ಮುಸ್ಲಿಮರನ್ನು ಗುರಿಯಾಗಿಸಿ ಮತದಾನದ ಹಕ್ಕು ಕಸಿಯುವ ತಂತ್ರವೇ ‘SIR’: ಶಿವಸುಂದರ್

Date:

“SIR ರದ್ದಾಗಬೇಕು; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂಬುದಷ್ಟೇ ನಮ್ಮ ಹೋರಾಟವಲ್ಲ, ಪ್ರಜಾಪ್ರಭುತ್ವ ಮತ್ತು ಸಾರ್ವತ್ರಿಕ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಮುಂದಿನ ಹೋರಾಟದ ದಿಕ್ಕನ್ನು ನಿರ್ಧರಿಸಬೇಕು”

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಕೇವಲ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಕಾರ್ಯವಲ್ಲ; ನಾಗರಿಕರ ಪೌರತ್ವವನ್ನೇ ಪ್ರಶ್ನಿಸುವ ಮೂಲಕ ದಲಿತರು, ದಮನಿತರು ಮತ್ತು ಅಲ್ಪಸಂಖ್ಯಾತರ ಮತದಾನದ ಹಕ್ಕನ್ನು ನಿರಾಕರಿಸುವ ಪ್ರಯತ್ನವಾಗಿದೆ ಎಂದು ಲೇಖಕ, ಚಿಂತಕ ಹಾಗೂ ಸಾಮಾಜಿಕ ಹೋರಾಟಗಾರ ಶಿವಸುಂದರ್ ಗಂಭೀರವಾಗಿ ಆರೋಪಿಸಿದ್ದಾರೆ.

- Advertisement -

ಮೈಸೂರಿನ ಮಾನಸಗಂಗೋತ್ರಿಯಲ್ಲಿ ಗುರುವಾರ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಬೃಹತ್ ಪ್ರತಿಭಟನಾ ಜಾಥಾದಲ್ಲಿ ಮಾತನಾಡಿದ ಅವರು, SIR ಏಕೆ ರದ್ದಾಗಬೇಕು? ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಏಕೆ ರಾಜೀನಾಮೆ ನೀಡಬೇಕು? ಎಂಬ ಪ್ರಶ್ನೆಗಳ ಜತೆಗೆ, SIR ರದ್ದಾದರೆ ಮತ್ತು ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿದರೆ ಅಷ್ಟಕ್ಕೇ ನಮ್ಮ ಹೋರಾಟ ಮುಗಿಯುತ್ತದೆಯೇ? ಅದರ ನಂತರ ನಾವು ಏನು ಮಾಡಬೇಕು? ಎಂಬ ಮೂಲಭೂತ ಪ್ರಶ್ನೆಗಳನ್ನೂ ಮುಂದಿಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...

ಬೆಳಗಾವಿ | ಬಿಸಿಲಿಗೂ ಕುಗ್ಗದೆ ಕಬ್ಬಿಗೆ ₹5500 ಬೆಲೆಗಾಗಿ...

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕು, ಸಕ್ಕರೆಗೆ ಪ್ರತಿ ಕೆ.ಜಿ.ಗೆ ₹60 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು ಹಾಗೂ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಬೇವಿನ...

ಪ್ರತಿಭಟನೆ ಎಂದರೆ ಕೇವಲ ವಿರೋಧ ವ್ಯಕ್ತಪಡಿಸುವುದಲ್ಲ. ಪ್ರಜಾಪ್ರಭುತ್ವದ ಮೂಲತತ್ವಗಳನ್ನೇ ಪ್ರಶ್ನಿಸುವ ಪ್ರಕ್ರಿಯೆಗಳ ವಿರುದ್ಧ ಜನರನ್ನು ಸಂಘಟಿಸುವುದು, ಮತದಾನದ ಹಕ್ಕಿನ ಮಹತ್ವವನ್ನು ಸಮಾಜಕ್ಕೆ ಮನವರಿಕೆ ಮಾಡುವುದು ಮತ್ತು ಭವಿಷ್ಯದಲ್ಲಿ ಇಂತಹ ಪ್ರಯತ್ನಗಳು ನಡೆಯದಂತೆ ತಡೆಯಲು ಹೋರಾಟದ ದಿಕ್ಕನ್ನು ರೂಪಿಸುವುದು ಮುಖ್ಯ ಎಂದು ಅವರು ಪ್ರತಿಪಾದಿಸಿದರು.

SIR ಎಂದರೆ ಮತದಾರರ ಪರಿಶೀಲನೆಯೇ, ನಾಗರಿಕತ್ವದ ಪರೀಕ್ಷೆಯೇ?

SIR ಪ್ರಕ್ರಿಯೆಯನ್ನು ವಿಶ್ಲೇಷಿಸಿದ ಶಿವಸುಂದರ್, “SIR ಎಂದರೇನು? ಮೋದಿ ಸರ್ಕಾರ ನಮ್ಮೆಲ್ಲರ ಮೇಲೆ ಹಾಕಿರುವ FIR ಇದ್ದಂತೆ. ದೇಶದಲ್ಲಿ ಏನೋ ತಪ್ಪು ಮಾಡಿದ್ದೇವೆ ಎಂಬಂತೆ 140 ಕೋಟಿ ಜನರ ಮೇಲೆ ಅನುಮಾನ ಹೊರಿಸಿ, ನೀವು ಭಾರತೀಯರೇ ಅಲ್ಲ ಎಂಬ ಭಾವನೆ ಮೂಡಿಸುವ ಪ್ರಕ್ರಿಯೆ ಇದು” ಎಂದು ವ್ಯಂಗ್ಯವಾಡಿದರು. ದೇಶದಲ್ಲಿ ಈವರೆಗೆ ಯಾವುದೇ ಸರ್ಕಾರ ತನ್ನದೇ ದೇಶದ ಕೋಟ್ಯಂತರ ಜನರು ನಾಗರಿಕರೇ ಎಂಬುದನ್ನು ಅನುಮಾನಿಸುವ ರೀತಿಯಲ್ಲಿ ಇಂತಹ ಪ್ರಕ್ರಿಯೆಯನ್ನು ಮುಂದಿಟ್ಟಿರಲಿಲ್ಲ ಎಂಬುದು ಅವರ ವಾದ. ಚುನಾವಣೆಯ ಮೂಲ ಉದ್ದೇಶ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದು. ಆದರೆ SIR ಪ್ರಕ್ರಿಯೆಯ ಮೂಲಕ ಯಾರು ಮತದಾರರಾಗಿರಬೇಕು, ಯಾರು ಮತದಾರರಾಗಬಾರದು ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಸರ್ಕಾರದ ವ್ಯವಸ್ಥೆಯೇ ತನ್ನ ಕೈಗೆ ತೆಗೆದುಕೊಳ್ಳುವ ಅಪಾಯ ಎದುರಾಗಿದೆ ಎಂದು ಎಚ್ಚರಿಸಿದರು.

