ಮೈಸೂರಿನ ಗೌಸಿಯಾ ನಗರದ ಉಸ್ಮಾನಿಯಾ ಬ್ಲಾಕ್ನ ನೌಜವಾನ್ ಕಮಿಟಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಈದ್ ಮಿಲಾದುನ್ನಬಿ ಕಾರ್ಯಕ್ರಮವನ್ನು ಹಜ್ರತ್ ಎಂ.ಪಿ. ಮುಜಮ್ಮಿಲ್ ಸಾಹೇಬ್ ಅವರ ನೇತೃತ್ವದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಈದ್ ಮಿಲಾದ್ ಉನ್ ನಬಿ ಅಥವಾ ಈದ್ ಮಿಲಾದುನ್ನಬಿ ಮುಸ್ಲಿಂ ಸಮುದಾಯದ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಪ್ರವಾದಿ ಹಜರತ್ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಅವರ ಜನ್ಮಸ್ಮರಣಾರ್ಥ ಈ ಹಬ್ಬವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಗೌಸಿಯಾ ನಗರದ ಉಸ್ಮಾನಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇಶಾ ನಮಾಜ್ ಬಳಿಕ ಹಜ್ರತ್ ಎಂ.ಪಿ. ಮುಜಮ್ಮಿಲ್ ಸಾಹೇಬ್ ಅವರು ಧಾರ್ಮಿಕ ಪ್ರವಚನ ನೀಡಿದರು. ಪ್ರವಾದಿಯವರ ಜೀವನಚರಿತ್ರೆ, ಅವರ ಆದರ್ಶಗಳು ಹಾಗೂ ಬೋಧನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಿದರು. ಬಡವರಿಗೆ ಅನ್ನದಾನ ಮಾಡುವುದು, ದಾನಧರ್ಮದಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಸಮಾಜಸೇವೆಯ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು.
ಇಂದಿನ ಯುವಜನತೆ ವಿವಿಧ ರೀತಿಯ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಕೆಲವರು ತಂದೆ-ತಾಯಿಗಳಿಗೆ ನೋವುಂಟುಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಖಂಡನೀಯ ಎಂದು ಅವರು ಅಭಿಪ್ರಾಯಪಟ್ಟರು.
ಜೀವನ ಅತ್ಯಂತ ಅಮೂಲ್ಯವಾದುದು. ಯುವಜನರು ಕೆಟ್ಟ ಚಟಗಳಿಂದ ದೂರವಿದ್ದು, ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಂದೆ-ತಾಯಿಗಳನ್ನು ಗೌರವಿಸುವುದರ ಜೊತೆಗೆ ಕುಟುಂಬ ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಉತ್ತಮ ನಡವಳಿಕೆ, ಮಾನವೀಯತೆ ಮತ್ತು ಪರಸ್ಪರ ಪ್ರೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ನಾಗರಿಕರಾಗಬೇಕು ಎಂದು ಸಂದೇಶ ನೀಡಿದರು.
ಈ ವಿಶೇಷ ವರದಿ ಓದಿದ್ದೀರಾ? ಮುಸ್ಲಿಮರನ್ನು ಗುರಿಯಾಗಿಸಿ ಮತದಾನದ ಹಕ್ಕು ಕಸಿಯುವ ತಂತ್ರವೇ ‘SIR’: ಶಿವಸುಂದರ್
ಕಾರ್ಯಕ್ರಮದಲ್ಲಿ ಜನಾಬ್ ಅಯೂಬ್ ಸಾಹೇಬ್, ಜನಾಬ್ ಮಹಬೂಬ್ ಸಾಹೇಬ್, ಜನಾಬ್ ಮುಹಮ್ಮದ್ ಆಲಿ ಸಾಹೇಬ್, ಜನಾಬ್ ಮೌಲಾನಾ ಯಾಸೀರ್ ಸಾಹೇಬ್, ಜನಾಬ್ ಇಮ್ರಾನ್ ಸಾಹೇಬ್, ಜನಾಬ್ ಜಾಬೀರ್ ಸಾಹೇಬ್ ಸೇರಿದಂತೆ ಹಲವರು ಇದ್ದರು.






