ಶೋಷಿತರಿಗೆ ಭೂಮಿ, ವಾಸಿಸಲು ಮನೆ, ನಿವೇಶನ ರಹಿತರಿಗೆ ನಿವೇಶನ, ಸ್ಮಶಾನ ಭೂಮಿ ಮತ್ತು ಮೂಲ ಸೌಕರ್ಯ ಒದಗಿಸುವಂತೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ರಾಜ್ಯದ ಆಯಾ ತಾಲೂಕು ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದರು.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಕಚೇರಿ ಎದುರು ದಸಂಸ ಕಾರ್ಯಕರ್ತರು ಬೇಡಿಕೆ ಈಡೇರಿಸುವಂತೆ ಧರಣಿ ನಡೆಸಿದ್ದು, ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
“ದೇಶ ಅಮೃತ ಮಹೋತ್ಸವ ಸಂಭ್ರಮ ಕಂಡರೂ ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಜಾತಿ ಮತ್ತು ಅಸ್ಪಶ್ಯತೆಯ ಆಚರಣೆಗಳನ್ನು ಜೀವಂತವಾಗಿರುಸುತ್ತ, ಕೋಮುವಾದಿ ಶಕ್ತಿಗಳು ಬಲಗೊಳ್ಳುತ್ತಿವೆ. ಸ್ವಾತಂತ್ರ್ಯ ಬಂದು ಎಪ್ಪತ್ತಾರು ವರ್ಷಗಳು ಕಳೆದರೂ ಜಾತಿ ವ್ಯವಸ್ಥೆಯ ಕಪಿಮುಷ್ಟಿಯಿಂದ ದಲಿತರ ಬಿಡುಗಡೆ ಸಾಧ್ಯವಾಗಿಲ್ಲ. ದಲಿತರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ನಾನಾ ಕಾರಣಗಳಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಸಮಾನತೆ ಎಂಬುದು ಬರಿ ಕನಸಾಗಿಯೇ ಉಳಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ದಲಿತರ ರಕ್ಷಣೆಗಾಗಿ ಇರುವ ಕಾನೂನುಗಳು ಉಳ್ಳವರ ಕಾಲಡಿಗೆ ಸಿಕ್ಕಿ ನಲುಗುತ್ತಾ ಅತಂತ್ರದ ಸ್ಥಿತಿ ಅನುಭವಿಸುವಂತಾಗಿದೆ. ದಲಿತರಿಗಾಗಿ ರೂಪಿಸಿರುವ ಅನೇಕ ಯೋಜನೆಗಳು ಜನಸಾಮಾನ್ಯರನ್ನು ತಲುಪದೇ ವಂಚನೆಗೆ ಒಳಗಾಗುತ್ತಿದ್ದಾರೆ. ಆಡಳಿತಾರೂಢ ಸರ್ಕಾರಗಳು ಪ್ರಜಾಪ್ರಭುತ್ವದ ಆಶಯಗಳನ್ನು ಸಮರ್ಪಕವಾಗಿ ಈಡೇರಿಸಲು ಸಾಧ್ಯವಾಗುತ್ತಿಲ್ಲ. ದಲಿತರ ಅಭಿವೃದ್ಧಿಯ ಪ್ರಗತಿ ಕೇವಲ ನೆಪಮಾತ್ರವಾಗಿದೆ” ಎಂದು ಆರೋಪಿಸಿದರು.
“ವ್ಯವಸಾಯ ಮಾಡಿ ದುಡಿದು ಬದುಕುತ್ತೇನೆ ಎನ್ನುವ ಸ್ವಾಭಿಮಾನಿ ಶೋಷಿತರಿಗೆ ಭೂಮಿ, ವಾಸಿಸಲು ಮನೆ, ನಿವೇಶನ ರಹಿತರಿಗೆ ನಿವೇಶನ ಸೇರಿದಂತೆ ಇತರ ಮೂಲ ಸೌಕರ್ಯಗಳು ದೊರೆಯುತ್ತಿಲ್ಲ. ಶೀಘ್ರದಲ್ಲಿಯೇ ಇಂತಹ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಮುಂದಾಗಬೇಕು” ಎಂದು ಒತ್ತಾಯಿಸಿದರು.
