ಮಾರಕಾಸ್ತ್ರದಿಂದ ಹರಕೆಗಾಗಿ ಬಿಟ್ಟ ಆಕಳು ಕರುವಿನ ಬಾಲವನ್ನು ದುಷ್ಕರ್ಮಿಗಳು ತುಂಡರಿಸಿ ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.
ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕನಗರದಲ್ಲಿ ಆಗಂತುಕರು ಹಾಲು ತುಂಬಿದ ಮೂರು ಹಸುಗಳ ಕೆಚ್ಚಲು ಕೊಯ್ಯುವ ಮೂಲಕ ಅಟ್ಟಹಾಸ ಮೆರೆದಿದ್ದರು. ಈ ಕ್ರೌರ್ಯಕ್ಕೆ ಕರ್ನಾಟಕದಲ್ಲಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಹಸುವಿನ ಮೇಲೆ ಕ್ರೌರ್ಯ ನಡೆದಿದೆ.
ರಕ್ತಸಿಕ್ತವಾಗಿದ್ದ ಕರುವನ್ನು ನೋಡಿದ ಸ್ಥಳೀಯರು ಅದಕ್ಕೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ನಂಜನಗೂಡಿನ ಹಳ್ಳದ ಕೇರಿಯ ರಾಮಮಂದಿರದ ಬಳಿ ಕರುವನ ತೆಗೆದುಕೊಂಡು ಬಂದು ಇರಿಸಿದ್ದಾರೆ. ಈ ಹಿಂದೆ ಸಹ ಹಸು, ಕರುಗಳಿಗೆ ರಾಡಿನಿಂದ ಹಲ್ಲೆ ಮಾಡಿದ್ದಿದೆ. ಆದರೆ ಇದೇ ಮೊದಲ ಬಾರಿಗೆ ಮಾರಕಸ್ತ್ರವನ್ನು ಬಳಸಿ ಕರುವಿನ ಮೇಲೆ ದಾಳಿ ಮಾಡಲಾಗಿದೆ. ಇದು ಸಹಜವಾಗಿ ಶ್ರೀಕಂಠೇಶ್ವರ ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೂಪಾಯಿ ಮೌಲ್ಯ ಕುಸಿತವೂ, ವಿಶ್ವಗುರುವಿನತ್ತ ಮೋದಿ ಭಾರತವೂ
ಸ್ಥಳಕ್ಕೆ ಆಗಮಿಸಿದ ಇಓ ಜಗದೀಶ್ ಅವರನ್ನು ಸ್ಥಳೀಯರು ಹಾಗೂ ಭಕ್ತರು ತರಾಟೆಗೆ ತೆಗೆದುಕೊಂಡರು. ಈ ರೀತಿ ಕೃತ್ಯವೆಸಗಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ದೇವಸ್ಥಾನದ ಹಸು, ಕರುಗಳಿಗೆ ಮೊದಲಿನಂತೆ ದೇವಸ್ಥಾನದ ಶಿವಲಿಂಗದ ಮುದ್ರೆ ಹಾಕಬೇಕು ಅಂತಾ ಒತ್ತಾಯಿಸಿದ್ದಾರೆ.
ಕೊನೆಗೆ ಸ್ಥಳೀಯರ ಒತ್ತಡಕ್ಕೆ ಮಣಿದ ಜಗದೀಶ್, ಇಂದು ಸಂಜೆಯೊಳಗೆ ತಾತ್ಕಾಲಿಕ ಗೋಶಾಲೆಯನ್ನು ತೆರೆಯುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ ಮುಂದೆ ಭಕ್ತರು ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ನೀಡುವ ಹಸು, ಕರುಗಳ ಬಗ್ಗೆ ಅಧಿಕೃತವಾಗಿ ದೇವಸ್ಥಾನಕ್ಕೆ ಮಾಹಿತಿ ನೀಡಿ ರಶೀದಿ ಪಡೆಯುವಂತೆ ಸಹ ಮನವಿ ಮಾಡಿದ್ದಾರೆ.