ಹವಾಮಾನ ವೈಪರೀತ್ಯದಿಂದ ರೈತರು ಹಾಗೂ ಕೂಲಿ ಕಾರ್ಮಿಕರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಸಂಕಷ್ಟದ ಜೀವನಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೊರಬಂದು ಹಿಂದಿನಂತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಸಮಾಜ ಮುಂದಾಗಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆ ನೀಡಿದರು.
ಮೈಸೂರಿನ ಬನವಾಸಿ ತೋಟದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಆಯೋಜಿಸಿದ್ದ ‘ಪದಾಧಿಕಾರಿಗಳಿಗೆ ಒಂದು ದಿನದ ಅಧ್ಯಯನ ಶಿಬಿರ’ದಲ್ಲಿ ‘ಗ್ರಾಮ ಸ್ವರಾಜ್ಯ’ ಕುರಿತು ಮಾತನಾಡಿದ ಅವರು, ಹಿಂದೆ ಗ್ರಾಮೀಣ ಜನರ ಜೀವನದಲ್ಲಿ ಸ್ಥಳೀಯ ಸ್ವಾವಲಂಬನೆ ಪ್ರಮುಖವಾಗಿತ್ತು. ಉಪ್ಪು ಹಾಗೂ ಸೀಮೆಎಣ್ಣೆ ಹೊರತುಪಡಿಸಿ ಬಹುತೇಕ ಅಗತ್ಯ ವಸ್ತುಗಳನ್ನು ಹೊರಗಿನಿಂದ ಖರೀದಿಸದಂತಹ ಪರಿಸ್ಥಿತಿ ಇತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮತ್ತೆ ಅಂತಹ ಸ್ವಾವಲಂಬಿ ಬದುಕಿನತ್ತ ಸಾಗುವ ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು ಎಂದರು.
ಮಣ್ಣಿನ ಫಲವತ್ತತೆ ಈಗಾಗಲೇ ಕುಸಿದಿದ್ದು, ಕೃಷಿ ವ್ಯವಸ್ಥೆಯೂ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಹೀಗಾಗಿ ನಮ್ಮ ಊರಿನಲ್ಲೇ ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ರೈತರಿಗೆ ಉತ್ತಮ ಮಾರುಕಟ್ಟೆ, ನೇರ ಖರೀದಿ ಹಾಗೂ ಬೆಂಬಲ ಬೆಲೆ ದೊರೆಯುವ ವ್ಯವಸ್ಥೆಯನ್ನು ಸರ್ಕಾರವನ್ನು ಮಾತ್ರ ಅವಲಂಬಿಸದೆ, ನಾವೇ ನಿರ್ಮಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ರೈತರ ಮೇಲೆ ಅವಲಂಬಿತರಾದವರು ಶ್ರೀಮಂತರಾಗುತ್ತಿದ್ದಾರೆ. ಆದರೆ ರೈತನಿಂದ ಉತ್ಪನ್ನ ಪಡೆದವರೇ ಅದರ ಬೆಲೆ ನಿಗದಿ ಮಾಡುವ ಪರಿಸ್ಥಿತಿ ಮುಂದುವರಿಯುತ್ತಿರುವುದು ಸರಿಯಲ್ಲ. ರೈತನನ್ನು ಕೆಳಗಿಟ್ಟು ನೋಡುವ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಸಾಲದಲ್ಲೇ ಸಿಲುಕಿ ರೈತರು ನರಳುವ ಪರಿಸ್ಥಿತಿ ಬದಲಾಗಬೇಕು. ಪ್ರತಿಯೊಂದು ಸಮಸ್ಯೆಗೂ ಸರ್ಕಾರದ ಮುಂದೆ ಬೇಡಿಕೆ ಇಡುವುದಕ್ಕಿಂತ, ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಿಕೊಳ್ಳುವ ವ್ಯವಸ್ಥೆ ರೂಪಿಸಬೇಕು. ಈ ನಿಟ್ಟಿನಲ್ಲಿ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ರೈತನಿಗೆ ಬೆಳೆ ಬೆಳೆಯುವುದು ಗೊತ್ತಿದೆ. ಆದರೆ ತನ್ನ ಉತ್ಪನ್ನವನ್ನು ಮಾರುಕಟ್ಟೆ ಮಾಡುವುದು, ಗ್ರಾಹಕರನ್ನು ತಲುಪುವುದು ಹಾಗೂ ಉತ್ತಮ ಬೆಲೆ ಪಡೆಯುವುದು ಹೇಗೆ ಎಂಬುದನ್ನು ಕಲಿಸುವ ವ್ಯವಸ್ಥೆ ಅಗತ್ಯವಾಗಿದೆ. ರೈತರ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ರೈತರೇ ಷೇರುದಾರರಾಗಿರುವ ಸಹಕಾರ ವ್ಯವಸ್ಥೆಯ ಮೂಲಕ ಉತ್ಪನ್ನಗಳನ್ನು ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆ ರೂಪಿಸಬೇಕಿದೆ ಎಂದು ತಿಳಿಸಿದರು.
