ಹಿಂದೂ ರಾಷ್ಟ್ರವನ್ನಾಗಿಸುವ ಮನುವಾದಿಗಳ ಗುರಿಯನ್ನು ತಡೆಯದೆ ಹೋದರೆ, ಭಾರತ ನಾಶವಾಗಲಿದೆ ಎಂದು ಲೇಖಕ ಹಾಗೂ ಪ್ರಗತಿಪರ ಚಿಂತಕ ರಾಮಚಂದ್ರ ಗುಹಾ ಹೇಳಿದರು.
ಮೈಸೂರಿನ ಮಾನಸಗಂಗೋತ್ರಿಯ ಗಾಂಧಿಭವನದಲ್ಲಿ ಸೋಮವಾರದಂದು ನಡೆದ “ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ” ಕುರಿತ ಸಂವಾದದಲ್ಲಿ ಮಾತನಾಡಿದರು.
“ಬಾಬಾ ಸಾಹೇಬರ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಧರ್ಮ, ಭಾವನೆಗಳು, ಆಚರಣೆಯ ಭಕ್ತಿ ರಾಜಕೀಯವಾಗಿಸುತ್ತ ಹೋದಂತೆಲ್ಲ ಸರ್ವಾಧಿಕಾರಕ್ಕೆ ಅಣಿ ಮಾಡಿಕೊಟ್ಟಂತೆ, ಇದು ಸಮಾಜಕ್ಕೆ ಕಂಟಕವಾಗಲಿದೆ” ಎಂದರು.
“ಪ್ರಸ್ತುತ ಕಾಲಘಟ್ಟಕ್ಕೆ ಅಂಬೇಡ್ಕರ್ ಅವರ ಸಂವಿಧಾನ, ಸಂವಿಧಾನದ ಆಶಯಗಳು ಪೂರಕವಾಗಿವೆ. ಇದು ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದರಿಂದ ಸಮಾಜದ ಏಳಿಗೆ ಸಾಧ್ಯ, ಎಲ್ಲ ಸಮುದಾಯಕ್ಕೆ ನ್ಯಾಯ ಒದಗಿಸಲು ಸಾಧ್ಯ” ಎಂದು ನುಡಿದರು.
“ಗಾಂಧಿಗೆ ಅಸ್ಪೃಶ್ಯತೆ ನಿವಾರಣೆ ಅನ್ನುವುದು ಕಾರ್ಯಕ್ರಮ ಎನಿಸಿರಲಿಲ್ಲ, ಅದು ಹೋರಾಟವಾಗಿತ್ತು. ಭಾರತದಲ್ಲಿನ ಅಸ್ಪೃಶ್ಯತೆಯನ್ನು ತೊಡೆದು ಹಾಕುವುದು ಮುಖ್ಯ ಗುರಿಯಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ಭಿನ್ನವಾಗಿದ್ದರೂ ಕೂಡ ಈ ದೇಶದ ಶೋಷಿತರ ಪರವಾದ ನಿಲುವಿನ ದಿಕ್ಕಿನಲ್ಲಿಯೇ ದೇಶದ ಒಳಿತನವೇ ಸಾಗಿತ್ತು” ಎಂದು ಹೇಳಿದರು.
ಹಿರಿಯ ಸಾಹಿತಿ, ನಾಡಿನ ಸಾಕ್ಷಿಪ್ರಜ್ಞೆ ದೇವನೂರ ಮಹಾದೇವ ಮಾತನಾಡಿ, “ಮೊದಲಿಗೆ ಗಾಂಧಿ ಸನಾತನ ಧರ್ಮ ನನ್ನ ಧರ್ಮ ಎನ್ನುತ್ತಿದ್ದರು. ನಿಧಾನವಾಗಿ ಸಹನೆ ಮತ್ತು ಪ್ರೀತಿ ನನ್ನ ಧರ್ಮ ಎಂಬ ದೃಢ ನಿಲುವಿಗೆ ಬಂದರು. ನಮಗೆ ಇಷ್ಟವಿಲ್ಲದ್ದನ್ನೂ ಸಹಿಸುವುದು, ಎಲ್ಲರನ್ನೂ ಪ್ರೀತಿಸುವುದು ನಿಜವಾದ ಉದಾತ್ತ ಧರ್ಮವೇ ತಾನೆ? ಅಂಬೇಡ್ಕರ್- ಬುದ್ಧನ ಕಂಪ್ಯಾಷನ್ ಅಂದರೆ ಕಾರುಣ್ಯ ನನ್ನ ದೇವರು ಅಂದರು. ಇದೂ ಅಂತಿಮ ಉದಾತ್ತ ಚಿಂತನೆ. ಈ ನೆಲೆಯಲ್ಲಿ ಇಬ್ಬರ ನಿಲುವೂ ಒಂದೇ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ಸೇವೆ ಕಲ್ಪಿಸಲು ಆಗ್ರಹ
“ಯುವ ಮನಸುಗಳು ಓದಬೇಕು, ಅಭ್ಯಸಿಸಬೇಕು, ಸರಿ ತಪ್ಪುಗಳನ್ನು ಅವಲೋಕಿಸಬೇಕು. ಭಿನ್ನಾಭಿಪ್ರಾಯಗಳ ಅರಿವನ್ನು ಅರಿಯದೆ ಕಿತ್ತಾಡುವುದು, ಅರಿಯದೆ ಅರಿವಿಲ್ಲದಂತೆ ಮಾತನಾಡುವುದು ಸರಿಯಲ್ಲ. ಮಹನೀಯರ ಬಗ್ಗೆ ಅರಿವು ಮೂಡಿಸಿಕೊಂಡು ಸಮಾಜದ ಸ್ವಾಸ್ತ್ಯ ಕಾಪಾಡುವಂತಹ ಕೆಲಸವಾಗಬೇಕು” ಎಂದು ಆಶಯದ ಮಾತುಗಳನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಸ್ ನರೇಂದ್ರ ಕುಮಾರ್, ಸಾಹಿತಿ ವಿವೇಕ್ ಶಾನಭಾಗ್ ಇದ್ದರು.