“ಈ ದೇಶದ ನಾಯಕರು ಯಾರು ಎಂಬುದನ್ನು ತೀರ್ಮಾನಿಸುವುದು ಸರ್ಕಾರವಲ್ಲ; ಜನರು. ಜನರು ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಸರ್ಕಾರಕ್ಕೆ ಇಲ್ಲ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಜನರು ಸರ್ಕಾರವನ್ನು ಆಯ್ಕೆ ಮಾಡುವ ಬದಲು, ಸರ್ಕಾರವೇ ಯಾವ ಜನರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬುದನ್ನು ನಿರ್ಧರಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ”. ನುಸುಳುಕೋರರನ್ನು ಪತ್ತೆಹಚ್ಚುವುದು, ವಿದೇಶಕ್ಕೆ ತೆರಳಿದವರು ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ಮೃತಪಟ್ಟವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಮುಂತಾದ ಉದ್ದೇಶಗಳಿಗೆ ಯಾರ ವಿರೋಧವೂ ಇಲ್ಲ. ಆದರೆ, ಆ ಹೆಸರಿನಲ್ಲಿ ದೇಶದ ನಾಗರಿಕರನ್ನೇ ಅನುಮಾನಿಸುವುದು, ಅವರು ತಮ್ಮ ಪೌರತ್ವವನ್ನು ಮತ್ತೆ ಸಾಬೀತುಪಡಿಸಬೇಕೆಂದು ಒತ್ತಾಯಿಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಹೇಳಿದರು.

78 ವರ್ಷಗಳ ಸ್ವಾತಂತ್ರ್ಯದ ಬಳಿಕವೂ ನಾಗರಿಕತ್ವ ಸಾಬೀತುಪಡಿಸಬೇಕೆ?

ಭಾರತ ಸ್ವಾತಂತ್ರ್ಯ ಪಡೆದು 78 ವರ್ಷಗಳಾಗಿವೆ. ಇಷ್ಟು ವರ್ಷಗಳ ನಂತರವೂ ಈ ದೇಶದಲ್ಲಿ ಹುಟ್ಟಿ ಬೆಳೆದ ಜನರು ತಾವು ಭಾರತೀಯರು ಎಂಬುದನ್ನು ದಾಖಲೆಗಳ ಮೂಲಕ ಸಾಬೀತುಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ. ಪೌರತ್ವವನ್ನು ಪ್ರಶ್ನಿಸುವ ಪ್ರಕ್ರಿಯೆ ವ್ಯಕ್ತಿಯ ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯನ್ನು ಭಾರತೀಯ ನಾಗರಿಕನೆಂದು ಪರಿಗಣಿಸದಿದ್ದರೆ, ಆತನ ಶಿಕ್ಷಣ, ಉದ್ಯೋಗ, ಸರ್ಕಾರಿ ಸೌಲಭ್ಯಗಳು ಮತ್ತು ಇತರ ಹಕ್ಕುಗಳ ಮೇಲೆ ಪರಿಣಾಮ ಉಂಟಾಗಬಹುದು. ಪೌರತ್ವದ ಪ್ರಶ್ನೆ ಎದುರಾದಾಗ ತನ್ನ ಹಕ್ಕುಗಳನ್ನು ಕಾನೂನುಬದ್ಧವಾಗಿ ಪ್ರತಿಪಾದಿಸುವುದೂ ಕಷ್ಟವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂವಿಧಾನದ 14, 15 ಮತ್ತು 21ನೇ ವಿಧಿಗಳನ್ನು ಉಲ್ಲೇಖಿಸಿ, ಸಮಾನತೆ, ತಾರತಮ್ಯದಿಂದ ರಕ್ಷಣೆ ಮತ್ತು ಜೀವಿಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳ ಮಹತ್ವವನ್ನು ನೆನಪಿಸಿದರು. ನಾಗರಿಕರ ಹಕ್ಕುಗಳನ್ನು ದಾಖಲೆಗಳ ಹೆಸರಿನಲ್ಲಿ ಅನುಮಾನಕ್ಕೆ ಒಳಪಡಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದು ಅವರ ವಾದವಾಗಿತ್ತು. ಈಗಾಗಲೇ SIR ಪ್ರಕ್ರಿಯೆ ನಡೆದಿರುವ ಕೆಲವು ರಾಜ್ಯಗಳಲ್ಲಿ ಅನುಮಾನಿತ ವಿದೇಶಿ ಪ್ರಜೆಗಳೆಂದು ಗುರುತಿಸಲ್ಪಟ್ಟವರ ಬದುಕಿನ ಮೇಲೆ ಪರಿಣಾಮಗಳು ಉಂಟಾಗಿವೆ. ಮತದಾರರ ಪಟ್ಟಿಯ ಪರಿಷ್ಕರಣೆ ಎಂಬ ಹೆಸರಿನಲ್ಲಿ ಆರಂಭವಾಗುವ ಪ್ರಕ್ರಿಯೆ, ಒಬ್ಬ ವ್ಯಕ್ತಿಯ ಪೌರತ್ವ ಮತ್ತು ಮೂಲಭೂತ ಹಕ್ಕುಗಳನ್ನೇ ಪ್ರಶ್ನಿಸುವ ಹಂತಕ್ಕೆ ತಲುಪಿದರೆ ಅದರ ಪರಿಣಾಮಗಳು ಅತ್ಯಂತ ಗಂಭೀರವಾಗಿರುತ್ತವೆ ಎಂದು ಎಚ್ಚರಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಪೌರತ್ವ ಪರಿಶೀಲನೆ

ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದಕ್ಕೆ ತಮ್ಮ ವಿರೋಧವಿಲ್ಲ ಈ ಹಿಂದೆಯೂ ಮತದಾರರ ಪಟ್ಟಿಗಳ ಪರಿಷ್ಕರಣೆ ನಡೆಯುತ್ತಿತ್ತು. ಸಾಮಾನ್ಯ ನಿವಾಸಿಯಾಗಿರುವುದು, 18 ವರ್ಷ ವಯಸ್ಸು ಪೂರ್ಣಗೊಳಿಸಿರುವುದು ಮತ್ತು ಕಾನೂನಿನ ಪ್ರಕಾರ ಭಾರತೀಯ ನಾಗರಿಕನಾಗಿರುವುದು ಮತದಾರನಾಗಲು ಅಗತ್ಯವಾದ ಮೂಲ ಮಾನದಂಡಗಳಾಗಿದ್ದವು. ಆದರೆ, ಈಗಿನ SIR ಪ್ರಕ್ರಿಯೆಯಲ್ಲಿ ದಾಖಲೆಗಳನ್ನು ಸಂಗ್ರಹಿಸುವ ಮತ್ತು ಪರಿಶೀಲಿಸುವ ವಿಧಾನವು ಪೌರತ್ವವನ್ನೇ ಮತ್ತೊಮ್ಮೆ ಸಾಬೀತುಪಡಿಸುವ ಒತ್ತಡವನ್ನು ಸೃಷ್ಟಿಸುತ್ತಿದೆ. ಎನ್ಯುಮರೇಷನ್ ಫಾರಂ ಭರ್ತಿ ಮಾಡುವುದರ ಜತೆಗೆ ವ್ಯಕ್ತಿಯ ಜನನದ ವರ್ಷವನ್ನು ಆಧರಿಸಿ ಹೆಚ್ಚುವರಿ ದಾಖಲೆಗಳನ್ನು ಕೇಳಲಾಗುತ್ತಿದೆ.