“ಹುಲ್ಲಹಳ್ಳಿ ಸರ್ವೆ ನಂ. 367ರಲ್ಲಿ 27 ಗುಂಟೆ ಜಮೀನು ಸಿದ್ದಯ್ಯ ಬಿನ್ ಸರಕನ ಸಿದ್ದಯ್ಯ ಎಂಬುವರಿಗೆ 1972ರಲ್ಲಿ ಮಂಜೂರಾಗಿದ್ದು, ಕಾಲಾವಧಿಗೂ ಮುಂಚೆ ನಂಬಿಸಿ, ಮೋಸದಿಂದ ಸ್ಥಳೀಯ ಮುಖಂಡ ಎಚ್ ಪಿ ಬಸವರಾಜು ಬಿನ್ ಪುಟ್ಟೇಗೌಡ ಆಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ. ಆದ್ದರಿಂದ ಇದು ಮೂಲ ಸಾಗುವಳಿದಾರರಿಗೆ ಖಾತೆಯಾಗಬೇಕು. ಹುಲ್ಲಹಳ್ಳಿ ಸರ್ವೆ ನಂ. 12ರಲ್ಲಿ 2 ಎಕರೆ 1 ಗುಂಟೆ ಜಮೀನಿಗೆ ಯಾವುದೇ ಕಡೆಯಿಂದ ರಸ್ತೆ ಇರುವುದಿಲ್ಲ, ಗಜೇಂದ್ರಸಿಂಗ್ ಎಂಬುವವರು ಲೇಔಟ್ ಮಾಡಿ ರಸ್ತೆಯನ್ನು ಬಿಡದೆ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಕೂಡಲೇ ರಸ್ತೆಯನ್ನು ಕಲ್ಪಿಸಿಕೊಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಬರಪೀಡಿತ ತಾಲೂಕುಗಳ ಪಟ್ಟಿ; ಅರಸೀಕೆರೆ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಶಾಸಕ ಕಿಡಿ
“ಚಿಕ್ಕಹಳ್ಳಿ ಗ್ರಾಮದ ಸರ್ವೆ ನಂ 13ರಲ್ಲಿ 2 ಎಕರೆ 17 ಗುಂಟೆ ಜಮೀನು ಹೊಸ ಬಡಾವಣೆಯಾಗಿದೆ. ಇದರಲ್ಲಿ ಒಂದು ಎಕರೆ 2 ಗುಂಟೆ ಅಲಿಲೇಷನ (ಗ್ರಾಮಠಾಣೆ) ಆಗಿದೆ. ಉಳಿದ 1 ಎಕರೆ 4 ಗುಂಟೆ ಅಲಿಲೇಷನ್ ಆಗಿರುವುದಿಲ್ಲ. ಆದರೂ ಸರ್ಕಾರ ಗ್ರಾಮಪಂಚಾಯಿತಿಯಿಂದ ಪರಿಶಿಷ್ಟ ಜಾತಿ ಫಲಾಭವಿಗಳಿಗೆ ತಲಾ 30X40 ನಿವೇಶನ ಹಂಚಿಕೆಯಾಗಿದೆ. ಇದರಲ್ಲಿ 90X60 ನಿವೇಶನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭವನಕ್ಕೆ ಮೀಸಲಾಗಿದೆ. ಈಗ ಲಿಂಗಾಯತ ಸಮುದಾಯದ ಮಾಧಮ್ಮ ಶಿವಪ್ಪ ಎಂಬುವವರು ಈ ನಿದೇಶನ ನಮಗೆ ಸೇರಬೇಕೆಂದು ತಕರಾರು ನೀಡಿದ್ದಾರೆ. ಆದ್ದರಿಂದ ಡಾ.ಬಿ ಆರ್ ಅಂಬೇಡ್ಕರ್ ಅವರ ಭವನಕ್ಕೆ ಅವಕಾಶ ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಎಲ್ಲ ಜಾತಿ ಬಡವರು, ಕಾರ್ಮಿಕರು, ಕೃಷಿ ಕೂಲಿಕಾರರು, ಭೂಹೀನ ದಲಿತರು, ವಸತಿ ಮತ್ತು ನಾಗರಿಕ ಸೌಲಭ್ಯಗಳಿಂದ ವಂಚಿತರಾದ ಎಲ್ಲರೂ ಇದ್ದರು.