ಭೂಮಿ ಇಲ್ಲದವರಿಗೆ ಭೂಮಿ ಹಾಗೂ ಭೂಮಿ ಹೊಂದಿರುವವರಿಗೆ ಕೆಲಸ ದೊರೆಯುವಂತಹ ಗ್ರಾಮೀಣ ಆರ್ಥಿಕ ವ್ಯವಸ್ಥೆ ನಿರ್ಮಾಣವಾಗಬೇಕು. ಗ್ರಾಮದಲ್ಲೇ ಅಗತ್ಯವಿರುವ ಆಹಾರ ಮತ್ತು ದಿನಬಳಕೆಯ ವಸ್ತುಗಳನ್ನು ಉತ್ಪಾದಿಸಿ, ತಿಂಗಳ ಅಗತ್ಯಕ್ಕೆ ತಕ್ಕಂತೆ ಮನೆ-ಮನೆಗೆ ತಲುಪಿಸುವ ವ್ಯವಸ್ಥೆ ರೂಪಿಸಬಹುದು. ಇದರಿಂದ ಸ್ಥಳೀಯ ಆರ್ಥಿಕತೆಯೂ ಬಲಗೊಳ್ಳಲಿದೆ ಎಂದು ಹೇಳಿದರು.
ಈ ವಿಶೇಷ ವೀಡಿಯೊ ವೀಕ್ಷಿಸಿ: https://www.youtube.com/watch?v=b9DxzsqEiYo&t=75s
ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದ ಸಂದರ್ಭದಲ್ಲಿ ಉಪ ಉತ್ಪನ್ನಗಳನ್ನು ತಯಾರಿಸುವುದು ಹಾಗೂ ಮಾರುಕಟ್ಟೆಯ ಅಗತ್ಯಕ್ಕೆ ಅನುಗುಣವಾಗಿ ಬೆಳೆ ಬೆಳೆಯುವುದು ರೈತರ ಆರ್ಥಿಕ ಭದ್ರತೆಗೆ ಸಹಕಾರಿಯಾಗಲಿದೆ. ದಲ್ಲಾಳಿಗಳ ಕೈಯಲ್ಲಿ ಸಿಲುಕಿ ರೈತರು ನಲುಗದಂತೆ ಉತ್ಪಾದನೆಯಿಂದ ಮಾರುಕಟ್ಟೆಯವರೆಗೆ ತಮ್ಮದೇ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದರು.
ಈ ವಿಶೇಷ ಸುದ್ದಿ ಓದಿದ್ದೀರಾ?43.81 ಲಕ್ಷ ನೋಟಿಸ್: 7.31 ಲಕ್ಷ ಮಾತ್ರ ವಿತರಣೆ; ‘SIR’ ಪ್ರಕ್ರಿಯೆಯ ವೇಗಕ್ಕೆ ಸವಾಲು
ಸ್ಥಳೀಯವಾಗಿ ಆರ್ಥಿಕ ಸಬಲೀಕರಣ ಸಾಧಿಸುವುದೇ ಗ್ರಾಮ ಸ್ವರಾಜ್ಯದ ಪ್ರಮುಖ ಗುರಿಯಾಗಬೇಕು. ಈಗಾಗಲೇ ಕೆಲವು ಆಯ್ದ ಪ್ರದೇಶಗಳಲ್ಲಿ ಇಂತಹ ಮಾದರಿಯ ವ್ಯವಸ್ಥೆಗಳನ್ನು ರೂಪಿಸುವ ಪ್ರಯತ್ನ ನಡೆಯುತ್ತಿದೆ. ಅದನ್ನು ಇನ್ನಷ್ಟು ವಿಸ್ತರಿಸಿ ರೈತರು, ಕಾರ್ಮಿಕರು ಹಾಗೂ ಗ್ರಾಮೀಣ ಜನರ ಬದುಕನ್ನು ಸ್ವಾವಲಂಬನೆಯತ್ತ ಕೊಂಡೊಯ್ಯಬೇಕಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದರು.