1987ಕ್ಕೂ ಮೊದಲು ಜನಿಸಿದವರು ತಮ್ಮ ಜನನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕಾದ ಪರಿಸ್ಥಿತಿ ಎದುರಾಗಬಹುದು. 1987ರಿಂದ 2004ರ ನಡುವಿನ ಅವಧಿಯಲ್ಲಿ ಜನಿಸಿದವರು ತಮ್ಮ ಜನನದ ವಿವರಗಳ ಜತೆಗೆ ತಂದೆ-ತಾಯಿ ಭಾರತೀಯ ನಾಗರಿಕರಾಗಿದ್ದಾರೆ ಎಂಬುದಕ್ಕೆ ದಾಖಲೆ ನೀಡಬೇಕಾಗುತ್ತದೆ. 2004ರ ನಂತರ ಜನಿಸಿದವರು ತಮ್ಮ ಜನನದ ವಿವರಗಳೊಂದಿಗೆ ತಂದೆ ಮತ್ತು ತಾಯಿ ಇಬ್ಬರ ಪೌರತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದನ್ನು ವಿವರಿಸಿದರು.

ಈ ರೀತಿಯ ಅವಶ್ಯಕತೆಗಳು ಮತದಾರರ ಅರ್ಹತೆಯನ್ನು ಪರಿಶೀಲಿಸುವುದಕ್ಕಿಂತ ಪೌರತ್ವವನ್ನು ಪರಿಶೀಲಿಸುವ ಪ್ರಕ್ರಿಯೆಯಾಗಿ ಬದಲಾಗುತ್ತಿವೆ ಎಂಬುದು ಅವರ ಪ್ರಮುಖ ಆಕ್ಷೇಪವಾಗಿತ್ತು. “ಇದು ಮತದಾರರ ಪರಿಶೀಲನೆಯಲ್ಲ; ನಾಗರಿಕತ್ವದ ಪರಿಶೀಲನೆ. ಮತದಾರರ ಪಟ್ಟಿಯನ್ನು ಸರಿಪಡಿಸುವುದಕ್ಕೂ ದೇಶದ ನಾಗರಿಕರನ್ನೇ ಅನುಮಾನಿಸುವುದಕ್ಕೂ ಬಹಳ ವ್ಯತ್ಯಾಸವಿದೆ” ಎಂದು ಪ್ರತಿಪಾದಿಸಿದರು.

ದಾಖಲೆಗಳಿಲ್ಲದವರು ನಾಗರಿಕರಲ್ಲವೇ?

SIR ಪ್ರಕ್ರಿಯೆಯಲ್ಲಿ ದಾಖಲೆಗಳೇ ಪ್ರಮುಖ ಮಾನದಂಡವಾಗುತ್ತಿರುವುದನ್ನು ಪ್ರಶ್ನಿಸಿದ ಶಿವಸುಂದರ್, ಸಾಮಾನ್ಯ ಜನರ ಬಳಿ ಇರುವ ಎಲ್ಲ ದಾಖಲೆಗಳನ್ನೂ ಸ್ವೀಕರಿಸಲಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಅಧಿಕಾರಿಗಳು ಕೇಳುವ ನಿರ್ದಿಷ್ಟ ದಾಖಲೆಗಳನ್ನು ಒದಗಿಸಲು ಸಾಧ್ಯವಾಗದಿದ್ದರೆ ವ್ಯಕ್ತಿಯ ಅರ್ಹತೆಯೇ ಪ್ರಶ್ನೆಗೆ ಒಳಗಾಗುವ ಅಪಾಯವಿದೆ. ಜನನ ಪ್ರಮಾಣಪತ್ರ, ಆಸ್ತಿ ದಾಖಲೆ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ಒದಗಿಸುವುದು ಎಲ್ಲರಿಗೂ ಸುಲಭವಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರು, ಬಡವರು, ನಿರಕ್ಷರರು, ವಲಸೆ ಕಾರ್ಮಿಕರು ಮತ್ತು ದಾಖಲೆಗಳನ್ನು ಸರಿಯಾಗಿ ಸಂರಕ್ಷಿಸದ ಕುಟುಂಬಗಳು ಇಂತಹ ಪ್ರಕ್ರಿಯೆಗಳಲ್ಲಿ ಹೆಚ್ಚು ಸಂಕಷ್ಟಕ್ಕೆ ಸಿಲುಕಬಹುದು ಎಂದು ವಿವರಿಸಿದರು.

“ಆಸ್ತಿ ಇಲ್ಲದಿದ್ದರೆ ಅವರು ನಾಗರಿಕರಲ್ಲವೇ? ಓದಿಲ್ಲದಿದ್ದರೆ ಅವರು ಈ ದೇಶದವರಲ್ಲವೇ? ಕೋಟ್ಯಂತರ ಜನರು ಶಾಲೆಗೆ ಹೋಗಿಲ್ಲ. ಅವರ ಬಳಿ ವಿದ್ಯಾಭ್ಯಾಸದ ದಾಖಲೆಗಳಿಲ್ಲದಿದ್ದರೆ ಅವರು ತಮ್ಮ ದೇಶದ ನಾಗರಿಕತ್ವವನ್ನು ಹೇಗೆ ಸಾಬೀತುಪಡಿಸಬೇಕು?”. ದಾಖಲೆಗಳ ಕೊರತೆಯನ್ನು ನಾಗರಿಕತ್ವದ ಕೊರತೆಯೆಂದು ಪರಿಗಣಿಸುವ ಮನೋಭಾವವೇ ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ. ಒಂದು ಕುಟುಂಬದ ಬಳಿ ಆಸ್ತಿ ಇರಬಹುದು, ಮತ್ತೊಂದು ಕುಟುಂಬದ ಬಳಿ ಇರದಿರಬಹುದು. ಕೆಲವರು ವಿದ್ಯಾಭ್ಯಾಸ ಪಡೆದಿರಬಹುದು, ಇನ್ನು ಕೆಲವರಿಗೆ ಆ ಅವಕಾಶವೇ ಸಿಕ್ಕಿರದಿರಬಹುದು. ಈ ವ್ಯತ್ಯಾಸಗಳ ಆಧಾರದ ಮೇಲೆ ಮತದಾನದ ಹಕ್ಕನ್ನು ನಿರ್ಧರಿಸುವುದು ಸಾರ್ವತ್ರಿಕ ವಯಸ್ಕ ಮತದಾನದ ತತ್ವಕ್ಕೆ ಧಕ್ಕೆ ತರುತ್ತದೆ ಎಂಬುದು ಅವರ ವಾದವಾಗಿತ್ತು.

