತ್ತಿದ್ದು, ಮದ ಇಳಿದ ನಂತರವಷ್ಟೇ ದಸರೆಯಲ್ಲಿ ಪಾಲ್ಗೊಳ್ಳಲಿವೆ ಎನ್ನಲಾಗಿದೆ.