ಅಂಬೇಡ್ಕರ್ ಪ್ರತಿಪಾದಿಸಿದ ಸಾರ್ವತ್ರಿಕ ಮತದಾನದ ಹಕ್ಕು

ಭಾರತದ ಸಂವಿಧಾನ ಮತ್ತು ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕಿನ ಇತಿಹಾಸವನ್ನು ನೆನಪಿಸಿದ ಶಿವಸುಂದರ್, ಮತದಾನವನ್ನು ಆಸ್ತಿ ಮತ್ತು ಶಿಕ್ಷಣದ ಆಧಾರದ ಮೇಲೆ ನಿರ್ಧರಿಸಬಾರದು. ಬ್ರಿಟಿಷರ ಆಡಳಿತದ ಅವಧಿಯಲ್ಲಿ ಮತದಾನದ ಹಕ್ಕು ಸೀಮಿತವಾಗಿತ್ತು. ಆಸ್ತಿ, ಶಿಕ್ಷಣ ಮತ್ತು ಇತರ ಅರ್ಹತೆಗಳ ಆಧಾರದ ಮೇಲೆ ಕೆಲವರಿಗೆ ಮಾತ್ರ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶವಿತ್ತು. ಮಹಿಳೆಯರು ಸೇರಿದಂತೆ ಸಮಾಜದ ದೊಡ್ಡ ವರ್ಗಗಳು ರಾಜಕೀಯ ಪ್ರಕ್ರಿಯೆಯಿಂದ ಹೊರಗುಳಿದಿದ್ದವು. ಇಂತಹ ಅಸಮಾನ ವ್ಯವಸ್ಥೆಯ ಬದಲಿಗೆ ಪ್ರತಿಯೊಬ್ಬ ವಯಸ್ಕನಿಗೂ ಮತದಾನದ ಹಕ್ಕು ದೊರೆಯಬೇಕು ಎಂಬುದು ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಉಲ್ಲೇಖಿಸಿದರು, ಅನಕ್ಷರಸ್ಥರು ಅಥವಾ ಆಸ್ತಿ ಇಲ್ಲದವರು ದೇಶವನ್ನು ನಡೆಸುವ ವಿವೇಚನೆ ಹೊಂದಿಲ್ಲ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ.

ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಎಂದರೆ ಶ್ರೀಮಂತರು, ವಿದ್ಯಾವಂತರು ಅಥವಾ ನಿರ್ದಿಷ್ಟ ಸಾಮಾಜಿಕ ವರ್ಗಗಳಿಗೆ ಮಾತ್ರ ಸೀಮಿತವಾಗದ ರಾಜಕೀಯ ಸಮಾನತೆ. ಆದರೆ, ದಾಖಲೆಗಳನ್ನು ಒದಗಿಸುವ ಸಾಮರ್ಥ್ಯವೇ ಮತದಾನದ ಹಕ್ಕನ್ನು ನಿರ್ಧರಿಸುವ ಅಂಶವಾದರೆ, ಸಮಾಜದ ಅಂಚಿನಲ್ಲಿರುವ ಜನರ ರಾಜಕೀಯ ಪ್ರಾತಿನಿಧ್ಯ ದುರ್ಬಲವಾಗಬಹುದು ಎಂದು ಎಚ್ಚರಿಸಿದರು.

13 ಕೋಟಿ ಜನರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕ

ದೇಶದಲ್ಲಿ ಮತದಾರರ ಸಂಖ್ಯೆಯ ಬೆಳವಣಿಗೆ ಮತ್ತು ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಿದ ಶಿವಸುಂದರ್, ಜನಸಂಖ್ಯೆಯಲ್ಲಿ ವಯಸ್ಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮತದಾರರ ಸಂಖ್ಯೆಯೂ ಹೆಚ್ಚಾಗಬೇಕಾದದ್ದು ಸಹಜ. ಆದರೆ, ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳು ಕೈಬಿಡಲ್ಪಟ್ಟರೆ, ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗುವ ಅಪಾಯವಿದೆ. ದೇಶದಲ್ಲಿ ಸುಮಾರು 13 ಕೋಟಿ ಜನರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.

ಜನಸಂಖ್ಯೆ, ವಯಸ್ಕರ ಸಂಖ್ಯೆ ಮತ್ತು ಮತದಾರರ ಪಟ್ಟಿಯಲ್ಲಿನ ಬದಲಾವಣೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಬೇಕು. ಹೆಸರುಗಳು ಕೈಬಿಡಲ್ಪಟ್ಟಿದ್ದರೆ ಅವುಗಳ ಕಾರಣವೇನು? ಎಷ್ಟು ಮಂದಿ ಮೃತಪಟ್ಟಿದ್ದಾರೆ? ಎಷ್ಟು ಮಂದಿ ಸ್ಥಳಾಂತರಗೊಂಡಿದ್ದಾರೆ? ಎಷ್ಟು ಮಂದಿ ಅರ್ಹ ಮತದಾರರ ಹೆಸರುಗಳು ತಪ್ಪಾಗಿ ಕೈಬಿಡಲ್ಪಟ್ಟಿವೆ? ಎಂಬ ಪ್ರಶ್ನೆಗಳಿಗೆ ಪಾರದರ್ಶಕ ಉತ್ತರ ಸಿಗಬೇಕು. ಅರ್ಹ ಮತದಾರರ ಹೆಸರುಗಳನ್ನು ಕೈಬಿಡುವ ಪ್ರಕ್ರಿಯೆ ದೊಡ್ಡ ಪ್ರಮಾಣದಲ್ಲಿ ನಡೆದರೆ ಅದು ಕೇವಲ ಆಡಳಿತಾತ್ಮಕ ಲೋಪವಾಗಿ ಉಳಿಯುವುದಿಲ್ಲ. ಪ್ರಜಾಪ್ರಭುತ್ವದ ಪ್ರತಿನಿಧಿತ್ವವನ್ನೇ ಬದಲಾಯಿಸುವ ಪರಿಣಾಮ ಉಂಟಾಗಬಹುದು ಎಂದು ಹೇಳಿದರು.

ASDDO ಪಟ್ಟಿಯಲ್ಲಿ 80 ಲಕ್ಷ ಜನರು: BLOಗಳ ದಾಖಲಾತಿ ಬಗ್ಗೆ ಪ್ರಶ್ನೆ

ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ASDDO ವರ್ಗಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಶಿವಸುಂದರ್, ಸುಮಾರು 1.8 ಕೋಟಿ ಜನರನ್ನು ಈ ವರ್ಗದಲ್ಲಿ ಗುರುತಿಸಲಾಗಿದೆ ಎಂಬ ಅಂಕಿಯನ್ನು ಮುಂದಿಟ್ಟರು. ಈ ಪಟ್ಟಿಯಲ್ಲಿರುವವರಲ್ಲಿ ಸುಮಾರು 80 ಲಕ್ಷ ಜನರನ್ನು ‘Permanent Shifted’ ಎಂದು ಗುರುತಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಾದ BLOಗಳು ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವಾಗ, ಸಂಬಂಧಪಟ್ಟ ವ್ಯಕ್ತಿ ಆ ಸಮಯದಲ್ಲಿ ಮನೆಯಲ್ಲಿ ಇಲ್ಲದಿದ್ದರೆ ಅವರನ್ನು ಸ್ಥಳಾಂತರಗೊಂಡವರು ಎಂದು ದಾಖಲಿಸಿರುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.

ಒಬ್ಬ ವ್ಯಕ್ತಿ ಕೆಲಸಕ್ಕೆ ಹೋಗಿರಬಹುದು, ಊರಿಗೆ ತೆರಳಿರಬಹುದು ಅಥವಾ ತಾತ್ಕಾಲಿಕವಾಗಿ ಬೇರೆಡೆ ವಾಸಿಸುತ್ತಿರಬಹುದು. ಇಂತಹ ಸಂದರ್ಭಗಳಲ್ಲಿ ಸರಿಯಾದ ಪರಿಶೀಲನೆಯಿಲ್ಲದೆ ಅವರನ್ನು ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ಗುರುತಿಸಿದರೆ ಅವರ ಮತದಾನದ ಹಕ್ಕಿಗೆ ಧಕ್ಕೆಯಾಗಬಹುದು. ಈ ಹಿನ್ನೆಲೆಯಲ್ಲಿ ASDDO ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಮಾಹಿತಿಯನ್ನು ಮರುಪರಿಶೀಲಿಸಬೇಕು. ಮತದಾರರಿಗೆ ತಮ್ಮ ಹೆಸರುಗಳ ಸ್ಥಿತಿಯನ್ನು ತಿಳಿದುಕೊಳ್ಳಲು ಅವಕಾಶ ನೀಡಬೇಕು. ತಪ್ಪಾಗಿ ಗುರುತಿಸಲ್ಪಟ್ಟಿರುವವರು ತಮ್ಮ ಹೆಸರುಗಳನ್ನು ಸರಿಪಡಿಸಿಕೊಳ್ಳಲು ಸುಲಭವಾದ ವ್ಯವಸ್ಥೆ ಇರಬೇಕು ಎಂದು ಒತ್ತಾಯಿಸಿದರು.

ದಲಿತ ಮೀಸಲು ಕ್ಷೇತ್ರಗಳೇ ಹೆಚ್ಚು ಬಾಧಿತವಾಗಿವೆಯೇ?

ಕರ್ನಾಟಕದ ಮತದಾರರ ಪಟ್ಟಿಯಲ್ಲಿನ ASDDO ವರ್ಗದ ಹಂಚಿಕೆಯನ್ನು ಉಲ್ಲೇಖಿಸಿದ ಶಿವಸುಂದರ್, ರಾಜ್ಯದಲ್ಲಿ 36 ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ 20 ಕ್ಷೇತ್ರಗಳಲ್ಲಿ ASDDO ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದರು. ಪರಿಶಿಷ್ಟ ಪಂಗಡಗಳಿಗೆ ಮೀಸಲಾದ 10 ಕ್ಷೇತ್ರಗಳಲ್ಲಿಯೂ ಇಂತಹ ಸಮಸ್ಯೆಗಳನ್ನು ಗಮನಿಸಬೇಕಾಗಿದೆ. ಮೈಸೂರಿನ ಕೃಷ್ಣರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ASDDO ಪ್ರಮಾಣ ಶೇ. 27ರಷ್ಟಿದೆ ಇದು ಕರ್ನಾಟಕದ ಸರಾಸರಿ ಶೇ. 19ಕ್ಕಿಂತ ಹೆಚ್ಚಾಗಿದೆ ಎಂಬುದನ್ನೂ ಹೇಳಿದರು.

ಈ ಅಂಕಿ-ಅಂಶಗಳ ಆಧಾರದಲ್ಲಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳು ಕೈಬಿಡಲ್ಪಡುವ ಅಪಾಯವನ್ನು ಗಂಭೀರವಾಗಿ ಪರಿಶೀಲಿಸಬೇಕು. ASDDO ವರ್ಗದಲ್ಲಿ ಗುರುತಿಸಲ್ಪಟ್ಟವರಲ್ಲಿ ಸುಮಾರು ಶೇ.70 ಮಂದಿ ‘Absent’ ಎಂದು ದಾಖಲಿಸಲ್ಪಟ್ಟಿದ್ದಾರೆ. ವಿಶೇಷವಾಗಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಮೈಸೂರಿನ ಕೃಷ್ಣಾರಾಜ-ನರಸಿಂಹರಾಜ ಕ್ಷೇತ್ರಗಳಲ್ಲಿ ಇಂತಹ ದಾಖಲಾತಿಗಳು ಕಂಡುಬರುತ್ತಿವೆ ಎಂಬುದು ಅವರ ಆರೋಪವಾಗಿತ್ತು.

FORM-7 ಬಳಸಿ ಮುಸ್ಲಿಮರನ್ನು ಗುರಿಯಾಗಿಸುವ ಯುದ್ಧವೇ?

ಶಿವಸುಂದರ್ ಅವರ ಭಾಷಣದ ಅತ್ಯಂತ ಗಂಭೀರ ಆರೋಪ FORM-7 ಅರ್ಜಿಗಳ ಬಳಕೆಗೆ ಸಂಬಂಧಿಸಿತ್ತು. ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಅಳಿಸಲು ಅಥವಾ ಆಕ್ಷೇಪ ಸಲ್ಲಿಸಲು ಬಳಸುವ FORM-7 ಅನ್ನು ದುರುಪಯೋಗಪಡಿಸಿಕೊಂಡು ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಲಾಗುತ್ತಿದೆ. “SIR ಪ್ರಕ್ರಿಯೆಯಲ್ಲಿ FORM-7 ಬಳಸಿ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲ; ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ನಡೆಸುತ್ತಿರುವ ಯುದ್ಧ” ಎಂಬುದು ಅವರ ಆರೋಪದ ಸಾರವಾಗಿತ್ತು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಅಳಿಸುವಿಕೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಕಾನೂನುಬದ್ಧವಾಗಿ ನಡೆಯಬೇಕು. ಆದರೆ, ಆಕ್ಷೇಪ ಅರ್ಜಿಗಳನ್ನು ಸಲ್ಲಿಸುವ ವಿಧಾನವನ್ನು ದುರುಪಯೋಗಪಡಿಸಿಕೊಂಡು ನಿರ್ದಿಷ್ಟ ವ್ಯಕ್ತಿಗಳು ಅಥವಾ ಸಮುದಾಯಗಳ ಹೆಸರುಗಳನ್ನು ದೊಡ್ಡ ಪ್ರಮಾಣದಲ್ಲಿ ಅಳಿಸಲು ಪ್ರಯತ್ನಿಸಿದರೆ ಅದು ಚುನಾವಣಾ ಪ್ರಕ್ರಿಯೆಯ ನಿಷ್ಪಕ್ಷಪಾತತೆಯನ್ನೇ ಪ್ರಶ್ನಿಸುವಂತಾಗುತ್ತದೆ. ಯಾವುದೇ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮೊದಲು ಸೂಕ್ತ ಪರಿಶೀಲನೆ, ಸಂಬಂಧಪಟ್ಟ ಮತದಾರರಿಗೆ ಮಾಹಿತಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ಮತ್ತು ನ್ಯಾಯಸಮ್ಮತ ನಿರ್ಧಾರ ಅಗತ್ಯ. ಕೇವಲ ಅರ್ಜಿ ಸಲ್ಲಿಕೆಯಾಗಿದೆ ಎಂಬ ಕಾರಣಕ್ಕೆ ಅರ್ಹ ಮತದಾರನ ಹಕ್ಕು ಕಸಿಯಬಾರದು ಎಂದು ಪ್ರತಿಪಾದಿಸಿದರು.

“ನನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ ಅದು ಕೇವಲ ಮತ ಹಾಕಲು ಆಗದ ಸಮಸ್ಯೆಯಲ್ಲ. ನನ್ನ ಹೆಸರನ್ನೇ ತೆಗೆದುಹಾಕಿದರೆ, ಈ ದೇಶದ ಪ್ರಜೆಯಾಗಿ ನನ್ನ ಅಸ್ತಿತ್ವವನ್ನೇ ಪ್ರಶ್ನಿಸುವ ಪರಿಸ್ಥಿತಿ ಎದುರಾಗುತ್ತದೆ”. ಮತದಾನದ ಹಕ್ಕು ಎಂದರೆ ಐದು ವರ್ಷಕ್ಕೊಮ್ಮೆ ಮತ ಚಲಾಯಿಸುವ ಅವಕಾಶ ಮಾತ್ರವಲ್ಲ. ಅದು ದೇಶದ ಪ್ರಜಾಪ್ರಭುತ್ವದಲ್ಲಿ ಸಮಾನ ನಾಗರಿಕನಾಗಿ ಭಾಗವಹಿಸುವ ಹಕ್ಕು. ಈ ಹಕ್ಕನ್ನು ಕಸಿಯುವ ಯಾವುದೇ ಪ್ರಯತ್ನದ ವಿರುದ್ಧ ಜನರು ಜಾಗೃತರಾಗಬೇಕು ಎಂದು ಅವರು ಕರೆ ನೀಡಿದರು.

ಚುನಾವಣಾ ಆಯೋಗದ ಸ್ವಾಯತ್ತತೆ ಎಲ್ಲಿದೆ?

ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಚುನಾವಣಾ ಆಯೋಗವು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಸಾಂವಿಧಾನಿಕ ಸಂಸ್ಥೆ. ಆದರೆ ಅದರ ನಿರ್ಧಾರಗಳು ಮತ್ತು ಕಾರ್ಯವೈಖರಿಯ ಮೇಲೆ ಕೇಂದ್ರ ಸರ್ಕಾರದ ಪ್ರಭಾವ ಹೆಚ್ಚಾಗಿದೆ ಎಂಬ ಅನುಮಾನ ಮೂಡುತ್ತಿದೆ. ತಪ್ಪುಗಳು ನಡೆದರೂ ಹೊಣೆಗಾರಿಕೆ ನಿಗದಿಯಾಗದಂತೆ, ಚುನಾವಣಾ ಆಯುಕ್ತರು ತಮಗೆ ಬೇಕಾದಂತೆ ನಿರ್ಧಾರ ಕೈಗೊಳ್ಳುವ ವಾತಾವರಣ ನಿರ್ಮಾಣವಾಗಿದೆ ಎಂಬುದು ಅವರ ಆಕ್ಷೇಪವಾಗಿತ್ತು.

ಈ ಸಂದರ್ಭದಲ್ಲಿ ಅವರು 1990ರಿಂದ 1995ರ ಅವಧಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್. ಶೇಷನ್ ಅವರ ಕಾರ್ಯವೈಖರಿಯನ್ನು ನೆನಪಿಸಿದರು. ಸರ್ಕಾರದಿಂದ ನೇಮಕಗೊಂಡಿದ್ದರೂ ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಎತ್ತಿಹಿಡಿದು, ಚುನಾವಣಾ ವ್ಯವಸ್ಥೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರಯತ್ನಿಸಿದ ವ್ಯಕ್ತಿಯಾಗಿ ಶೇಷನ್ ಗುರುತಿಸಿಕೊಂಡಿದ್ದರು. ಚುನಾವಣಾ ಆಯೋಗವು ಸರ್ಕಾರದ ಇಚ್ಛೆಯಂತೆ ಕಾರ್ಯನಿರ್ವಹಿಸುವ ಸಂಸ್ಥೆಯಾಗಬಾರದು. ಸರ್ಕಾರದ ತಪ್ಪುಗಳನ್ನೂ ಪ್ರಶ್ನಿಸುವ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶ ಒದಗಿಸುವ ಸ್ವತಂತ್ರ ಸಂಸ್ಥೆಯಾಗಿರಬೇಕು ಎಂಬುದನ್ನು ಒತ್ತಿಹೇಳಿದರು.

ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿಯನ್ನು ಟೀಕಿಸಿದ ಶಿವಸುಂದರ್, ಜ್ಞಾನೇಶ್ ಕುಮಾರ್ ಕೇಂದ್ರ ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಯೋಗದ ಸ್ವಾಯತ್ತತೆಯು ಕೇವಲ ಕಾನೂನಿನಲ್ಲಿ ಉಲ್ಲೇಖವಾಗಿರುವುದಷ್ಟೇ ಸಾಕಾಗುವುದಿಲ್ಲ. ಅದರ ನಿರ್ಧಾರಗಳು ಪಾರದರ್ಶಕವಾಗಿರಬೇಕು, ಪ್ರಶ್ನೆಗಳಿಗೆ ಉತ್ತರಿಸುವ ಹೊಣೆಗಾರಿಕೆ ಇರಬೇಕು ಮತ್ತು ಜನರ ಮತದಾನದ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ನುಸುಳುಕೋರರ ಪತ್ತೆ ಎಲ್ಲಿದೆ? RTI ಉತ್ತರಗಳ ಬಗ್ಗೆ ಪ್ರಶ್ನೆ

SIR ಪ್ರಕ್ರಿಯೆಯನ್ನು ಸಮರ್ಥಿಸುವಾಗ ವಿದೇಶಿ ನುಸುಳುಕೋರರನ್ನು ಪತ್ತೆಹಚ್ಚುವುದು ಪ್ರಮುಖ ಉದ್ದೇಶವೆಂದು ಹೇಳಲಾಗುತ್ತಿದೆ. ಆದರೆ, ನಿಜವಾಗಿಯೂ ಎಷ್ಟು ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗಿದೆ? ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳಿವೆಯೇ. ವಿದೇಶಿ ನುಸುಳುಕೋರರ ಕುರಿತು ಮಾಹಿತಿ ಪಡೆಯಲು ವೆಂಕಟೇಶ್ ನಾಯಕ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಅರ್ಜಿ ಸಲ್ಲಿಸಿದ್ದನ್ನು ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯಗಳಲ್ಲಿ ಪತ್ತೆಯಾದ ವಿದೇಶಿ ಪ್ರಜೆಗಳ ವಿವರಗಳನ್ನು ಸಂಬಂಧಪಟ್ಟ ಗೃಹ ಇಲಾಖೆಯ ಸಕ್ಷಮ ಪ್ರಾಧಿಕಾರಕ್ಕೆ ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಹೇಳಲಾಗಿತ್ತು.

13 ರಾಜ್ಯಗಳಲ್ಲಿ ಎಷ್ಟು ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗಿದೆ ಎಂಬ ಪ್ರಶ್ನೆಗೆ ನಿರ್ದಿಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ಆರೋಪಿಸಿದರು. ಸಕ್ಷಮ ಪ್ರಾಧಿಕಾರದ ಹುದ್ದೆ ಮತ್ತು ಅಧಿಕಾರಿಗಳ ವಿವರಗಳನ್ನು ಕೇಳಿದಾಗಲೂ ಸ್ಪಷ್ಟ ಮಾಹಿತಿ ಸಿಗಲಿಲ್ಲ. ಸರ್ಕಾರವು ತನ್ನ ಪ್ರಮುಖ ಸಮರ್ಥನೆಯಾದ ವಿದೇಶಿ ನುಸುಳುಕೋರರ ಪತ್ತೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಪ್ರತಿಪಾದಿಸಿದರು.

ನುಸುಳುಕೋರರನ್ನು ಪತ್ತೆಹಚ್ಚುವುದು ನಿಜವಾದ ಉದ್ದೇಶವಾಗಿದ್ದರೆ, ಅದರ ಫಲಿತಾಂಶಗಳೇನು? ಎಷ್ಟು ಮಂದಿಯನ್ನು ಗುರುತಿಸಲಾಗಿದೆ? ಎಷ್ಟು ಪ್ರಕರಣಗಳಲ್ಲಿ ಪರಿಶೀಲನೆ ನಡೆದಿದೆ? ಯಾವ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಂಬುದನ್ನು ಸರ್ಕಾರ ಮತ್ತು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು. ಒಂದೆಡೆ ನುಸುಳುಕೋರರನ್ನು ಪತ್ತೆಹಚ್ಚುವ ಹೆಸರಿನಲ್ಲಿ ದೊಡ್ಡ ಪ್ರಮಾಣದ ಮತದಾರರ ಪರಿಶೀಲನೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಆ ಉದ್ದೇಶ ಸಾಧನೆಯಾಗಿದೆ ಎಂಬುದಕ್ಕೆ ಸಾರ್ವಜನಿಕವಾಗಿ ಪರಿಶೀಲಿಸಬಹುದಾದ ಮಾಹಿತಿಯ ಕೊರತೆ ಇದೆ ಎಂಬುದು ಭಾಷಣದ ಪ್ರಮುಖ ಪ್ರಶ್ನೆಯಾಗಿತ್ತು.

ಮತದಾರರ ಪಟ್ಟಿ ಶುದ್ಧೀಕರಣವೇ ಅಥವಾ ರಾಜಕೀಯ ಲೆಕ್ಕಾಚಾರವೇ?

ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದೇ SIR ಪ್ರಕ್ರಿಯೆಯ ಉದ್ದೇಶವೆಂದು ಹೇಳಲಾಗುತ್ತಿದ್ದರೂ, ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವುದು ಮತ್ತು ಅರ್ಹ ನಾಗರಿಕರನ್ನು ಅನುಮಾನಿಸುವುದು ಎರಡು ವಿಭಿನ್ನ ಸಂಗತಿಗಳು.
ಮೃತಪಟ್ಟವರ ಹೆಸರುಗಳನ್ನು ತೆಗೆದುಹಾಕುವುದು, ಶಾಶ್ವತವಾಗಿ ಸ್ಥಳಾಂತರಗೊಂಡವರ ವಿವರಗಳನ್ನು ಸರಿಪಡಿಸುವುದು ಮತ್ತು ನಕಲಿ ಹೆಸರುಗಳನ್ನು ಪತ್ತೆಹಚ್ಚುವುದು ಚುನಾವಣಾ ಪ್ರಕ್ರಿಯೆಯ ಅಗತ್ಯಗಳಾಗಿವೆ. ಆದರೆ, ಈ ಕಾರ್ಯಗಳ ಹೆಸರಿನಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಪರಿಸ್ಥಿತಿ ಉಂಟಾದರೆ, ಅದರಿಂದ ಪ್ರಜಾಪ್ರಭುತ್ವದ ಮೂಲ ಉದ್ದೇಶವೇ ಹಾನಿಗೊಳಗಾಗುತ್ತದೆ.

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ವ್ಯಕ್ತಿಗೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮತದಾರರ ಪಟ್ಟಿಯ ನಿರ್ವಹಣೆಯಲ್ಲಿ ಪಾರದರ್ಶಕತೆ, ನಿಖರತೆ ಮತ್ತು ಸಾರ್ವಜನಿಕ ಹೊಣೆಗಾರಿಕೆ ಅತ್ಯಂತ ಮುಖ್ಯ. ವಿಶೇಷವಾಗಿ ದುರ್ಬಲ ಸಮುದಾಯಗಳ ಹೆಸರುಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈಬಿಡಲ್ಪಟ್ಟಿವೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು. ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಆ ಪ್ರಕ್ರಿಯೆಯು ಪೌರತ್ವದ ಹೆಸರಿನಲ್ಲಿ ಜನರನ್ನು ವರ್ಗೀಕರಿಸುವ, ಅವರ ಹಕ್ಕುಗಳನ್ನು ಪ್ರಶ್ನಿಸುವ ಮತ್ತು ರಾಜಕೀಯವಾಗಿ ದುರ್ಬಲಗೊಳಿಸುವ ಸಾಧನವಾಗಬಾರದು ಎಂಬುದು ಅವರ ನಿಲುವಾಗಿತ್ತು.

SIR ರದ್ದತಿ ಮತ್ತು ಜ್ಞಾನೇಶ್ ಕುಮಾರ್ ರಾಜೀನಾಮೆ ಮಾತ್ರ ಸಾಕಾಗುವುದಿಲ್ಲ

ಭಾಷಣದ ಆರಂಭದಲ್ಲಿ ಶಿವಸುಂದರ್ ಮುಂದಿಟ್ಟಿದ್ದ ಪ್ರಶ್ನೆ ಮತ್ತೆ ಇಲ್ಲಿ ಮುಖ್ಯವಾಗುತ್ತದೆ. SIR ರದ್ದಾಗಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಗಳು ಹೋರಾಟದ ಭಾಗವಾಗಿದ್ದರೂ, ಅದರಿಂದಲೇ ಪ್ರಜಾಪ್ರಭುತ್ವದ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಚುನಾವಣಾ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಮರುಸ್ಥಾಪಿಸುವುದು, ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುವುದು, ತಪ್ಪಾಗಿ ಕೈಬಿಡಲ್ಪಟ್ಟ ಹೆಸರುಗಳನ್ನು ಮರುಸೇರಿಸುವುದು ಮತ್ತು ಅಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿಪಡಿಸುವುದು ಮುಂದಿನ ಹೋರಾಟದ ಪ್ರಮುಖ ಗುರಿಗಳಾಗಬೇಕು ಎಂಬ ಸಂದೇಶವನ್ನು ನೀಡಿದರು.

ದಾಖಲೆಗಳ ಕೊರತೆಯಿಂದ ಯಾರೂ ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು. FORM-7 ಸೇರಿದಂತೆ ಮತದಾರರ ಹೆಸರುಗಳನ್ನು ಅಳಿಸಲು ಬಳಸುವ ಪ್ರಕ್ರಿಯೆಗಳು ದುರುಪಯೋಗವಾಗದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಇರಬೇಕು. ಆಕ್ಷೇಪಣೆ ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ತಮ್ಮ ವಾದ ಮಂಡಿಸಲು ಸಮರ್ಪಕ ಅವಕಾಶ ದೊರೆಯಬೇಕು. ಚುನಾವಣಾ ಆಯೋಗದ ನಿರ್ಧಾರಗಳನ್ನು ಸಾರ್ವಜನಿಕವಾಗಿ ಪರಿಶೀಲಿಸಲು ಸಾಧ್ಯವಾಗಬೇಕು ಎಂಬುದು ಅವರ ಭಾಷಣದ ಆಶಯವಾಗಿತ್ತು.

“ಇದು ದಲಿತರು, ದಮನಿತರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ಪ್ರಹಾರ”

ತಮ್ಮ ಭಾಷಣದ ಕೊನೆಯಲ್ಲಿ ಕೇಂದ್ರ ಸರ್ಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸಿದ ಶಿವಸುಂದರ್, SIR ಪ್ರಕ್ರಿಯೆಯು ದೇಶದ ದಲಿತರು, ದಮನಿತರು ಮತ್ತು ಅಲ್ಪಸಂಖ್ಯಾತರ ನಾಗರಿಕ ಹಕ್ಕುಗಳನ್ನು ನಿರಾಕರಿಸುವ ಉದ್ದೇಶ ಹೊಂದಿದೆ. ನುಸುಳುಕೋರರನ್ನು ಪತ್ತೆಹಚ್ಚುವುದು ಮತ್ತು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಎಂಬ ಹೆಸರಿನಲ್ಲಿ ಜನರ ಮೇಲೆ ಅನುಮಾನ ಹೊರಿಸುವುದರಿಂದ, ದಾಖಲೆಗಳನ್ನು ಹೊಂದಿರದ ಅಥವಾ ಒದಗಿಸಲು ಸಾಧ್ಯವಾಗದ ಜನರು ಅನಗತ್ಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಹೇಳಿದರು.

ಈ ವಿಶೇಷ ವರದಿ ಓದಿದ್ದೀರಾ? ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ವಿಶೇಷವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು FORM-7 ಅರ್ಜಿಗಳನ್ನು ಬಳಸಲಾಗುತ್ತಿದೆ ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದ ಅವರು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ರಾಜಕೀಯ ಉದ್ದೇಶಗಳಿಗೆ ಬಳಕೆಯಾಗಬಾರದು. SIR ಮೂಲಕ ನಿಜವಾಗಿಯೂ ಎಷ್ಟು ನಕಲಿ ಹೆಸರುಗಳನ್ನು ತೆಗೆದುಹಾಕಲಾಗಿದೆ? ಎಷ್ಟು ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗಿದೆ? ಎಷ್ಟು ಅರ್ಹ ಮತದಾರರ ಹೆಸರುಗಳು ಕೈಬಿಡಲ್ಪಟ್ಟಿವೆ? ಯಾವ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದ ಹೆಸರುಗಳನ್ನು ತೆಗೆದುಹಾಕಲಾಗಿದೆ? ಎಂಬ ಪ್ರಶ್ನೆಗಳಿಗೆ ಸರ್ಕಾರ ಮತ್ತು ಚುನಾವಣಾ ಆಯೋಗ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಈ ವಿಶೇಷ ವರದಿ ಓದಿದ್ದೀರಾ? ಎರಡು ದಿನದ ಕಂಬಳಕ್ಕಾಗಿ ಪರಿಸರ ಬಲಿ? ಕೆರೆಯ ಜಾಗ, ಮರಗಳ ತೆರವಿನ ಸುತ್ತ ಗಂಭೀರ ಪ್ರಶ್ನೆಗಳು!

“ಇದೆಲ್ಲವೂ ಮತದಾರರ ಪಟ್ಟಿಯ ಶುದ್ಧೀಕರಣ ಮಾತ್ರವಲ್ಲ; ದಲಿತರು, ದಮನಿತರು ಮತ್ತು ಅಲ್ಪಸಂಖ್ಯಾತರಿಗೆ ನಾಗರಿಕ ಹಕ್ಕುಗಳನ್ನು ನಿರಾಕರಿಸುವ ಹಿಂದುತ್ವದ ಬಹುದೊಡ್ಡ ಸಂಚು” ಎಂದು ಶಿವಸುಂದರ್ ತಮ್ಮ ಭಾಷಣದಲ್ಲಿ ನೇರವಾಗಿ ಆರೋಪಿಸಿ, SIR ವಿರುದ್ಧದ ಹೋರಾಟವು ಕೇವಲ ಒಂದು ಆಡಳಿತಾತ್ಮಕ ಪ್ರಕ್ರಿಯೆಯ ರದ್ದತಿಗೆ ಸೀಮಿತವಾಗಬಾರದು. ಪ್ರತಿಯೊಬ್ಬ ವಯಸ್ಕನಿಗೂ ಸಮಾನವಾಗಿ ಮತದಾನದ ಹಕ್ಕು ದೊರೆಯಬೇಕು, ನಾಗರಿಕತ್ವದ ಹೆಸರಿನಲ್ಲಿ ಜನರನ್ನು ಅನುಮಾನಿಸುವ ಕ್ರಮಗಳು ನಿಲ್ಲಬೇಕು ಮತ್ತು ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎಂಬ ಮೂಲಭೂತ ಪ್ರಜಾಪ್ರಭುತ್ವದ ಆಶಯಗಳನ್ನು ರಕ್ಷಿಸುವ ಹೋರಾಟವಾಗಿ ಮುಂದುವರಿಯಬೇಕು ಎಂಬುದು ಅವರ ಸಲಹೆಯಾಗಿತ್ತು.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ರದ್ದುಗೊಳಿಸಿ, ಮುಖ್ಯ ಚುನಾವಣಾ ಆಯುಕ್ತರನ್ನು ವಜಾಗೊಳಿಸಿ: ಆಗ್ರಹ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ಎಸ್‌ಐಆರ್ ಕುರಿತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ: ಸಿಎಂ ಡಿ.ಕೆ. ಶಿವಕುಮಾರ್

ಎಸ್‌ಐಆರ್ (SIR) ದತ್ತಾಂಶಗಳ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವತಿಯಿಂದ ಸುಪ್ರೀಂ...

ಮೈಸೂರು | ‘SIR’ ವಿರುದ್ಧ ಮಾನಸಗಂಗೋತ್ರಿಯಲ್ಲಿ ಪ್ರತಿಭಟನಾ ಜಾಥಾ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ, ಸಂವಿಧಾನದ...

ಕನ್ನಾಟ್ ಪ್ಲೇಸ್‌ನಲ್ಲಿ ಸಿಜೆಪಿ ಪ್ರತಿಭಟನೆ: ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 16ರಂದು ದೆಹಲಿಯ...